ಪ್ರಚಲಿತ

ದೇಶದಲ್ಲೇ ಇತಿಹಾಸ ನಿರ್ಮಿಸಿದ ಭಜರಂಗದಳದ ಈ ಸಾಧನೆ..! ಅನಾವರಣವಾಗಲಿದೆ ದಲಿತರಿಗಾಗಿ ಹಿಂದೂ ಸಂಘಟನೆ ಮಾಡಿದ ಈ ಮಹಾಕಾರ್ಯ!

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ… ಸನಾತನ ಹಿಂದೂ ಧರ್ಮದ ವಿಚಾರದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೇ ಒಂದು ಅದ್ಭುತ ಕ್ರಾಂತಿಯನ್ನೇ ಸೃಷ್ಟಿಸಿದ ಬಲಪಂಥೀಯ ಹಿಂದೂ ಸಂಘಟನೆ. ಇತಿಹಾಸ ಪ್ರಸಿದ್ಧ, ಸಾಕ್ಷಾತ್ ಮರ್ಯಾದಾ ಪುರುಷೋತ್ತಮ ಶ್ರೀ ರಾಮನೇ ಜನುಮ ತಾಳಿದ ಅಯೋಧ್ಯಾದಲ್ಲಿ ಆಕ್ರಮಣಕಾರಿ ಬಾಬಾರ್‍ನ ಅಟ್ಟಹಾಸಕ್ಕೆ ತುತ್ತಾಗಿ ಧ್ವಂಸವಾಗಿದ್ದ ಶ್ರೀರಾಮ ಮಂದಿರವನ್ನು ಮತ್ತೆ ಎದ್ದು ನಿಲ್ಲಿಸಬೇಕೆಂಬ ಸಂಕಲ್ಪವನ್ನು ಹೊತ್ತುಕೊಂಡು ಕೆಲಸ ಮಾಡುತ್ತಿರುವ ಸಂಘಟನೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ. ಆಕ್ರಮಣಕಾರಿ ಬಾಬರ್ ಹಿಂದೂಗಳ ಆರಾಧ್ಯ ದೇವರಾದ ಶ್ರೀ ರಾಮನ ಭವ್ಯವಾದ ಮಂದಿರವನ್ನು ಧರೆಗುರುಳಿಸಿ ಅದರ ಅವಶೇಷದ ಮೇಲೆ ಗೋರಿಯನ್ನು ನಿರ್ಮಿಸಿ ಕೋಟಿ ಹಿಂದೂಗಳ ಪಾಲಿಗೆ ಆಘಾತವನ್ನೇ ತಂದಿಟ್ಟಿದ್ದ. ಆದರೆ ಕೆಲ ಶತಮಾನಗಳ ನಂತರ ಬಜರಂಗದಳ ಎಂಬ ಹಿಂದೂ ಸಂಘಟನೆಯಿಂದ ಆ ಗೊರಿಯನ್ನು ಧರೆಗುರುಳಿಸಿ ಮತ್ತೆ ಶ್ರೀ ರಾಮನ ಭವ್ಯವಾದ ಮಂದಿರವನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಲಾಯಿತು. ವಿಶ್ವಹಿಂದೂ ಪರಿಷತ್ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಆಲದ ಮರವಾಗಿ ಬೆಳೆದಿತ್ತು.

