ಪ್ರಚಲಿತ

ದೇಶದ ನಿಜವಾದ ಇತಿಹಾಸವನ್ನು ಜನರ ಮುಂದಿಡುತ್ತೇವೆ: ಪ್ರಲ್ಹಾದ ಜೋಶಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಒಕ್ಕೂಟದ ಮೂರನೇ ಅವಧಿಯ ಸರ್ಕಾರ ರಚನೆಯಾದಲ್ಲಿ ಭಾರತದ ನಿಜವಾದ ಇತಿಹಾಸವನ್ನು ಜನತೆಗೆ ತಿಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.

ಭಾರತದ ನಿಜವಾದ ಇತಿಹಾಸ ಬೇರೆಯೇ ಇದೆ. ಆ ನೈಜ ಇತಿಹಾಸವನ್ನು ಜನರಿಗೆ ಹೇಳಲಾಗುತ್ತದೆ. ಈ ದೇಶಕ್ಕಾಗಿ ಹೋರಾಟ ಮಾಡಿದ ಮಹನೀಯರ ನಿಜ ಸಂಗತಿಗಳನ್ನು ಬಿಚ್ಚಿಡುವ ಕೆಲಸವನ್ನು ನಾವು ಮಾಡಬೇಕಿದ್ದು, ಇದನ್ನು ನಮ್ಮ ಮೂರನೇ ಅವಧಿಯ ಸರ್ಕಾರ ಸಾಧಿಸಿ‌ ಕೊಡಲಿದೆ ಎಂದು ಅವರು ಹೇಳಿದ್ದಾರೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಿಂದುಳಿದ ವರ್ಗಕ್ಕೆ ಸೇರಿದವರು. ಆಗ ಅವರ ಅಧಿಕಾರಾವಧಿಯಲ್ಲಿ ದೇಶದ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ತಮ್ಮ ಅವಧಿಯಲ್ಲಿ ದೇಶದ ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ಬಯಸಿಲ್ಲ. ಅದಕ್ಕಾಗಿ ಶ್ರಮಿಸಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗದವರನ್ನು ಪ್ರಧಾನಿಯನ್ನಾಗಿ ಮಾಡಲಿಲ್ಲ. ಅವರಿಗೆ ಹಿಂದುಳಿದ ವರ್ಗದ ಜನರ ಏಳಿಗೆ ಮುಖ್ಯವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಯಕವೇ ಕೈಲಾಸ ಎಂದು ಹೇಳಿದ ಬಸವಣ್ಣನವರ ಮಾತಿನ ಹಾಗೆ ಹಿಂದುಳಿದ ವರ್ಗಗಳ ಜನರು ಪರಿಶ್ರಮ ಜೀವಿಗಳು. ಕಾಯಕವೇ ಕೈಲಾಸ ಎಂದು ಕೆಲಸ ಮಾಡುತ್ತಲೇ ಶ್ರಮ ಜೀವನ ನಡೆಸುತ್ತಿರುವವರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹಲವು ನಾಯಕರಿದ್ದಾರೆ‌. ಇಂತಹ ಮಹನೀಯರ ಬದುಕು, ಕೊಡುಗೆಗಳ ಬಗ್ಗೆ ನಾವು ಸಾರ್ವಜನಿಕರಿಗೆ ನಿಜ ಸಂಗತಿಗಳನ್ನು ತಿಳಿಯಪಡಿಸಬೇಕಿದೆ. ಇದನ್ನು ನಾವು ಮೂರನೇ ಬಾರಿ ಅಧಿಕಾರಕ್ಕೆ ಬಂದಾಗ ನಡೆಸಿ ಕೊಡುತ್ತವೆ ಎಂದು ಜೋಶಿ ತಿಳಿಸಿದ್ದಾರೆ.

Tags

Related Articles

Close