ಪ್ರಚಲಿತ

ಮುಖ್ಯಮಂತ್ರಿಗಳೇ, ಮಹದಾಯಿ ಹೋರಾಟಕ್ಕೆ ನನ್ನ ಬೆಂಬಲವಿಲ್ಲ..! ಹೀಗೊಂದು ಬಹಿರಂಗ ಪತ್ರ ಬರೆದ ಉತ್ತರ ಕರ್ನಾಟಕದ ನಿವಾಸಿ!

ಆತ್ಮೀಯ ಮಹದಾಯಿ ಹೋರಾಟಗಾರರೇ ಹಾಗೂ ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ! ಇಷ್ಟು ದಿನ ಎಲ್ಲಿ ಅಡಗಿದ್ದಿರಿ? ನೀವು ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತೀರೋ ಒಂದೂ ಗೊತ್ತಾಗುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ಮಹದಾಯಿ ನೀರು ಹಂಚಿಕೆ ವಿವಾದದಿಂದ ಗೋವಾ ಸರಕಾರದಿಂದ ನಮಗೆ ಅನ್ಯಾಯವಾಗುತ್ತಲೇ ಇದೆ. ಆದರೆ ಇದುವರೆಗೆ ಯಾರೂ ಕೂಡಾ ಹೋರಾಟ ನಡೆಸಿರಲಿಲ್ಲ. ಆದರೆ ಯಡಿಯೂರಪ್ಪನವರು ಮಹದಾಯಿ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಹೇಳುತ್ತಿದ್ದಂತೆ ಈ ಬಂದ್ ಆಚರಣೆ ಯಾಕೆ?

ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯವನ್ನು ನಾನು ಬಹಳ ದಿನಗಳಿಂದ ಗಮನಿಸುತ್ತಲೇ ಇದ್ದೇನೆ. ಇದುವರೆಗೂ ನೀವು ಮಹದಾಯಿ ವಿಚಾರದಲ್ಲಿ ಧ್ವನಿ ಎತ್ತಿದ್ದೇ ಇಲ್ಲ. ಯಡಿಯೂರಪ್ಪನವರು ಈ ಸಮಸ್ಯೆ ನಿವಾರಿಸಲು ಮುಂದಾದಾಗ ಎಲ್ಲಿಯೋ ನಿದ್ದೆ ಮಾಡುತ್ತಿದ್ದವರು ಧಡಕ್ಕನೆ ಎದ್ದು ಬಿಜೆಪಿ ಹಾಗೂ ಕೇಂದ್ರವನ್ನು ಒಂದೇ ಸಮನೆ ಹಂಗಿಸುತ್ತಿದ್ದೀರಲ್ಲಾ? ಅಸಲಿ ಸಮಸ್ಯೆ ಏನು ಸ್ವಾಮಿ?

ಅದಕ್ಕಾಗಿಯೇ ನಾನು ನಿಮಗೆ ಇಲ್ಲಿ 20 ಪ್ರಶ್ನೆಗಳನ್ನು ಕೇಳಿದ್ದೇನೆ. ಇದಕ್ಕೆ ಪ್ರಾಮಾಣಿಕವಾದ ಉತ್ತರವನ್ನು ನೀಡುತ್ತೀರಿ ಎಂದು ನಂಬಿದ್ದೇನೆ. ಈ ಪ್ರಶ್ನೆಗೆ ಉತ್ತರವನ್ನು ಮಹದಾಯಿ ಹೋರಾಟಗಾರರೂ ನೀಡುವಿರೆಂದು ಭಾವಿಸುತ್ತಿದ್ದೇನೆ.

ನಾನ್ಯಾಕೆ ಬಂದ್‍ಗೆ ಬೆಂಬಲಿಸುತ್ತಿಲ್ಲ ಗೊತ್ತೇ?

1. ಮಹದಾಯಿ ನದಿ ನೀರು ಹಂಚಿಕೆ ವಿವಾದ ಕಳೆದ ಹಲವಾರು ದಶಕಗಳಿಂದ ಕರ್ನಾಟಕವನ್ನು ಸಮಸ್ಯೆಗೆ ತಂದೊಡ್ಡಿದೆ. ಇಷ್ಟು ದಿನ ಈ ವಿವಾದವನ್ನು ಬೆಳೆಸಿದ್ದು ಯಾಕೆ?

