ಪ್ರಚಲಿತ

ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮದ ಯಜಮಾನಿಕೆ ಯಾರದ್ದು ಗೊತ್ತಾ?

ಬಹು ಕೋಟಿ ಜನರ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನವರಿ 22 ರಂದು ತನ್ನ ನೂತನ ಮಂದಿರದಲ್ಲಿ ಕುಳಿತು ವಿಜೃಂಭಣೆಯಿಂದ ಭಕ್ತರನ್ನು ಆಶೀರ್ವದಿಸಲಿದ್ದಾನೆ. ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಬಳಿಕ ಭಕ್ತರಿಗೆ ಮಂದಿರ ದೊಳಗೆ ಶ್ರೀರಾಮನನ್ನು ನೋಡಿ ಕಣ್ತುಂಬಿಕೊಳ್ಳಲು ಟ್ರಸ್ಟ್ ಅವಕಾಶ ನೀಡಲಿದೆ.

ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಮುಂದಾಳತ್ವ, ಯಜಮಾನ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪೂಜಾ ವಿಧಿ‌ವಿಧಾನಗಳು, ಧಾರ್ಮಿಕ ಕಾರ್ಯಗಳ ಮುಖ್ಯಸ್ಥ ಪಂಡಿತ್ ಲಕ್ಷ್ಮೀಕಾಂತ ಪಂಡಿತ್ ಅವರು ಮಾಹಿತಿ ನೀಡಿದ್ದಾರೆ.

ರಾಮ ಮಂದಿರ ಉದ್ಘಾಟನೆಗೂ ಪೂರ್ವದಲ್ಲಿ ಅಂದರೆ ಮೊದಲ ದಿನ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮತ್ತು ಅವರ ಪತ್ನಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಕಂಕಣ ತೊಟ್ಟಿದ್ದರು. ಆ ದಿನದ ಯಾಜಮಾನ್ಯವನ್ನು ಅನಿಲ್ ದಂಪತಿ ವಹಿಸಿದ ಬಳಿಕ ಪ್ರಾಣ ಪ್ರತಿಷ್ಠೆ ದಿನದಂದು ಯಾರು ಈ ಯಾಜಮಾನ್ಯ ವಹಿಸುತ್ತಾರೆನ್ನುವ ಪ್ರಶ್ನೆ, ಸಹಜ ಕುತೂಹಲ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ಇದಕ್ಕೆ ಉತ್ತರಿಸಿರುವ ಪಂಡಿತ್, ಅಯೋಧ್ಯೆಯಲ್ಲಿ ನಡೆಯಲಿರುವ ಸುದೀರ್ಘ ಧಾರ್ಮಿಕ ಕಾರ್ಯಗಳಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸುವುದು ಅಸಾಧ್ಯ. ಆದ್ದರಿಂದ ಆರಂಭಿಕ ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೇರೆಯವರನ್ನು ಕೂರಿಸಿ ಧಾರ್ಮಿಕ ಕಟ್ಟುಪಾಡುಗಳನ್ನು ನೆರವೇರಿಸಲಾಗುತ್ತಿದೆ‌. ಆದರೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರೇ ಯಾಜಮಾನ್ಯ ವಹಿಸಿ, ಶ್ರೀರಾಮನನ್ನು ಲೋಕಕ್ಕೆ ಸಮರ್ಪಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ‌. ಎಲ್ಲಾ ವಿಧಿ ವಿಧಾನಗಳು ಅವರ ನೇತೃತ್ವದಲ್ಲಿಯೇ ನಡೆಯಲಿರುವುದಾಗಿಯೂ ಅವರು ತಿಳಿಸಿದ್ದಾರೆ.

ಇನ್ನು ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಅದರ ಹಿಂದಿನ ದಿನವೇ ಅಯೋಧ್ಯೆಗೆ ಆಗಮಿಸಲಿದ್ದಾರೆ. ಉತ್ತರದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣದಿಂದ ಅವರು ಒಂದು ದಿನ ಮೊದಲೇ ಅಯೋಧ್ಯೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 22 ರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ‌ಸರಯೂ ನದಿಯಲ್ಲಿ ಮಿಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಲಶಲ್ಲಿ ಸರಯೂ ನೀರು ತೆಗೆದುಕೊಂಡು, ನೂತನ ಮಂದಿರದ ಗರ್ಭ ಗುಡಿ ಪ್ರವೇಶಿಸಲಿದ್ದಾರೆ. ಬಳಿಕ ನೆರವೇರುವ ಪ್ರಾಣ ಪ್ರತಿಷ್ಠೆಯ ಯಾಜಮಾನ್ಯ ವಹಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Tags

Related Articles

Close