ಪ್ರಚಲಿತ

ಯೋಗದಿಂದ ದೇವರನ್ನು ತಲುಪಲು ಸಾಧ್ಯವಿಲ್ಲ ಎಂದಿದೆ ಕೇರಳ ಚರ್ಚ್! ಆದರೆ ಯೋಗದ ಬಗ್ಗೆ ಭಾಗವತದಲ್ಲಿ ಕಪಿಲ ಮುನಿಗಳು ಏನು ಹೇಳಿದ್ದರು ಗೊತ್ತೇ?

ಯೋಗದ ಮಹತ್ವದ ಬಗ್ಗೆ ತಿಳಿಸಲು ಕೇಂದ್ರ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ, ಮಲಬಾರ್‌ ಸಿರಿಯನ್‌ ಚರ್ಚ್‌ನ ಸಿದ್ದಾಂತ ಆಯೋಗ ದೈವಿಕ ಅನುಭವ ಪಡೆಯಲು ಯೋಗ ಒಂದು ಮಾಧ್ಯಮವಲ್ಲ ಎಂದು ವರದಿ ನೀಡಿದೆ.

ಈ ವರದಿಯನ್ನು ಪಾಲಾ ಡಯಾಸಿಸ್ ಬಿಷಪ್ ಮಾರ್‌ ಜೋಸೆಫ್‌ ಕಲ್ಲರಂಗಟ್ಟು ತಯಾರಿಸಿದರೆ ಮಲಬಾರ್‌ ಸಿರಿಯನ್‌ ಚರ್ಚ್‌ನ ಸಿನೋಡ್ ಈ ವರದಿಗೆ ಅನುಮೋದನೆ ನೀಡಿದೆ.’ದೇವರನ್ನು ತಲುಪಲು ಯೋಗ ಒಂದೇ ಮಾರ್ಗವಲ್ಲ. ಯೋಗದಿಂದ ದೈವಿಕ ಅನುಭವವನ್ನು ಪಡೆಯಬಹುದು ಎಂದು ನಂಬುವುದು ಸರಿಯಲ್ಲ, ಇದು ಮನುಷ್ಯನಲ್ಲಿ ಯಾವುದೇ ಪ್ರಗತಿಯನ್ನು ತರುವುದಿಲ್ಲ’ ಎಂದು ವರದಿ ಹೇಳಿದೆ.

‘ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದವರು ದೇಶದಾದ್ಯಂತ ಯೋಗ ಪ್ರಚಾರ ಮಾಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಯೋಗ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಪಾಲಿಸುವವರು ಇದರ ಬಗ್ಗೆ ಎಚ್ಚರವಹಿಸಬೇಕು. ಯೋಗವನ್ನು ಒಂದು ದೈಹಿಕ ವ್ಯಾಯಾಮ ಅಥವಾ ವ್ಯಾಯಾಮದ ಭಂಗಿಗಳೆಂದಷ್ಟೇ ಪರಿಗಣಿಸಬೇಕು’ ಎಂದು ಹೇಳಿದೆ.

ಆದರೆ ಯೋಗದ ಬಗ್ಗೆ ಕಪಿಲ ಮುನಿಗಳು ತನ್ನ ತಾಯಿಯಾದ ದೇವಹೂತಿಗೆ ಏನು ಹೇಳಿದ್ದರು ಗೊತ್ತೇ?

