ಪ್ರಚಲಿತ

ಇದೊಂದು ಬಾರಿ ಯಡಿಯೂರಪ್ಪನವರನ್ನು ಮುಗಿಸಿಬಿಟ್ಟರೆ, ಇನ್ಯಾವತ್ತೂ ಏಳುವುದಿಲ್ಲ ಎಂಬುದೇ ಕಾಂಗ್ರೆಸ್‌ ಪ್ಲಾನ್‌!

ಇದು ಸಹಜ. ಒಬ್ಬ ಹಿರಿಯ ವ್ಯಕ್ತಿಯನ್ನು ಯಾರಾದರೂ ಹೊಡೆಯುವುದಕ್ಕೆ ಬಯ್ಯುವುದಕ್ಕೆ ಹೋದರೆ. ಉಳಿದವರು ಅವರನ್ನು ತಡೆದು ಹಿರಿಯ ವ್ಯಕ್ತಿಯ ಮೇಲೆ ಏನಯ್ಯಾ ನಿನ್ನ ಪೌರುಷ ಎನ್ನುತ್ತಾರೆ. ಆದರೆ ರಾಜಕೀಯದಲ್ಲಿ ಹಾಗಲ್ಲ. ಇವರ ಅಪ್ಪನ ವಯಸ್ಸಾದವರ ಮೇಲೆ ದಾಳಿ, ಪಿತೂರಿ ಮಾಡಿದರೆ ಮಾತ್ರ ಉತ್ತಮ, ಸ್ವಚ್ಛ ರಾಜಕಾರಣಿ ಎನ್ನುತ್ತಾರೆ. ಇದು ಮನವರಿಕೆಯಾಗಿದ್ದು ಯಡಿಯೂರಪ್ಪನವರ ವಿರುದ್ಧ ದಿನಕ್ಕೊಂದರಂತೆ ನಡೆಯುತ್ತಿರುವ ಪಿತೂರಿಗಳು.

ಈಗ ಚಾಲ್ತಿಯಲ್ಲಿರುವುದು ಮಹದಾಯಿ ನೀರಿನ ವಿಚಾರ. ನಮ್ಮಲ್ಲಿ ಒಂದು ಗಾದೆಯಿದೆ: ಕರ್ನಾಟಕದ ಎಮ್ಮೆಯನ್ನ ಕಂಡಲ್ಲೇ ಮರೆಯಬೇಕೆಂತೆ.. ಕಾರಣ ಇಷ್ಟೇ, ಎಮ್ಮೆ ಕಂಡ ಮೇಲೆ ಅದನ್ನು ಮಾಲೀಕನಿಗೆ ಹೇಳಿದರೆ, ಎಮ್ಮೆಯನ್ನು ಯಾಕೆ ಕರೆದುಕೊಂಡು ಬರಲಿಲ್ಲ? ನಿನ್ನದೇ ತಪ್ಪು ಎನ್ನುತ್ತಾನೆ. ಈಗ ಯಡಿಯೂರಪ್ಪನವರ ಸ್ಥಿತಿಯೂ ಹಾಗೇ ಆಗಿದೆ. ಇಷ್ಟು ಮಹದಾಯಿ ನೀರು ಕೊಡಿಸುವುದಕ್ಕೆ ಯೋಗ್ಯತೆ ಇಲ್ಲದೇ, ಅದೊಂದು ವಿಚಾರ ಬಿಟ್ಟು ಮಿಕ್ಕ ಎಲ್ಲವನ್ನು ಮಾತನಾಡುತ್ತಿದ್ದ ಕಾಂಗ್ರೆಸ್‌ ಜಾಣ ಮೌನ ತೋರಿದೆ. ಇದರ ಬಗ್ಗೆ ಮಾತಾಡಿದ ಯಡಿಯೂರಪ್ಪ ಎಲ್ಲರ ಕಣ್ಣಲ್ಲಿ ವಿಲನ್‌ ಆಗಿದ್ದಾರೆ. ಯಾವ ಮಾಧ್ಯಮದವರು ಕೇಳಿದರೂ ಕಾಂಗ್ರೆಸ್‌ ಈ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ.

