ಪ್ರಚಲಿತ

ಶ್ರೀರಾಮ ಮಂದಿರ ಉದ್ಘಾಟನೆ: ಭಕ್ತರಲ್ಲಿ ವಿಶೇಷ ಮನವಿ ಮಾಡಿದ ಟ್ರಸ್ಟ್

ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ವಿಶ್ವದಾದ್ಯಂತ ಇರುವ ಬಹುಕೋಟಿ ಪ್ರಭು ಶ್ರೀರಾಮಚಂದ್ರನ ಭಕ್ತರಿಗೆ ಅತ್ಯಂತ ಸಂತಸದ ಸಮಯ. ಬಹು ಕೋಟಿ ಹಿಂದೂಗಳ ಆಸೆಯಂತೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾಗಲಿದ್ದಾನೆ. ಭಗವಂತ ಸಿಂಹಾಸನವೇರುವ ಈ ದಿವ್ಯ ಕ್ಷಣಗಳಿಗೆ ನಾವೆಲ್ಲರೂ‌ ಸಾಕ್ಷೀಭೂತರಾಗಲಿರುವುದೇ ನಮ್ಮೆಲ್ಲರ ಪರಮ ಪುಣ್ಯ‌.

ಈ ರಾಷ್ಟ್ರ ಮಂದಿರದ ಉದ್ಘಾಟನೆಯ ಸಮಯದಲ್ಲಿ ಉತ್ತರ ಪ್ರದೇಶದ ಅಯೋಧ್ಯಾ ನಗರಕ್ಕೆ ದೇಶ – ವಿದೇಶಗಳಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಇದೆ‌. ಈ ಹಿನ್ನೆಲೆಯಲ್ಲಿ ಯಾವುದೇ ಅವ್ಯವಸ್ಥೆಯಾಗದ ಹಾಗೆ, ಗೊಂದಲಗಳು ಸೃಷ್ಟಿಯಾಗಬಾರದು ‌ಎನ್ನುವ‌ ಉದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಕೆಲವು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಈ ಬಗ್ಗೆ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಾಹಿತಿ ನೀಡಿದ್ದು, ಭಕ್ತಾದಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಜನವರಿ 22 ರಂದು ಅಯೋಧ್ಯೆಗೆ ಆಗಮಿಸದಿರಿ. ಬದಲಾಗಿ ನಿಮ್ಮ ಹತ್ತಿರದ ದೇವಾಲಯಗಳಲ್ಲಿಯೇ ಒಟ್ಟುಗೂಡಿ. ಆ ದೇವಾಲಯ ಚಿಕ್ಕದಿರಲಿ, ದೊಡ್ಡದಿರಲಿ ಯಾವುದೇ ದೇವರ ದೇಗುಲವಾಗಿದ್ದರೂ ಸರಿ. ಅಲ್ಲಿಯೇ ಒಗ್ಗೂಡಿ. ನಿಮಗೆ ಯಾವ‌ ದೇವಾಲಯಕ್ಕೆ ತೆರಳುವುದು ಸಾಧ್ಯವೋ, ಆ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಜೊತೆಗೆ ರಾಮ ಮಂದಿರದ ಕುರಿತಾಗಿಯೂ ಅವರು ಮಾತನಾಡಿದ್ದು, ರಾಮ ಮಂದಿರ ಮತ್ತು ಗರ್ಭ ಗುಡಿ ಎರಡೂ ಸಿದ್ಧವಾಗಿವೆ. ಆದರೆ ರಾಮ ಮಂದಿರದ ಇನ್ನಷ್ಟು ಕೆಲಸಗಳು ಸಂಪೂರ್ಣಗೊಳ್ಳಲು ಬಾಕಿ ಇದೆ. ಈ ಇಡೀ ದೇವಾಲಯದ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ಮುಗಿಸಲು ಮುಂದಿನ ಎರಡು ವರ್ಷಗಳಾದರೂ ತಗುಲಬಹುದು ಎಂದು‌ ಅವರು‌ ಹೇಳಿದ್ದಾರೆ.

ಇನ್ನು ಈ ನೂತನ ದೇಗುಲದ ಲೋಕಾರ್ಪಣೆಗೆ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನಿ ಮೋದಿ ಅವರನ್ನು ಒಳಗೊಂಡಂತೆ ಹಲವಾರು ಗಣ್ಯರನ್ನು ಆಮಂತ್ರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಸಂದರ್ಶಕರು ಬರುವ ನಿರೀಕ್ಷೆ ಸಹ ಇದೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌‌‌ ಮುಖ್ಯಸ್ಥ ಮೋಹನ್ ಭಾಗವತರ್ ಜೀ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರೂ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಮ ಮಂದಿರದ ಉದ್ಘಾಟನೆಗೆ ಸಂಬಂಧಿಸಿದ ಹಾಗೆ ಈಗಾಗಲೇ ದೇಶದ ಹೆಚ್ಚಿನ ದೇಗುಲಗಳಿಗೆ ಮಂತ್ರಿಸಿದ ಅಕ್ಷತೆಯೂ ತಲುಪಿದೆ‌. ಜೊತೆಗೆ ರಾಮ ಮಂದಿರ ಲೋಕಾರ್ಪಣೆಯ ದಿನದಂದು ಹಿಂದೂ ಬಂದವರು, ರಾಮ ಭಕ್ತರು ಸಮೀಪದ ದೇವಾಲಯಗಳಲ್ಲಿ ಭಜನೆ, ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ. ಜೊತೆಗೆ ಸಂಧ್ಯಾ ಕಾಲದಲ್ಲಿ ಹಿಂದೂ ಮನೆ ಮನೆಗಳಲ್ಲಿ ದೀಪಗಳನ್ನು ಬೆಳಗುವಂತೆಯೂ ಟ್ರಸ್ಟ್ ಮನವಿ ಮಾಡಿದೆ.

Tags

Related Articles

Close