ಪ್ರಚಲಿತ

ಬ್ರಹ್ಮಾಂಡದೊಡೆಯ ತಿರುಪತಿ ತಿರುಮಲ ವೆಂಕಟೇಶ್ವರನ ಸನ್ನಿಧಾನದ ರಹಸ್ಯಗಳನ್ನು ವಿಜ್ಞಾನಿಗಳಿಗೂ ಭೇದಿಸಲು ಸಾಧ್ಯವಾಗಿಲ್ಲ ಎಂದರೆ ಬಾಲಾಜಿಯ ಪವಾಡದ ಪರಿ ಇನ್ನೆಂಥದ್ದಿರಬೇಕು?

ವಿಶ್ವ ಪ್ರಸಿದ್ದ ಮತ್ತು ವಿಶ್ವದ ಅತ್ಯಂತ ಶ್ರೀಮಂತ ದೇವರೆಂದೆ ಖ್ಯಾತಿ ಪಡೆದ ತಿರುಪತಿ ತಿಮ್ಮಪ್ಪನ ವಾಸಸ್ಥಾನ ಹಲವಾರು ರಹಸ್ಯಗಳ ನೆಲೆವೀಡಾಗಿದೆ. ಯಾವ ಆಧುನಿಕ ವಿಜ್ಞಾನಕ್ಕೂ ಭೇದಿಸಲು ಸಾಧ್ಯವಾಗದ ರಹಸ್ಯಗಳು ತಿರುಮಲ ಸನ್ನಿಧಾನದಲ್ಲಿವೆ.

ತಿರುಮಲ ಪರ್ವತದಲ್ಲಿ ವೆಂಕಟೇಶ್ವರನ ಮುಖದ ಆಕಾರ: ತಿರುಮಲ ಪರ್ವತ ಶ್ರೇಣಿಗಳನ್ನು ಲಂಬವಾಗಿ ನೋಡಿದಾಗ ಅದರಲ್ಲಿ ಬಾಲಾಜಿಯ ಮುಖ ಚರ್ಯೆ ಕಾಣಿಸಿಕೊಳ್ಳುತ್ತದೆ! ಥೇಟ್ ಇದೆ ತೆರನಾಗಿ ಕೈಲಾಶ ಪರ್ವತದಲ್ಲಿಯೂ ಶಿವನ ಮುಖದ ಚರ್ಯೆಗಳಿವೆ. ಹಾಗಾದರೆ ಈ ಮುಖ ಚರ್ಯೆಗಳು ಪ್ರಾಕೃತಿಕವೆ ಅಥವಾ ಮಾನವ ನಿರ್ಮಿತವೆ? ಮಾನವ ನಿರ್ಮಿತವೆಂದಾದರೆ ಬೃಹದಾಕಾರದ ಚಹರೆಯನ್ನು ಪರ್ವತದಲ್ಲಿ ಕೆತ್ತಲು ಬಳಸಿದ ತಂತ್ರಜ್ಞಾನ ಹೇಗಿದ್ದಿರಬಹುದು!

ಗರುಡ ಪರ್ವತ: ಈ ಪರ್ವತದಲ್ಲಿ ಗರುಡನ ಆಕಾರ ನಿಚ್ಚಳವಾಗಿ ಕಂಡುಬರುತ್ತದೆ. ವಿಷ್ಣುವಿನ ವಾಹನ ಗರುಡ. ಪರ್ವತಗಳಲ್ಲಿ ಗರುಡ ಮತ್ತು ವೆಂಕಟೇಶ್ವರನ ಮುಖಚರ್ಯೆ ಕೇವಲ ಕಾಕತಾಳೀಯ ಇರಬಹುದೆ?