60 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ತಲೆ ಅದು. ಎಲ್ಲಿ ಸುಮ್ಮನಿದ್ದರೆ ವೋಟು ಬರುತ್ತದೆ ಎಂಬುದರ ಅರಿವು ಚೆನ್ನಾಗಿದೆ ಅವರಿಗೆ. ಆದರೆ ಯಡಿಯೂರಪ್ಪನವರ ಮನಸ್ಸು ಅದ್ಯಾಕೋ ಇಲ್ಲಿ ರಾಜಕೀಯ ಮಾಡುವುದಕ್ಕೆ ಒಪ್ಪಲಿಲ್ಲ. ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ಗೆ ಪತ್ರ ಬರೆದರು. ಅದಕ್ಕೆ ಉತ್ತರ ಬರೆದ ಪರಿಕ್ಕರ್‌ ಮಹದಾಯಿ ನೀರಿನ ವಿಚಾರದ ಬಗ್ಗೆ ಸಕಾರಾತ್ಮಕವಾಗಿ ಮಾತಾಡುವುದಕ್ಕೆ ಒಪ್ಪಿಕೊಂಡಿದ್ದರು.

ಆದರೆ ಸಿದ್ದರಾಮಯ್ಯನವರು ಮಾತ್ರ ಒಣ ಪ್ರತಿಷ್ಟೆ ಮಾಡಿಕೊಂಡು, ಪರಿಕ್ಕರ್‌ ನನಗೆ ಪತ್ರ ಬರೆಯಲಿ ಆಮೇಲೆ ಬರುತ್ತೀನಿ ಎಂದು ಸಮಾವೇಶ ಸುತ್ತುತ್ತಿದ್ದಾರೆ. ಯಾರಿಗೆ ಸ್ವಾಮಿ ಹರಕತ್‌ ಇರುವುದು? ನಮಗಾ ಗೋವಾದವರಿಗಾ? ಗೋವಾದವರೇ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಬನ್ನಿ ಎಂದು ಕರೆಯುವುದಕ್ಕೆ ಅವರಿಗೆ ತಲೆ ಕೆಟ್ಟಿದೆಯೇ? ಸಿದ್ದರಾಮಯ್ಯನವರು ಮಾತೆತ್ತಿದರೆ, ನಾನೂ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಆದರೆ ಯಡಿಯೂರಪ್ಪನವರಿಗೆ ಮಾತ್ರ ಉತ್ತರ ಬರೆದಿದ್ದಾರೆ ಎಂದು ಹೇಳುತ್ತಾರೆ. ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದರೆ ಆ ಅವಕಾಶವನ್ನು ಉಪಯೋಗಿಸಿಕೊಂಡು ಪರಿಕ್ಕರ್‌ ಜೊತೆ ಮಾತಾಡುವುದಕ್ಕೆ ಏರ್ಪಾಡು ಮಾಡಿಕೊಳ್ಳಬೇಕಿತ್ತು.

 

ರಾಜಕೀಯದ ಲೆಕ್ಕಾಚಾರ ಮತ್ತು ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುವುದಕ್ಕೆ ಶುರುವಾಗುವುದೇ ಅಲ್ಲಿಂದ. ಪರಿಕ್ಕರ್‌ ಜೊತೆ ಈಗ ಹೋಗಿ ಮಾತಾಡಿದರೆ ಅದು, ಯಡಿಯೂರಪ್ಪನವರ ಗೆಲುವಾಗುತ್ತದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ಸಮಾವೇಶದ ತುಂಬೆಲ್ಲ ಯಡಿಯೂರಪ್ಪನವವರನ್ನು ಬಯ್ದುಕೊಳ್ಳುತ್ತಾ ಓಡಾಡುತ್ತಿದ್ದರು. ಆದರೆ ಇದು ಬಹಳಷ್ಟು ದಿನ ನಡೆಯುವುದಿಲ್ಲ ಎಂಬುದು ಗೊತ್ತಿತ್ತು. ಏಕೆಂದರೆ ನೀರು, ವಸತಿ, ಆಹಾರದ ಬಗೆಗಿನ ಹೋರಾಟ ಯಾರನ್ನು ಬೇಕಾದರೂ ಮಂಡಿಯೂರುವ ಹಾಗೆ ಮಾಡಿಬಿಡುತ್ತದೆ.