ಹಿರಿಯರ (ವಿಶ್ವ ಹಿಂದೂ ಪರಿಷತ್ತು) ಮಾರ್ಗದರ್ಶನದೊಂದಿಗೆ ಜನ್ಮ ತಾಳಿದ ಯುವ ಸಂಘಟನೆಯೇ ಬಜರಂಗದಳ ಸಂಘಟನೆ. “ಸೇವಾ ಸುರಕ್ಷಾ ಸಂಸ್ಕಾರ” ಎಂಬ ಧ್ಯೇವನ್ನು ಇಟ್ಟುಕೊಂಡು, “ಹುಟ್ಟಿನಿಂದಲೇ ಸಂಘರ್ಷ, ಸಂಘರ್ಷಕ್ಕಾಗಿಯೇ ಹುಟ್ಟು” ಎಂಬ ವಾಕ್ಯಕ್ಕೆ ಜೀವ ತುಂಬುತ್ತಿದೆ ಬಜರಂಗದಳ ಸಂಘಟನೆ. ಅದೆಲ್ಲೇ ಹಿಂದೂ ವಿರೋಧಿ ಘಟನೆಗಳು ಸಂಭವಿಸಿದರೂ ಮೊದಲಾಗಿ ಧಾವಿಸಿ, ಹಿಂದೂ ವಿರೋಧಿಗಳ ಹುಟ್ಟಗಿಸಿ ಹಿಂದೂ ಧರ್ಮವನ್ನು ರಕ್ಷಿಸುವ ಕೆಲಸ ಮಾಡುವುದರಲ್ಲಿ ಈ ಸಂಘಟನೆ ಎತ್ತಿದ ಕೈ. ಕೇವಲ ಸಂಘರ್ಷ ಮಾತ್ರವಲ್ಲದೆ ಸೇವೆಯಲ್ಲೂ ಈ ಸಂಘಟನೆ ಉಳಿದೆಲ್ಲಾ ಸಂಘಟನೆಗಳಿಗಿಂತ ಮುಂದು. ಆರೋಗ್ಯ, ಸಹಿತ ಎಲ್ಲಾ ರಂಗಗಳಲ್ಲೂ ಭಜರಂಗದಳ ಯುವಕರ ಕರಾಮತ್ತು ಬಹು ದೊಡ್ಡದಾಗಿಯೇ ಇದೆ.

ಇತಿಹಾಸ ಸೃಷ್ಟಿಸಿದ ಭಜರಂಗದಳದ ಈ ಕೆಲಸ..!

ಕರಾವಳಿ ಕರ್ನಾಟಕ ಎಂದರೆ ಸಾಕು ಹಿಂದೂ ಸಂಘಟನೆಗಳು ಕಣ್ಣ ಮುಂದೆ ಬರುತ್ತೆ. ಹಿಂದೂಗಳ ಬದ್ರಕೋಟೆ ಎಂದೇ ಪ್ರಚಲಿತದಲ್ಲಿರುವ ಕರಾವಳಿಯಲ್ಲಿ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆ. ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದುಗೂಡಿಸಿರುವ ಕಾರ್ಕಳ ತಾಲೂಕಿನ ಹೊಸ್ಮಾರು-ಈದು ಎಂಬ ಕುಗ್ರಾಮವದು. ಸದಾ ನಕ್ಸಲರ ಭೀತಿಯಿಂದಲೇ ಬದುಕುತ್ತಿರುವ ಇಲ್ಲಿನ ಜನರು ಒಂದಲ್ಲಾ ಒಂದು ಸಾಧನೆಯಲ್ಲಿ ನಿಸ್ಸೀಮರು. ಅಷ್ಟೇ ಇಲ್ಲ ಹಿಂದೂ ಸಂಘಟನೆಯಾದ ಬಜರಂಗದಳ ಸಂಘಟನೆಯೂ ಕೂಡಾ ಅಷ್ಟೇ ಬಲಾಢ್ಯ. ಇದೀಗ ಇದೇ ಬಜರಂಗದಳ ಸಂಘಟನೆ ಇಲ್ಲಿ ಅತಿದೊಡ್ಡ ಕೆಲಸವನ್ನು ಮಾಡಲು ಹೊರಟಿದೆ. ಬಜರಂಗದಳ ಮಾಡಲು ಹೊರಟಿರುವ ಈ ಅದ್ಭುತ ಕಾರ್ಯ ಒಂದು ಹೊಸ ಇತಿಹಾಸವನ್ನು ನಿರ್ಮಿಸುವ ಎಲ್ಲಾ ಲಕ್ಷಣಗಳನ್ನೂ ಹೊಂದುತ್ತಿವೆ.

ದಲಿತರಿಗಾಗಿ ಭವ್ಯ ಮಂದಿರ ನಿರ್ಮಾಣ…!

