ಪ್ರಚಲಿತ

ದೀಪಾವಳಿ ಬಳಿಕ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ?

ದೇಶದೆಲ್ಲೆಡೆ ಕೆಲ ಸಮಯದಿಂದ ಏಕರೂಪದ ನಾಗರಿಕ ಸಂಹಿತೆ ದೊಡ್ಡ ಸದ್ದು ಮಾಡಿದ ವಿಷಯ‌. ಭಾರತದಲ್ಲಿ ಏಕ ರೂಪದ ನಾಗರಿಕ ಸಂಹಿತೆ ಏಕೆ ಬೇಕು?, ಅದರ ಅವಶ್ಯಕತೆ ಏನು?, ಅದರಿಂದಾಗುವ ಉಪಯೋಗಗಳೇನು? ಮೊದಲಾದವುಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು. ಏಕರೂಪದ ನಾಗರಿಕ ಸಂಹಿತೆ ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ವಿಷಯವಾಗಿದ್ದು, ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಸಾಧಕ ಬಾಧಕಗಳ ಬಗ್ಗೆಯೂ ಚಿಂತನೆಗಳು ನಡೆದಿದ್ದವು.

ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಮಹತ್ವದ ಬೆಳವಣಿಗೆಯೊಂದು ‌ನಡೆದಿದ್ದು, ಏಕರೂಪ ನಾಗರಿಕ ಸಂಹಿತೆಯನ್ನು ಮುಂದಿನ ವಾರದಿಂದಲೇ ಜಾರಿಗೆ ತರಲು ಉತ್ತರಾಖಂಡ ಸರ್ಕಾರ ಸಿದ್ಧತೆ ನಡೆಸಿದೆ. ಆ ಮೂಲಕ ಈ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಸಹ ತನ್ನದಾಗಿಸಿಕೊಳ್ಳಲು ಮುಂದಾಗಿದೆ.

ದೀಪಾವಳಿಯ ಬಳಿಕ ಏಕರೂಪ ನಾಗರಿಕ‌ ಸಂಹಿತೆ‌ ಜಾರಿಗೊಳಿಸುವ ಬಗ್ಗೆ ವಿಶೇಷ ವಿಧಾನಸಭಾ ಅಧಿವೇಶನವನ್ನು ‌ಸಹ ನಡೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿ ವರದಿ ಸಲ್ಲಿಸಲಿದೆ.

ಮೂಲಗಳ‌ ಪ್ರಕಾರ ದೀಪಾವಳಿಯ ಬಳಿಕ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದಲ್ಲಿ ಈ ನೀತಿಯನ್ನು ಜಾರಿಗೊಳಿಸಲು ಮಸೂದೆ ಅಂಗೀಕಾರ ಕಾರ್ಯ ನಡೆಯಲಿದೆ. ಹಾಗೆಯೇ, ಅದಕ್ಕೆ ಕಾನೂನು ಸ್ಥಾನಮಾನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿವೆ.

ಈ ನೀತಿಯನ್ನು ಜಾರಿಗೆ ತಂದ ಬಳಿಕ ಅಲ್ಲಿನ ಬಿಜೆಪಿ ಸರ್ಕಾರ ಲಿಂಗ ಸಮಾನತೆ ಮತ್ತು ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡುವ ಕಾನೂನನ್ನು ಸಹ ರೂಢಿಗೆ ತರಲಿದೆ.

ಈ ಮಸೂದೆಯನ್ನು ತಾನು ನಾಗಿ ಪರಿವರ್ತನೆ ಮಾಡಿದ ಬಳಿಕ ವಿವಾಹ, ಆಸ್ತಿ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಮೊದಲಾದ ಎಲ್ಲಾ ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ರೀತಿ ನೀತಿಗಳು ಅನ್ವಯವಾಗಲಿವೆ. ಧಾರ್ಮಿಕ ಆಚರಣೆಗಳು ಮತ್ತು ಇತರ ಆಚರಣೆಗಳ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಅಲ್ಲಿನ ಸರ್ಕಾರದ ಮೂಲಗಳು ತಿಳಿಸಿವೆ.

Tags

Related Articles

Close