ಕಾಂಗ್ರೆಸ್‌ ವಾಗ್ದಾಳಿ ಮಾಡುತ್ತಲೇ ಯಡಿಯೂರಪ್ಪನವರ ವಿರುದ್ಧ ಪ್ಲಾನ್‌ ’ಬಿ’ ಮಾಡಲು ಶುರು ಮಾಡಿಕೊಂಡಿತು. ಗೋವಾದ ಕಾಂಗ್ರೆಸ್‌, ಕರ್ನಾಟಕಕ್ಕೆ ನೀರು ಬಿಡುವುದನ್ನು ವಿರೋಧಿಸುವುದಲ್ಲವೇ ಇದು ಗೋವಾ ವಿರೋಧಿ ಎಂದುಬಿಟ್ಟಿತು. ಗೋವಾ ಕಾಂಗ್ರೆಸ್‌ ಮಹದಾಯಿ ನೀರು ಬಿಡುವುದನ್ನು ವಿರೋಧಿಸಿದರೆ ಅವರನ್ನು ಸಂತೈಸುವ ಜವಾಬ್ದಾರಿ ನನ್ನದು ಎಂದು ಅಂದು ಬೆಂಗಳೂರಿನ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಇತ್ತ ನಂಗೇನು ಗೊತ್ತಿಲ್ಲ, ನನ್ನ ಕೈಯಲ್ಲೇನೂ ಇಲ್ಲವೆಂದು ಕೈ ಎತ್ತಿಬಿಟ್ಟರು.
ಇಷ್ಟಾದರೆ ಆಯ್ತೇ? ಅದೂ ಹೊರಗೆ ಬರುತ್ತದೆ, ಎಂದು ತಿಳಿದ ಕಾಂಗ್ರೆಸ್‌ ರೈತರನ್ನು ಬಿಟ್ಟು ಹೋರಾಟ ಮಾಡಿಸಲು ಮುಂದಾಯ್ತು. ಇದು ಇವರ ಪ್ಲಾನ್‌ ’ಬಿ’ನ ಮುಂದುವರಿದ ಭಾಗ. ಸುಮ್ಮನೆ ಎಲ್ಲೋ ಒಂದು ಕಡೆ ಹೋಗಿ ಹೋರಾಟ ಮಾಡಿದರೆ ಅದು ಬರುವುದು ಅಧಿಕಾರದಲ್ಲಿರುವ ಪಕ್ಷದ ತಲೆಗೇ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಅದೇ ಕಾರಣಕ್ಕೆ ರೈತರನ್ನು ಬಿಜೆಪಿ ಕಚೇರಿಯ ಮುಂದೆ ಹೋರಾಟ ಮಾಡುವುದಕ್ಕೆ ಬಿಟ್ಟರು. ಆದರೆ ಇದರ ಗುಟ್ಟು ಬಯಲಾಗುವುದಕ್ಕೆ ಬಹಳ ದಿನ ಬೇಕಾಗಿರಲಿಲ್ಲ.

ಬೆಳಗಾವಿಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಂಚನಗೌಡರ ನೇತೃತ್ವದಲ್ಲೇ ರೈತರು ಬಿಜೆಪಿ ಕಚೇರಿ ಮುಂದೆ ಹೋರಾಟ ಮಾಡಿದ್ದು. ಮಾರನೇ ದಿನ ಬಿಜೆಪಿ ನೇತೃತ್ವದಲ್ಲಿ ರೈತರನ್ನು ಕರೆದುಕೊಂಡು ಹೋಗಿ ಕೆಪಿಸಿಸಿ ಕಚೇರಿಯ ಮುಂದೆ ಹೋರಾಟ ಮಾಡಿದವರಿಗೆಲ್ಲ ಲಾಠಿ ಏಟು. ವಾಹ್‌! ರಾಜಕೀಯ ಮತ್ತು ಅಧಿಕಾರದ ಸಂಪೂರ್ಣ ಬಳಕೆ ಎಂದರೆ ಇದು! ಕಾಂಗ್ರೆಸ್‌ಗೆ ಇಲ್ಲಿ ನೀರು ತರುವುದು ಮುಖ್ಯವೇ ಅಲ್ಲ. ಬದಲಿಗೆ ರೈತರ ವೋಟು ಬಿಜೆಪಿಗೆ ಹೋಗಬಾರದು ಎನ್ನುವುದಷ್ಟೇ ಮುಖ್ಯ.
ಸಿದ್ದರಾಮಯ್ಯನವರು ಇಷ್ಟು ವರ್ಷ ಬೇಕಂತಲೇ ಈ ವಿಷಯವನ್ನು ಜೀವಂತವಾಗಿಟ್ಟುಕೊಂಡು ಈಗ ಅದರ ಬಗ್ಗೆ ರೈತರ ಬಳಿ ಹೋರಾಟ ಮಾಡಿಸುತ್ತಿದ್ದಾರೆ ಎನ್ನುವುದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ೨೦೦೭ರಲ್ಲಿ ಸೋನಿಯಾ ಗಾಂಧಿಯವರು ಹೇಳಿದ್ದರು, ಗೋವಾದಿಂದ ಒಂದೇ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು. ಆಗ ಸಿದ್ದರಾಮಯ್ಯನವರು ಹೋರಾಟ ಮಾಡುವುದಿರಲಿ, ಇಲಿಯ ಹಾಗೆ ಬಿಲದೊಳಗೆ ಬಚ್ಚಿಟ್ಟುಕೊಂಡಿದ್ದರು.

