ಅಂಕಣಪ್ರಚಲಿತ

ಬೆಂಕಿ ಹಚ್ಚಲು ಹೊರಟ ಮೋಹಕ ನಟಿ ರಮ್ಯಾಗೆ ಸಿಗದ ಸ್ಪಂದನೆ!

ಇಷ್ಟು ದಿನ ಜಾತಿ,ಧರ್ಮ,ಭಾಷೆಯ ವಿಚಾರಗಳನ್ನಿಟ್ಟುಕೊಂಡು ಸಮಾಜವನ್ನು ಒಡೆದು ಮುಂದಿನ ಚುನಾವಣೆಯಲ್ಲಿ ನಮಗ್ಯಾರೂ ಸ್ಪರ್ಧಿಗಳೇ ಇಲ್ಲ ಎಂದು ಬೀಗುತ್ತಿದ್ದ ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಾಗ ಜಂಘಾಬಲವೇ ಉಡುಗಿಹೋಗಿತ್ತು. ಅಮಿತ್ ಶಾ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇಡೀ ದೇಶದಲ್ಲಿ ತನ್ನ ಪಕ್ಷ ಹರಿದು ಚಿಂದಿ ಚಿಂದಿಯಾದ ಪಂಚೆಯಂತಾಗಿತ್ತು. ತಮ್ಮ ಅಸ್ತಿತ್ವ ಉಳಿಯಬೇಕಾದರೆ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವುದೊಂದನ್ನು ಬಿಟ್ಟು ಬೇರಾವ ದಾರಿಯೂ ಇಲ್ಲ ಎನ್ನುವುದೂ ಕಾಂಗ್ರೆಸ್ ನಾಯಕರಿಗೆ ಗೊತ್ತಿತ್ತು. ಜೊತೆಗೆ ಅಮಿತ್ ಶಾ ಅವರ ನೇತೃತ್ವದಲ್ಲಿ ಎಲ್ಲಾ ಚುನಾವಣಾ ಪೂರ್ವ ಲೆಕ್ಕಾಚಾರಗಳನ್ನೂ ಸುಳ್ಳಾಗಿಸಿ ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿ.ಜೆ.ಪಿ.ಜಯಭೇರಿ ಬಾರಿಸಿದ್ದೂ ಕೂಡಾ ಕಾಂಗ್ರೆಸ್ ನಾಯಕರ ಕಣ್ಣ ಮುಂದೆಯೇ ಇತ್ತು.
ಈ ಎಲ್ಲಾ ವಿಚಾರಗಳನ್ನೂ ಕೂಲಂಕಂಕುಷವಾಗಿ ಚರ್ಚಿಸಿದ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಮಿತ್ ಷಾ ಅವರಿಗೆ ಕೆಟ್ಟ ಹೆಸರು ತಂದು ಅವರ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕರ್ನಾಟಕದಿಂದ ವಾಪಸ್ ತೆರಳುವಂತೆ ಮಾಡುವ ಷಡ್ಯಂತ್ರ ರಚಿಸಲು ತೀರ್ಮಾನಿಸಿತು. ಹಾಗೆ ಅಮಿತ್ ಷಾ ವಿರುದ್ಧ ಷಡ್ಯಂತ್ರ ರಚನೆಯ ಟೀಮ್ ನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದೇ ಯುವರಾಜ ರಾಹುಲ್ ಗಾಂಧಿಯ ನೀಲಿ ಕಣ್ಣಿನ ಹುಡುಗಿ, ಎಐಸಿಸಿ ಯ ಸಾಮಾಜಿಕ ಮಾಧ್ಯಮ ನಿರ್ವಹಣಾ ತಂಡದ ನಾಯಕಿ, ನಮ್ಮ ಕರ್ನಾಟಕದವರೇ ಆದ ಕುಮಾರಿ ರಮ್ಯಾ!