ದೇವಹೂತಿಯು ಸ್ವಾಯಂಭುವ ಮನುವಿನ ಮಗಳು. ಮನುವು ತನ್ನ ಪತ್ನಿ ಶತರೂಪೆಯೊಡನೆ ಸಂಚಾರ ನಡೆಸಿದಾಗ ಕದರ್ಮ ಮುನಿ ಇರುವ ಬಿಂದು ಸರೋವರದ ಕ್ಷೇತ್ರಕ್ಕೆ ಆಗಮಿಸಿದನು. ಕದರ್ಮರು ತನ್ನನ್ನು ಸೂಕ್ತ ಯಥೋಪಚಾರಗಳಿಂದ ಸ್ವಾಗತಿಸಿರುವುದನ್ನು ಸ್ವಾಯಂಭುವ ಮನುವು ಕದರ್ಮರಿಗೆ ತನ್ನ ಮಗಳಾದ ಶತರೂಪೆಯನ್ನು ವಿವಾಹ ಮಾಡಿ ಕೊಡುತ್ತಾನೆ. ಕದರ್ಮರು ಹಾಗೂ ಶತರೂಪೆಗೆ 9 ಕನ್ಯಾಮನಿಗಳು ಹಾಗೂ ಹರಿಯ ಅವತಾರ ಸಂಭೂತನಾದ ಕಪಿಲ ಮಹರ್ಷಿಯ ಜನನವಾಗುತ್ತದೆ. ಕದರ್ಮರು ತನ್ನ 9 ಸುತೆಯರಿಗೆ ವಿವಾಹ ಮಾಡಿಕೊಟ್ಟು ತಪಸ್ಸಿಗೆ ತೆರಳುತ್ತಾರೆ.  ಇತ್ತ ದೇವಹೂತಿಯು ಮಗನಾದ ಕಪಿಲನಲ್ಲಿ ಪ್ರಕೃತಿ ಮತ್ತು ಪುರುಷರ ಯಥಾರ್ಥ ಜ್ಞಾನವನ್ನು ಕರುಣಿಸುವಂತೆ ಕೇಳುತ್ತಾಳೆ.

ಈ ವೇಳೆ ಕಪಿಲನು ಆಧ್ಯಾತ್ಮ ಯೋಗ, ಯೋಗದ ಮಹತ್ವದ ಬಗ್ಗೆ ತಾಯಿಗೆ ಉಪದೇಶಿಸುತ್ತಾನೆ. ಆಧ್ಯಾತ್ಮತವನ್ನು ಅಭ್ಯಸಿಸಲು ಬೇಕಾಗಿರುವುದು ಯೋಗ ಸಾಧನೆ ಅಗತ್ಯ. ಜ್ಞಾನ, ಭಕ್ತಿ ವೈರಾಗ್ಯದ ಬಗ್ಗೆ ತಿಳಿಸುತ್ತಾನೆ.

ಪೃಥ್ವಿ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಇವು ಪಂಚಭೂತಗಳಾಗಿದ್ದು, ಅದಕ್ಕೆ ತಕ್ಕಂತೆ ಗಂಧ, ರಸ, ರೂಪ, ಸ್ಪರ್ಷ ಹಾಗೂ ಶಬ್ದವನ್ನು ಜೀವಿಯು ಅನುಭವಿಸುತ್ತದೆ. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಇವು ಅಂತಃಕರಣದ ನಾಲ್ಕು ಭಾಗಗಳಾಗಿವೆ ಎಂದು ನಿರೂಪಿಸುತ್ತಾನೆ. ಇದರ ಜೊತೆಗೆ ಭಗವಂತನಿಂದ ಹುಟ್ಟಿದ ಮಹತ್ವದ ಬಗ್ಗೆ ವಿವರಿಸಿ ಮುಂದೆ ಹುಟ್ಟಿದ ತತ್ವಗಳಿಗೆ ಮೂಲಸ್ಥಾನ. ಪ್ರಳಯ ಕಾಲದಲ್ಲಿ ಹುಟ್ಟಿದ ಗಾಡಾಂಧಕಾರವನ್ನುಮಹತ್ವದ ಎನ್ನುವ ತೇಜಸ್ಸು ನುಂಗಿದೆ. ಚಿತ್ತದ ಸಹಜ ಸ್ವಭಾವ ಪ್ರಶಾಂತತೆ ಅಲ್ಲಿ ಇರುತ್ತದೆ.

ಇದರ ಬಳಿಕ ಅಹಂಕಾರ ಹುಟ್ಟಿತು. ಅದನ್ನು ವಿಭಾಗಿಸಿ ವೈಕಾರಿಕ ಅಹಂಕಾರ ಅಂದರೆ ಮನಸ್ಸಲ್ಲಿ ಹುಟ್ಟುವ ಸಂಕಲ್ಪ, ವಿಕಲ್ಪ ಹಾಗೂ ಕಲ್ಪನೆ. ಎರಡನೆಯದ್ದು, ತೈಜಸ ಅಹಂಕಾರ ಅಂದರೆ ಬುದ್ಧಿಯ ತತ್ವದ ಉತ್ಪನ್ನ ಇದರಲ್ಲಿ ಸಂಶಯ, ವಿಪರೀತ ಜ್ಞಾನ, ನಿಶ್ಚಯ, ಸ್ಮøತಿ, ನಿದ್ರೆ ಹುಟ್ಟಿತು. ಮೂರನೆಯದ್ದು ತಾಮಸ ಅಹಂಕಾರ, ಇದರಲ್ಲಿ ಶಬ್ದ, ಸ್ಪರ್ಷ, ರೂಪ, ರಸ, ಗಂಧ ಹೀಗೆ ಐದು ತನ್ಮಾತ್ರೆಗಳು ಹುಟ್ಟಿದವು. ಇದು ಪಂಚಭೂತಗಳ ಅನುಭವವನ್ನು ನೀಡುವಂತಾಯ್ತು.