ಅದು ದಲಿತರು ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯ. ಮೊಗೇರ ಜನಾಂಗದ ಕುಲದೇವರು. ತುಳುನಾಡಿನ ದೈವಾರಾದನೆಯಲ್ಲಿ ಬರುವ ದೈವಗಳೇ ಇಲ್ಲಿನ ಆರಾಧ್ಯ ದೇವರು. ಅರ್ಥಾತ್ ದೈವಗಳು. ಹೌದು.. “ಶ್ರೀ ಬ್ರಹ್ಮ ಮೊಗೇರ ಮಹಾಕಾಳಿ ಅಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ” ದೇವಾಲಯವೇ ಇದೀಗ ಇತಿಹಾಸ ನಿರ್ಮಿಸಲು ಹೊರಟಿರುವ ದೇವಾಲಯ. ದಲಿತ ಜನಾಂಗವಾದ ಮೊಗೇರ ಜನಾಂಗದವರು ಆರಾಧಿಸಿಕೊಂಡು ಬರುತ್ತಿರುವ ಈ ದೇವಾಲಯ ಅದೆಷ್ಟೋ ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದೆ ಅಜೀವವಾಗಿ ಇರುತ್ತಿತ್ತು. ಪುರಾತನವಾದ ಈ ದೇವಾಲಯ ಇತಿಹಾಸದ ಪುಟಗಳನ್ನು ಸೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿತ್ತು. ಜನಬಲ ಹಾಗೂ ಹಣಬಲ ಇಲ್ಲದೆ ಆ ದೇವಾಲಯವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ಈ ಜನಾಂಗ ಅಕ್ಷರಷಃ ವಿಫಲವಾಗಿತ್ತು. ಅದೆಷ್ಟೋ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ದೇವಾಲಯ ಬಿದ್ದು ಹೋಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದವು.

ಇಂತಹ ಸಮಯದಲ್ಲಿ ಮೊಗೇರ ಜನಾಂಗದ ಬಾಂಧವರ ಪಾಲಿಗೆ ವರದಾನವಾಗಿ ಬಂದ ಹಿಂದೂ ಸಂಘಟನೆಯೇ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆ. ಬಿದ್ದು ಹೋಗುವ ಹಂತದಲ್ಲಿದ್ದ ಈ ದೇವಾಲಯವನ್ನು ಮತ್ತೆ ಜೀರ್ಣೋದ್ಧಾರಗೊಳಿಸಿ ವೈಭವಪೂರಿತವಾಗಿ ಬ್ರಹ್ಮಕಲಶವನ್ನು ಮಾಡಲು ಸಿದ್ಧವಾಗಿ ನಿಂತಿತ್ತು ಬಜರಂಗದಳ ಸಂಘಟನೆ. ಇದೀಗ ಈ ಸಂಘಟನೆಯ ಕನಸು ನನಸಾಗಿದ್ದು ಬ್ರಹ್ಮಕಲಶದ ಶುಭ ಘಳಿಗೆಯನ್ನು ಎದುರು ನೋಡುತ್ತಿದೆ.

50 ಲಕ್ಷಕ್ಕಿಂತಲೂ ಅಧಿಕ ವೆಚ್ಚದ ಯೋಜನೆ…

ಬಜರಂಗದಳ ನಿರ್ಮಾಣ ಮಾಡಿ ಬ್ರಹ್ಮ ಕಲಶಕ್ಕೆ ಸಿದ್ಧವಾಗಿರುವ ಈ ದೈವಸ್ಥಾನಕ್ಕೆ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಮುಖಂಡರು ತಿಳಿಸಿದ್ದಾರೆ. ಊರ ಜನರು ಹಾಗೂ ಸೇವಾದಾರರಿಂದಲೇ ಒಟ್ಟುಗೂಡಿಸಿದ ಈ ದೈವಸ್ಥಾನದಲ್ಲಿ ಸಂಘಪರಿವಾರದ ನಾಯಕರ ಬೆಂಬಲವೂ ಕೆಲಸ ಮಾಡಿದೆ. ಅನೇಕ ಸಂಘಪರಿವಾರದ ನಾಯಕರೂ ಬಜರಂಗದಳದ ಈ ಕೆಲಕಸಕ್ಕೆ ಕೈಜೋಡಿಸಿದ್ದಾರೆ.

