ಪ್ರಚಲಿತ

ಬಜೆಟ್ ಮಂಡಣೆಗೂ ಮುನ್ನ ಹಲ್ವಾ ತಿನ್ನುತ್ತಾರೆ ಯಾಕೆ ಗೊತ್ತಾ…!? ಹಲ್ವಾ ಸೂಟ್ ಕೇಸ್ ನ ರೋಚಕ ಸ್ಟೋರಿ…!!

ಲಾಯರ್ ಗಳಿಗೆ ಕರೀ ಕೋಟು ಇದ್ದರೆ ಚೆನ್ನ!! ಡಾಕ್ಟರ್ ಗಳಿಗೆ ಬಿಳಿ ಕೋಟುದ್ದರೆ ಚೆನ್ನ!! ಹೀಗೆ ಕೆಲ ಧಿರಿಸು ತೊಟ್ಟವರನ್ನು ಕಂಡರೆ ಅದನ್ನು ನಾವು ಇಂತವರೇ ತೊಡುತ್ತಾರೆ ಎಂದು ಬಲು ಸುಲಭವಾಗಿ ಹೇಳಬಹುದು. ಆದರೆ ಹಣಕಾಸು ಸಚಿವರ ಕೈಯಲ್ಲಿ ರಾಜ್ಯ ಬಜೆಟ್ ಅಥವಾ ಕೇಂದ್ರ ಬಜೆಟ್ ವೇಳೆ ಸೂಟ್ ಕೇಸ್ ಇರುವುದನ್ನೂ ನಾವು ಕಂಡಿದ್ದೇವೆ. ಆದರೆ ಬಜೆಟ್ ವೇಳೆ ಎಲ್ಲಾ ಒಕೆ… ಈ ಸೂಟ್ ಕೇಸ್ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜವಾದರು ಅದನ್ನು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದೇ ಇಲ್ಲ.

ಬಜೆಟ್ ಮಂಡಿಸುವ ಮುನ್ನ ಎಲ್ಲ ಹಣಕಾಸು ಸಚಿವರು ಲೋಕಸಭೆ ಅಥವಾ ರಾಜ್ಯಸಭೆ ಪ್ರವೇಶಿಸುವ ಮುನ್ನ ಕೈಯಲ್ಲಿ ಕಡು ಕೆಂಪು ಬಣ್ಣದ ಸೂಟ್‍ಕೇಸ್ ಅನ್ನು ಎತ್ತಿ ತೋರಿಸುತ್ತಾರೆ. ರಾಜ್ಯ ಬಜೆಟ್ ಅಥವಾ ಕೇಂದ್ರ ಬಜೆಟೇ ಇರಲಿ ಹಣಕಾಸು ಸಚಿವರ ಕೈಯಲ್ಲಿ ಸೂಟ್ ಕೇಸ್ ಇದ್ದೇ ಇರುತ್ತೆ. ಒಂದು ವೇಳೆ ಸೂಟ್ ಕೇಸ್ ಇಲ್ಲದೇ ಇದ್ದರೆ ಹಣಕಾಸು ಸಚಿವರು ತಮ್ಮ ಬಜೆಟ್ ಮಂಡಿಸುತ್ತಿಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ಒಂದು ವೇಳೆ ಸೂಟ್ ಕೇಸ್ ಕೈಯಲ್ಲಿದ್ದರೆ ರಾಜ್ಯದ ಅಥವಾ ಕೇಂದ್ರದ ಬಜೆಟ್ ಹೊರಬೀಳಲಿದೆ ಎಂದರ್ಥ!!