2. ಚುನಾವಣೆಯಾ ಸಮಯದಲ್ಲಿ ಬಿಜೆಪಿ ಮಹದಾಯಿ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ ಇಷ್ಟು ದಿನ ಏನು ಮಾಡುತ್ತಿದ್ದರು? ಇದು ಕಾಂಗ್ರೆಸಿಗರ ಪ್ರಶ್ನೆ. ಮಹದಾಯಿ ಸಮಸ್ಯೆ ನಾಲ್ಕು ದಶಕಗಳದ್ದು , ನಾಲ್ಕು ದಶಕಗಳ ಕಾಲ ಬಹುತೇಕ ಅಧಿಕಾರದಲ್ಲಿ ಇದ್ದದು ಕಾಂಗ್ರೆಸ್ ಸರ್ಕಾರ ಮತ್ತು ಜನತಾರಂಗ ಸರ್ಕಾರಗಳು. ಈ ನಾಲ್ಕು ದಶಕದ ಅವಧಿಯಲ್ಲಿ ಈ ಪಕ್ಷಗಳು ಸಮಸ್ಯೆ ಪರಿಹಾರರಕ್ಕೆ ಯಾಕೆ ಪ್ರಯತ್ನಿಸಲಿಲ್ಲ?

3. ಕಾಂಗ್ರೆಸ್‍ನವರು ಈಗ ಉರಿಯುತ್ತಿರುವ ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ಕಾಣುತ್ತದೆ. ಯಾಕೆಂದರೆ ಕಳೆದ ಬಾರಿಯ ಗೋವಾ ವಿಧಾನಸಭಾ ಚುನಾವಣೆ ಸಮಯದಲ್ಲಿ ತಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕಡೆಯಿಂದ ಯಾವುದೇ ಕಾರಣಕ್ಕೂ ಒಂದೇ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಹೇಳಿಕೆಯನ್ನು ಗೋವಾ ಬಹಿರಂಗ ಸಭೆಯಲ್ಲಿ ಕೊಡಿಸಿದ್ದರು. ಸಮಸ್ಯೆ ಇಷ್ಟೊಂದು ಬೃಹದಾಕಾರವಾಗಿ ಬೆಳೆಯಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ನನ್ನನಿಸಿಕೆ. ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ?

4. ಜೊತೆಗೆ ಅಂದು ರಾಜ್ಯದಿಂದ ದೇಶದ ಪ್ರದಾನಿಯಾಗಿದ್ದ ಎಚ್.ಡಿ. ದೇವೇಗೌಡರು ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಬಹುದಿತ್ತು ಆದರೆ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನವೇ ಹರಿಸಲಿಲ್ಲ ಯಾಕೆ?

5. ಕಳೆದ ನಾಲ್ಕೂವರೆ ವರ್ಷಗಳ ಸಿದ್ದರಾಮಯ್ಯ ನವರ ಆಡಳಿತದಲ್ಲಿ ಈ ಸಮಸ್ಯೆ ಪರಿಷ್ಕರಣೆಗೆ ಎಂದಾದರು ಪ್ರಯತ್ನಪಟ್ಟಿತೆ? ಎಷ್ಟು ಬಾರಿ ಪ್ರಧಾನಿಗಳನ್ನು ಈ ವಿಷಯಕ್ಕೆ ಸಂಭಂದಿಸಿದಂತೆ ಭೇಟಿ ಆಗಿದ್ದಾರೆ? ಎಷ್ಟು ಬಾರಿ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿ ಕೊಂಡುಹೋಗಿದ್ದಾರೆ? ವಿರೋಧ ವ್ಯಕ್ತಪಡಿಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಎಷ್ಟು ಬಾರಿ ಇವರು ಭೇಟಿ ಆಗಿ ಚರ್ಚಿಸಿ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸಿದ್ದಾರೆ?