2003ರಲ್ಲಿ ರಾಜ್ಯದಲ್ಲೂ ಇವರದ್ದೇ ಸರ್ಕಾರವಿತ್ತು, ಕೇಂದ್ರದಲ್ಲೂ ಇವರದ್ದೇ ಸರ್ಕಾರವಿತ್ತು. ಪಿಎಫ್‌ಐ ಎಂಬ ಉಗ್ರವಾದಿ ಸಂಘಟನೆ ಮೇಲಿನ 175 ಪ್ರಕರಣಗಳನ್ನು ತೆಗೆದು ಹಾಕುವುದಕ್ಕೆ ವಹಿಸಿರುವ ಕಾಳಜಿಯನ್ನು ಮಹದಾಯಿ ನೀರು ತರುವುದಕ್ಕೆ ಪ್ರಯತ್ನಿಸಿದ್ದಿದ್ದರೆ, ಇಷ್ಟು ಹೊತ್ತಿಗೆ ರೈತರು ಸಿದ್ದರಾಮಯ್ಯನವರನ್ನು ಕೊಂಡಾಡಿಬಿಡುತ್ತಿದ್ದರು. ಸೋನಿಯಾ ಮೇಡಂ ಇಲ್ಲದೇ ಕಾಂಗ್ರೆಸ್‌ನಲ್ಲಿ ರಾಜಕಾರಣಿಗಳ ಕೂದಲೂ ಅಲ್ಲಾಡುವುದಿಲ್ಲ. ಇನ್ನು ಸಿದ್ದರಾಮಯ್ಯ ಏನು ಅಲ್ಲಾಡಿಸುತ್ತಾರೆ?
ಈಗ ಯಡಿಯೂರಪ್ಪನವರು ಮಹದಾಯಿ ನೀರು ತಂದರೆ ಎಲ್ಲಿ ಅವರಿಗೇ ಲಾಭವಾಗಿಬಿಡುತ್ತದೆ ರೈತರನ್ನೂ ಬಳಸಿಕೊಂಡಿದ್ದಾರೆ ಎಂಬುದು ಹೋರಾಟಕ್ಕೆ ಬಂದ ರೈತರಿಗೂ ಗೊತ್ತಿದೆ.

ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ರೈತರೇ ಕನ್ನಡ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬಿಜೆಪಿ ಕಚೇರಿಯ ಮಂದೆ ಹೋರಾಟ ಮಾಡುವುದು ಪೂರ್ವನಿರ್ಧರಿತ ಎಂದಿದ್ದಾರೆ. ಇಲ್ಲವಾದರೆ ಅಷ್ಟು ಜನ ರೈತರಿಗೆ ತತ್ಕಾಲ್‌ ಟಿಕೆಟ್‌ ಮತ್ತು ಬಿಸ್ಲೆರಿ ನೀರು ಒದಗಿಸುತ್ತಿರುವ ಕೈಗಳಾದರೂ ಯಾವುದು ಹೇಳಿ?
ಯಡಿಯೂರಪ್ಪನವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗಿನಿಂದಲೂ ಕಾಂಗ್ರೆಸ್‌ ಅವರ ಬಗ್ಗೆ ಒಂದಿಲ್ಲೊಂದು ಹೋರಾಟ ಮಾಡುತ್ತಲೇ ಇದೆ.
ಅದರಲ್ಲೂ ಕೆಲ ಮುಖ್ಯ ಸಂದರ್ಭಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಯಡಿಯೂರಪ್ಪನವರ ಮೇಲೆ ದಾಳಿ ಮಾಡುತ್ತಲೇ ಇದೆ. ಇದರಲ್ಲಿ ಇವರು ಬಹಳ ನಿಸ್ಸೀಮರು ಸಹ. ಬಿಜೆಪಿ ಪರಿವರ್ತನಾ ಯಾತ್ರೆ ಶುರುವಾಗುವುದಕ್ಕಿಂತ ಮುಂಚೆ ಜಾತಿಯ ಆಧಾರದ ಮೇಲೆ ಯಡಿಯೂರಪ್ಪನವರ ಜನರೇ ಅವರ ವಿರುದ್ಧ ತಿರುಗಿ ಬೀಳುವ ಹಾಗೆ ಮಾಡಿತ್ತು ಕಾಂಗ್ರೆಸ್‌. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಲಿಂಗಾಯತರಲ್ಲಿ ಒಡಕು ಮೂಡಿಸಿ, ವೀರಶೈವರು ನಮ್ಮವರಲ್ಲ..