ಆದರೆ ಈ ಸೂಟ್ ಕೇಸ್ ಅನ್ನು ಬರೀ ಶೋಕಿಗೋಸ್ಕರ ಬಳಸುತ್ತಾರೆ ಎಂದು ಹೇಳಲಾಗದು. ಯಾಕೆಂದರೆ ಈ ಸೂಟ್ ಕೇಸ್ ಗೂ ಅದರದೇ ಆದ ಇತಿಹಾಸವಿದೆ. ಇದು ಕೇವಲ ಪಿ.ಚಿದಂಬರಂ ಅಥವ ಅರುಣ್ ಜೇಟ್ಲಿ ವರು ಶುರು ಮಾಡಿದ್ದಲ್ಲ. ಬದಲಾಗಿ ಎಲ್ಲ ಹಣಕಾಸು ಸಚಿವರು ಬಜೆಟ್ ಮಂಡಿಸುವ ಮುನ್ನ ಸೂಟ್ ಕೇಸ್ ತೆಗೆದುಕೊಂಡು ಬರುವುದು ಕಡ್ಡಾಯ. ಆದರೆ ಈ ಸೂಟ್ ಕೇಸ್ ಗೂ ಬಜೆಟ್ ಗೂ ಇರುವ ಸಂಬಂಧವಾದರೂ ಏನು? ಸೂಟ್ ಕೇಸ್ ಇಲ್ಲದಿದ್ದರೆ ಬಜೆಟ್ ಮಂಡಿಸಲು ಸಾಧ್ಯವೇ ಇಲ್ಲವೇ? ಅನ್ನೋ ಕೆಲ ಪ್ರಶ್ನೆಗಳು ಮನಸ್ಸಿನಲ್ಲಿ ತಾಳ ಹಾಕುತ್ತವೆ..

ಅದೇನೇ ಇರಲಿ…..

ಆದರೆ ಈ ಬಜೆಟ್ ಎನ್ನುವ ಪದ ಬಂದಿದ್ದಾದರೂ ಹೇಗೆ ಗೊತ್ತೆ?? ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದವರ ಬಗ್ಗೆ ಕೂಡ ತಿಳಿದುಕೊಳ್ಳುವುದು ಅತೀ ಮುಖ್ಯ!! ಬಜೆಟ್ ಎಂಬುದು ಬ್ಲಗ್ ಮತ್ತು ಫ್ರೆಂಚ್‍ನ `ಬೌ’ ಹಾಗು `ಗೆಟ್’ ಪದಗಳಿಂದ ಬಂದಿದೆ. `ಬೌ’ `ಗೆಟ್’ ಎಂದರೆ ಚಿಕ್ಕದಾದ ಬ್ಯಾಗ್ ಅಥವಾ ವ್ಯಾಲೆಟ್ ಎಂದರ್ಥ. 15ನೇ ಶತಮಾನದಲ್ಲಿ `ಬೌ’ `ಗೆಟ್’ ಎಂಬ ಪದ ಇಂಗ್ಲಿಷ್‍ನಲ್ಲಿ ಬಜೆಟ್ ಎಂದು ಬದಲಾಯಿತು. ಕನ್ನಡದಲ್ಲಿ ಬಜೆಟ್ ಎಂಬ ಪದಕ್ಕೆ `ಮುಂಗಡ ಪತ್ರ’ ಎಂದು ಕರೆಯಲಾಗುತ್ತದೆ.

ಇನ್ನು ಭಾರತದಲ್ಲಿ ಬಜೆಟ್ ಮಂಡನೆ ಶುರುವಾಗಿದ್ದು, ನೆನ್ನೆ ಮೊನ್ನೆಯಲ್ಲ!! ಬದಲಾಗಿ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಅಂದರೆ 1947, ನವೆಂಬರ್ 26ರಂದು ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಬಜೆಟ್ ಮಂಡಿಸಿದರು. ಈವರೆಗೆ ಮೊರಾರ್ಜಿ ದೇಸಾಯ್ ಅವರೇ ಅತೀ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಮೊರಾರ್ಜಿ ದೇಸಾಯ್ ಅವರು ಒಟ್ಟು 08 ಪೂರ್ಣಾವಧಿ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

ಆದರೆ ಹಣಕಾಸು ಸಚಿವರು ಬಜೆಟ್ ಮಂಡಿಸುವ ವೇಳೆ ಅವರ ಕೈಯಲ್ಲಿ ಕಡು ಕೆಂಪು ಬಣ್ಣದ ಸೂಟ್‍ಕೇಸ್ ಇದ್ದೇ ಇರುತ್ತೆ!! ಇದು ಯಾಕೆ ಗೊತ್ತೆ?

