ಪ್ರಚಲಿತ

ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಿರುವ ಅಮ್ಮ-ಮಗನ ವಿರುದ್ದ ಮಹತ್ವದ ದಾಖಲೆ ಲಭ್ಯ!! ಕೈ ಕಮಾಂಡ್ ಅನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಸಫಲರಾಗುವರೆ ಸುಬ್ರಮಣ್ಯನ್ ಸ್ವಾಮಿ?

“ಕೈ” ಕಮಾಂಡಿನ ಅಮ್ಮ-ಮಗ ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ 50-50 ಸಾವಿರ ರುಪಾಯಿಗಳ ಬಾಂಡ್ ಇಟ್ಟು ಜಾಮೀನಿನ ಮೇಲೆ ಹೊರಗೆ ತಿರುಗುತ್ತಿರುವ ವಿಚಾರ ಜಗತ್ತಿಗೇ ತಿಳಿದಿದೆ. ಕಾಂಗ್ರೆಸಿನ ತಥಾಕಥಿತ ರಾಜಮಾತೆ ಮತ್ತಾಕೆಯ ಕುಲಭೂಷಣ ಯುವರಾಜನ ವಿರುದ್ದ ಸುಬ್ರಮಣ್ಯನ್ ಸ್ವಾಮಿಗೆ ಮಹತ್ವದ ದಾಖಲೆ ಲಭಿಸಿದೆ ಎಂದು ಹೇಳಲಾಗುತ್ತಿದೆ. ಅನಾಮಧೇಯ ವ್ಯಕ್ತಿ ಒಬ್ಬ ತನ್ನ ಮನೆಯ ಬಾಗಿಲಿನಲ್ಲಿ ಆದಾಯ ತೆರಿಗೆ ದಾಖಲೆಗಳ ಕೆಲವು ಸ್ಫೋಟಕ ಕಡತಗಳನ್ನು ಇಟ್ಟಿದ್ದಾರೆ ಎಂದು ಸ್ವಾಮಿ ಘೋಷಿಸಿದ್ದಾರೆ. 27 ನೇ ಡಿಸೆಂಬರ್ ದಿನಾಂಕದ 105-ಪುಟ ಆದೇಶದಲ್ಲಿ ಕಾಂಗ್ರೆಸ್ AJL ಕಂಪನಿಗೆ ನೀಡಿದ 90 ಕೋಟಿ ಸಾಲವು “ನಕಲಿ” ಎಂದು ಹೇಳಲಾಗಿದೆ. ಈ ದಾಖಲೆಗಳಲ್ಲಿ ‘ಯಂಗ್ ಇಂಡಿಯನ್’ ಕಂಪನಿ ಆದಾಯ ತೆರಿಗೆ ಇಲಾಖೆಗೆ ಪಂಗನಾಮ ಹಾಕಿದ 414 ಕೋಟಿ ರೂಪಾಯಿಗಳನ್ನು ಮರು ಪಾವತಿ ಮಾಡಲು ತಿಳಿಸಲಾಗಿದೆ. ಇಲಾಖೆಯ ಈ ಆದೇಶದಲ್ಲಿ ಈ ಡೀಲ್ ಮೋಸದಿಂದ ಕೂಡಿದೆ ಎಂದಿದೆ ಹಾಗೂ ಆದಾಯ ತೆರಿಗೆ ಇಲಾಖೆ ಹಣ ಮರು ಪಾವತಿಸಲು ಕಾಂಗ್ರೆಸ್ಸಿಗೆ 890 ದಿನಗಳಲ್ಲಿ 44 ಅವಕಾಶಗಳನ್ನು ನೀಡಿದೆ ಎಂದು ತಿಳಿಸಲಾಗಿದೆ.

ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಅಮ್ಮ-ಮಗನ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿರುವ ಸ್ವಾಮಿ ಇಬ್ಬರನ್ನೂ ಕೋರ್ಟಿನ ಕಟಕಟಗೆ ಎಳೆತರುವಲ್ಲಿ ಸಫಲರಾಗಿದ್ದಾರೆ. ಅಮ್ಮ-ಮಗನನ್ನು ಜೈಲಿಗೆ ಹಾಕಿಯೆ ತೀರುತ್ತೇನೆ ಎಂದು ಶಪಥಗೈದಿರುವ ಸ್ವಾಮಿ, ಇವರ ವಿರುದ್ದ ಸತತ ಮೂರು ಅರ್ಜಿ ಹಾಕಿದ್ದಾರೆ. ಮೂರನೆಯ ಅರ್ಜಿಯಲ್ಲಿ, ಸುಬ್ರಹ್ಮಣ್ಯನ್ ಸ್ವಾಮಿ ತನ್ನ ಬಾಗಿಲಿನಲ್ಲಿ ಕಂಡುಕೊಂಡ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯಕ್ಕೆ ಕೋರಿದ್ದಾರೆ. ಒಂದೆಡೆ ಸ್ವಾಮಿ ತಮ್ಮ ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಸಾಕಷ್ಟು ಸಾಮಗ್ರಿಗಳು ಇವೆ ಎಂದು ಪ್ರತಿಪಾದಿಸುತ್ತಿದ್ದರೆ ಇನ್ನೊಂದೆಡೆ ಅಮ್ಮ-ಮಗ ಅದನ್ನು ವಜಾಗೊಳಿಸಲು ನ್ಯಾಯಾಲಯಕ್ಕೆ ಒತ್ತಾಯಿಸುತ್ತಿದ್ದಾರೆ.

ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ನ ನೆಹರೂ-ಗಾಂಧಿ ಪರಿವಾರ ಮಾಡಿರುವ ಯಾವುದೇ ಹಗರಣಗಳಿಗೆ ಸಾಕ್ಷಿಯೆ ದೊರಕಿಲ್ಲ. ಅತ್ಯಂತ ಚಾಣಾಕ್ಷವಾಗಿ ತಮ್ಮ ಹಗರಣಗಳ ಸಾಕ್ಷ ನಷ್ಟ ಮಾಡುವ ಕಲೆ ನೆಹರು-ಗಾಂಧಿ ಪರಿವಾರಕ್ಕೆ ಕರಗತವಾಗಿದೆ. ಹಗರಣಗಳಿಗೆ ಸಂಬಂಧ ಪಟ್ಟ ದಾಖಲೆಗಳು ನೆಹರೂ ಕುಟುಂಬದ ಹೆಸರಿನಲ್ಲಿರುವುದಿಲ್ಲ, ಹಾಗೊಂದು ವೇಳೆ ಇದ್ದರೂ ಅದನ್ನು ನಷ್ಟ ಮಾಡಲಾಗಿರುತ್ತದೆ. ಆದ್ದರಿಂದ ಕಾನೂನಿನ ಕೈಗಳಿಗೆ ಈ ಪರಿವಾರದವರ ಜುಟ್ಟು ಸಿಗುವುದೆ ಇಲ್ಲ. ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿಯೂ ಗಾಂಧಿ ಪರಿವಾರದ ನೇರ ಭಾಗವಹಿಸುವಿಕೆಯ ದಾಖಲೆಗಳು ಇಲ್ಲದ್ದರಿಂದ ಆದಾಯ ತೆರಿಗೆ ಇಲಾಖೆಯ ಕಡತಗಳನ್ನು ಸಾಕ್ಷಿ ಎಂದು ಪರಿಗಣಿಸಬೇಕೆಂದು ಸ್ವಾಮಿ ನ್ಯಾಯಾಲಯವನ್ನು ಕೋರಿದ್ದಾರೆ. ನ್ಯಾಯಾಲಯವು ಈ ಪತ್ರಗಳನ್ನು ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯದ ಮುಂದೆ ತರುವಂತೆ ಒಪ್ಪಿಗೆ ನೀಡಿದೆ ಎಂದು ಸ್ವಾಮಿ ಹೇಳಿದ್ದಾರೆ. ಸ್ವಾಮಿ ಆದಾಯ ತೆರಿಗೆಯ ಈ ಪತ್ರಗಳನ್ನು ಸಾಕ್ಷಿಯಾಗಿ ನ್ಯಾಯಾಲಯದ ಮುಂದಿಡಲಿದ್ದಾರೆ.

ನ್ಯಾಯಾಧೀಶರ ಆದೇಶದಂತೆ ಒಂದು ವರ್ಷದೊಳಗಡೆ ಈ ಪ್ರಕರಣಕ್ಕೆ ಅಂತ್ಯ ಕಾಣಿಸಬೇಕು. ಆರೋಪಿಗಳು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ 294ನೇ ಸೆಕ್ಷನ್ ಗೆ ಪ್ರತಿರೋಧ ಒಡ್ಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಅವರು ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬೀಳುತ್ತಿದ್ದಾರೆ ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಔಪಚಾರಿಕ ದಾಖಲೆಗಳು ಲಭ್ಯವಿರದ್ದರಿಂದ ಆದಾಯ ತೆರಿಗೆ ದಾಖಲೆಗಳನ್ನೆ ಸಾಕ್ಷಿಯಾಗಿ ಪರಿಗಣಿಸಬೇಕಾಗುತ್ತದೆ. ನ್ಯಾಯಾಲಯ ಸ್ವಾಮಿ ಅವರಿಗೆ ಈ ದಾಖಲೆಗಳನ್ನು ಸಲ್ಲಿಸುವಂತೆ ಅನುಮತಿಯೂ ನೀಡಿದೆ. ಇನ್ನು ಒಂದೇ ವರ್ಷದಲ್ಲಿ ಈ ಕೇಸಿಗೆ ಅಂತ್ಯ ಕಾಣಿಸಬೇಕಾಗಿದೆ. ಛಲ ಬಿಡದ ವಿಕ್ರಮನಂತೆ ಸ್ವಾಮಿ ಬೇತಾಳಗಳ ಹಿಂದೆ ಬಿದ್ದಿದ್ದಾರೆ. ನ್ಯಾಯಾಲಯವು ಈಗಿರುವ ದಾಖಲೆಗಳನ್ನು ಸಾಕ್ಷಿ ಎಂದು ಪರಿಗಣಿಸಿ, ಆರೋಪಿಗಳಿಗೆ ಶಿಕ್ಷೆ ನೀಡಿದರೆ ತಿಹಾರ್ ಜೈಲಿನಲ್ಲಿ ಅಮ್ಮ-ಮಗನಿಗೆ ಎರಡು ಕೋಣೆ ಗ್ಯಾರಂಟಿ!! ಇಂತಹ ನಯನ ಮನೋಹರ ದೃಶ್ಯ ಆದಷ್ಟು ಬೇಗ ಬರಲಿ, ದೇಶವನ್ನು ಕೊಳ್ಳೆ ಹೊಡೆದವರು ಕಂಬಿ ಎಣಿಸಲಿ..ಸತ್ಯಕ್ಕೆ ಜಯವಾಗಲಿ..

-ಶಾರ್ವರಿ

Tags

Related Articles

Close