ಪ್ರಚಲಿತ

ಕತ್ತಲೆ ಕರಗುವುದು, ಸೂರ್ಯ ಬೆಳಗುವುದು, ಕಮಲ ಅರಳುವುದೆಂದು ಗುರು ಕಂಡ ಕನಸನ್ನು ಶತಾಯಗತಾಯ ನನಸಾಗಿಸುವೆನೆಂಬ ಪಣ ತೊಟ್ಟಿರುವರು ಪಟ್ಟ ಶಿಷ್ಯ ಮೋದಿ!!

ಮೂವತ್ತೆಂಟು ವರ್ಷಗಳ ಹಿಂದಿನ ಮಾತು ದೇಶದ ಮಹಾನಾಯಕ ಅಟಲ್ ಜೀ ಅವರು ತಮ್ಮ ಸಹೋದ್ಯೊಗಿಗಳನ್ನು ಉದ್ದೇಶಿಸುತ್ತಾ “ಅಂಧೆರಾ ಛಟೇಗಾ, ಸೂರಜ್ ನಿಕಲೇಗಾ, ಕಮಲ್ ಖಿಲೇಗಾ” ಎಂದು ಆಶಾವಾದದ ಮಾತುಗಳನ್ನು ಹೇಳಿದ್ದರು. ಹೌದು ಭಾಜಪಾದ ಕಮಲ ಮಾತ್ರವಲ್ಲ, ಭ್ರಷ್ಟಾಚಾರ, ಅನಾಚಾರ, ದುರಾಡಳಿತದಿಂದಾಗಿ ಭಾರತದ ಅಭಿವೃದ್ದಿಯ ಕಮಲವೂ ಮುದುಡಿ ಹೋಗಿದ್ದ ಕಾಲವದು. ಆಗ ತನ್ನ ಸಹೋದ್ಯೋಗಿಗಳನ್ನು ಹುರಿದುಂಬಿಸುತ್ತಾ ಅಟಲ್ ಜೀಯವರು ಹೇಳುತ್ತಾರೆ ಒಂದಲ್ಲ ಒಂದು ದಿನ ಕತ್ತಲೆ ಕರಗುವುದು, ಸೂರ್ಯ ಬೆಳಗುವುದು, ಕಮಲ ಅರಳುವುದು. ಕಾಂಗ್ರೆಸಿನ ದುರಾಡಳಿತದಿಂದ ಬೇಸತ್ತ ಅಟಲ್ ಜೀ ಈ ಮಾತುಗಳನ್ನು ಭಾಜಪಾ ಸಂಸ್ಥಾಪನಾ ದಿನದಂದು ಹೇಳಿದ್ದರು.

ಅಧಿಕಾರದ ನಷೆಯಲ್ಲಿ ತೂರಾಡುತ್ತಿದ್ದ ಕಾಂಗ್ರೆಸ್ 1998 ರಲ್ಲಿ ಸಂಸದ್ ಭವನದಲ್ಲಿ ಭಾಜಪಾದ ಎರಡೇ ಎರಡು ಸದಸ್ಯರನ್ನು ನೋಡಿ ಗಹಗಹಿಸಿ ನಗುತ್ತದೆ. ಕಾಂಗ್ರೆಸ್ ನ ಈ ದುರ್ವರ್ತನೆಯನ್ನು ಕಂಡ ಅಟಲ್ ಜೀ ಆಹತರಾಗುತ್ತಾ ಭವಿಷ್ಯವಾಣಿ ನುಡಿಯುತ್ತಾರೆ ” ಎರಡೇ ಎರಡು ಸದಸ್ಯರನ್ನು ನೋಡುತ್ತಾ ನೀವಿವತ್ತು ನಗುತ್ತಿರಬಹುದು, ಆದರೆ ಒಂದು ದಿನ ಪೂರ್ವದಲ್ಲೂ ಸೂರ್ಯ ಉದಯಿಸುವನು, ಆಗ ಇಡಿಯ ದೇಶವೇ ನಿಮ್ಮನ್ನು ನೋಡಿ ಗಹಗಹಿಸಿ ನಗುವುದು”. ಕೇವಲ ಇಪ್ಪತ್ತೇ ವರ್ಷಗಳಲ್ಲಿ ಅವರ ಭವಿಷ್ಯವಾಣಿ ನಿಜವಾಗಿ ಹೋಯ್ತಲ್ಲ!! ಭಾರತದ ಪೂರ್ವೋತ್ತರ ರಾಜ್ಯಗಳಲ್ಲೂ ಕಮಲ ಅರಳಿತಲ್ಲ!! ಇಡಿಯ ದೇಶವೇ ಇವತ್ತು ಕಾಂಗ್ರೆಸ್ ಅನ್ನು ನೋಡಿ ಗಹಗಹಿಸಿ ನಗುತ್ತಿರುವುದಲ್ಲ!! ಆವತ್ತು ಲೋಕಸಭೆಯಲ್ಲಿ ಭಾಜಪಾದ 2 ಸದಸ್ಯರು ಆದರೆ ಇವತ್ತು ಬರೋಬ್ಬರಿ 282!! ಇವತ್ತೇನಾದರೂ ಅಟಲ್ ಜೀ ಅವರ ಸ್ವಾಸ್ಥ ಚೆನ್ನಾಗಿದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರು!! ತನ್ನ ಪಕ್ಷದ ಸಾಧನೆ ಕಂಡು ಹಿರಿ ಹಿರಿ ಹಿಗ್ಗುತ್ತಿತ್ತು ಆ ಹಿರಿ ಜೀವ.

