ಪ್ರಚಲಿತ

ರಾಜ್ಯದ ಕೈ ನಾಯಕರದ್ದು ಕೀಳು ಮಟ್ಟದ ರಾಜಕಾರಣ: ಪ್ರಲ್ಹಾದ ಜೋಶಿ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೈ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತ, ಅಭಿವೃದ್ಧಿಯ ವಿಷಯದಲ್ಲಿ ತಮ್ಮ ವಿಫಲತೆಯನ್ನು ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ರೂಪಿಸುವ ಪ್ರಯತ್ನ ಮಾಡುತ್ತಿದೆ. ಸೂಕ್ತ ಯೋಜನೆ ಹಾಕಿಕೊಳ್ಳದೆ ಉಚಿತ ಯೋಜನೆಗಳನ್ನು ಘೋಷಣೆ ಕೈ‌ ಪಕ್ಷ ಮಾಡಿದ್ದು, ಇದರಿಂದ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುವ ಹಾಗಾಗಿದೆ. ಉಚಿತ ಗ್ಯಾರಂಟಿಗಳ ಮೂಲಕ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಣಕಾಸು ಕಾರ್ಯದರ್ಶಿ ಬಸವರಾಜು ರಾಯರೆಡ್ಡಿ ಸೇರಿ ಹಲವಾರು ಕೈ ಶಾಸಕರು ಸಹ ಇದೇ ಮಾತುಗಳನ್ನಾಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈಗ ತಮ್ಮ ಸರ್ಕಾರದ ವೈಫಲ್ಯವನ್ನು ಜನರ ಕಣ್ಣಿನಿಂದ ಮುಚ್ಚಿ ಹಾಕುವುದಕ್ಕಾಗಿ ಸಿ ಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮನಬಂದಂತೆ ಮಾಡಿದ ಉಚಿತ ಘೋಷಣೆ ಗಳ ಪರಿಣಾಮವೇ ಇದಾಗಿದೆ. ಇದರಿಂದಲೇ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಹಣಕಾಸಿನ ವಿಷಯದಲ್ಲಿ ಹಣಕಾಸು ಆಯೋಗದ ನಿರ್ಧಾರವೇ ಅಂತಿಮ. ರಾಜ್ಯದಲ್ಲಿ ಸಂಗ್ರಹಿಸಲಾದ ಜಿ.ಎಸ್.ಟಿ. ಪಾಲು ರಾಜ್ಯ ಸರ್ಕಾರದ ಬಳಿಯೇ ಇದೆ. ನಾವು ನಯಾ ಪೈಸೆ ಉಳಿಸಿಕೊಂಡಿಲ್ಲ. ಹಾಗೆಯೇ ರಾಜ್ಯಕ್ಕೆ ಬಡ್ಡಿ ರಹಿತ ಸಾಲವನ್ನು ಸಹ ನೀಡಲಾಗಿದೆ. ಅನುದಾನ ಸಹ ನೀಡಲಾಗಿದೆ. ಜೊತೆಗೆ ರಾಜ್ಯದ ರೈಲ್ವೆ ಯೋಜನೆಗಳಿಗೆ ಹತ್ತು ಪಟ್ಟು ಹೆಚ್ಚು ಅನುದಾನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಕೃಷ್ಣ ಮೇಲ್ದಂಡೆ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದ ಬಳಿ ಮಾಹಿತಿ ಕೇಳಲಾಗಿತ್ತು. ಆದರೆ ಆ ಮಾಹಿತಿಯನ್ನು ಅವರು ಒದಗಿಸದ ಕಾರಣ ಅನುದಾನ ನೀಡಲಾಗಿಲ್ಲ. ರಾಜ್ಯದ ಕೈ ನಾಯಕರದ್ದು ‌ಕೀಳು ಮಟ್ಟದ ರಾಜಕೀಯ. ಸಂಸದರಿಗೆ ಮುಖ್ಯಮಂತ್ರಿ ಪತ್ರ ಬರೆದಿರುವುದು ದುರ್ಬುದ್ಧಿಯ ಪರಮಾವಧಿ ಎಂದು ಜೋಶಿ ತಿಳಿಸಿದ್ದಾರೆ.

Tags

Related Articles

Close