ಪ್ರಚಲಿತ

ಇದೇ ಕಾರಣಕ್ಕಾಗಿ ಪುಟ್ಟ ದೇಶ ಇಸ್ರೇಲ್‍ನನ್ನು ಜಗತ್ತು ಗುರುತಿಸುವಂತಾಗಿದ್ದು!! ಪ್ರಧಾನಿ ಸಹೋದರ ಇಸ್ರೇಲ್‍ನಲ್ಲಿ ಮಾಡಿದ ಸಾಹಸವೇನು ಗೊತ್ತಾ? ಉಗಾಂಡಕ್ಕೆ ತೆರಳಿ ವಿರೋಧಿಗಳನ್ನು ಬಗ್ಗು ಬಡಿದ ಪ್ರಧಾನಿ ಅಣ್ಣ!!

ಇಸ್ರೇಲ್‍ನಲ್ಲಿ ನಡೆದ ರೋಚಕ ಸ್ಟೋರಿ!!

ಇಸ್ರೇಲಿಗರ ಮೈಯಲ್ಲಿ ಸಾಹಸ ರಕ್ತ ಹರಿಯುವ ತನಕ ಯುದ್ಧಕ್ಕೆ ಅವರು ಎಂದೆಂದೂ ಹೆದರುವುದಿಲ್ಲ. ಇಡೀ ದೇಶದ ಚರಿತ್ರೆಯ ಪುಟ ರಕ್ತದಲ್ಲಿ ಅದ್ದಿ ಒಣಗಲು ನೇತು ಹಾಕಿದಂತಿದೆ. ಹಾಗಂತ ಅವರು ಅದೊಂದನ್ನೇ ಮಾಡಿಕೊಂಡು ಕಾಲಕಳೆಯಲಿಲ್ಲ. ತಮ್ಮ ಉಸಾಬರಿಗೆ ಬಂದ ಯಾರನ್ನೇ”ವಿಚಾರಿಸಿಕೊಳ್ಳದೇ’ ಬಿಡಲಿಲ್ಲ. ಅದಕ್ಕಾಗಿ ಈ ಪುಟ್ಟ ದೇಶ, ಜಗತ್ತಿನಲ್ಲಿಯೇ ಅತ್ಯಂತ ಪ್ರಭಾವಿ ಶಕ್ತಿಯಾಗಿ ಉಳಿದಿದೆ. ಅಷ್ಟೇ ಅಲ್ಲ. ಸುತ್ತಮುತ್ತ ಶತ್ರುಗಳನ್ನು ಇಟ್ಟುಕೊಂಡೂ ಸುರಕ್ಷಿತವಾಗಿದೆ.

ಇಸ್ರೇಲ್ ಎಂಬುದು ಪುಟ್ಟ ರಾಷ್ಟ್ರ, ತನ್ನ ದೇಶದ ನಾಲ್ಕೂ ಮೂಲೆಗಳಲ್ಲೂ ಶತ್ರು ಇಸ್ಲಾಮಿಕ್ ರಾಷ್ಟ್ರಗಳಿದ್ದರೂ ಇಸ್ರೇಲ್ ತನ್ನ ದೇಶದ ಅಸ್ಮಿತೆಯನ್ನ ಕಾಪಾಡಿಕೊಂಡು ಬಂದಿರೋದು ತನ್ನ ದೇಶಪ್ರೇಮ ಎಂಬ ಒಂದೇ ತತ್ವದಿಂದ. ಕೇವಲ 90 ಲಕ್ಷ ಜನರ ದೇಶವೊಂದನ್ನ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟಗಳೂ ಮುಟ್ಟೋದಕ್ಕೇ ಹಿಂದೇಟು ಹಾಕುತ್ತವೆ, ಕಾರಣ ಇಸ್ರೇಲಿಗರಲ್ಲಿನ ಶೌರ್ಯ, ದೇಶಪ್ರೇಮವೊಂದೇ!!! ಇಸ್ರೇಲಿನ ಶೌರ್ಯದ ಬಗ್ಗೆ ಮಾತಾಡಬೇಕೆಂದರೆ ಅಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್ ಬಗ್ಗೆ ತಿಳಿದುಕೊಳ್ಳಲೇಬೇಕು.

ಭಾರತದಲ್ಲಿ ಹೇಗೆ ಕೇಂದ್ರ ಗುಪ್ತಚರ ಇಲಾಖೆ ರಾ ಸಂಸ್ಥೆ ಇದೆಯೋ ಹಾಗೆಯೇ ಇಸ್ರೇಲಿನಲ್ಲಿ ಮೊಸ್ಸಾದ್ ಎಂಬ ಗುಪ್ತಚರ ತಂಡವಿದೆ. ಮೊಸ್ಸಾದ್ ನಡೆಸಿದ್ದ ರೋಚಕ ಅಂಡರ್ ಕವರ್ ಆಪರೇಷನ್:

1976 ಜೂನ್ 27. ಇಸ್ರೇಲ್‍ನ ಟೆಲ್ ಅವೀವ್‍ನಿಂದ ಹೊರಟಿದ್ದ ಏರ್ ಫ್ರಾನ್ಸ್ ವಿಮಾನವು ಗ್ರೀಸ್‍ನ ಅಥೆನ್ಸ್‍ನಲ್ಲಿ ತುಸು ನಿಂತು ಪ್ಯಾರಿಸ್‍ಗೆ ಅಭಿಮುಖವಾಗಿ ಮೈ ಕೊಡವಿ ಮೇಲೆದ್ದಿತ್ತು. ಅದರ ಹೊಟ್ಟೆಯಲ್ಲಿದ್ದವರು 248 ಪ್ರಯಾಣಿಕರು ಹಾಗೂ 12 ವಿಮಾನ ಸಿಬ್ಬಂದಿ. 12.30ರ ಮಧ್ಯಾಹ್ನ ಅದು ನೆಲ ಬಿಟ್ಟ ಕೆಲ ಕ್ಷಣಗಳಲ್ಲೇ ಆಘಾತಕಾರಿ ಸುದ್ದಿಯೊಂದು ಅನಾವರಣಗೊಂಡಿತು. ಉಗ್ರರು ಆ ವಿಮಾನವನ್ನು ಹೈಜಾಕ್ ಮಾಡಿದ್ದರು!!ಅಪಹರಣಕಾರರ ಆದೇಶದ ಮೇರೆಗೆ ವಿಮಾನವು ಲಿಬಿಯಾದ ಬೆಂಗಾಜೈಗೆ ಹೊರಟಿತು. ಅಲ್ಲಿ ಏಳು ತಾಸುಗಳ ಕಾಲ ನಿಂತಿದ್ದ ವಿಮಾನವು ಇಂಧನ ತುಂಬಿಸಿಕೊಂಡು, ಒತ್ತೆಯಾಳುಗಳ ಪೈಕಿ ಒಬ್ಬಾಕೆಯನ್ನು ಬಿಡುಗಡೆ ಮಾಡಿದ ನಂತರ 28ನೇ ತಾರೀಖಿನ ಮಧ್ಯಾಹ್ನ ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯಿತು. ಉಗಾಂಡಾದ ಸರ್ವಾಧಿಕಾರಿ ಇದಿ ಅಮೀನ್ ಬಗ್ಗೆ ಹೇಳೋದೇನಿದೆ? ಆತ ಉಗ್ರರ ಪಾಲಿನ ಆಪ್ತ ನೆಂಟ. ಇಸ್ರೇಲಿಗಳೆಂದರೆ, ಯಹೂದಿಗಳೆಂದರೆ ಉರಿದುಕೊಳ್ಳುವವ. ಅಲ್ಲಿ ಅಮಿನ್‍ನ ಬೆಂಬಲ ಹೊಂದಿದ್ದ, ಪ್ಯಾಲಸ್ತೀನ್ ಪರವಾದ ನಾಲ್ವರು ಹೆಚ್ಚುವರಿ ಉಗ್ರರು ಈ ಮೊದಲಿನವರನ್ನು ಸೇರಿಕೊಂಡರು.

ಫ್ರೆಂಚ್ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಉಗ್ರರು 106 ಇಸ್ರೇಲಿಯರನ್ನು ಮಾತ್ರ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡರು. ಅದರ ಬೆನ್ನಲ್ಲೇ ಉಗ್ರರ ಬೇಡಿಕೆ ಹೊರಬಿತ್ತು. ಇಸ್ರೇಲ್‍ನ ಬಂಧನದಲ್ಲಿರುವ 40 ಪ್ಯಾಲಸ್ತೀನ್ ಉಗ್ರರು ಹಾಗೂ ಕೀನ್ಯಾ, ಫ್ರಾನ್ಸ್, ಪಶ್ಚಿಮ ಜರ್ಮನಿ, ಸ್ವಿಡ್ಜರ್ಲೆಂಡ್‍ಗಳಲ್ಲಿ ಬಂಧಿಸಿಟ್ಟಿರುವ 13 ಮಂದಿಯನ್ನು ಬಿಡುಗಡೆ ಮಾಡಬೇಕು. ಜುಲೈ 1, 1976 ಇದಕ್ಕೆ ಡೆಡ್‍ಲೈನ್ ಎಂಬ ಶರತ್ತನ್ನು ವಿಧಿಸಿದ್ದರು.. ಈ ಬೇಡಿಕೆ ಈಡೇರದಿದ್ದಲ್ಲಿ ಒತ್ತೆಯಾಳುಗಳನ್ನೆಲ್ಲ ಕೊಲ್ಲಲಾಗುತ್ತದೆ! ಬೇರೆ ಯಾರಾಗಿದ್ದರೂ ಕಮಕ್- ಕಿಮಕ್ ಎನ್ನದೇ ಉಗ್ರರ ಮಾತಿಗೆ ಒಪ್ಪಿಕೊಳ್ಳಬೇಕಾಗಿತ್ತು.

ಅಲ್ಲಿ ಇನ್ಯಾವುದೇ ಸಾಹಸಕ್ಕೆ ಮುಂದಾಗುವಂಥ ಸಾಸಿವೆ ಕಾಳಿನ ಅವಕಾಶವೂ ಕಾಣುತ್ತಿರಲಿಲ್ಲ. ಏಕೆಂದರೆ ಉಗ್ರರು ವಿಮಾನ ಇಳಿಸಿಕೊಂಡು ಒತ್ತೆಯಾಳುಗಳನ್ನು ಇರಿಸಿಕೊಂಡ ಜಾಗವೇ ಹಾಗಿತ್ತು. ಅಲ್ಲಿ ಸ್ಥಳೀಯ ಆಡಳಿತದ ಸಹಾಯ ಪಡೆದುಕೊಳ್ಳುವುದು ಎಂಬುದು ಕನಸಿನ ಮಾತು. ಸ್ವತಃ ಇಸ್ರೇಲ್ ಸುತ್ತುವರಿದಿರುವುದು ಅರಬ್ ರಾಷ್ಟ್ರಗಳಿಂದ. ಅಕ್ಕಪಕ್ಕದಲ್ಲಿ ನಂಬ ಬಹುದಾದ ಸ್ನೇಹಿತರು ಎಂಬುವವರೇ ಅದಕ್ಕೆ ಯಾರೂ ಇರಲಿಲ್ಲ.. ಬಹುಶಃ ಇದೇ ಕಾರಣಕ್ಕೆ ಇಸ್ರೇಲ್ ಹಾಗೊಂದು ಆಕ್ರಮಕ ಮನಸ್ಥಿತಿಯನ್ನೂ, ಏನಾಗುತ್ತೋ ಒಂದು ಕೈ ನೋಡೇಬಿಡೋಣ ಎಂಬ ಧೋರಣೆಯನ್ನೂ ರೂಢಿಸಿಕೊಂಡಿರಲಿಕ್ಕೆ ಸಾಕು.

