ಪ್ರಚಲಿತ

ದೆಹಲಿಯಲ್ಲಿ ಜಗತ್ತಿನ ಅತಿ ದೊಡ್ಡ ಜವಳಿ ಈವೆಂಟ್: ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ಭಾರತ ಅಭಿವೃದ್ಧಿ ಹೊಂದಬೇಕಾದರೆ ದೇಶದ ಎಲ್ಲಾ ವಲಯಗಳಲ್ಲಿಯೂ ಪ್ರಗತಿ ಬಹಳ ಮುಖ್ಯ. ಅಂತಹ ಅಭಿವೃದ್ಧಿ ಯೋಜನೆಗಳಿಗೆ ಜೀವ ತುಂಬುವ ಕೆಲಸವನ್ನು ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದರೆ ತಪ್ಪಾಗಲಾರದು.

ಪ್ರಧಾನಿ ಮೋದಿ ಅವರು ನಿನ್ನೆ ಭಾರತ್ ಮಂಟಪ್ ದೆಹಲಿಯಲ್ಲಿ ನಡೆದ ಭಾರತ್ ಟೆಕ್ಸ್ 2024 ಅನ್ನು ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ಕಾರ್ಯದಲ್ಲಿ ಜವಳಿ ಕ್ಷೇತ್ರದ ಕೊಡುಗೆಯನ್ನು ಮತ್ತಷ್ಟು‌ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶಾಲವಾದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾಗೆಯೇ ಸಂಪ್ರದಾಯದ ಜೊತೆಗೆ ತಂತ್ರಜ್ಞಾನ, ಪ್ರತಿಭೆ ಮತ್ತು ತರಬೇತಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮವು ದೇಶದ ಜವಳಿ ಉದ್ಯಮದ ಅಸಾಧಾರಣವಾದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಜಗತ್ತಿಗೆ ಪರಿಚಯಿಸಲು ಉತ್ತಮ ವೇದಿಕೆಯಾಗಿದೆ. ನಮ್ಮ ದೇಶದ ಮಹಿಳೆಯರಿಗೆ ಜವಳಿಯ ಜೊತೆಗೆ ಖಾದಿ ಸಹ ಹೆಚ್ಚು ಸಾಮರ್ಥ್ಯವನ್ನು ನೀಡಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ಇಂದಿನ ಪ್ರತಿಭೆಗಳಿಗೆ ಭಾರತದ ಶ್ರೀಮಂತ ಇತಿಹಾಸವನ್ನು ಜೋಡಿಸುವ ಕಾರ್ಯವನ್ನು ಈ ಕಾರ್ಯಕ್ರಮ ಮಾಡುತ್ತಿದೆ. ಭಾರತ್ ಟೆಕ್ಸ್ 2024 ವಿಶೇಷ ಕಾರ್ಯಕ್ರಮವಾಗಿದೆ ಏಕೆಂದರೆ, ಈ ಕಾರ್ಯಕ್ರಮವನ್ನು ದೇಶದ ಅತ್ಯಂತ ದೊಡ್ಡ ಎರಡು ವೇದಿಕೆಗಳಲ್ಲಿ ಮಾಡಲಾಗಿದೆ. ದೇಶದ ಅತೀ ದೊಡ್ಡ ಪ್ರದರ್ಶನ ಕೇಂದ್ರಗಳಾದ ಭಾರತ ಮಂಟಪ ಮತ್ತು ಯಶೋಭೂಮಿಯಲ್ಲಿ ಆಯೋಜನೆ ಮಾಡಲಾಗಿರುವುದು ಈ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷವನ್ನಾಗಿಸಿದೆ ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಅಧಿಕ ಜವಳಿ ಪ್ರದರ್ಶಕರು, ನೂರು ದೇಶಗಳ ಖರೀದಿದಾರರ ಜೊತೆಗೆ ಬಹು ಮುಖ್ಯವಾಗಿ ನಲವತ್ತು ಸಾವಿರ ವ್ಯಾಪಾರ ಸಂದರ್ಶಕರು ಭಾಗವಹಿಸುತ್ತಿದ್ದಾರೆ. ಈ ಪ್ರದರ್ಶನ ಕಾರ್ಯಕ್ರಮ ನಾಲ್ಕು ದಿನಗಳ ಕಾಲ ನಡೆಯಲಿದ್ದು, ನೂರಕ್ಕೂ ಅಧಿಕ ದೇಶಗಳು ಪಾಲು ಪಡೆಯಲಿವೆ. ಇದನ್ನು ಜಗತ್ತಿನ ಅತೀ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Tags

Related Articles

Close