ಪ್ರಚಲಿತ

ಬಿಜೆಪಿಗೆ ನೀಡಿದ ಮತ‌ ಶತ್ರುಗಳ ಧೈರ್ಯಗೆಡಿಸುವಲ್ಲಿ ಯಶಸ್ಸು ಕಂಡಿದೆ: ಪ್ರಧಾನಿ ಮೋದಿ

ಕಳೆದ ಒಂಬತ್ತು ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ಆಡಳಿತದಲ್ಲಿ ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಗುರುತಿಸಿಕೊಂಡಿದ್ದವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ‌. ಆ ಮೂಲಕ ದೇಶದಲ್ಲಿ ಬಡವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದ್ದು, ದೇಶ ಬಡತನ ಮುಕ್ತ ರಾಷ್ಟ್ರವಾಗುವತ್ತ ಹೆಜ್ಜೆ ಇಡುತ್ತಿದೆ ಎನ್ನುವುದು ಸಂತೋಷದ ವಿಷಯ.

ವಸತಿ ರಹಿತ ಬಡವರಿಗೆ ಸೂರನ್ನು ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಹಲವಾರು ಮಹತ್ವದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತಂದಿದೆ. ಪ್ರಧಾನಿ ಮೋದಿ ಅವರ ಸರ್ಕಾರ ದೇಶದ ಬಡ ಜನರಿಗೆ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ಒದಗಿಸಿ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಎಡೆ ಇಲ್ಲ. ನಾನು ನನಗಾಗಿ ಮನೆ ಕಟ್ಟಿಸಿಲ್ಲ. ಆದರೆ ದೇಶದ ಬಡ ಜನತೆಗೆ ಸೂರು ಒದಗಿಸುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಉಪಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ನುಡಿದಿದ್ದಾರೆ. ಬಡ ಜನರಿಗಾಗಿ ಮನೆ ನಿರ್ಮಾಣ ಮಾಡಿ ಕೊಟ್ಟ ರಾಜ್ಯಗಳಲ್ಲಿ ಮಧ್ಯಪ್ರದೇಶದ ಅತಿ ಹೆಚ್ಚು ಬಡ ಜನರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಸಾತ್ನಾ‌ದಲ್ಲಿ ಬಡ ಜನರಿಗೆ ನಮ್ಮ ಸರ್ಕಾರ 1.32 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಜನರು ಬಿಜೆಪಿಗೆ ಮತ ನೀಡಬೇಕು. ಬಿಜೆಪಿಗೆ ನೀಡುವ ನಿಮ್ಮ ಒಂದು ಮತ ನಮ್ಮನ್ನು ಮತ್ತೆ ಸರ್ಕಾರ ರಚನೆ ಮಾಡಲು ಸಹಾಯ ಮಾಡುತ್ತದೆ. ದೆಹಲಿಯಲ್ಲಿ ಮೋದಿ ಅವರಿಗೆ ನಿಮ್ಮ ಮತ ಬಲ ತುಂಬಿದರೆ, ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ದೂರವಿರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ನಿಮ್ಮ ಮತ ಮೂರು ಅದ್ಭುತಗಳಿಗೆ ಸಾಕ್ಷಿಯಾಗಿ, ತ್ರಿಶಕ್ತಿಯಂತೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ನುಡಿದಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸರ್ಕಾರದ‌ ಯಜನೆಗಳನ್ನು ಪಜೆಯಲು ಹತ್ತು ಕೋಟಿ ನಕಲಿ ಫಲಾನುಭವಿಗಳನ್ನು ಸೃಷ್ಟಿ ಮಾಡಿತ್ತು. ಅಂತಹವರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ವ್ಯಯವಾಗುತ್ತಿದ್ದ ಜನರ 2.75 ಕೋಟಿ ರೂ. ಗಳನ್ನು ಆ ಮೂಲಕ ಉಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.

ಇಂದು ಭಾರತ ವಿಶ್ವದಲ್ಲಿ ತನ್ನ ಸ್ಥಾನಮಾನವನ್ನು ಎತ್ತರಕ್ಕೆ ಏರಿಸಿಕೊಂಡಿದೆ. ಭಾರತದ ಧ್ವನಿ ವಿಶ್ವದೆಲ್ಲೆಡೆಯಿಂದ ಕೇಳಿ ಬರುತ್ತಿದೆ. ಜನರು ನೀಡಿರುವ ಒಂದು ಮತ ದೇಶದ ಶತ್ರುಗಳ ಧೈರ್ಯ ಅಡಗಿಸುವಷ್ಟರ ಮಟ್ಟಿಗೆ ಅದ್ಭುತಗಳನ್ನು ಸೃಷ್ಟಿ ಮಾಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Tags

Related Articles

Close