ಹೌದು… ಭಾರತದಲ್ಲಿ ಈ ಒಂದು ಸಂಪ್ರದಾಯವು 1947ರಿಂದಲೂ ಚಾಲ್ತಿಯಲ್ಲಿದ್ದು, ಮೊದಲು ಸೂಟ್ ಕೇಸಿಗೆ `ಬಜೆಟ್ ಬಾಕ್ಸ್’ ಎಂದೂ ಕರೆಯುತ್ತಿದ್ದರು. ಮೊದಲಿಗೆ ಬಜೆಟ್ ಎಂಬ ಲೆದರ್ ಬಾಕ್ಸ್ ನ್ನು ವಿಕ್ಟೋರಿಯಾ ರಾಣಿ, ಹಣಕಾಸು ಸಚಿವರಾಗಿದ್ದ ವಿಲಿಯಂ ಇವರ್ಥ್ ಗ್ಲಾಡ್‍ಸ್ಟೋನ್ ಎಂಬವರಿಗೆ ಚಿನ್ನದ ಲೇಪಿತ ಬ್ಯಾಗ್ ನೀಡಿದ್ದರು. ಮುಂದೇ ಇದೇ ಬ್ಯಾಗ್‍ನ್ನು 1860ರವರೆಗೂ ತರಲಾಗುತ್ತಿತ್ತು. ಆ ಬಳಿಕ ಇಂದಿನವರೆಗೂ ಬಜೆಟ್ ಮಂಡಿಸುವ ಮೊದಲು ಸಚಿವರು ಕಡು ಕೆಂಪು ಬಣ್ಣದ ಸೂಟ್ ಕೇಸನ್ನು ಹಿಡಿದುಕೊಂಡು ಬರುತ್ತಿದ್ದಾರೆ. ಬಜೆಟ್ ಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಈ ಸೂಟ್ ಕೇಸ್ ನಲ್ಲಿರುತ್ತವೆ.

ಸಾಮನ್ಯವಾಗಿ ಕೇಂದ್ರ ಬಜೆಟ್‍ನ್ನು ಪ್ರತಿವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತದೆ. ಆದರೆ ಈ ಬಾರಿ ಫೆಬ್ರವರಿ 01 ರಂದು ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ರೈಲ್ವೆ ಇಲಾಖೆಯಿಂದ ದೇಶಕ್ಕೆ ಹೆಚ್ಚಿನ ಆದಾಯ ಬರುವ ಕಾರಣದಿಂದ `ರೈಲ್ವೆ ಬಜೆಟ್’ ಪ್ರತ್ಯೇಕವಾಗಿ ಮಂಡಿಸಲಾಗುತ್ತದೆ!! ಆದರೆ ಪ್ರತಿವರ್ಷವೂ ಏಪ್ರಿಲ್ 1ರಿಂದ ಹೊಸ ಬಜೆಟ್ ಜಾರಿಗೆ ಬರುತ್ತದೆ ಅನ್ನೋದನ್ನು ನೆನಪಿಟ್ಟುಕೊಳ್ಳುವುದು ಅತೀ ಮುಖ್ಯ!!

ಇನ್ನು ಈ ಬಜೆಟ್ ಹೇಗಿರುತ್ತದೆ ಎಂದರೆ, ಹಿಂದಿನ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್‍ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ.

ಈ ಮುಂಗಡಪತ್ರದಲ್ಲಿ ಮೂರು ವಿಧಗಳಿವೆ.

* ಸಮತೋಲನ ಮುಂಗಡ ಪತ್ರ: ಇದರಲ್ಲಿ ಸರಕಾರದ ನಿರೀಕ್ಷಿತ ಆದಾಯವು ನಿರೀಕ್ಷಿತ ವೆಚ್ಚಕ್ಕೆ ಸಮವಾಗಿರುತ್ತದೆ.
* ಉಳಿತಾಯ ಮುಂಗಡ ಪತ್ರ: ಇದರಲ್ಲಿ ಸರಕಾರದ ಅಂದಾಜು ಆದಾಯವು ಅಂದಾಜು ವೆಚ್ಚಕ್ಕಿಂತ ಅಧಿಕವಾಗಿರುತ್ತದೆ.
* ಕೊರತೆ ಮುಂಗಡ ಪತ್ರ: ಇದರಲ್ಲಿ ಸರಕಾರದ ಅಂದಾಜು (ಸಮಗ್ರ) ಆದಾಯಕ್ಕಿಂತ ಅಂದಾಜು (ಸಮಗ್ರ) ವೆಚ್ಚವು ಅಧಿಕವಾಗಿರುತ್ತದೆ. ಆಧುನಿಕ ಆರ್ಥಿಕತೆಗಳೆಲ್ಲವೂ ಸಹ ಸುಖೀ ರಾಜ್ಯ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದರಿಂದ ಕೊರತೆ ಮುಂಗಡ ಪತ್ರವು ಜನಪ್ರಿಯವಾಗಿದೆ.