ಇದಾದ ಬಳಿಕ ತನ್ನ ತಾಯಿಗೆ ಈ ಜಗತ್ತಲ್ಲಿ ಜೀವರಾಶಿಗಳ ಹುಟ್ಟು ಹೇಗೆ ನಡೆಯಿತು ಎಂದು ಉಲ್ಲೇಖಿಸಿದ. ಗರ್ಭಾಶಯದಲ್ಲಿ ಶರೀರವು ಯಾವ ಸ್ಥಿತಿಯಲ್ಲಿ ಬೆಳವಣಿಗೆ ಹೊಂದುತ್ತದೆ ಎಂದು ಇಂದು ವಿಜ್ಞಾನವು ಹೇಗೆ ವಿವರಿಸಿದೆಯೋ ಅದೇ ರೀತಿ ಎಷ್ಟೋ ಸಹಸ್ರ ಸಹಸ್ರ ವರ್ಷಗಳ ಹಿಂದೆಯೇ ಕಪಿಲ ಮುನಿಯು ವಿವರಿಸಿದ್ದರು. ಇದು ಇಂದಿಗೂ ಸವಾಲಾಗಿ ಪರಿಣಮಿಸಿದ್ದು, ಸನಾತನ ಧರ್ಮದ ವಿಸ್ತಾರವನ್ನು ವಿವರಿಸಿದೆ.

ಹೀಗೆ ಸಹಜವಾಗಿ ಮೂಡಿಬಂದ ಕರ್ಮವಿಕಾರಗಳನ್ನು ಗೆದ್ದು, ಮೋಕ್ಷವನ್ನು ಪಡೆಯಲು ಯೋಗ ಸಾಧನೆಯ ಬಗ್ಗೆ ತಾಯಿಗೆ ವಿವರಿಸುತ್ತಾನೆ.

ಯೋಗಾಭ್ಯಾಸ:

ಶುದ್ಧವಾದ ಸಾತ್ವಿಕ ಆಹಾರ ಸೇವನೆ, ದೇಹದ ಒಳಗೂ ಹೊರಗೂ ಶುಚಿಯಾಗಿರಿಸುವುದು, ಉತ್ತಮರ ಸಹವಾಸ, ಉತ್ತಮ ಅಧ್ಯಯನ, ಆತ್ಮಜ್ಞಾನಿಗಳಿಂದ ಜ್ಞಾನ ಪಡೆಯುವುದು, ವಿಷಯ ವಾಸನೆಗಳಿಂದ ದೂರ ಉಳಿಯುವುದು, ಸತ್ಯವನ್ನು ನುಡಿಯುವುದು, ಧರ್ಮಾಚರಣೆಯಲ್ಲಿ ನಿರತನಾಗುವುದು, ಇಂದ್ರಿಯಗಳನ್ನು ಬಾಹ್ಯ ಆಚರಣೆಗಳಿಂದ ದೂರ ಉಳಿಸುವುದು, ಹರಿಯ ಚಿತ್ತವನ್ನು ನೆನೆನೆಯುವುದು, ದುಷ್ಟತನವನ್ನು ದೂರಗೊಳಿಸಲು ಪರಮಾತ್ಮನ ಧ್ಯಾನ, ಪರಿಶುದ್ಧ ವಾತಾವರಣ ಇವುಗಳ ಬಗ್ಗೆ ವಿವರಿಸಿದ.