ರಾಜಕೀಯದಲ್ಲಿ “ಜೂನಿಯರ್ ವಾಜಪೇಯಿ” ಎಂದು ಬಿರುದು ಪಡೆದಿದ್ದ ತನ್ನ ಪಟ್ಟ ಶಿಷ್ಯ ನರೇಂದ್ರ ಮೋದಿಯ ಈ ದಿಗ್ವಿಜಯ ಯಾತ್ರೆಯನ್ನು ಕಂಡು ಅವರ ಎದೆಯುಬ್ಬಿ ಬರುತ್ತಿತ್ತು. ತಮ್ಮ ಶಿಷ್ಯನನ್ನು ತೆರೆದ ಬಾಹುಗಳಿಂದ ಆಲಿಂಗಿಸಿ ಮನಸೋ ಹರಸುತ್ತಿದ್ದರು ಗುರುವರ್ಯ ಅಟಲ್ ಜೀ. ತಾನು ಮೂವತ್ತೆಂಟು ವರ್ಷಗಳ ಹಿಂದೆ ನೆಟ್ಟಿದ್ದ ಗಿಡವೊಂದು ಇಂದು 22 ರಾಜ್ಯಗಳಲ್ಲಿ ಫಲ ನೀಡುವುದನ್ನು ಕಂಡು ಹೂವಿನ ಹೃದಯದ ಅಟಲ್ ಜೀ ಮಕ್ಕಳಂತೆ ಖುಷಿ ಪಡುತ್ತಿದ್ದರು. ತನ್ನ ಗುರು ಕಂಡ ಕನಸನ್ನು ಶತಾಯಗತಾಯ ನನಸಾಗಿಸುವೆನೆಂಬ ಪಣ ತೊಟ್ಟಿದ್ದಾರೆ ಪಟ್ಟ ಶಿಷ್ಯ ಮೋದೀಜಿ. ನಾಲ್ಕೇ ನಾಲ್ಕು ವರ್ಷಗಳ ಹಿಂದೆ ಕೇವಲ ಆರೇ ರಾಜ್ಯದಲ್ಲಿದ್ದ ಭಗವಾ ದ್ವಜವನ್ನು ಬರೋಬ್ಬರಿ ಇಪ್ಪತ್ತೆರಡು ರಾಜ್ಯಗಳಿಗೆ ವಿಸ್ತರಿಸಿ ಇಟಲಿ ಸಂಜಾತರ ಧ್ವಜದ ಎದೆ ಮೇಲೆ ಇಕ್ಕಿದರು ಮೋದಿ ಮತ್ತು ಶಾ.