ವಿಮಾನ ಅಪಹರಣವಾಗಿ ಪರದೇಸಿ ನೆಲದಲ್ಲಿ ಆರ್ತವಾಗಿ ನಿಂತಿದ್ದ ಆ ಘಳಿಗೆಯಲ್ಲೂ ಅದು ಸ್ಥೈರ್ಯ ಮುಕ್ಕಾಗಿಸಿಕೊಳ್ಳಲಿಲ್ಲ. ಸೇನಾ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವುದೇ ಸರಿಯಾದ ದಾರಿ ಎಂಬ ನಿರ್ಧಾರವೊಂದನ್ನು ಆಪಸ್ನಾತಿಯಲ್ಲಿ ಅದು ತೆಗೆದುಕೊಂಡಾಗಿತ್ತು! ಹೊರಗೆ ಮಾತ್ರ ಅದೇನನ್ನೂ ತೋರಗೊಡದೇ ತಾನು ಉಗ್ರರೊಂದಿಗೆ ಸಂಧಾನ ಮಾತುಕತೆ ನಡೆಸುವ ಉಮೇದನ್ನು ಹೊರಗೆ ಹಾಕಿತು. ಮಿಲಿಟರಿ ಕಾರ್ಯಾಚರಣೆ ನಡೆಸುವುದಕ್ಕೆ ಸಿದ್ಧತೆ ಕೈಗೊಳ್ಳಲು ಒಂದಿಷ್ಟು ಕಾಲಾವಕಾಶ ಬೇಕು. ಅದಕ್ಕೋಸ್ಕರವೇ ಇಸ್ರೇಲಿನಿಂದ ಅಂಥದೊಂದು ಪೀಠಿಕೆ. ಈ ಯತ್ನದಿಂದಾಗಿ ಜುಲೈ 1ರ ಉಗ್ರರ ಡೆಡ್‍ಲೈನ್ 4ರವರೆಗೆ ವಿಸ್ತರಿಸಿಕೊಂಡಿತು.

ತನ್ನ ನೆಲದಿಂದ ಇನ್ನೆಲ್ಲೋ ದೂರದಲ್ಲಿ, ಆಫ್ರಿಕಾದ ಭೂತುಂಡಿನಲ್ಲಿ ಇರುವ ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ ಇಸ್ರೇಲಿ ಯೋಧರು ಕಾರ್ಯಾಚರಣೆ ಕೈಗೊಳ್ಳಬೇಕು. ಯಾವ ಕೋನದಿಂದ ನೋಡಿದರೂ ಅದು ಅಸಾಧ್ಯ ಎಂದೇ ಅನಿಸುವಂಥದ್ದು. ಆದರೆ ಅದಾಗಬೇಕು ಎಂದು ನಿರ್ಧರಿಸಿದ್ದಾಗಿದೆ. ಏಕೆಂದರೆ ಸುತ್ತಲೆಲ್ಲ ಅರಬ್ ರಾಷ್ಟ್ರಗಳನ್ನೇ ಇಟ್ಟುಕೊಂಡು, ತನ್ನ ಅಸ್ತಿತ್ವಕ್ಕೆ ಪ್ಯಾಲಸ್ತೀನ್ ಜೊತೆ ನಿರಂತರ ಸಂಘರ್ಷದಲ್ಲಿರುವ ಇಸ್ರೇಲ್‍ನ ಎದುರಿಗೆ ಕಂಡಿದ್ದು 40 ಚಿಲ್ಲರೆ ಉಗ್ರರನ್ನು ಬಿಡುವ ಪ್ರಶ್ನೆಯಲ್ಲ. ಹಾಗೆ ಮಾಡಿದರೆ ಸಮರವೇ ಬದುಕಾಗಿರುವ ರಾಷ್ಟ್ರದ ಅಂತಃಸತ್ವಕ್ಕೆ ಬೀಳುವ ಏಟಿದೆಯಲ್ಲ ಅದನ್ನು ಇಸ್ರೇಲ್‍ನಂಥ ರಾಷ್ಟ್ರ ಅವತ್ತಿಗೂ ಇವತ್ತಿಗೂ ಸಹಿಸುವುದಿಲ್ಲ. ಯಾರೇನೇ ತಲೆ ಕೆಳಗಾಗಿ ಬೊಬ್ಬೆ ಹೊಡೆದರೂ ಬಜಾಯಿಸಿಕೊಳ್ಳಲಿ, ಶಾಂತಿಮಂತ್ರದ ಉಪದೇಶ ಹೇಳಿಕೊಂಡಿರಲಿ- ಹತ್ಯೆಯಾದ ಪ್ರತಿ ಇಸ್ರೇಲಿ ಯೋಧನಿಗೆ ಬದಲಾಗಿ ಇಬ್ಬರು ಪ್ಯಾಲಸ್ತೀನ್ ಉಗ್ರರನ್ನು ಹುಡುಕಿ ಹೊಡೆದುಹಾಕು ಎಂಬುದು ಆ ದೇಶದ ನಿಯಮ!! ಹಾಗೆಂದೇ ಅದು ಕಾರ್ಯಾಚರಣೆಯ ಸಾಹಸಕ್ಕೆ ಮುಂದಾಯಿತು.