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕು, ನಾವು ಹಿಂದೂಗಳ ಜೊತೆ ಗುರುತಿಸಿಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ ಎಂಬ ಕೂಗು ಜೋರಾಗುವಂತೆ ನೋಡಿಕೊಂಡರು. ಇದಕ್ಕೆ “ಸರ್ಕಾರಿ” ಸ್ವಾಮೀಜಿಗಳ ನೆರವನ್ನೂ ಪಡೆದುಕೊಂಡರು. ಬಾಯಿ ಬಿಟ್ಟರೆ ಬ್ರಾಹ್ಮಣರನ್ನು ಬಯ್ಯುತ್ತಾ ಊರು ಸುತ್ತುವ ನಿಜಗುಣಾನಂದ ಎಂಬುವವರು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಬೇಕು ಎಂದು ಮಾತಾಡುತ್ತಿದ್ದರೆ. ಮತ್ತೊಂದು ಕಡೆ ಮಹಾದೇವಿಯವರು ವಾಗ್ವಾದ ನಡೆಸುತ್ತಿದ್ದರು.

ಆದರೆ ಇದಕ್ಕೆ ಸರ್ಕಾರಿ ಸ್ವಾಮೀಜಿಗಳ ಭಕ್ತರನ್ನು ಬಿಟ್ಟರೆ ಅವರ ಪಕ್ಕದ ಮನೆಯವರೂ ಕ್ಯಾರೇ ಎನ್ನಲಿಲ್ಲ. ನಂಬಲಾರ್ಹ ಮೂಲಗಳ ಪ್ರಕಾರ ಲಿಂಗಾಯತ ಮತ್ತು ವೀರಶೈವ ಜನಾಂಗದ ಸಾಮಾನ್ಯ ವರ್ಗದ ಜನರು ಕಾಂಗ್ರೆಸ್‌ ತಮ್ಮನ್ನು ಬೇರೆ ಮಾಡುತ್ತಿದೆ, ಇವರಿಗೆ ಚುನಾವಣೆಯಲ್ಲಿ ಬುದ್ಧಿ ಕಲಿಸೋಣ ಎಂದು ತಮ್ಮ “ಸರ್ಕಾರಿ” ಸ್ವಾಮೀಜಿಗಳಿಗೇ ಗೊತ್ತಾಗದಂತೆ ಒಂದಾಯಿತು. ಈ ವಿಷಯ ಕಾಂಗ್ರೆಸ್‌ ಕಿವಿಗೆ ಬಿದ್ದ ನಂತರವೇ ಮಹದಾಯಿ ವಿಚಾರವನ್ನು ಕೈಗೆತ್ತಿಕೊಂಡಿದ್ದು.
ಯಡಿಯೂರಪ್ಪನವರನ್ನು ಕಂಡರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ತುಂಬ ಭಯ ಯಾಕೆ ಎನ್ನುವುದಕ್ಕೆ ಒಂದು ಅಂಕಿ ಅಂಶ ಕೊಡುತ್ತೇನೆ ಕೇಳಿ. ಶೇ.78ರಷ್ಟು ಜನ ಲಿಂಗಾಯತರು ಯಡಿಯೂರಪ್ಪನವರ ಪರ ಇದ್ದಾರೆ. ಒಮ್ಮೆ ನಾಳೆ ಚುನಾವಣೆ ನಡೆದರೂ ಇಷ್ಟು ಸಂಖ್ಯೆಯ ಮತಗಳು ಖಂಡಿತವಾಗಿಯೂ ಯಡಿಯೂರಪ್ಪನವರ ಪಾಲಾಗುತ್ತದೆ.