ಕಮ್ಮಿ ಸಾಧನೆಯೇ ಇದು? ಅಲ್ಲ, 133 ವರ್ಷಗಳಿಂದ ಅಧಿಕಾರದ ರುಚಿ ಅನುಭವಿಸಿ ಭಾರತದ ಸಿಂಹಾಸನದಲ್ಲಿ ಆಳವಾಗಿ ಬೇರು ಬಿಟ್ಟಿದ್ದ ಕಾಂಗ್ರೆಸ್ ಎಂಬ ವಟ ವೃಕ್ಷವನ್ನು ಕೇವಲ 38 ವರ್ಷದ ಯುವ ಪಕ್ಷವೊಂದು ಬೇರು ಸಮೇತ ಕಿತ್ತೊಗೆಯುವುದೆಂದರೆ ಸಾಮಾನ್ಯದ ಮಾತೆ? ಅಧಿಕಾರದ ಮದದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ಎಂಬ ಮಹಾ ವೃಕ್ಷವನ್ನು ದೇಶದ ನಕ್ಷೆಯಿಂದಲೇ ಅಳಿಸಿ ಹಾಕಬೇಕಾದರೆ ಅದಕ್ಕೆ ತಲೆ ಮತ್ತು ಗುಂಡಿಗೆ ಎರಡೂ ಗಟ್ಟಿಯಿರಬೇಕು. ಒಂದು ಕಾಲದಲ್ಲಿ ಸಂಪೂರ್ಣ ಬಹುಮತವಿದೆಯಿಂದು ಹಾರಾಡುತ್ತಿದ್ದ ಕಾಂಗ್ರೆಸಿಗೆ ಇವತ್ತು ಪ್ರತಿಪಕ್ಷ ಸ್ಥಾನದಲ್ಲಿ ಕೂತುಕೊಳ್ಳುವಷ್ಟೂ ಬಹುಮತವಿಲ್ಲ!! 1951 ರಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರು ಜನ ಸಂಘವೆಂಬ ಪುಟ್ಟ ಬೀಜವನ್ನು ಬಿತ್ತಿದ್ದರು. 1980ರಲ್ಲಿ ಅದರಿಂದ ಟಿಸಿಲೊಡೆದ ಭಾಜಪಾವೆಂಬ ಗಿಡವೊಂದು ಇಂದು ಗಟ್ಟಿ ಮರವಾಗಿ ರೂಪುಗೊಂಡು ದೇಶದ ಅಸ್ಮಿತೆಗೆ ಮಾರಕವಾದ ಕಾಂಗ್ರೆಸ್ ಎಂಬ ವಿಷ ವೃಕ್ಷಕ್ಕೆ ಸವಾಲೊಡ್ಡುತ್ತಿದೆ ಎಂದರೆ ಭಾಜಪದ ಸಾಧನೆಗೆ ಸೈ ಎನ್ನಲೆ ಬೇಕು.

2014 ರಿಂದ ಛಲ ಬಿಡದ ತ್ರಿವಿಕ್ರಮ ಮೋದಿ, ಮತ್ತು ವಿಜಯ ಲಕ್ಷ್ಮಿಯ ಬೆನ್ನು ಬಿಡದ ಬೇತಾಳ ಅಮಿತ್ ಶಾ ಹಗಲಿರುಳೆನ್ನದೆ ದುಡಿದು ಪಕ್ಷ ಕಟ್ಟುತ್ತಲೇ ಬಂದಿದ್ದಾರೆ. ಇವರಿಬ್ಬರು ಹೆಣೆದ ಚಕ್ರವ್ಯೂಹದ ರಣತಂತ್ರಕ್ಕೆ ಪ್ರತಿ ತಂತ್ರವಿಲ್ಲದೆ ವಿರೋಧಿಗಳೆಲ್ಲಾ ತಲೆ ಕೆರೆದುಕೊಳ್ಳುತ್ತಿದ್ದಾರೆ! ಪ್ರೇರಣೆಯ ಸೆಲೆಯೇ ಬತ್ತಿ ಹೋಗಿದ್ದ ಭಾಜಪಾದ ಕಾರ್ಯಕರ್ತರಲ್ಲಿ ಇಂದು ಮಾತೃ ಪಕ್ಷಕ್ಕಾಗಿ ಪ್ರಾಣವೇ ಆಹುತಿ ಮಾಡಲು ತಯಾರಿರುವಂತಹ ಜೀವಾನೋತ್ಸಾಹ ಪುಟಿದೆದ್ದಿದ್ದರೆ ಅದಕ್ಕೆ ಕಾರಣ ಕೇವಲ ಮತ್ತು ಕೇವಲ “ಮೋದೀಶಾ” ಜೋಡಿ. ದೇಶದ ಪ್ರಧಾನಮಂತ್ರಿ ಮತ್ತು ಭಾಜಪಾದ ಅಧ್ಯಕ್ಷರಾಗಿಯೂ ಇಂದಿಗೂ ಸಾಮಾನ್ಯ ಕಾರ್ಯಕರ್ತರಂತೆ ಬದುಕುವ “ಮೋದಿಶಾ” ಭಾಜಪಾದ ಪ್ರತಿ ಕಾರ್ಯಕರ್ತನಿಗೂ ಸ್ಪೂರ್ತಿ ಮತ್ತು ಮಾದರಿ.