ಕಾರ್ಯಾಚರಣೆಯ ಸಿದ್ಧತೆಯನ್ನು ಆರಂಭಿಸುವುದಾದರೂ ಎಲ್ಲಿಂದ? ಮಹತ್ತರ ಉದ್ದೇಶ ಇರಿಸಿಕೊಂಡು ಧೈರ್ಯದಿಂದ ಮುನ್ನುಗ್ಗುವವರಿಗೆ ಕೆಲ ಅಂಶಗಳು ತಾವಾಗಿಯೇ ಸಹಕಾರಕ್ಕೆ ಬಂದು ನಿಲ್ಲುತ್ತವೆ. ಈ ಮಿಷನ್‍ನ ಅಮೂಲಾಗ್ರ ಉಸ್ತುವಾರಿ ಹೊತ್ತಿದ್ದ ಬ್ರಿಗೇಡಿಯರ್ ಜನರಲ್ ಡ್ಯಾನ್ ಶರ್ಮೋನ್‍ಗೆ ಅಂಥ ತಂತೊಂದು ಸಿಕ್ಕೇಬಿಟ್ಟಿತು. ಒತ್ತೆಯಾಳುಗಳನ್ನು ಇಟ್ಟಿದ್ದು ಎಂಟೆಬ್ಬೆ ಏರ್‍ಪೆÇೀರ್ಟ್‍ನ ಟರ್ಮಿನಲ್ ಒಂದರಲ್ಲಿ ಎಂಬ ಮಾಹಿತಿ ಅಲ್ಲಿಂದ ಬಿಡುಗಡೆಯಾಗಿ ಬಂದ ಇಸ್ರೇಲಿಯೇತರ ಒತ್ತೆಯಾಳುಗಳಿಂದ ತಿಳಿದುಬಂದಿತ್ತು. ಅದರ ಜಾಡನ್ನು ಹಿಡಿದಾಗ ಇಸ್ರೇಲ್ ಪಡೆಗೆ ಒಂದು ಅನುಕೂಲಕರ ಅಂಶವೊಂದು ಗಮನಕ್ಕೆ ಬಂತು. ಆ ಟರ್ಮಿನಲ್‍ನ ನಿರ್ಮಾಣ ಮಾಡಿದ್ದು ಇಸ್ರೇಲಿನ ಒಂದು ಕಂಪನಿಯೇ ಆಗಿತ್ತು. ಆ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದವರನ್ನೆಲ್ಲ ಕರೆಸಿಕೊಂಡ ಇಸ್ರೇಲ್ ಕಾರ್ಯಾಚರಣೆ ಪಡೆ ಅವರಿಂದ ಅದರ ಎಲ್ಲ ಸೂಕ್ಷ್ಮ ವಿವರಗಳನ್ನು ಕಲೆಹಾಕಿತಲ್ಲದೇ, ಕಾರ್ಯಾಚರಣೆ ಮುಗಿಯುವವರೆಗೂ ತನ್ನ ಆತಿಥ್ಯದಲ್ಲೇ ಅವರನ್ನೆಲ್ಲ ಇರಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿತು.

ಈ ಎಲ್ಲ ಹಂತಗಳಲ್ಲೂ ಸೇನೆಯ ಜೊತೆ ಜೊತೆ ನಿಂತು ಕೆಲಸ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲೇ ಭಾರಿ ಶಾಣ್ಯಾ ಎಂದು ಗುರುತಿಸಿಕೊಳ್ಳುವ ಇಸ್ರೇಲಿನ ಬೇಹುಗಾರಿಕೆ ಸಂಸ್ಥೆ ಮೊಸಾದ್. ಅದು ಕಾರ್ಯಾಚರಣೆಗೆ ಪೂರಕವಾದ ಮಾಹಿತಿಗಳನ್ನು ಸೇನೆಗೆ ನಿರಂತರ ನೀಡುತ್ತಲಿತ್ತು. ಪ್ಯಾರಿಸ್‍ನಲ್ಲಿ ಬಿಡುಗಡೆ ಆಗಿದ್ದ ಒತ್ತೆಯಾಳುಗಳನ್ನೆಲ್ಲ ಸಂದರ್ಶಿಸಿದ್ದ ಅದು, ಉಗ್ರರು ಎಷ್ಟು ಮಂದಿ ಇದ್ದಾರೆ, ಅವರ ಬಳಿ ಇರುವ ಶಸ್ತ್ರಗಳು ಯಾವ ನಮೂನೆಯವು, ಅದಲ್ಲದೇ ಒತ್ತೆಯಾಳುಗಳ ಬಿಡುಗಡೆ ವೇಳೆ ಉಗಾಂಡಾದ ಯೋಧರ ಪಾಲುಗೊಳ್ಳುವಿಕೆ ಯಾವ ತೆರನಾಗಿತ್ತು, ಅವರು ಸುರಕ್ಷತೆಗೆ ಎಂದು ಕಾವಲಾಗಿರುವ ಆಯಕಟ್ಟಿನ ಸ್ಥಳಗಳು ಯಾವುದು ಮುಂತಾದ ಎಲ್ಲ ವಿವರಗಳನ್ನೂ ಸಾಧ್ಯವಾದಷ್ಟು ಕಲೆಹಾಕಿ ಸೇನೆಗೆ ರವಾನಿಸಿತ್ತು.