ಬಿಜೆಪಿ ಶಾಸಕರಿಂದ ಬೆಂಬಲದ ಮಹಾಪೂರಾ..!

ನಂಬಿಕೊಳ್ಳಲು ಬಜರಂಗದಳಕ್ಕೆ ಸಹಕಾರ ನೀಡುವ ಸರ್ಕಾರವೂ ಇಲ್ಲ, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೆಲ ನಾಯಕರ ಬೆಂಬಲವೂ ಇಲ್ಲ. ಇಂತಹಾ ಸಮಯದಲ್ಲಿ ಬಜರಂಗದಳದ ಬೆಂಬಲಕ್ಕೆ ನಿಂತಿದ್ದು ಭಾರತೀಯ ಜನತಾ ಪಕ್ಷದ ಶಾಸಕರು ಹಾಗೂ ನಾಯಕರು. ಸದಾ ಹಿಂದುತ್ವಕ್ಕೆ ಧ್ವನಿಯಾಗಿ ಹಿಂದೂ ಯುವಕರ ಪಾಲಿನ ಆದರ್ಶರಾಗಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್, ರಾಜ್ಯ ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಕ್ಯಾ.ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸಹಿತ ಅನೇಕ ಬಿಜೆಪಿ ಶಾಸಕರು ಹಾಗೂ ಜನಪ್ರತಿನಿಧಿಗಳು ಬಜರಂಗದಳದ ಇಂತಹಾ ಕೆಲಸಕ್ಕೆ ಅನುದಾನವನ್ನು ನೀಡಿದ್ದಾರೆ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರೂ ಈ ಮಹಾ ಕಾರ್ಯವನ್ನು ಬೆಂಬಲಿಸಿ ಧನಸಹಾಯವನ್ನು ಮಾಡಿದ್ದಾರೆ.

ಶ್ರಮದಾನವೇ ಶಕ್ತಿ..!

ಇಲ್ಲಿ ನಡೆದ ಮತ್ತೊಂದು ಕ್ರಾತಿಯೆಂದರೆ ಅದು ಶ್ರಮದಾನ. ಬಜರಂಗದಳದ ಯುವಕರು ನಿರ್ಮಿಸುತ್ತಿರುವ ಈ ಮಹಾ ಕಾರ್ಯಕ್ಕೆ ಸಂಘಟನೆಯ ಕಾರ್ಯಕರ್ತರು ಸಹಿತ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ. ತಮ್ಮ ಅಮೂಲ್ಯವಾದ ಸಮಯಗಳನ್ನು ಈ ಮಹಾ ಕಾರ್ಯಕ್ಕೆ ಮುಡಿಪಾಗಿರಿಸಿದ್ದಾರೆ. ರಾತ್ರಿ ಹಗಲು ಎನ್ನದೆ ಈ ಕಾರ್ಯದಲ್ಲಿ ಉಚಿತವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶ್ರಮದಾನದ ಮೂಲಕ ಕಾಮಗಾರಿಗಳನ್ನು ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದ್ದಾರೆ. ಭಜರಂಗದಳದ ಸೇವೆ ಎಂಬ ಪದಕ್ಕೆ ಚಿನ್ನದ ಬಣ್ಣವನ್ನು ಕರುಣಿಸಿದ್ದಾರೆ.

ತಾವು ನಿರ್ಮಿಸುವ ಎಲ್ಲಾ ಖರ್ಚುಗಳನ್ನು ಭರಿಸುವಷ್ಟು ಶಕ್ತಿ ಅಲ್ಲಿನ ಜನರಿಗೆ ಇಲ್ಲವಾಗಿದ್ದರೂ ಮನೋಶಕ್ತಿ ಹಾಗೂ ತೋಳ್ಬಲದ ಮೂಲಕ ಮತ್ತು ಶ್ರೀರಾಮ ಭಕ್ತ ಹನುಮನ ಯಶೋಧೈರ್ಯವೇ ಈ ಮಹಾ ಸಾಧನೆಗೆ ಕಾರಣವಾಗಿದೆ. ಇದು ಒಂದು ಹಳ್ಳಿ ಪ್ರದೇಶದ ಕೂಲಿ ಕಾರ್ಮಿಕರು ಮಾಡುತ್ತಿರುವ ಸಾಧನೆ ಎಂಬುವುದೇ ಪ್ರಮುಕಾಂಶ.