ಬಜೆಟ್‍ನ ಎರಡನೇ ಭಾಗದಲ್ಲಿ ತೆರಿಗೆ ಪ್ರಸ್ತಾಪವಾಗುತ್ತದೆ. ಹಣಕಾಸಿನ ಖರ್ಚು ಹಾಗೂ ತೆರಿಗೆ ಎರಡೂ ಕುರಿತು ಕಾಯ್ದೆಗಳು ಜಾರಿಗೆ ಬರುತ್ತವೆ. ಇಷ್ಟೆಲ್ಲಾ ಪ್ರಕ್ರಿಯೆಯನ್ನು ಒಟ್ಟಾಗಿ ಬಜೆಟ್ ಅನುಮೋದನೆ ಎಂದು ಕರೆಯುತ್ತಾರೆ. ಇನ್ನು ಈ ಬಜೆಟ್ ಮಂಡನೆಗೆ 5 ತಿಂಗಳು ಇರುವಂತೆಯೇ ಸಿದ್ಧತೆಗಳು ಆರಂಭವಾಗುತ್ತದೆ. ಸೆಪ್ಟೆಂಬರ್ ನಲ್ಲಿ ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿ ಖರ್ಚು ವೆಚ್ಚಗಳ ವಿವರ ಪಡೆದುಕೊಳ್ಳುತ್ತದೆ. ಇದರೊಂದಿಗೆ ಮುಂದಿನ ವರ್ಷದ ಹಣಕಾಸು ಲೆಕ್ಕಾಚಾರದ ಅಂದಾಜನ್ನೂ ಪಡೆದುಕೊಳ್ಳುತ್ತದೆ. ಇನ್ನು ಈ ಬಜೆಟ್‍ನ ದಿನದಂದು ಹಣಕಾಸು ಸಚಿವರು ಮೊದಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಜೆಟ್‍ಗೆ ಅವರಿಂದ ಸಹಿ ಪಡೆದುಕೊಳ್ಳುತ್ತಾರೆ.

ಬಳಿಕ ಸಂಪುಟ ಸಭೆ ನಡೆಸಲಾಗುತ್ತದೆ. ಈ ವೇಳೆ ಹಣಕಾಸು ಸಚಿವರು ಬಜೆಟ್ ನಲ್ಲಿರುವ ಅಂಶಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ. ಆದರೆ, ತೆರಿಗೆ ಪ್ರಸ್ತಾವನೆಗಳ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡದೇ, 11 ಗಂಟೆಗೆ ಬಜೆಟ್ ಮಂಡಿಸಲಾಗುತ್ತೆ. ಇದಕ್ಕೆ ಕೆಲವೇ ನಿಮಿಷಗಳಷ್ಟೇ ಬಾಕಿ ಇರುವಂತೆ ಪ್ರಧಾನಿ ಅವರು ಹಣಕಾಸು ಸಚಿವರನ್ನು ಲೋಕಸಭೆಗೆ ಕರೆತಂದು ಆಸನದಲ್ಲಿ ಕೂರಿಸುತ್ತಾರೆ. ಬಳಿಕ ಸ್ಪೀಕರ್ ಅವರಿಂದ ಅನುಮತಿ ಪಡೆದು ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಓದಲು ಆರಂಭಿಸುತ್ತಾರೆ.

ಹಲ್ವಾ ಕ್ಕೂ ಬಜೆಟ್‍ಗೂ ಬಿಡದ ನಂಟು..!