ಇದರಲ್ಲಿ ಪ್ರಾಣಾಯಾಮದ ಬಗ್ಗೆ ತಿಳಿಸಿ, ಇದರಿಂದ ಚಿತ್ತದಲ್ಲಿ ಸ್ಥಿರತೆ ಉಂಟಾಗುತ್ತದೆ. ಇದರೊಂದಿಗೆ ಯೋಗವನ್ನು ಅಭ್ಯಸಿಸಿ ಮೂಗಿನ ತುದಿಯಲ್ಲಿ ದೃಷ್ಟಿಯಿರಿಸಿ ಭಗವಂತನನ್ನು ಧ್ಯಾನಿಸಬೇಕು ಎನ್ನುತ್ತಾನೆ. ಭಗವಂತನನ್ನು ಮನದಲ್ಲಿ ಕಲ್ಪಿಸಬೇಕು. ಇದರಿಂದ ರಾಗದ್ವೇಷಗಳು ಮನಸ್ಸಿನಿಂದ ಲಯವಾಗಿ ಮನಸ್ಸು ಶುದ್ಧವಾಗುತ್ತದೆ. ಆಗ ಅದು ಬ್ರಹ್ಮಾಕಾರವಾದಂತೆ ಭಾಸವಾಗುತ್ತದೆ. ಯೋಗಾಭ್ಯಾಸದಿಂದ ಮನಸ್ಸನ್ನು ನಿಯಂತ್ರಿಸಿ ಮೋಕ್ಷವನ್ನು ಪಡೆಯುವುದು ಹೇಗೆ ಎಂದು ವಿವರಿಸಿದ್ದಾನೆ.

ಸಹಸ್ರಾರು ವರ್ಷಗಳ ಹಿಂದೆಯೇ ಉದಿಸಿದ ಯೋಗವಿಂದ ಬೃಹದಾಕಾರವಾಗಿ ಬೆಳೆದು ಇಂದು ಅದನ್ನು ನರೇಂದ್ರಮೋದಿಯವರು ವಿಶ್ವಮಟ್ಟಕ್ಕೆ ಪರಿಚಯಿಸಿದರು. ಇಂದು ಯೋಗವನ್ನು ಅಭ್ಯಸಿಸಲೆಂದೇ ವೈದ್ಯಕೀಯ ವಿಭಾಗದಲ್ಲಿ ಐದು ವರ್ಷಗಳ ಕಾಲ ವಿದ್ಯೆ ನೀಡಲಾಗುತ್ತದೆ. ಅಲೋಪಥಿಯಂಥಾ ಇಂದಿನ ಚಿಕಿತ್ಸಾ ವಿಧಾನದಲ್ಲೂ ಗುಣವಾಗದ ರೋಗಗಳು ಯೋಗಸಾಧನೆಯಿಂದ ಸುಲಭವಾಗಿ ಗುಣಮುಖವಾದ ಎಷ್ಟೋ ಉದಾಹರಣೆಗಳಿವೆ. ಮನುಷ್ಯ ತನ್ನ ಕೆಟ್ಟ ಗುಣಗಳಿಂದ ಹೊರಬಂದು ಏಕಾಗ್ರತೆಯನ್ನು ಸಾಧಿಸಿ, ನಿತ್ಯ ಆನಂದವನ್ನು ಪಡೆಯಲು ಯೋಗದಿಂದ ಸಾಧ್ಯ. ಆದರೆ ಈ ಬಗ್ಗೆ ಚರ್ಚ್‍ನವರಿಗೆ ಗೊತ್ತಾಗಲು ಹೇಗೆ ಸಾಧ್ಯ?

ಯೋಗದ ಬಗ್ಗೆ ಯಾರೇ ಏನೇ ಟೀಕೆ ಮಾಡಿದರೂ ಅದು ಅವರಿಗೆಯೇ ನಷ್ಟ ಹೊರತು ಅದರಿಂದ ಲಾಭ ಪಡೆದವರು ಈ ಜಗತ್ತಲ್ಲಿ ಅನೇಕರು ಇದ್ದಾರೆ. ಯೋಗವನ್ನು ಕ್ಯಾಥೋಲಿಕ್ ಧರ್ಮಕ್ಕೆ ವಿರೋಧವೆಂದು ಭಾವಿಸಿದರೆ ಅದರಿಂದ ಅವರು ತುಂಬಲಾರದ ನಷ್ಟ ಅನುಭವಿಸುತ್ತಾರೆ ಅಷ್ಟೆ. ಯೋಗದ ಬಗ್ಗೆ ಅರಿವಾಗಬೇಕಾದರೆ ಅದು ಯೋಗ ಮಾಡಿದರಷ್ಟೇ ಗೊತ್ತಾಗುತ್ತದೆ.

source: https://vijaykarnataka.indiatimes.com/news/india/the-yoga-is-anti-christian-practices-says-kerala-church-report/articleshow/63623432.cms
chekithana

Tags

Related Articles

Close