ತನ್ನ ನಾಯಕರಿಗಾಗಿ, ಮಾತೃ ಪಕ್ಷಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಿರುವ ಕಾರ್ಯಕರ್ತರಿರುವಾಗ ದೇಶದ ಮೂಲೆ ಬಿಡಿ, ವಿಶ್ವದ ಮೂಲೆ-ಮೂಲೆಯಲ್ಲೂ ಕಮಲವನ್ನರಳಿಸಬಹುದು. ಇವತ್ತೇನಾದರೂ ಮೋದೀಜೀ ವಿಶ್ವ ಮಂಚದಲ್ಲಿ ಚುನಾವಣೆಗೆ ನಿಂತರೆ ಕಾರ್ಯಕರ್ತರು ಅಲ್ಲಿಯೂ ಕಮಲವನ್ನರಳಿಸಿ ಭಗವಾ ಧ್ವಜವನ್ನು ಹಾರಿಸುವರು ಇದು ಖಂಡಿತ!! ಭಾಜಪಾದ ಒಬ್ಬೊಬ್ಬ ಕಾರ್ಯಕರ್ತನೂ ದೇಶ-ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಲು ತಯಾರಿರುವುದರಿಂದಲೇ ಇವತ್ತು 22 ರಾಜ್ಯಗಳಲ್ಲಿ ಕೇಸರಿ ಹಬ್ಬಿರುವುದು. ಕೇಸರಿ ಹಾರಾಡುವ ಮತ್ತು ಕಮಲ ಅರಳುತ್ತಿರುವ ಪ್ರತಿ ರಾಜ್ಯದಲ್ಲಿಯೂ ಭಾಜಪಾ ಕಾರ್ಯಕರ್ತನ ರಕ್ತದ ಕೋಡಿ ಹರಿದಿದೆ. ದೇಶ ಮತ್ತು ಧರ್ಮ ನಿಷ್ಠೆಯೆ ಇವತ್ತು ಭಾಜಪಾವನ್ನು ಶೂನ್ಯದಿಂದ ತೊಂಬ್ಬತ್ತಕ್ಕೇರಿಸಿದೆ. ದೇಶ ದ್ರೋಹ ಮತ್ತು ಧರ್ಮ ದ್ರೋಹದ ಕಾರಣವಾಗಿಯೇ ಇಂದು ಕಾಂಗ್ರೆಸ್ ನೂರರಿಂದ ಶೂನ್ಯದೆಡೆಗೆ ದಾಪುಗಾಲು ಹಾಕುತ್ತಿದೆ. ಸ್ವಂತ ಬಲದಿಂದ ಮೋದಿಜಿಯನ್ನು ಸೋಲಿಸುವ ಯೋಗ್ಯತೆ ಇಲ್ಲದೆ ಪಿಳ್ಳೆ ಪಕ್ಷಗಳ ಕೈಕಾಲು ಹಿಡಿಯುತ್ತಿದೆ.

ಇನ್ನು ಕೆಲವೇ ಕೆಲವು ಹೆಜ್ಜೆಗಳು ಕ್ರಮಿಸಿದರೆ ದೇಶದಲ್ಲಿ ನೂರಕ್ಕೆ ನೂರು ಭಗವಾ ದ್ವಜ ಹಾರಾಡುತ್ತದೆ. ಛತ್ರಪತಿ ಶಿವಾಜೀ ಮಹಾರಾಜರ ಅಖಂಡ ಹಿಂದೂ ಸಾಮ್ರಾಜ್ಯ ಮತ್ತೊಮ್ಮೆ ಅಸ್ತಿತ್ವಕ್ಕೆ ಬರುತ್ತದೆ. ಭಾರತಾಂಬೆ ಮತ್ತೊಮ್ಮೆ ಕೇಸರಿ ವಸ್ತ್ರ ತೊಡುತ್ತಾ ಸಂಭ್ರಮಿಸುತ್ತಾಳೆ. ಅಟಲ್ ಜಿಯವರು ಕಂಡ ಕನಸು ನನಸಾಗುತ್ತದೆ. ಇದೆಲ್ಲ ಆಗಬೇಕಾದರೆ ದೇಶದ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗಳಲ್ಲಿಯೂ ಕಮಲ ಅರಳಬೇಕು. ಅಟಲ್ ಜೀಯವರ ಕನಸನ್ನು ನನಸಾಗಿಸಲು ನಾವೆಲ್ಲ ಪಣ ತೊಡಬೇಕು. ಅಟಲ್ ಜಿ ಯವರ ಸೋಲಿಗೆ ಕಾರಣರಾಗಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಲೇಬೇಕು. ದೇಶದ ಮೂಲೆ ಮೂಲೆಯಲ್ಲೂ ಕಮಲ ಅರಳಿಸಲೇ ಬೇಕು. ರಾಷ್ಟ್ರವಾದಿಗಳೆಲ್ಲ ಕೈ ಜೋಡಿಸಿ ರಾಷ್ಟ್ರ ದ್ರೋಹಿಗಳಿಗೆ ಮಣ್ಣು ಮುಕ್ಕಿಸಲೇ ಬೇಕು. ಜಯ ಎಂದೆಂದಿಗೂ ಭಾರತ ಮಾತೆಗೇ ದೊರಕಬೇಕು.

  • sharvari
Tags

Related Articles

Close