ಶಿಲಾತೋರಣ: ಅತ್ಯಂತ ರಹಸ್ಯಮಯ ಪ್ರದೇಶ ಎಂದು ಪರಿಗಣಿತವಾಗಿರುವ ಈ ಪ್ರದೇಶದಲ್ಲಿ ಅನ್ಯ ಗ್ರಹಗಳಿಗೆ ಹೋಗುವ ಗುಪ್ತ ತಾರಾ ದ್ವಾರ ಇದೆ ಎಂದು ಹೇಳಲಾಗುತ್ತದೆ. ಈ ಶಿಲಾತೋರಣದ ಜಾಗದಲ್ಲೇ ವಿಷ್ಣು ಮೊತ್ತ ಮೊದಲ ಬಾರಿಗೆ ಪ್ರತ್ಯಕ್ಷನಾದದ್ದು ಎನ್ನಲಾಗುತ್ತದೆ. ನಿಶ್ಚಿತ ಸಮಯದಲ್ಲಿ ಅಪರಿಮಿತ ರೇಡಿಯೋ ತರಂಗಗಳನ್ನು ಹೊರಸೂಸುವ ಈ ಶಿಲಾತೋರಣದ ಬಳಿ ಬ್ಯಾಟರಿ ಸಂಚಾಲಿತ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆಯೆ ಇಲ್ಲ! ಹಾಗಾದರೆ ವಿಷ್ಣು ಅನ್ಯಗ್ರಹದಿಂದ ಗರುಡನಂತೆ ತೋರುವ ತನ್ನ ವಾಹನ (ಸ್ಪೇಸ್ ಶಿಪ್) ನಲ್ಲಿ ಈ ದ್ವಾರದ ಮೂಲಕ ತಿರುಮಲ ಪರ್ವತಗಳಲ್ಲಿ ಬಂದಿಳಿದಿರಬಹುದೆ?

ಹಬೆಯನ್ನು ಹೊರಸೂಸುವ ವಿಷ್ಣು ಪಾದಗಳು: ಈ ಪರ್ವತದ ಕೆಳಗೆ ಕಲ್ಲಿನಲ್ಲಿ ಕೆತ್ತಿದ ವಿಷ್ಣು ಪಾದಗಳಿವೆ. ವಿಚಿತ್ರವೆಂದರೆ ಈ ಪಾದಗಳು ಸದಾ ಹಬೆಯನ್ನು ಹೊರ ಸೂಸುತ್ತಿರುತ್ತವೆ!! ಇದರ ಹಿಂದಿನ ರಹಸ್ಯವೇನು ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ.

ಸದಾ ತೇವವಾಗಿರುವ ಬಾಲಾಜಿಯ ಮೂರ್ತಿಯ ಹಿಂಬದಿ: ಎಷ್ಟು ಬಾರಿ ಸ್ವಾಮಿಯ ಹಿಂಭಾಗವನ್ನು ಒಣಗಿಸಿದರೂ ಅದು ಸದಾ ತೇವವಾಗಿರುತ್ತದೆ! ಅಲ್ಲದೆ ಸ್ವಾಮಿಯ ಹಿಂಬಾಗದಲ್ಲಿ ಗಮನವಾಗಿ ಕಿವಿಗೊಟ್ಟು ಕೇಳಿದರೆ ಸಮುದ್ರದ ಶಬ್ದ ಕೇಳಿಸುತ್ತದೆ ಎನ್ನಲಾಗುತ್ತದೆ!

ಮೂರ್ತಿಯ ತಲೆ ಭಾಗದಲ್ಲಿ ನೈಜ ಕೂದಲು: ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಮೇಲೆ ನಿಜವಾದ ಕೂದಲು ಇದೆ ಎಂದು ಹೇಳಲಾಗುತ್ತದೆ. ಒಬ್ಬ ಕುರುಬನ ಹೊಡೆತದ ಫಲವಾಗಿ ಬಾಲಾಜಿಯು ಸಣ್ಣ ಪ್ರಮಾಣದ ಕೂದಲನ್ನು ಕಳೆದುಕೊಂಡಾಗ, ಗಂಧರ್ವ ರಾಜಕುಮಾರಿ ನೀಲಾ ದೇವಿ ಅವಳ ಕೂದಲಿನ ಭಾಗವನ್ನು ಕತ್ತರಿಸಿ ಶ್ರೀನಿವಾಸನ ತಲೆಗೆ ಕಸಿ ಮಾಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ಹಾಗಾದರೆ ಕೂದಲು ಕಸಿ ವಿಧಾನ ಪುರಾಣ ಕಾಲದಲ್ಲೂ ಇತ್ತೆಂದಾಯ್ತು!!

ತನ್ನ ಕೂದಲನ್ನು ಕತ್ತರಿಸಿ ಶ್ರೀನಿವಾಸನಿಗೆ ಕಾಣಿಕೆ ಕೊಟ್ಟ ಪ್ರತಿಯಾಗಿ ತಿರುಪತಿಗೆ ತನ್ನ ದರ್ಶನಕ್ಕೆ ಬಂದ ಭಕ್ತಾದಿಗಳು ಕೂದಲನ್ನು ಸಮರ್ಪಣೆ ಮಾಡಿದಾಗ ಅದು ನೀಲಾ ದೇವಿಗೆ ಸಮರ್ಪಣೆ ಆಗುತ್ತದೆ ಎಂದು ಆಕೆಯನ್ನು ಹರಸುತ್ತಾನೆ ಬಾಲಾಜಿ. ಇದೆ ಮುಡಿ ಕೊಡುವ ಸಂಪ್ರದಾಯವಾಗಿ ಬೆಳೆದು ಬಂದಿದೆ.