ಅಮಿತ್ ಷಾ ರಾಜ್ಯಕ್ಕೆ ಬಂದಿಳಿದಾಗಿನಿಂದಲೂ ಆ ಟೀಮ್ ಯಾವ ರೀತಿಯಲ್ಲಿ ಅವರಿಗೆ ಕೆಸರೆರಚಬಹುದು ಎನ್ನುವುದನ್ನು ಕಾಯುತ್ತಲೇ ಇತ್ತು. ಆಗ ಅವರಿಗೆ ಸಿಕ್ಕಿದ್ದೇ ಅಮಿತ್ ಶಾ ಅವರು ಆದಿಚುಂಚನಗಿರಿ ಶ್ರೀ ಗಳ ಜೊತೆಯಲ್ಲಿದ್ದಾಗ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತ ಚಿತ್ರ. ಯಾವುದೋ ಒಂದು ಕೋನದಿಂದ ತೆಗೆದ ಆ ಚಿತ್ರ ಅವರು ಸ್ವಾಮೀಜಿಗಳ ಅತ್ಯಂತ ಸಮೀಪದಲ್ಲೇ ಕುಳಿತಂತೆ ಕಾಣುತ್ತಿದ್ದುದು ಸುಳ್ಳಲ್ಲ.
ಅದೇ ಚಿತ್ರವನ್ನು ಬಳಸಿಕೊಂಡು ಇಡೀ ಸಮುದಾಯವನ್ನೇ ಎತ್ತಿಕಟ್ಟಲು ನಿರ್ಧರಿಸಿದ ರಮ್ಯಾ & ಟೀಂ ಅವರ ಪಕ್ಷವನ್ನೇ ರಾಜ್ಯದಿಂದ ಬಹಿಷ್ಕಾರ ಹಾಕಬೇಕೆನ್ನುವ ಹೇಳಿಕೆಗಳನ್ನು ಆ ಚಿತ್ರದ ಮೇಲೆ ಬರೆಸಿ ವಾಟ್ಸಾಪ್ ಮೂಲಕ ವ್ಯಾಪಕವಾಗಿ ಹರಡುವಂತೆ ನೋಡಿಕೊಂಡಿತು.ಅದೇ ಚಿತ್ರವನ್ನು ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲೂ ಶೇರ್ ಮಾಡಿಕೊಳ್ಳುವ ಮೂಲಕ ರಾಜ್ಯದ ಜನರಲ್ಲಿ ಬಿ.ಜೆ.ಪಿ.ಯ ವಿರುದ್ಧ ವ್ಯಾಪಕ ಆಕ್ರೋಶ ಹುಟ್ಟುಹಾಕುವ ಕನಸು ಕಂಡಳು ರಮ್ಯಾ.ಅದನ್ನೇ ಆಧಾರವಾಗಿಟ್ಟುಕೊಂಡು ಕೆಲವು ಕಮ್ಯುನಿಷ್ಟ್ ಪತ್ರಕರ್ತರು ಹಾಗೂ ಅನ್ಯ ಕೋಮಿನ ಪತ್ರಿಕೆಗಳು ನೇರವಾಗಿ ಜಾತಿಯ ಹೆಸರು ಹೇಳಿಯೇ ಜನರನ್ನು ಅಮಿತ್ ಶಾ ಅವರ ವಿರುದ್ಧ ರೊಚ್ಚಿಗೆಬ್ಬಿಸುವ ಕೆಲಸಕ್ಕೆ ಕೈ ಹಾಕಿಬಿಟ್ಟವು.
ಆದರೇನು ಮಾಡುವುದು..!?