ವೈಭವಪೂರಿತ ಬ್ರಹ್ಮ ಕಲಶ…

ದಲಿತ ಜನಾಂಗಕ್ಕೋಸ್ಕರ ನಿರ್ಮಾಣ ಮಾಡಿರುವ ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಜೀಣೋದ್ಧಾರ ಹಾಗೂ ಪುನರ್ ಪ್ರತಿಷ್ಟೆ ಬ್ರಹ್ಮಕಲಶವು ವೈಭವದಿಂದ ನಡೆಯಲಿದೆ. 29-04-2018ರಿಂದ 03-05-2018ರವರೆಗೆ ಈ ದೈವಸ್ಥಾನದ ಭವ್ಯ ದೇಗುಲದ ವೈಭವ ಪೂರಿತ ಬ್ರಹ್ಮಕಲಶ ನಡೆಯಲಿದೆ. ಅಭೂತಪೂರ್ವ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರ ದಂಡೇ ಹರಿದು ಬರಲಿದೆ. ರಾಜಕೀಯ ನಾಯಕರು ಹಾಗೂ ಸಂಘಪರಿವಾರದ ದಿಗ್ಗಜರ ದಂಡು ಕಾರ್ಕಳ ತಾಲೂಕಿನ ಈದು ಅಲಿಮಾರು ಗುಡ್ಡೆ ಎಂಬಲ್ಲಿ ಸಮಾಗಮವಾಗಲಿದೆ.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಎಂಬ ಈ ಹಿಂದೂ ಸಂಘಟನೆ ಮಾಡುತ್ತಿರುವ ಮಹಾ ಕಾರ್ಯ ಇಡಿಯ ಹಿಂದೂ ಸಮಾಜ ಮಾತ್ರವಲ್ಲದೆ ಎಲ್ಲಾ ಜನಾಂಗಕ್ಕೂ ಮಾದರಿಯಾಗಿದೆ. ಸದಾ ಹಿಂದೂ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ವಿರೋಧಿಸುತ್ತಿರುವ ಬುದ್ಧಿಜೀವಿಗಳಿಗೂ ಈ ಕೆಲಸ ಒಂದು ಅಂತರಾಷ್ಟ್ರೀಯ ಉತ್ತರವಾಗಿದೆ. ದಲಿತರನ್ನು ಸಂಘಪರಿವಾರ ಕಡೆಗಣಿಸುತ್ತಿದೆ ಎಂಬ ಕೆಲಸವಿಲ್ಲದ ಹೇಳಿಕೆಗಳನ್ನು ನೀಡುವ ಎಡಬಿಡಂಗಿಗಳಿಗೂ ಈ ಕೆಲಸ ಕಪಾಳ ಮೋಕ್ಷ ಮಾಡಿದ ಹಾಗಿದೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಸಂಘಪರಿವಾರದ ತಪ್ಪನ್ನು ಹುಡುಕುತ್ತಿರುವ ಪ್ರಗತಿಪರ ಚಿಂತಕರು ಈ ಸಾಧನೆಯನ್ನು ಕೊಂಡಾಡದಿದ್ದಲ್ಲಿ ಬೆಲೆ ಇಲ್ಲ ಎನ್ನುವ ಪರಿಸ್ಥಿತಿಯನ್ನೂ ಬಜರಂಗದಳದ ಯುವಕರು ನಿರ್ಮಾಣ ಮಾಡಿದ್ದಾರೆ. ಇದು ದೇಶದ ಎಲ್ಲಾ ಸಂಘಟನೆಗಳಿಗೂ ಒಂದು ಮಾದರಿಯಾಗಿದೆ.

-ಸುನಿಲ್ ಪಣಪಿಲ

Tags

Related Articles

Close