ಪ್ರಚಲಿತ

ಕೇಂದ್ರ ಸರ್ಕಾರ ಔದ್ಯೋಗಿಕ ನೇಮಕಾತಿಯಲ್ಲಿ ಪಾರದರ್ಶಕತೆ ತಂದಿದೆ: ಪ್ರಧಾನಿ ಮೋದಿ

ಯುವಜನರು ದೇಶದ ಆಸ್ತಿ. ಅವರಿಗೆ ಸರಿಯಾದ ಶಿಕ್ಷಣ, ಉದ್ಯೋಗ ಒದಗಿಸಿ ಕೊಡುವಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರೋಜ್ಗಾರ್ ಮೇಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದ್ದು, ಬಿಜೆಪಿ ಸರ್ಕಾರದ ಆಡಳಿತಾವಧಿಯ ಕಳೆದ ಹತ್ತು ವರ್ಷಗಳಲ್ಲಿ ಯುವ ಜನರಿಗೆ 1.5 ಪಟ್ಟು ಅಧಿಕ ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ನೇಮಕಾತಿ ವಿಷಯದಲ್ಲಿ ಪಾರದರ್ಶಕತೆಯನ್ನು ತಂದಿದೆ. ಔದ್ಯೋಗಿಕ ನೇಮಕಾತಿಯನ್ನು ನಿಗದಿತ ಕಾಲಮಿತಿಯೊಳಗೆ ನಿಗದಿ ಮಾಡುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಸರ್ಕಾರಗಳು ನೇಮಕಾತಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದವು. ಆದರೆ ಬಿಜೆಪಿ ಸರ್ಕಾರ ಈ ಪ್ರಕ್ರಿಯೆಗೆ ವೇಗ ನೀಡಿದೆ. ನಮ್ಮ ಸರ್ಕಾರ ತನ್ನ ದಶಕದ ಆಡಳಿತದಲ್ಲಿ ಸುಮಾರು 1.5 ಪಟ್ಟು ಹೆಚ್ಚು ಉದ್ಯೋಗಗಳನ್ನು ಯುವ ಜನತೆಗೆ ಒದಗಿಸುವಲ್ಲಿ ಯಶಸ್ಸು ಕಂಡಿದೆ‌. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೂ ತನ್ನ ಪ್ರತಿಭೆಯನ್ನು ಸಾದರಪಡಿಸಲು ಅನುಕೂಲವಾಗುವ ಹಾಗೆ ನಿಗದಿತ‌‌ ಸಮಯದ ಚೌಕಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ‌ ನೀಡಿದ್ದಾರೆ.

ಹಾಗೆಯೇ ರೋಜ್ಗಾರ್ ಯೋಜನೆಯ ಅಡಿಯಲ್ಲಿ ಉದ್ಯೋಗ ಪಡೆದ ನೌಕರರಿಗೆ ಕಂದಾಯ, ಗೃಹ, ಉನ್ನತ‌ ಶಿಕ್ಷಣ, ಅಣುಶಕ್ತಿ, ರಕ್ಷಣಾ ವಲಯ, ಆರ್ಥಿಕ ವಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಲಯ, ಬುಡಕಟ್ಟು ವ್ಯವಹಾರಗಳು, ರೈಲ್ವೆ ಮೊದಲಾದ ವಲಯಗಳಲ್ಲಿ ಮರುಸೇರ್ಪಡೆ ಮಾಡಲಾಗುತ್ತದೆ ಎಂದು ಅವರು ನುಡಿದಿದ್ದಾರೆ.

ಭಾರತದ ಪ್ರತಿಯೊಬ್ಬ ಯುವಜನತೆಯೂ ತಮ್ಮ ಪರಿಶ್ರಮ, ಪ್ರಯತ್ನ ಮತ್ತು ಪ್ರತಿಭೆಯ ಆಧಾರದಲ್ಲಿ ಉದ್ಯೋಗ ಪಡೆಯಬಹುದು. ಯುವ ಜನರನ್ನು ಭಾರತ‌ ಸರ್ಕಾರದ ಜೊತೆಗೆ ತೊಡಗಿಸಿಕೊಳ್ಳುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಹಾಗೆಯೇ ಕರ್ಮಯೋಗಿ ಭವನದ ಮೂಲಕ ಈಗ ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ iGOT ಆನ್‌ಲೈನ್ ಮಾಡ್ಯೂಲ್ ತರಬೇತಿ ನೀಡಲಾಗುತ್ತದೆ. ಈ ಪೋರ್ಟಲ್‌ನಲ್ಲಿ ಎಂಟು ನೂರಕ್ಕೂ ಅಧಿಕ ಇ ಲರ್ನಿಂಗ್ ಕೋರ್ಸ್‌ಗಳ ತರಬೇತಿ ಪಡೆಯಬಹುದಾಗಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Tags

Related Articles

Close