ಪ್ರಚಲಿತ

ಪೊಲೀಸ್ ಪುತ್ರಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು ಹೇಗೆ ಗೊತ್ತಾ?

ಉತ್ತರ ಪ್ರದೇಶದಲ್ಲಿ ದೊಡ್ಡ ಸದ್ದು ಮಾಡಿದ್ದ ಸುದ್ದಿ ಕ್ರಿಮಿನಲ್ ಅತೀಕ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ಎನ್‌ ಕೌಂಟರ್ ಮಾಡುವ ಮೂಲಕ ಯಮಪುರಿಗಟ್ಟಿದ್ದು. ಆ ಬಳಿಕ ಪೊಲೀಸರು ಅತೀಕ್‌ನ ಕುಟುಂಬದ ಬಗೆಗೂ ಜಾಲಾಡಿದ್ದು, ಈ ಸಂದರ್ಭದಲ್ಲಿ ಆತನ ಹೆಂಡತಿ ಸಹ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್ ಎಂಬುದಾಗಿ ತಿಳಿದು ಬಂದಿದೆ.

ದಶಕಗಳ ಕಾಲ ರಾಜ್ಯದಲ್ಲಿ ಶಾಂತಿ ಕೆಡಿಸುವ ಕೆಲಸ ಮಾಡಿದ್ದ ಅತೀಕ್ ಮತ್ತವನ ಕುಟುಂಬವನ್ನೇ ಉತ್ತರ ಪ್ರದೇಶದ ಪೊಲೀಸರು ಸದ್ದಡಗಿಸಿದ್ದಾರೆ. ಅತೀಕ್‌ನ ಒಬ್ಬ ಪುತ್ರ ಈಗಾಗಲೇ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರೆ, ಇನ್ನಿಬ್ಬರು ಪುತ್ರರು ಜೈಲೂಟ ಉಣ್ಣುತ್ತಿದ್ದಾರೆ‌. ಸದ್ಯ ಅತೀಕ್‌ನ ಕುಟುಂಬದ ಇತಿಹಾಸ ಕೆದಕಿರುವ ಪೊಲೀಸರಿಗೆ ಆತನ ಹೆಂಡತಿ ಸಹ ಮೋಸ್ಟ್ ವಾಂಟೆಡ್ ಅಪರಾಧಿ ಎನ್ನುವುದು ತಿಳಿದು ಬಂದಿದೆ.

ಅತೀಕ್ ಪತ್ನಿ ಶಾಯಿಸ್ತಾ ಪರ್ವೀನ್ ಸಹ ಕೊಲೆ, ಸುಲಿಗೆ, ಅಪಹರಣ, ಧಮ್ಕಿ, ಸುಲಿಗೆ ಮೊದಲಾದ ಪ್ರಕರಣಗಳ ಆರೋಪಿಯಾಗಿದ್ದು, ಈಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಪಟ್ಟಿಯಲ್ಲಿದ್ದಾಳೆ. ಆಕೆಯ ತಲೆಗೆ ಸರ್ಕಾರ ೫೦ ಸಾವಿರ ರೂ. ಬಹುಮಾನ ಸಹ ಘೋಷಿಸಲಾಗಿದ್ದು, ಆಕೆಯನ್ನು ಹುಡುಕಲು ಸಹಕರಿಸುವಂತೆಯೂ ಸಾರ್ವಜನಿಕರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಈಕೆಯ ತಂದೆ ಪೊಲೀಸ್ ಕಾನ್ಸ್ಟೆಬಲ್ ಆಗಿ ನಿವೃತ್ತಿ ಹೊಂದಿದವರು. ಈಕೆ ಅತೀಕ್‌ನನ್ನು ಮದುವೆಯಾದ ಆರಂಭದಲ್ಲಿ ಯಾವ ಅಪರಾಧ ಕೃತ್ಯಗಳಲ್ಲಿಯೂ ಪಾಲು ಪಡೆಯದವಳು. ಆ ಬಳಿಕ ನಿಧಾನವಾಗಿ ಅತೀಕ್‌ನ ಕ್ರಿಮಿನಲ್ ಸಾಮ್ರಾಜ್ಯಕ್ಕೆ ಧುಮುಕಿದ ಈಕೆ, ಅತೀಕ್ ಜೈಲಿಗೆ ಹೋದಾಗೆಲ್ಲಾ ಆತನ ವ್ಯವಹಾರಗಳನ್ನು ನಡೆಸುತ್ತಿದ್ದಳು. ವಕೀಲ ಉಮೇಶ್ ಪಾಲ್ ಹತ್ಯೆ ಬಳಿಕ ಈಕೆ ಮುನ್ನೆಲೆಗೆ ಬಂದಿದ್ದಳು. ಈ ಹತ್ಯೆಗಾಗಿ ಆಕೆ ಸಬರಮತಿ ಜೈಲಿನಲ್ಲಿದ್ದ ತನ್ನ ಗಂಡನ ಜೊತೆ ಚರ್ಚಿಸಿ, ಆತನಿಗೆ ಜೈಲಿಗೆಯೇ ಮೊಬೈಲ್ ಫೋನ್ ಮತ್ತು ಸಿಮ್ ಒದಗಿಸುವ ಕೆಲಸವನ್ನೂ ಈ ಖತರ್ನಾಕ್ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಮಾಜವನ್ನು ಕಾಪಾಡುವ ಪೊಲೀಸೊಬ್ಬರ ಪುತ್ರಿ, ರೌಡಿಯೋರ್ವನನ್ನು ಮದುವೆಯಾಗಿ, ತಾನೂ ಸಮಾಜ ಘಾತಕಿಯಾಗಿ ಬದಲಾದಿದ್ದು ವಿಪರ್ಯಾಸವೇ ಸರಿ.

Tags

Related Articles

Close