ಉಗಾಂಡಾದ ನೆಲದಲ್ಲಿ ಕಾರ್ಯಾಚರಣೆ ನಡೆಸುವುದು ಆ ದೇಶದ ಸಾರ್ವಭೌಮತೆ ಉಲ್ಲಂಘಿಸಿದಂತೆ. ಅದರ ಸಣ್ಣ ವಾಸನೆಯನ್ನೂ ಅಕ್ಕಪಕ್ಕದವರಿಗೆ ಬಿಟ್ಟುಕೊಡುವಂತಿಲ್ಲ. ಆಫ್ರಿಕಾದಲ್ಲಿ ಇಸ್ರೇಲಿನ ಬಗ್ಗೆ ಅನುಕಂಪ ಹೊಂದಿರುವ ರಾಷ್ಟ್ರಗಳು ಇರಲೇ ಇಲ್ಲ ಎಂದೇನಲ್ಲ. ಆದರೆ ಇಸ್ರೇಲ್ ತನ್ನ ರಹಸ್ಯ ಕಾರ್ಯಾಚರಣೆಗೆ ಯಾರನ್ನೂ ನೆಚ್ಚಿಕೊಳ್ಳುವಂತಿರಲಿಲ್ಲ. ಏಕೆಂದರೆ ಆಫ್ರಿಕಾದ ಯಾವ ರಾಷ್ಟ್ರಗಳೂ ಇಸ್ರೇಲ್‍ಗೆ ಸಹಾಯ ಮಾಡಿ, ಆ ಕಾಲಕ್ಕೆ ಬಹಳ ಪ್ರಬಲನಾಗಿದ್ದ ಇದಿ ಅಮೀನ್‍ನನ್ನು ಎದುರು ಹಾಕಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಹಾಗೆಂದು ಇಸ್ರೇಲ್, ಆಫ್ರಿಕಾದ ಯಾವ ರಾಷ್ಟ್ರಗಳನ್ನೂ ನೆಚ್ಚಿಕೊಳ್ಳದೇ ತಾನೇ ತಾನಾಗಿ ಸೇನಾ ಕಾರ್ಯಾಚರಣೆ ನಡೆಸುವಂತೆಯೂ ಇರಲಿಲ್ಲ. ಇಂಧನ ಮರುಪೂರಣಕ್ಕಾದರೂ ಅದಕ್ಕೊಂದು ನಿಲುಗಡೆ ಜಾಗದ ಅಗತ್ಯವಿತ್ತು. ಆ ಹಂತದಲ್ಲಿ ಕೀನ್ಯಾದಲ್ಲಿ ಹೊಟೇಲ್ ಉದ್ಯಮದಲ್ಲಿ ನಿರತನಾಗಿದ್ದ ಯಹೂದಿಯೊಬ್ಬ ಸರ್ಕಾರದ ಮೇಲಿದ್ದ ತನ್ನ ಪ್ರಭಾವವನ್ನು ಬಳಸಿಕೊಂಡು ಇಸ್ರೇಲ್ ಹಾಗೂ ಕೀನ್ಯಾ ಸರ್ಕಾರಗಳೊಂದಿಗೆ ಒಂದು ರಹಸ್ಯ ಮಾತುಕತೆ ನಡೆಯುವುದಕ್ಕೆ ವೇದಿಕೆ ಸಿದ್ಧಮಾಡುತ್ತಾನೆ. ಕೀನ್ಯಾದ ವಾಯುಮಾರ್ಗ ಬಳಕೆ ಹಾಗೂ ನಿಲ್ದಾಣದಲ್ಲಿ ಇಳಿದು ಇಂಧನ ತುಂಬಿಸಿಕೊಳ್ಳುವ ಅವಕಾಶ ಇಸ್ರೇಲ್ ಪಡೆಗೆ ಸಿಕ್ಕಿದ್ದು ಹಾಗೆ.

ಇಷ್ಟೆಲ್ಲ ಆಗಿ ಇಸ್ರೇಲಿನ ಅತ್ಯುತ್ತಮ 200 ಯೋಧರ ಪಡೆ ಹೊರಟು ನಿಲ್ಲುತ್ತದೆ. ಅದಕ್ಕೆ ಲೆಫ್ಟಿನೆಂಟ್ ಕರ್ನಲ್ ಜೋನಾಥನ್ ನೆತನ್ಯಾಹು ಸಾರಥ್ಯ. ಸಿ 130 ಹಕ್ರ್ಯುಲಸ್ ವಿಮಾನವೊಂದೇ ಆ ಕಾರ್ಯಾಚರಣೆಗೆ ಪ್ರಶಸ್ತವಾಗಿದ್ದದ್ದು. ಬೋಯಿಂಗ್ 707ರ ಎರಡು ವಿಮಾನಗಳು ಅದಕ್ಕೆ ಸಾಥ್ ನೀಡಿದ್ದವು. ಒಂದರಲ್ಲಿ ಔಷಧ ಸಾಮಗ್ರಿಗಳಿದ್ದರೆ ಇನ್ನೊಂದರಲ್ಲಿ ಹೆಚ್ಚುವರಿ ಪಡೆ. ಈಜಿಪ್ಟ್, ಸುಡಾನ್, ಸೌದಿ ಅರೇಬಿಯಾಗಳ ರಡಾರ್ ಕಣ್ಣುಗಳಿಂದ ತಪ್ಪಿಸಿಕೊಳ್ಳಬೇಕಿತ್ತಲ್ಲ? ಹಾಗಾಗಿ ಕೇವಲ ನೂರು ಅಡಿಗಳ ಅಂತರದಲ್ಲಿ ರೆಡ್ ಸೀ ಮೇಲೆ ಹಾರಿದವು.