ಬಜೆಟ್ ಮಂಡನೆಗೂ ಕೆಲವು ದಿನಗಳ ಮೊದಲು ಹಲ್ವಾ ಸಮಾರಂಭದೊಂದಿಗೆ ಬಜೆಟ್ ಪ್ರತಿಗಳ ಮುದ್ರಣ ಕಾರ್ಯ ಆರಂಭವಾಗುತ್ತದೆ. ಮೊದಲಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಬಜೆಟ್ ಸಿದ್ಧಪಡಿಸುವುದು ಅತ್ಯಂತ ರಹಸ್ಯ ಕಾರ್ಯವಾಗಿದ್ದು, ಇದರಲ್ಲಿರುವ ಅಂಶಗಳು ಎಲ್ಲಿಯೂ ಸೋರಿಕೆ ಆಗದಿರಲಿ ಎಂದು ಭಾರಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆಯಲ್ಲದೇ ತೀವ್ರ ನಿಗಾದಲ್ಲಿ ಈ ಕಾರ್ಯ ನಡೆಯುತ್ತದೆ.

ಇನ್ನು ಈ ‘ಹಲ್ವಾ’ ಸಮಾರಂಭದ ಬಳಿಕ ಬಜೆಟ್ ಪ್ರತಿಗಳ ಮುದ್ರಣ ಮುಗಿದು ಸಂಸತ್ತಿನಲ್ಲಿ ಮಂಡನೆಯಾಗುವವರೆಗೆ ಈ ಕೆಲಸದಲ್ಲಿ ತೊಡಗಿದ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಹೊರ ಹೋಗುವಂತಿಲ್ಲ. ಮನೆಗಳಿಗೂ ತೆರಳುವುದು, ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗುವುದು ನಿಷಿದ್ಧ. ಅಷ್ಟೇ ಅಲ್ಲದೇ, ಬಜೆಟ್ ಗೌಪ್ಯತೆ ಕಾಯ್ದುಕೊಳ್ಳುವ ಉದ್ದೇಶದಿಂದ ಬಜೆಟ್ ಮಂಡನೆಯಾಗುವವರೆಗೂ ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಮುದ್ರಣಾಲಯವಿರುವ ನಾರ್ಥ್ ಬ್ಲಾಕ್‍ನಲ್ಲಿಯೇ ಉಳಿದಿರುತ್ತಾರೆ. ಆದರೆ ಉನ್ನತ ಅಧಿಕಾರಿಗಳು ಮಾತ್ರ ಮನೆಗೆ ಹೋಗಬಹುದಾಗಿದ್ದು, ಕುಟುಂಬದ ಸದಸ್ಯರು, ಬಂಧುಗಳು ಸ್ನೇಹಿತರು, ಆಪ್ತರು ಸೇರಿದಂತೆ ಯಾರೊಂದಿಗೂ ದೂರವಾಣಿಯಲ್ಲಿಯೂ ಮಾತನಾಡುವಂತಿಲ್ಲ. ಇ-ಮೇಲ್ ಮೂಲಕ ಕೂಡ ಸಂಪರ್ಕಿಸುವಂತಿಲ್ಲ. ಇಂಥ ಬಿಗಿಯಾದ ದಿಗ್ಬಂಧನದಲ್ಲಿ ಹಣಕಾಸು ಸಚಿವರ ಬಜೆಟ್ ಭಾಷಣ ಪ್ರತಿ ಮುದ್ರಣವಾಗುತ್ತವೆ.

ಪ್ರತಿ ವರ್ಷವೂ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಈ ಬಾರಿ ಫೆಬ್ರವರಿ 01 ರಂದು ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶದ ವಾರ್ಷಿಕ ಆದಾಯ-ವ್ಯಯ ಲೆಕ್ಕಾಚಾರವೇ ಬಜೆಟ್ ಆಗಿದ್ದು, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ವಾರ್ಷಿಕ ಆದಾಯ-ವ್ಯಯ ಸಿದ್ಧಪಡಿಸುವುದು ಸವಾಲಿನ ಕೆಲಸವೇ ಆಗಿದೆ.

ಕೃಪೆ: ಪಬ್ಲಿಕ್ ಟಿವಿ

– ಅಲೋಖಾ

Tags

Related Articles

Close