ಕಾಂಗ್ರೆಸ್‌ಗೆ ಮತ ನೀಡುವ ಕುರುಬರು ಶೆ.64ರಷ್ಟಿದ್ದರೆ, ಜೆಡಿಎಸ್‌ಗೆ ಮತ ನೀಡುವ ಒಕ್ಕಲಿಗರು ಶೇ.58. ರಾಜಕೀಯವಾಗಿ ನೋಡಿದರೆ ಯಡಿಯೂರಪ್ಪನವರ ಪರ ಇರುವ ಲಿಂಗಾಯತರು ಉಳಿದ ಪಕ್ಷಗಳು ಮೂಲೆ ಸೇರಿಕೊಳ್ಳುವಷ್ಟು ಹಾನಿ ಮಾಡಬಹುದಾದಂಥ ತಾಕತ್ತುಳ್ಳವರಾಗಿದ್ದರು. ಭಾರತದ ಚುನಾವಣೆಯಲ್ಲಿ ಜಾತಿ ಬಹಳ ದೊಡ್ಡ ಪಾತ್ರವಹಿಸುತ್ತದೆ ಎಂದು ಈ ರಾಜಕಾರಣಿಗಳಿಗೆ ಗೊತ್ತಿತ್ತು. ಆದರೆ ಈ ಮಟ್ಟಿಗಾ?ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ನೆಮ್ಮದಿಯಿಂದ ಇದ್ದ ಲಿಂಗಾಯತರನ್ನು ಒಡೆಯುವ ಪ್ಲಾನ್‌ ರೂಪುಗೊಂಡಿದ್ದು ಆಗ.
ಇದಷ್ಟೇ ಅಲ್ಲ… ಮೊದಲೇ ಹೇಳಿದಂತೆ, ಇನ್ನೇನು ಯಡಿಯೂರಪ್ಪನವರಿಗೆ ಒಂದು ಮಹತ್ವದ ಜವಾಬ್ದಾರಿ ಸಿಕ್ಕಿ ಕೆಲಸ ಶುರು ಮಾಡಿಕೊಳ್ಳುತ್ತಾರೆ ಎನ್ನುವ ಸಂದರ್ಭದಲ್ಲಿ ಏನಾದರೊಂದು ಗಲಭೆ ಶುರು ಮಾಡಿಯೇ ತೀರುತ್ತಾರೆ. ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಎಂದು ಘೋಷಣೆ ಮಾಡಿದ ಎರಡು ದಿನದಲ್ಲೇ ಅವರು ಖುಲಾಸೆಗೊಂಡಿದ್ದ ಪ್ರಕರಣದ ಮೇಲ್ಮನವಿಯನ್ನು ಹೈಕೋರ್ಟ್‌‌ನಲ್ಲಿ ಸಲ್ಲಿಸಿದರು.