ಜುಲೈ ನಾಲ್ಕರ ರಾತ್ರಿ ಇಸ್ರೇಲಿ ವಿಮಾನ ಎಂಟೆಬ್ಬೆಯಲ್ಲಿ ಇಳಿಯಿತು. ಅದರಿಂದ ಹೊರಚಾಚಿಕೊಂಡ ಹಲಗೆಯಲ್ಲಿ ಒಂದು ಕಪ್ಪು ಮರ್ಸಿಡೆಸ್ ಕಾರು ಇಳಿಯಿತು. ಅದರ ಜೊತೆಗೆ ಇಸ್ರೇಲಿ ಸೈನಿಕರನ್ನು ಹೊತ್ತಿದ್ದ ಒಂದಿಷ್ಟು ಲ್ಯಾಂಡ್ ರೋವರ್‍ಗಳು. ನೋಡಿದವರಿಗೆ ಆ ಕಾರಿನಲ್ಲಿ ಉಗಾಂಡಾದ ಇದಿ ಅಮಿನ್ ಇಲ್ಲವೇ ಅವನಿಗೆ ಸಂಬಂಧಿಸಿದ ಅಧಿಕಾರಿಗಳಿದ್ದಾರೆ ಹಾಗೂ ಯೋಧರು ಅವರನ್ನು ಬೆಂಗಾವಲಿನಲ್ಲಿ ಟರ್ಮಿನಸ್ ಕಡೆಗೆ ಒಯ್ಯುತ್ತಿದ್ದಾರೆ ಎಂಬಂತಿತ್ತು. ಹಾಗೆ ಹೊಂಚು ಹಾಕಿ ಒತ್ತೆಯಾಳುಗಳಿದ್ದ ಟರ್ಮಿನಸ್ ಕಡೆ ಸಾಗಿತು ಇಸ್ರೇಲಿ ಪಡೆ. ಆದರೆ ಮಧ್ಯದಲ್ಲಿ ಉಗಾಂಡಾದ ಇಬ್ಬರು ಕಾವಲುಗಾರರಿಗೆ ಅನುಮಾನ ಕಾಡಿತು. ಇದಿ ಅಮಿನ್ ಆಗಷ್ಟೇ ಕಪ್ಪು ಮರ್ಸಿಡೆಸ್ ಬದಲಿಸಿ ಬಿಳಿ ಮರ್ಸಿಡೆಸ್ ಖರೀದಿಸಿದ್ದು ಅವರಿಗೆ ತಿಳಿದಿತ್ತು. ಕಾರನ್ನು ನಿಲ್ಲಿಸುವಂತೆ ಸೂಚಿಸಿದ ಅವರನ್ನು ಪಿಸ್ತೂಲಿನಲ್ಲಿ ಸದ್ದಿಲ್ಲದೇ ಮುಗಿಸಿದ್ದಾಯ್ತು.

ಇಡೀ ಕಾರ್ಯಾಚರಣೆಯ ಮೂಲಮಂತ್ರವಾಗಿದ್ದ “Surprise Element” ಅನಿರೀಕ್ಷತತೆಯ ತಂತ್ರ ,ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಈ ಗೌಪ್ಯತೆಯನ್ನು ಆದಷ್ಟು ಕಾಪಾಡಿಕೊಂಡಿರಬೇಕಾದ ನಿಯಮ ಅಲ್ಲಿಗೆ ಮುಗಿದೇಬಿಟ್ಟಿತು. ಆಸುಪಾಸಿನಲ್ಲಿದ್ದ ಉಗಾಂಡದ ಸೈನಿಕರು ಗಾಬರಿಗೊಂಡು ಹಿಗ್ಗಾ ಮುಗ್ಗಾ ಫೈರಿಂಗ್ ಮಾಡತೊಡಗಿದರು. ಒಳಗಿದ್ದ ಒತ್ತೆಯಾಳುಗಳು ಈ ಟೆರರಿಸ್ಟುಗಳೇ ಗುಂಡು ಹಾರಿಸುತ್ತಿದ್ದಾರೆ ಇನ್ನೇನು ನಮ್ಮ ಕಥೆ ಮುಗಿದಹಾಗೇ ಎಂದು ಗಾಬರಿಗೊಂಡರು. ಈಗೇನು ಮಾಡುವುದು ಎನ್ನುವ ಅನಿಶ್ಚಿತೆ ಕಮಾಂಡೋಗಳಲ್ಲೂ ಉಂಟಾಯಿತು. ಇಂತಹ ಪರಿಸ್ಥಿತಿಯನ್ನು ಹಲವಾರು ಬಾರಿ ಅನುಭವಿಸಿದ್ದ ಕರ್ನಲ್ ನೆತನ್ಯಾಹು ತ್ವರಿತವಾಗಿ ರಣತಂತ್ರವನ್ನು ಬದಲಿಸಿದರು.