ಒಂದು ಸಾವಿರ ವರ್ಷಗಳಿಂದ ಉರಿಯುತ್ತಿರುವ ನಂದಾದೀಪ: ಬಾಲಾಜಿಯ ಮುಂದಿರುವ ದೀಪಗಳು ಕಳೆದ ಒಂದು ಸಾವಿರ ವರ್ಷಗಳಿಂದಲೂ ಉರಿಯುತ್ತಿವೆ ಹಾಗೂ ಇದುವರೆಗೂ ಒಮ್ಮೆಯೂ ಆರಿಲ್ಲ ಎನ್ನಲಾಗುತ್ತದೆ. ಈ ದೀಪಗಳನ್ನು ಉರಿಸಿ ಇಲ್ಲಿ ಯಾರು ಇಟ್ಟಿದ್ದು ಎನ್ನುವುದು ಯಾರಿಗೂ ತಿಳಿದಿಲ್ಲ.

ಅನಂತಾಲ್ವರ್ ವೆಂಕಟೇಶ್ವರನಿಗೆ ಹೊಡೆಯಲು ಬಳಸಿದ ಬೆತ್ತ: ದೇವಾಲಯದ ಪ್ರವೇಶ ದ್ವಾರದ ಬಲಗಡೆಗೆ ಅನಂತಾಲ್ವರ್ ವೆಂಕಟೇಶನಗ ಗಲ್ಲಕ್ಕೆ ಹೊಡೆದ ಬೆತ್ತವನ್ನು ಇಡಲಾಗಿದೆ. ಆಲ್ವರ್ ಗಲ್ಲಕ್ಕೆ ಹೊಡೆದ ಪರಿಣಾಮವಾಗಿ ವೆಂಕಟೇಶ್ವರನ ಗಲ್ಲ ಊದಿಕೊಂದು ರಕ್ತ ಒಸರುತ್ತದೆ ಮತ್ತು ಗಲ್ಲಕ್ಕೆ ಶ್ರೀಗಂಧ ಲೇಪಿಸಲಾಗುತ್ತದೆ. ಈ ಪರಂಪರೆ ಈಗಲೂ ಜಾರಿಯಲ್ಲಿದೆ.

ಮೂರ್ತಿಗೆ ಲೇಪಿಸುವ ಪಚ್ಚ ಕರ್ಪೂರದ ಲೇಪನ: ಬಾಲಾಜಿಯ ಮೂರ್ತಿಗೆ ನಿತ್ಯ ಪಚ್ಚ ಕರ್ಪೂರದ ಲೇಪನ ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಗ್ರನಾಯಿಟ್ ಕಲ್ಲುಗಳಿಗೆ ಪಚ್ಚ ಕರ್ಪೂರ ಹಚ್ಚಿದಾಗ ಅವುಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ವಿಚಿತ್ರವೆಂದರೆ ಬಾಲಾಜಿ ಮೂರ್ತಿಗೆ ಕರ್ಪೂರ ಲೇಪನದಿಂದ ಯಾವ ತೊಂದರೆಯೂ ಆಗುವುದಿಲ್ಲ!!

ತಿರುಮಲದ ರಹಸ್ಯ ಹಳ್ಳಿ: ತಿರುಮಲದಿಂದ 23 ಕಿ.ಮೀ ದೂರದಲ್ಲಿ ಒಂದು ರಹಸ್ಯ ಹಳ್ಳಿ ಇದೆ. ಗ್ರಾಮಸ್ಥರನ್ನು ಹೊರತು ಪಡಿಸಿ ಈ ಹಳ್ಳಿಗೆ ಹೊರಗಿನವರ ಪ್ರವೇಶವೆ ಇಲ್ಲ. ಹಳ್ಳಿಯ ಗ್ರಾಮಸ್ಥರು ಕಟ್ಟು ನಿಟ್ಟಾದ ಆಚರಣೆಗಳನ್ನು ಪಾಲಿಸುತ್ತಾರೆ ಎನ್ನಲಾಗಿದೆ. ಶ್ರೀನಿವಾಸನಿಗೆ ಅರ್ಪಿಸುವ ಹೂವುಗಳು, ಹಾಲು, ತುಪ್ಪ, ಬೆಣ್ಣೆ ಎಲ್ಲವೂ ಈ ಹಳ್ಳಿಯಿಂದಲೆ ಬರುತ್ತದೆ ಎನ್ನುತ್ತಾರೆ.