ಆಕೆಯ ಮತ್ತು ಆಕೆಯ ಟೀಂ ನ ಮಹತ್ಕಾರ್ಯಗಳ ವರದಿ ಪಕ್ಷದ ಯುವರಾಜನಿಗೆ ತಲುಪುವ ಮೊದಲೇ ಪರಮ ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರು “ನಾವು ಭಕ್ತರೊಡನೆ ಇದ್ದ ಸಂದರ್ಭದಲ್ಲಿ ನಮ್ಮ ಕಛೇರಿಯಲ್ಲಿ ಶ್ರೀ ಅಮಿತ್ ಶಾರವರು ಪೂಜ್ಯ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರೊಡನೆ ವಿಚಾರ ವಿನಿಮಯದ ಚರ್ಚೆಯಲ್ಲಿದ್ದರು. ತಮ್ಮ ಅಭ್ಯಾಸದಂತೆ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಪೂಜ್ಯರೊಂದಿಗೆ ಚರ್ಚೆಯಲ್ಲಿದ್ದ ಶ್ರೀ ಅಮಿತ್ ಶಾರವರು  ನಾವು ಕಛೇರಿಯ ಒಳಗಡೆ ಪ್ರವೇಶಿಸಿದ್ದನ್ನು ಗಮನಿಸಿರಲಿಲ್ಲ. ಗಮನಿಸಿದ ಮೇಲೆ ತಮ್ಮ ಕಾಲನ್ನು ಕೆಳಗಿಳಿಸಿ ಎದ್ದು ನಮ್ಮನ್ನು ಗೌರವಿಸಿ ಮತ್ತೆ ಕುಳಿತರು.ಇದರಿಂದ ಅಮಿತ್ ಶಾರವರು ನಮಗೆ ಅಗೌರವವನ್ನು ತೋರಿಸಿದ್ದಾರೆಂದು ಯಾರೂ ಭಾವಿಸಬಾರದು.
ರಾಜಕೀಯದ ಹೊರತಾಗಿಯೂ ಶ್ರೀ ಅಮಿತ್ ಶಾರವರು ನಮ್ಮನ್ನು ಈ ಹಿಂದೆ ಹಲವು ಬಾರಿ ಭೇಟಿಯಾದಾಗಲೆಲ್ಲ ಅತ್ಯಂತ ಗೌರವಪೂರ್ವಕವಾಗಿ ಕಂಡಿದ್ದಾರೆ. ನಮ್ಮ ಆಹ್ವಾನವನ್ನು ಗೌರವಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೃತಿ ಬಿಡುಗಡೆ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟ ಶ್ರೀ ಅಮಿತ್ ಶಾರವರಿಂದ ಪೀಠಕ್ಕೆ ಅಗೌರವವಾಗಿದೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ” ಎಂದು ಅಧಿಕೃತವಾಗಿ ತಮ್ಮ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳನ್ನೂ ಒಂದೇ ಕ್ಷಣದಲ್ಲಿ ಪರಿಹರಿಸಿಬಿಟ್ಟರು!
ಸದ್ಯಕ್ಕೆ ಮೋಹಕ ತಾರೆ ರಮ್ಯಾ & ಟೀಂ ನ ಕೆಲಸ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾಗಿದೆ.ಇದನ್ನೇ ದೊಡ್ಡ ಸುದ್ದಿಯನ್ನಾಗಿಸಿ ಜಾತಿಯ ಹೆಸರಿನಲ್ಲಿ ಗಬ್ಬೆಬ್ಬಿಸಲು ಪ್ರಯತ್ನಿಸಿದ ಕಮ್ಯುನಿಷ್ಟ್ ಪತ್ರಿಕೆಗಳು ಮತ್ತು ಒಂದು ಕೋಮಿನವರ ಪತ್ರಿಕೆಗಳು ಸ್ವಾಮೀಜಿಯವರ ಸ್ಪಷ್ಟನೆಯನ್ನು ಅಚ್ಚು ಹಾಕುವ ಕನಿಷ್ಠ ಗಂಡಸ್ಥನವನ್ನೂ ತೋರಿಸಲಾಗದೇ ಇಂಗು ತಿಂದ ಮಂಗನಂತೆ ಮುಖ ಹೊತ್ತುಕೊಂಡು ‘ನನಗೇಕೋ ಸ್ವಾತಂತ್ರ್ಯದಿನವನ್ನು ಆಚರಿಸಲು ಮನಸ್ಸೇ ಬರುತ್ತಿಲ್ಲ’ ಎಂದು ಕುಯ್ಗುಡುತ್ತಾ ಮೂಲೆ ಸೇರಿ ಕೂತುಬಿಟ್ಟಿವೆ!
-ಪ್ರವೀಣ ಕುಮಾರ್
Tags

Related Articles

Close