ಮೊದಲನೇ ಕಮಾಂಡೊ ಪಡೆಯನ್ನು ಒತ್ತೆಯಾಳುಗಳಿದ್ದ ಕಡೆ ದೌಡಾಯಿಸಿದರು. ಎರಡನೇ ಪಡೆಯನ್ನು ಉಂಗಾಂಡದ ಸೈನಿಕರನ್ನು ಹಿಮ್ಮೆಟ್ಟಲು ಆದೇಶಿಸಿದರು. ಇದನ್ನೆಲ್ಲಾ ಮುಂದೆನಿಂತು ಆದೇಶಿಸುವ ಸಮಯದಲ್ಲೇ ATC tower ನ ಮೇಲಿದ್ದ ಒಬ್ಬ ಉಗಾಂಡದ ಸೈನಿಕ ಇವರ ಮೇಲೆ ಗುಂಡು ಹಾರಿಸೇ ಬಿಟ್ಟ. ಕುಸಿದು ಬಿದ್ದ ನೇತನ್ಯಾಹು. ಕಾಮಾಂಡೋಪಡೆಗಳಲ್ಲಿ ಆಹಾಕಾರ ಉಂಟಾಯಿತು. ನಮ್ಮ ಕಮಾಂಡಿಂಗ್ ಆಫೀಸರ್ಗೆ ಗುಂಡೇಟು ಬಿತ್ತು….ಅದರಲ್ಲೇ ಸಾವರಿಸಿಕೊಂಡು ಅಪಹರಣಕಾರರನ್ನು ಮೊದಲು ಮುಗಿಸಿಬಿಡಿ ಎಂದು ಆದೇಶಿಸಿದರು. ಕಮಾಂಡೋಗಳು ಇನ್ನಿಲ್ಲದ ರೋಷದಿಂದ ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದು ಬಿಟ್ಟರು. ಒತ್ತೆಯಾಳುಗಳಿಗೆ ಇಸ್ರೇಲಿ ಮಾತೃಭಾಷೆಯಲ್ಲಿ ‘ನಾವು ಇಸ್ರೇಲಿ ಸೈನಿಕರು ನಿಮ್ಮನ್ನು ಕರೆದು ಕೊಂಡು ಹೋಗಲು ಬಂದಿದ್ದೇವೆ’ ಎಂದು ಕೂಗಿ ಹೇಳಿದಾಗಲಂತೂ ಇದೇನಿದು ಪವಾಡ…ಪವಾಡ ಎಂದರು ಒಕ್ಕೊರಲಿನಿಂದ. ಉಳಿದ ಇಬ್ಬರು ಅರಬ್ ಆತಂಕವಾದಿಗಳು ಅವಿತಿದ್ದ ಬಾತ್ ರೂಮಿನಲ್ಲೇ ಅವರನ್ನು ಛಿದ್ರಗೊಳಿಸಿದರು.


ಅದೇ ಸಮಯಕ್ಕೆ ನಾಲ್ಕನೇ ಹರ್ಕ್ಯುಲಿಸ್ ಏರೋಪ್ಲೇನು ಒತ್ತಯಾಳುಗಳಿದ್ದ ಕಟ್ಟಡದ ಸಮೀಪವೇ ಬಂದಿತು. ತ್ವರಿತವಾಗಿ ಎಲ್ಲರನ್ನು ಅದರಲ್ಲಿ ಕೂರಿಸಿ ಕೆಲವೇ ನಿಮಿಷಗಳಲ್ಲಿ ಎಂಟೆಬ್ಬೆಯಿಂದ ಹೊರಟೇ ಬಿಟ್ಟಿತು. ಸುಮಾರು 45 ಉಗಾಂಡದ ಸೈನಿಕರು ಹತರಾದರು. ನಿಧಾನವಾಗಿ ಗುಂಡಿನ ಶಬ್ದಗಳು ಆಗೊಂದು ಈಗೊಂದು ಕೇಳಿ ಬರುತ್ತಿತ್ತು. ಕರ್ನಲ್ ನೆತನ್ಯಾಹುವನ್ನು ಇಸ್ರೇಲಿ ಡಾಕ್ಟರುಗಳು ತಮ್ಮ ಸುಪರ್ದಿಗೆ ತೆಗೆದು ಕೊಂಡು ಅವರನ್ನು ಉಳಿಸಲು ಇನ್ನಿಲ್ಲದ ಪ್ರಯತ್ನಮಾಡತೊಡಗಿದರು. ಆದರೆ ನೆತ್ತರು ತುಂಬಾ ಹರಿದಿತ್ತು.
ಕಾರ್ಯಾಚರಣೆಯನ್ನು ಮುಗಿಸಿದ ಮೂರು ಹರ್ಕ್ಯುಲಸ್ ವಿಮಾನಗಳು ಕೆನ್ಯದ ನೈರೋಬಿಯ ಕಡೆ ಹೊರಟವು. ನಾಲ್ಕನೆಯ ವಿಮಾನದಲ್ಲಿದ್ದ ಕಮಾಂಡೋಗಳಿಗೆ ಇನ್ನೊಂದು ಅಂತಿಮ task ಉಳಿದಿತ್ತು. ಇನ್ನೇನು ಕೆಲವೇ ಸಮಯದಲ್ಲಿ ಈದಿ ಅಮೀನನಿಗೆ ವಿಷಯತಿಳಿದು ಅವಮಾನದಿಂದ ಕುದ್ದು ಹೋಗುತ್ತಾನೆ. ಸೇಡು ತೀರಿಸಿ ಕೊಳ್ಳಲು ಯುಧ್ಧ ವಿಮಾನಗಳನ್ನು ಇಸ್ರೇಲಿ ಪ್ಲೇನುಗಳ ಮೇಲೆ ಆಕ್ರಮಣಕ್ಕೆ ಆದೇಶಿಸ ಬಹುದು. ಕೆಲವೇ ನಿಮಿಷಗಳಲ್ಲಿ ಎಂಟಬ್ಬೆಯಲ್ಲಿದ್ದ ಎಲ್ಲಾ ಹನ್ನೊಂದು ಯುಧ್ಧವಿಮಾನಗಳನ್ನು ನೆಲಸಮ ಮಾಡಿ ಅವರೂ ಅಲ್ಲಿಂದ ನಿರ್ಗಮಿಸುತ್ತಾರೆ.
ಈದಿ ಅಮೀನನಿಗೆ ಅನ್ನಿಸಿರಬಹುದು… ಬೀದಿಲಿ ಹೋಗ್ತಿದ್ದ ಮಾರಿನ ಮನಿಗ್ಯಾಕ್ ಕರಕಂಡು ಬಂದೆ. ಸುಖಾಸುಮ್ಮನೆ ಹನ್ನೊಂದು ಯುಧ್ಧ ವಿಮಾನಗಳನ್ನ ಕಳೊಕೊಂಡೆ, 45 ಸೈನಿಕರನ್ನು ಕಳೊಕೊಂಡೆ ಅಂತರಾಷ್ಟ್ರವಲಯದಲ್ಲಿ ಮಂಗನಾದೆ….ಎಂಟು ಗಂಟೆಯ ಪ್ರಯಾಣದ ನಂತರ ,ಎಂಟು ದಿನಗಳ ನರಕಯಾತನೆಯನಂತರ 103 ಇಸ್ರೇಲಿಯರು ಮರಳಿ ಮನೆಗೆ ಬಂದರು.

