ಪ್ರಚಲಿತ

ಭಾರತೀಯ ಯೋಧರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ನಾವು ಭಾರತೀಯರು ಯಾವುದೇ ಚಿಂತೆ ಇಲ್ಲದೆ, ನಿರ್ಭಯವಾಗಿ ‌ರಾತ್ರಿ ವೇಳೆ ಹೊದ್ದು ಮಲಗಿ ನಿದ್ದೆ ಮಾಡುತ್ತೇವೆ ಎಂದಾದರೆ, ಅಲ್ಲೆಲ್ಲೋ‌ ನಮ್ಮ ದೇಶದ ಗಡಿಯಲ್ಲಿ ನಮ್ಮ ದೇಶದ ವೀರ ಯೋಧ ನಿದ್ರೆ ಬಿಟ್ಟು ವೈರಿಗಳಿಂದ ನಮ್ಮನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತನಾಗಿದ್ದಾನೆ ‌ಎಂದು ಅರ್ಥ.

ನಮ್ಮ ದೇಶಕ್ಕೆ ಒಂದು ಕಡೆಯಲ್ಲಿ ಪಾಕಿಸ್ತಾನದ ಉಗೇರರ ಉಪಟಳವಾದರೆ, ಇನ್ನೊಂದು ದಿಶೆಯಲ್ಲಿ ವೈರಿ ರಾಷ್ಟ್ರ ಚೀನಾ ಸಹ ನಮ್ಮ ವಿರುದ್ಧ ಕತ್ತಿ ಮಸೆಯಲು ಕಾದು ಕುಳಿತಿರುತ್ತದೆ. ಇಂತಹ ಬಾಹ್ಯ ಭೀತಿಗಳ ಜೊತೆಗೆ ದೇಶದೊಳಗಿದ್ದೇ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಉಗ್ರರ ತೊಂದರೆಯನ್ನೂ ಅನುಭವಿಸುತ್ತಿದ್ದೇವೆ. ಇಂತಹ ಹಲವಾರು ಸಮಸ್ಯೆಗಳಿಂದ ದೇಶದ ರಕ್ಷಣೆಯನ್ನು ಸಮರ್ಥವಾಗಿ ಮಾಡುತ್ತಿರುವುದು ನಮ್ಮ ದೇಶದ ಸೇನೆ. ದೇಶದ ಭದ್ರತೆ ಕಾಪಾಡುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಪ್ರಾಣವನ್ನೇ ಪಣಕ್ಕಿಟ್ಟು ದೇಶದ ರಕ್ಷಣೆ ಮಾಡುವ ಧೈರ್ಯವಂತರು ನಮ್ಮ ಸೇನಾನಿಗಳು. ಅವರು ನಮ್ಮ ದೇಶದ ಹೆಮ್ಮೆ ಎಂದರೂ ಅತಿಶಯವಾಗಲಾರದು.

ಜನವರಿ 15 ಸೇನಾ ದಿನ. ದೇಶವನ್ನು ರಕ್ಷಣೆ ಮಾಡಲು ಸೈನಿಕರು ಪಡುತ್ತಿರುವ ಶ್ರಮ, ಅವರ ತ್ಯಾಗ, ಬಲಿದಾನವನ್ನು ಈ ದಿನದಂದು ನೆನಪಿಸಿಕೊಳ್ಳುತ್ತೇವೆ. 1949 ರಲ್ಲಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅವರು ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆದ ದಿನವಾಗಿದ್ದು, ಈ ದಿನವನ್ನು ಸೇನಾ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಇಂದು ಭಾರತದ 76 ನೇ ಸೇನಾ ದಿನವಾಗಿದ್ದು, ಈ ದಿನದ ಸ್ಮರಣಾರ್ಥ ಉತ್ತರ ಪ್ರದೇಶದ ರಾಜಧಾನಿ ಲಕ್ನೋ‌ದಲ್ಲಿ ಪರೇಡ್ ಸಹ ಆಯೋಜನೆ ಮಾಡಲಾಗಿದೆ. ಸತತವಾಗಿ ಎರಡನೇ ವರ್ಷ ಸೇನಾ ದಿನದ ಪರೇಡ್ ಅನ್ನು ದೆಹಲಿಯಿಂದ ಹೊರಗೆ ಆಯೋಜನೆ ಮಾಡಲಾಗುತ್ತಿರುವುದು.

ಅಂತಹ ಯೋಧರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 15 ರ ಸೇನಾ ದಿನದ ಹಿನ್ನೆಲೆಯಲ್ಲಿ ಶ್ಲಾಘಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಸೇನಾ ದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಸೇನಾ ದಿನದಂದು ನಮ್ಮ ಸೇನಾ ಸಿಬ್ಬಂದಿಯ ಅಸಾಧಾರಣ ಧೈರ್ಯ, ಅಚಲ ಬದ್ಧತೆ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ನಮ್ಮ ದೇಶವನ್ನು ರಕ್ಷಣೆ ಮಾಡುವಲ್ಲಿ, ನಮ್ಮ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವಲ್ಲಿ ಅವರ ಅವಿರತ ಸಮರ್ಪಣೆ ಅವರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಅವು ಶಕ್ತಿ ಮತ್ತು ಸ್ಥಿತಿ ಸ್ಥಾಪಕತ್ವದ ಸ್ಥಂಬಗಳಾಗಿವೆ’ ಎಂದು ಅವರು ಹೇಳಿದ್ದಾರೆ.

Tags

Related Articles

Close