5. ಈಗ ಯಡಿಯೂರಪ್ಪನವರು ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಮಸ್ಯೆ ಪರಿಷ್ಕರಣೆಗೆ ಮುಂದಾಗಿದ್ದಾರೆ. ಒಳ್ಳೆಯದಾಗಲಿ ಎಂದು ಕೊರುವುದನ್ನು ಬಿಟ್ಟು ಇಂತಹ ಕೊಂಕು ನುಡಿಗಳು ನಾಡಿನ ಸಮಸ್ಯೆ ಪರಿಷ್ಕರಿಸುವ ಸಮಯದಲ್ಲಿ ಅಗತ್ಯವಿದೆಯೇ?

6. ಬಿಜೆಪಿ ಮಹದಾಯಿ ವಿಚಾರನ್ನು ಇದೀಗ ತರುವುದು ರಾಜಕೀಯ ಪ್ರೇರಿತವಾದರೆ ಇಷ್ಟು ದಿನ ಕಾಂಗ್ರೆಸ್ ಆಡಳಿತ ವರ್ಗ ನೀರನ್ನು ತಾರದೇ ಇರುವುದು ರಾಜಕೀಯ ತಾನೇ?

7. ಸ್ವಾಮಿ ಸಿದ್ಧರಾಮಯ್ಯನವರೇ, ತಮಗೆ ನೈಜ ಕಾಳಜಿಯಿದ್ದರೆ, ಗೋವಾ ಕಾಂಗ್ರೆಸ್ಸಿಗರ ಬೆಂಬಲ ಪತ್ರ ತಂದಿರುತ್ತಿದ್ದಿರಿ. ಆದರೆ ಬಿಎಸ್‍ವೈ ಅವರು ಪರಿಕ್ಕರ್ ಅವರಿಂದ ಪತ್ರ ತಂದರು. ತಾವೇನು ತಂದಿರಿ? ನಿಮ್ಮ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲವೆಂದಿದ್ದೇ ನಿಮ್ಮ ಸಾಧನೆಯೇ?

8. ಮುಖ್ಯಮಂತ್ರಿಯವರೇ `ಯಡಿಯೂರಪ್ಪನವರಿಗೆ ಜನತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕುಡಿಯುವ ನೀರಿನ ಉದ್ದೇಶಕ್ಕೆ 7.52 ಟಿಎಂಸಿ ನೀರು ಕೊಡಲು ಒಪ್ಪಿದ್ದೇವೆ ಎಂದು ಮನೋಹರ್ ಪರಿಕ್ಕರ್ ಅವರಿಂದ ಅಫಿಡವಿಟ್ ಬರೆಸಿ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಲಿ ಅದನ್ನು ಬಿಟ್ಟು ಯಡಿಯೂರಪ್ಪ ಅವರು ಜನತೆಯ ಮುಂದೆ ಬೇಜಾವಬ್ದಾರಿ ಮಾತುಗಳನ್ನು ಆಡುವುದು ಸರಿಯಲ್ಲ..’ ಅಂದಿರಿ. ನಿಜವಾಗಿಯೂ ಈ ಕೆಲಸ ಮಾಡಬೇಕಾಗಿರುವುದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಿಮ್ಮ ಕೆಲಸ ತಾನೇ?

9. ಪ್ರತಿಭಟನಾಕಾರರೇ! ಸಾಹಿತಿಗಳ ಕೂಲೆ ಆಗಿ ಸತ್ತರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೀರಿ. ಕಾವೇರಿ ಗಲಾಟೆ ಆದರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೀರಿ. ಲಿಂಗಾಯತ ಮೀಸಲಾತಿಗೂ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೀರಿ. ಮಹದಾಯಿ ನಿರು ಕೂಡಿಸೋಕೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೀರಿ. ಹಾಗಾದರೆ ಮಹದಾಯಿ ವಿಚಾರವಾಗಿ ನಡೆಯುವ ಪ್ರತಿಭಟನೆಯೂ ರಾಜಕೀಯ ಪ್ರೇರಿತವಲ್ಲವೇ? ನಿಜವಾಗಿಯೂ ಯಾರ ವಿರುದ್ಧ ಪ್ರತಿಭಟನೆ ನಡೆಸಬೇಕಿತ್ತು?

10. ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಗೋವಾ ಬಿಜೆಪಿಯವರನ್ನು ಒಪ್ಪಿಸಿಯಾಗಿದೆ. ಹಾಗಾದರೆ ಕರ್ನಾಟಕದ ಕಾಂಗ್ರೆಸಿಗರ ಕೆಲಸವೇನಿರಬೇಕಿತ್ತು? ನಿಜವಾಗ್ಲೂ ನಿಮಗೆ ಕಾಳಜಿ ಇದ್ದಲ್ಲಿ ಗೋವಾ ಕಾಂಗ್ರೆಸ್‍ನವರನ್ನು ಒಪ್ಪಿಸುವುದು ನಿಮ್ಮ ಕೆಲಸವಾಗಬೇಕಿತ್ತಲ್ಲವೇ ನೀವ್ಯಾಕೆ ಒಪ್ಪಿಸಲಿಲ್ಲ? ಇದನ್ನು ಅರ್ಥ ಮಾಡಿಕೊಳ್ಳದ ಮಹದಾಯಿ ಹೋರಾಟಗಾರರು ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಅವಶ್ಯಕತೆ ಏನಿತ್ತು? ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಿತ್ತಲ್ಲವೇ?

11. ಬಿಜೆಪಿ ಡ್ರಾಮಾ ಮಾಡಿ ರಾಜಕೀಯ ಲಾಭ ಪಡೆಯುತ್ತದೆ ಎನ್ನುತ್ತಿರುವ ಕಾಂಗ್ರೆಸಿಗರೇ ಪರಿಕ್ಕರ್ ಅವರು ಕುಡಿಯುವ ನೀರು ಬಿಡಲು ಒಪ್ಪಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕಾಂಗ್ರೆಸಿಗರು ಕರ್ನಾಟಕದ ಹಿತದ ದೃಷ್ಟಿಯಿಂದ ಬಿಜೆಪಿ ಜೊತೆ ಸೇರಿ ಜಂಟಿಯಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಿತ್ತಲ್ವಾ? ಈ ವಿವಾದವನ್ನು ಬೆಳೆಸುವ ಉದ್ದೇಶವೇನು?

12. ಮಹದಾಯಿ ಸಮಸ್ಯೆ ಸುಲಭವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜನರನ್ನು ಪ್ರತಿಭಟನೆ ನಡೆಸುವಂತೆ ಕಾಂಗ್ರೆಸಿಗರು ಪ್ರೇರೇಪಿಸಿದ್ದು ಯಾಕೆ?

13. ಮಹದಾಯಿ ಯೋಜನೆಗೆ ಗೋವಾ ಕಾಂಗ್ರೆಸ್ ವಿರೋಧಿಸುತ್ತಿದೆ. ಅವರನ್ನು ಒಪ್ಪಿಸುವ ಕೆಲಸ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಕೆಲಸವಾಗಬೇಕಿತ್ತು. ಆದರೆ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್‍ಗೂ ನಮಗೂ ಸಂಬಂಧವಿಲ್ಲ. ಬಿಜೆಪಿಯವರು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸುವುದಾಗಿ ಹೇಳಿದ್ದರಿ ಅವರು ಒಪ್ಪಿಸಲಿ. ಆಗದಿದ್ದರೆ ನಮಗೆ ಸಂಬಂಧ ಇಲ್ಲ ಎಂದು ಸುಮ್ಮನಿರಬೇಕಿತ್ತು ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದು ಯಾಕೆ?

14. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಳೇ ,ಯಡಿಯೂರಪ್ಪ ರಕ್ತ ಕೊಟ್ಟಾದರೂ ತರಲಿ ಮಾತುಕತೆಯ ಮೂಲಕವಾದರೂ ತರಲಿ ಒಟ್ಟಿನಲ್ಲಿ ಜನರಿಗೆ ಕುಡೊಯೋಕೆ ನೀರು ಸಿಗಲಿ ,ನಾಳೇನೇ ಸಿಗದೆ ಹೋದ್ರೆ ಮೇ ತಿಂಗಳಲ್ಲಿ ಸಿಗಲಿ, ಸಿದ್ದರಾಮಯ್ಯನವರಿಗೆ ಪತ್ರ ಬರೆದಿಲ್ಲವೋ ಯಡಿಯೂರಪ್ಪನವರಿಗೆ ಬರೆದಿದ್ದಾರೋ ಒಟ್ಟಿನಲ್ಲಿ ಕುಡಿಯಲು ನೀರು ಬಿಡ್ತೀವಿ ಅಂತ ಹೇಳಿದ್ದಾರಲ್ಲ ,ನಿಮಗೇನು ಸಮಸ್ಯೆ ಏನು ಸ್ವಾಮಿ? ಸಿದ್ದರಾಮಯ್ಯ ಅವರು ಯಾರು ಅಂತ ಮನೋಹರ್ ಪರಿಕ್ಕರ್ ಹೇಳಿಲ್ಲ. ಬಿಜೆಪಿ ನಾಯಕರ ಸತತ ಪ್ರಯತ್ನದಿಂದ ಅಷ್ಟಾದರೂ ಒಪ್ಪಿಕೊಂಡಿದ್ದಾರೆ ನಿಮಗೇನು ಅಡ್ಡಿ?

15. ಗೋವಾ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವುದು ಸಿದ್ದರಾಮಯ್ಯನವರಿಗೆ ತುಂಬಾ ಸಂಕಟವಾಗುತ್ತಿರುವಂತೆ ಕಾಣುತ್ತಿದೆ. ಇಲ್ಲದೇ ಹೋದರೆ ಇಷ್ಟೊಂದು ಧಿಮಾಕಿನಿಂದ ಮಾತಾಡುತ್ತಿರಲಿಲ್ಲ. ಗೋವಾ ಸಿಎಂಗೆ ಪತ್ರ ಬರೆಯುತ್ತೇನೆ, ಮಾತುಕತೆಗೆ ದಿನ ಇಡಲಿ, ನನ್ನನ್ನು ಮಾತುಕತೆಗೆ ಆಹ್ವಾನಿಸಲು ಎಂದು ಸಿದ್ದು ಹೇಳಿದ್ದು ಯಾಕೆ? ಕರ್ನಾಟಕಕ್ಕೆ ನೀರು ಬೇಕಿರುವಾಗ ನೀವೇ ಮಾತುಕತೆ ನಡೆಸುವಂತೆ ಪತ್ರಬರೆಯಬೇಕಿತ್ತಲ್ಲವೇ ಸಿದ್ದು? ಯಾಕೆ ಬರೆಯಲಿಲ್ಲ. ಇದೀಗ ಯಡಿಯೂರಪ್ಪ ಸಮಸ್ಯೆ ಬಗೆಹರಿಸಲು ಮುಂದಾದಾಗ ಕ್ರೆಡಿಟ್ ಹಾಗೂ ಓಟು ಬಿಜೆಪಿಗೆ ಹೋಗುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಸಂಕಟ ಪಡುತ್ತಿದ್ದೀರಾ?

16. 2006ರಿಂದ ರೈತರಿಗೆ ಟೋಪಿ ಹಾಕುತ್ತ ಬಂದಿರುವುದು ಯಾರು? ಎಪ್ರಿಲ್ 4 ,2006ರಲ್ಲಿ ,ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ವಿಫಲವಾಗುವಂತೆ ನೋಡಿಕೊಂಡಿದ್ದು ಅಂದಿನ ಕಾಂಗ್ರೆಸ್ ಪಕ್ಷ ಎನ್ನುವುದು ಗೊತ್ತಿಲ್ಲವೆಂದುಕೊಂಡಿರಾ? ಯಾಕೆಂದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರಕಾರವಿದ್ದಾಗ ತಾರತುರಿಯಲ್ಲಿ ಸುಪ್ರೀಂ ಕೋರ್ಟ್‍ಗೆ ಹೋಗಿದ್ದು ಕಾಂಗ್ರೆಸ್ ಅಲ್ಲವೇ?2007 ರಲ್ಲಿ ಕರ್ನಾಟಕಕ್ಕೆ ಒಂದು ಹನಿ ಕುಡಿಯಲು ನೀರು ಬಿಡಲ್ಲವೆಂದು ಕರ್ನಾಟಕದ ಜನತೆಗೆ ಟೋಪಿ ಹಾಕಿದ್ದು ಸೋನಿಯಾ ಗಾಂಧಿಯಲ್ಲವೇ?