ಈ ಆಪರೇಷನ್ ಮುಂದಾಳತ್ವವಹಿಸಿದ್ದು ಇಸ್ರೇಲ್ ಡಿಫೆನ್ಸ್ ಫೆÇೀರ್ಸ್’ನ ಅಧಿಕಾರಿ ಯೋನಾಥನ್ ನೇತನ್ಯಾಹು. ಅದೃಷ್ಟವಶಾತ್ ಇಸ್ರೇಲಿನ ಎಲ್ಲ ಪ್ರಯಾಣಿಕರೂ ತಾಯ್ನಾಡಿಗೆ ವಾಪಸ್ಸಾದರು, ಆಪರೇಷನ್ ಎಂಟೆಬ್ಬೆ ಯಶಸ್ವಿಯಾಗಿತ್ತು  ಇಡೀ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದು ಯೋನಾಥನ ನೇತನ್ಯಾಹು!! ಈಗಿನ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಯಾರು ಗೊತ್ತೆ? ಈ ಬೆಂಜಮಿನ್ ನೇತನ್ಯಾಹು ಅಂದು ಆಪರೇಷನ್ ಎಂಟೆಬ್ಬೆಯ ಸಾರಥ್ಯ ವಹಿಸಿದ್ದ ಯೋನಾಥನ್ ನೇತನ್ಯಾಹುವಿನ ಒಡಹುಟ್ಟಿದ ತಮ್ಮ.

ಜಗತ್ತೇ ನಿಬ್ಬರಗಾಗಿ ಈ ನಂಬಲಸಾಧ್ಯವಾದ ಸಾಹಸಗಾಥೆಗೆ ಸಲ್ಯೂಟ್ ಹೊಡೆಯಿತು. ಆದರೆ ಇಸ್ರೇಲಿಗರು ತಮ್ಮನ್ನಗಲಿದ ಗಂಡೆದೆಯ ವೀರ ಕರ್ನಲ್ ಜೋನಾತನ್ ನೆತನ್ಯಾಹುವುನ ಬಲಿದಾನದ ಬೆಲೆಯನ್ನು ಎಂದೂ ಮರೆತಿಲ್ಲ.!! ಆ ಕಾರ್ಯಾಚರಣೆ ತಮ್ಮ ಸಾರ್ವಭೌಮತ್ವದ ಮೇಲಿನ ಅತಿಕ್ರಮಣ ಎಂದು ವಿಶ್ವಸಂಸ್ಥೆಯಲ್ಲಿ ಉಗಾಂಡಾ ಬೊಬ್ಬಿರಿದಾಗ, ಇಸ್ರೇಲಿನ ಪ್ರತಿನಿಧಿ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದ-”ನಾವು ಮಾಡಿದ್ದರ ಬಗ್ಗೆ ನಮಗೆ ಅಭಿಮಾನವಿದೆ. ಇಸ್ರೇಲ್‍ನಂಥ ಪುಟ್ಟ ರಾಷ್ಟ್ರವೊಂದು ಮನುಷ್ಯನ ಘನತೆ, ಸ್ವಾತಂತ್ರ್ಯಗಳೇ ಅತ್ಯುನ್ನತವಾದವು ಎಂಬುದನ್ನು ಜಗತ್ತಿಗೇ ನಿರೂಪಿಸಿದೆ’.
ಜಗತ್ತಿನ ಇತಿಹಾಸದಲ್ಲಿ ಅಂದು ಇಸ್ರೇಲ್ ನಡೆಸಿದ್ದ ಆಪರೇಷನ್ ಎಂಟೆಬ್ಬೆ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರವೂ ಹಿಂದೆಯೂ ಮಾಡಿರಲಿಲ್ಲ ಬಹುಷಃ ಮುಂದೆಯೂ ಯಾವ ರಾಷ್ಟ್ರವೂ ಮಾಡಲಾರದೇನೋ!! ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಇಸ್ರೇಲ್ ಜೊತೆಗೆ ಸ್ನೇಹ ಬೆಳೆಸಿರುವ ನಾವೇ ಧನ್ಯರು!!!

ಪವಿತ್ರ

Tags

Related Articles

Close