ಇದಷ್ಟೇ ಅಲ್ಲ, ಒಂದು ವೈಯಕ್ತಿಕ ಪ್ರಕರಣ ದಾಖಲಿಸುವುದಕ್ಕೆ ರಾಜ್ಯಪಾಲರಿಂದ ಸಮ್ಮತಿ ಪಡೆದು, ಒಂದರಲ್ಲಿ ಜಾಮೀನು ಸಿಕ್ಕರೆ ಮತ್ತೊಂದರಲ್ಲಿ ಸಿಗಬಾರದು ಎಂದು ಪ್ರತ್ಯೇಕ ಐದು ಪ್ರಕರಣ ದಾಖಲಿಸಿದರು. ಈ ಮೂಲಕ ಕಾಂಗ್ರೆಸ್‌ನವರು ತಮಗೆ ಯಡಿಯೂರಪ್ಪನವರ ಮೇಲೆ ಅದೆಷ್ಟು ಕೋಪವಿದೆ ಎಂಬುದನ್ನು ಅಂದಿನಿಂದಲೇ ಸಾಬೀತು ಮಾಡಿಕೊಂಡು ಬಂದಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖ್ಯವಾಗಿ ಹೇಳುತ್ತಿದ್ದುದ್ದು ಯಡಿಯೂರಪ್ಪ ಜೈಲಿಗೆ ಹೋಗಿದ್ದರ ಬಗ್ಗೆ. ಆದರೆ, 7.03.2012ರಲ್ಲೇ ಹೈಕೋರ್ಟ್‌ ಲೋಕಾಯುಕ್ತ ವರದಿಯೇ ಆಧಾರ ರಹಿತ ಎಂದು ರದ್ದು ಮಾಡಿತ್ತು. ಕೇವಲ ಅನುಮಾನ ಒಂದರ ಆಧಾರದ ಮೇಲೆ ಯಾವ ದಾಖಲೆಗಳೂ ಇಲ್ಲದೇ ಒಬ್ಬ ವ್ಯಕ್ತಿಯ ವರ್ಚಸ್ಸನ್ನು ನಾಶ ಮಾಡಬಾರದು ಎಂದು ಖಾರವಾಗೇ ಆದೇಶಿಸಿದೆ. ಅಲ್ಲಿಗೆ ಸಂತೋಷ್‌ ಹೆಗ್ಗಡೆ ಸಲ್ಲಿಸಿದ ವರದಿ ಕಾಣದ ವ್ಯಕ್ತಿಗಳ ಆಶೀರ್ವಾದದಿಂದ ಕೂಡಿದ್ದೇ ಎಂಬ ದಟ್ಟ ಅನುಮಾನ ಯಾರನ್ನೂ ಕಾಡದೇ ಇರಲಿಲ್ಲ.
ಬಿಜೆಪಿ ಗಟ್ಟಿಯಾಗಿರುವುದು ಉತ್ತರ ಭಾರತದಲ್ಲಿ ಮಾತ್ರ. ದಕ್ಷಿಣದಲ್ಲಿ ಕಮಲ ಅರಳಿಸಿ ಎಲ್ಲರೂ ಕರ್ನಾಟಕದತ್ತ ನೋಡುವ ಹಾಗೆ ಮಾಡಿದ್ದು ಯಡಿಯೂರಪ್ಪ. ವಯಸ್ಸು 74 ಆದರೂ ಇವತ್ತಿಗೂ ಯಡಿಯೂರಪ್ಪನವರ ಆತ್ಮವಿಶ್ವಾಸದಲ್ಲಿ ಯಾವುದೇ ಕೊರತೆಯಾಗಿರಲಿಲ್ಲ. ದಿನಕ್ಕೆ ಮೂರು ತಾಲೂಕು ಸುತ್ತಿ 7500 ಕಿಲೋ ಮೀಟರ್ ಪರಿವರ್ತನಾ ಯಾತ್ರೆ ಮಾಡುತ್ತಾ ಜನರಲ್ಲಿ ಮತ್ತೊಮ್ಮೆ ವಿಶ್ವಾಸ ಮೂಡಿಸುತ್ತಿದ್ದಾರೆ.

ಜತೆಗೆ ಈ ಸಮಯದಲ್ಲಿ ಮಹದಾಯಿ ವಿಚಾರ ಮುಟ್ಟಿದರೆ ಸಮಸ್ಯೆಯಲ್ಲಿ ಸಿಲುಕಬೇಕಾಗುತ್ತದೆ ಎಂದು ಗೊತ್ತಿದ್ದರೂ ರೈತರ ಕಷ್ಟಕ್ಕೆ ಸ್ಪಂದಿಸಿ ಧ್ವನಿಯೆತ್ತಿದ್ದಾರೆ. ತಮ್ಮ ಕಾರ್ಯಕ್ರಮಕ್ಕೆ ಬರುವ ಜನಗಳು ಕಡ್ಡಾಯವಾಗಿ ಮತ ಹಾಕುವ ಹಾಗೆ ಪ್ರೇರೇಪಿಸುವಂಥ ತಾಕತ್ತಿರುವ ಯಡಿಯೂರಪ್ಪ ಎಂಬ ಶಕ್ತಿ ವಿರೋಧಿಗಳ ಚುನಾವಣ ತಂತ್ರಕ್ಕಿರುವ ಅತಿ ದೊಡ್ಡ ಸವಾಲೇ? ಜನರೇ ಹೇಳಬೇಕು.

– ಚಿರಂಜೀವಿ ಭಟ್‌

Tags

Related Articles

Close