17. ಕರ್ನಾಟಕ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆ ಸಮಸ್ಯೆಯನ್ನು ಬಗೆಹರಿಸಲು ಅಂದಿನ ಪ್ರಧಾನಿ ಮುಂದಾಗಿಲ್ಲ ಯಾಕೆ? ಈಗ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ ಎನ್ನುವುದು ಯಾಕೆ? ಅಷ್ಟಕ್ಕೂ ನೀರು ಬಿಡಲು ಪರಿಕ್ಕರ್ ಒಪ್ಪಿದ್ದಾರೆ ಎನ್ನುವುದು ಯಾಕೆ ಮರೆತಿದ್ದಾರೆ? ಇದೀಗ ಗೋವಾ ಕಾಂಗ್ರೆಸಿಗರು ಬೀದಿಗಿಳಿದಿದ್ದಾರೆ ಎನ್ನುವುದನ್ನು ನೋಡಿದಾಗ ಅಲ್ಲಿನ ಕಾಂಗ್ರೆಸಿಗರ ಮನವೊಲಿಸುವುದು ಕಾಂಗ್ರೆಸಿಗರ ಕರ್ತವ್ಯವಾಗಿರಬೇಕಿತ್ತು. ಆದರೆ ಯಾಕೆ ಈ ಕೆಲಸ ಮಾಡಿಲ್ಲ?

18. 2002ರಲ್ಲಿ ಗೋವಾ ಸರ್ಕಾರ ಮಹದಾಯಿ ಯೋಜನೆಯನ್ನು ಪ್ರಶ್ನಿಸಿ ದೂರು ದಾಖಲಿಸಿದ್ದರು. ಆದರೆ ಇದಕ್ಕೆ ಒಪ್ಪಿಗೆ ಕೊಟ್ಟಿದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಸರಕಾರ. ಈ ಯೋಜನೆಯನ್ನು ಪ್ರಶ್ನಿಸಿ 2006ರಲ್ಲಿ ಗೋವಾ ಸರ್ಕಾರ ಸುಪ್ರೀಂ ಕೊರ್ಟ್‍ಗೆ ಹೋಗಿತ್ತು. ಆದರೆ ಇತ್ತ ಯಡಿಯುರಪ್ಪನವರು ಯೋಜನೆಗೆ ಶಿಲಾನ್ಯಾಸ ಮಾಡಿ 100 ಕೋಟಿ ಹಣ ಮಂಜೂರು ಮಾಡಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಯಾಕೆ ಮರೆತಿದ್ದಾರೆ?

19. 2013ರಿಂದ 2014ರವರೆಗೆ ರಾಜ್ಯ ಹಾಗು ಕೇಂದ್ರದಲ್ಲಿ ಎರಡರಲ್ಲೂ ಕಾಂಗ್ರೇಸ್ ಸರ್ಕಾರವೆ ಇದ್ದಿದ್ದು ಎಂದು ಕರ್ನಾಟಕದ ಜನತೆಗೆ ಮರೆತುಹೋಗಿಲ್ಲ. ಯಾಕೆಂದರೆ ಆಗ ಸಿದ್ದರಾಮಯ್ಯನವರೆ ಮುಖ್ಯಮಂತ್ರಿ ಆಗಿದ್ದರು. ಆಗ 12 ತಿಂಗಳು ಅಧಿಕಾರದ ಮತ್ತಿನಲ್ಲಿದ್ದ ಕಾಂಗ್ರೆಸ್ ಈ ಸಮಸ್ಯೆಯನ್ನು ನಿವಾರಿಸುವುದು ಬಿಟ್ಟು ಗಡದ್ದು ನಿದ್ದೆ ಮಾಡಿದ್ದು ಯಾಕೆ? ಇದೀಗ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನ ಪಡದೆ ಸುಮ್ಮನೆ ಮೋದಿಯನ್ನು ಎಳೆದು ತರುವುದು ಎಷ್ಟು ಸರಿ?

20. ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ ರಾಜಕೀಯ ದಾಳವಾಗಿ ಮಹದಾಯಿ ವಿವಾದ ಉಪಯೋಗಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನ ಕಾಂಗ್ರೇಸ್ ಸರ್ಕಾರ ಮುಂದೆ ಖಂಡಿತಾ ಅಧಿಕಾರ ಕಳೆದುಕೊಳ್ಳುತ್ತದೆ. ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತಾ ಈ ಸಮಸ್ಯೆ ಪರಿಹಾರವಾಗುತ್ತದೆ. ಯಾಕೆಂದರೆ ಮಹದಾಯಿ ಯೋಜನೆ ಆರಂಭಿಸಿದ್ದು ಯಡಿಯೂರಪ್ಪ. ಅಲ್ಲದೆ ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರಕಾರವಿದೆ. ಇದರಿಂದ ಆಶಾಭಾವನೆ ಮೂಡಿದೆ. ಅದು ಬಿಟ್ಟು ಈ ಸಮಸ್ಯೆಯನ್ನು ದೊಡ್ಡದೊಂದು ವಿವಾದವನ್ನಾಗಿ ಮಾಡಿದ್ದು ಯಾರು ಎಂದು ಕರ್ನಾಟಕದ ಜನತೆ ಅರ್ಥ ಮಾಡಿಕೊಂಡಿದ್ದಾರೆ.

ಹೋರಾಟದ ಹೆಸರಲ್ಲಿ ರಾಜಕೀಯ ನುಸುಳಿರುವುದನ್ನು ಕಂಡೇ ನಾನು ಈ ಬಂದ್‍ಗೆ ಬೆಂಬಲಿಸುತ್ತಿಲ್ಲ. ಒಂದು ವೇಳೆ ಕರ್ನಾಟಕದ ಹಿತದೃಷ್ಟಿಯಿಂದ ಇಡೀ
ಕರ್ನಾಟಕವನ್ನೇ ಜೊತೆಯಾಗಿ ಕರೆದುಕೊಂಡು ಹೋಗುವ ತಾಖತ್ ಇದ್ದಿದ್ದರೆ ನಾನೂ ಕೂಡಾ ಬಂದ್‍ಗೆ ಸರಿಯಾದ ಬೆಂಬಲ ಕೊಡುತ್ತಿದ್ದೆ. ಆದರೆ ರಾಜಕೀಯ ಹಿತಾಸಕ್ತಿಗಾಗಿ ಈ ಸಮಸ್ಯೆಯನ್ನು ರಾಜಕೀಯಗೊಳಿಸಿ ಜನರನ್ನು ಉದ್ರೇಕಗೊಳಿಸುವುದನ್ನು ಕಂಡಾಗ ಈ ಬಂದ್‍ಗೆ ಬೆಂಬಲ ಸೂಚಿಸುವುದಕ್ಕೆ ನನಗೆ ಮನಸ್ಸಿಲ್ಲ. ಕರ್ನಾಟಕದ ಜನತೆಗೆ ನೀರು ತರಲು ನಿಮಗೆ ನಿಜವಾದ ಕಾಳಜಿ ಇದ್ದಿದ್ದರೆ ನಾನೂ ಕೂಡಾ ಬಂದ್‍ಗೆ ಬಹಿರಂಗ ಬೆಂಬಲಿಸುತ್ತಿದ್ದೆ. ಬಂದ್ ಮಾಡುವುದಾದರೇ ಮಾಡಿ, ನಿಮ್ಮಿಷ್ಟ. ಆದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ. ಬಂದ್ ಹೆಸರಲ್ಲಿ ಅಮಾಯಕರ ರಕ್ತ ಹರಿಯುವುದು ಬೇಡ.

ಧನ್ಯವಾದಗಳು….

ಯೋಗೇಶ್ ಎಂ. ಪಾಟೀಲ,

ಹುಬ್ಬಳ್ಳಿ

Tags

Related Articles

Close