ವೆಂಕಟೇಶ್ವರನ ಗರ್ಭಗುಡಿ: ವೆಂಕಟೇಶ್ವರನ ಮೂರ್ತಿಯು ಗರ್ಭಗುಡಿಯ ಮಧ್ಯಭಾಗದಲ್ಲಿದೆ ಎನ್ನುವಂತೆ ಭಾಸವಾಗುತ್ತದೆ ಆದರೆ ನಿಜವಾಗಿ ಮೂರ್ತಿಯು ಗರ್ಭಗುಡಿಯ ಬಲಭಾಗದಲ್ಲಿದೆ! ಹೊರಗಿನಿಂದ ನಿಂತು ನೋಡಿದಾಗ ಈ ಸೂಕ್ಷ್ಮ ಗೊತ್ತಾಗುವುದು.

ಮೂರ್ತಿಯ ಉಷ್ಣತೆ: ತಿಮ್ಮಪ್ಪನ ದೇವಾಲಯವು ಸುಮಾರು 3000 ಅಡಿ ಎತ್ತರದಲ್ಲಿದೆ, ಆದ್ದರಿಂದ ಇಲ್ಲಿನ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ. ಆದರೆ ಮೂರ್ತಿಯ ಉಷ್ಣತೆ ಮಾತ್ರ 110 ಡಿಗ್ರಿ ಫ಼ೇರನ್ ಹೀಟ್ ಇರುತ್ತದೆ! ಬೆಳಿಗ್ಗಿನ ಅಭಿಷೇಕವಾದ ಬಳಿಕವೂ ಮೂರ್ತಿ ಬೆವರುತ್ತಿರುತ್ತದೆ ಮತ್ತು ರೇಶ್ಮೆ ಬಟ್ಟೆಯಿಂದ ಸ್ವಾಮಿಯ ಮೈಯನ್ನು ಒಣಗಿಸಲಾಗುತ್ತದೆ. ಪ್ರತಿ ಗುರುವಾರ ಪವಿತ್ರ ಸ್ನಾನದ ಮುನ್ನ ಸ್ವಾಮಿಯ ಆಭರಣಗಳನ್ನು ತೆಗೆಯಲಾಗುತ್ತದೆ. ಆಗ ಆ ಅಭರಣಗಳು ಬೆಚ್ಚಗಿರುತ್ತವೆ ಎನ್ನಲಾಗುತ್ತದೆ.

ಒಬ್ಬ ಜೀವಂತ ವ್ಯಕ್ತಿಯಲ್ಲಿ ಯಾವ ಎಲ್ಲ ಗುಣ ಲಕ್ಷಣಗಳಿರುತ್ತವೆಯೋ ಅದೆ ತೆರನಾದ ಲಕ್ಷಣಗಳು ಬಾಲಾಜಿಯ ಮೂರ್ತಿಯಲ್ಲೂ ಇವೆ! ತಿರುಮಲದ ಸುತ್ತ ಜರುಗುವ ವಿದ್ಯಮಾನಗಳು ಕಾಕತಾಳೀಯವೆ? ಅಥವಾ ವಿಜ್ಞಾನಕ್ಕೂ ನಿಲುಕದ ಯಾವುದೋ ಅದೃಶ್ಯ ರಹಸ್ಯ ತಿರುಮಲದಲ್ಲಿ ಅಡಗಿದೆಯೆ? ಸನಾತನ ಗ್ರಂಥಗಳಲ್ಲಿ ಈ ಪ್ರಶ್ನೆಗಳನ್ನು ಭೇಧಿಸುವ ರಹಸ್ಯ ಅಡಗಿವೆಯೆ? ಉತ್ತರಗಳೆ ಸಿಗದ ಪ್ರಶ್ನೆಗಳಿವು. ಪುರದೊಡೆಯ ಬಾಲಾಜಿಯ ಪವಾಡಗಳನ್ನು ಅರಿಯುವ ಪ್ರಾಜ್ಞ ಮನಸ್ಸು ಹುಲುಮಾನವರಾದ ನಮಗೆಲ್ಲಿ ಬರಬೇಕು? ನಮ್ಮದೇನಿದ್ದರೂ ಶೃದ್ದೆ ಮಾತ್ರ… ಏಳು ಕೊಂಡಲವಾಡ ಗೋವಿಂದಾ… ಎನ್ನುವ ಭಕ್ತಿಯ ಪರಾಕಾಷ್ಟೆ ಮಾತ್ರ…

-ಶಾರ್ವರಿ

Related Articles

Close