ಪ್ರಚಲಿತ

ಸಮರ್ಥ ರಾಮದಾಸರು ಯೋಗಮಗ್ನರಾಗಿದ್ದರೆ ಶಿವಾಜಿ ಮಹಾರಾಜರು ರಹಸ್ಯ ಕೋಟೆ ಕಟ್ಟುತ್ತಿದ್ದರು… ಕೆಲವೇ ದಿನಗಳಲ್ಲಿ ಹಿಂದಾವೀ ಸಾಮ್ರಾಜ್ಯವೊಂದು ಸ್ಥಾಪನೆಯಾಗುವುದರ ಅರಿವಾದರೂ ಕೋಟೆಯಲ್ಲೊಂದು ಲೋಪ ಕಂಡುಹಿಡಿದರು ರಾಮದಾಸರು !!!

ಮಧ್ಯಯುಗದ ಭಾರತದ ಇತಿಹಾಸದಲ್ಲಿ ಮುಸಲ್ಮ್ಮಾನರ ಆಕ್ರಮಣವಾಗುವುದರೊಂದಿಗೆ ಮತಾಂಧತೆ, ಮತಾಂತರ, ದೇವಾಲಯಗಳ ನಾಶ, ಸ್ತ್ರೀಯರ ಮೇಲಿನ ದೌರ್ಜನ್ಯ ಇತ್ಯಾದಿಗಳು ಮೆರೆದಾಡಿದಾಗ, ಹಿಂದೂಗಳ ಅಸ್ತಿತ್ವಕ್ಕೇ ಹಾನಿಯಾಯಿತು. ಆ ನಿರ್ಣಾಯಕ ದಿನಗಳಲ್ಲಿ ಹಿಂದೂ ಸಾಮ್ರಾಜ್ಯವೊಂದು ಮರಾಠಾ ನಾಯಕತ್ವದಲ್ಲಿ ತಲೆಯೆತ್ತಿತು. ಅದರ ನಾಯಕತ್ವ ವಹಿಸಿದವನೇ ಛತ್ರಪತಿ ಶಿವಾಜಿ (1627-1680) ಮತ್ತು ಅವನ ಆಧ್ಯಾತ್ಮ ಗುರುವೇ ಸಮರ್ಥ ರಾಮದಾಸರು (1608-1681). ಪುರಾಣ ಪುರುಷರ ಆದರ್ಶವನ್ನು ಮೈಗೂಡಿಸಿಕೊಂಡಿದ್ದ ಶಿವಾಜಿಗೆ ದೊರೆತ ಧಾರ್ಮಿಕ ಮಾರ್ಗದರ್ಶನ ಅವರ ಜೀವನದ ಹೊಸ ಅಧ್ಯಾಯ ತೆರೆಯಿತು. ಅಸಂಘಟಿತ, ಚದುರಿಹೋಗಿದ್ದ ಮರಾಠರನ್ನು ಒಂದುಗೂಡಿಸುವುದು, ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸುವುದು, ಸರ್ವಧರ್ಮ ಸಹಿಷ್ಣುತೆಯ ಧಾರ್ಮಿಕ ತಳಹದಿಯಲ್ಲಿ ರಾಜ್ಯಭಾರ ಮಾಡುವುದು, ಗೋಬ್ರಾಹ್ಮಣ ಹಿತರಕ್ಷಣೆ, ಹಾಗೂ ದುಷ್ಟನಿಗ್ರಹ-ಶಿಷ್ಟ ಪರಿಪಾಲನೆಯ ಮಹಾನ್ ಆದರ್ಶಗಳನ್ನು ಕಾರ್ಯಗತಗೊಳಿಸುವುದು ಶಿವಾಜಿಯ ಶಪಥವಾಗಿತ್ತು.

ಶಿವಾಜಿ, ತನ್ನ 19ನೇ ವರ್ಷದಲ್ಲಿ ಹೋರಾಟಕ್ಕೆ ಪ್ರಾರಂಭಿಸಿದ. 1646ರಲ್ಲಿ ಬಿಜಾಪುರ ಸುಲ್ತಾನನ ಅಧೀನವಿದ್ದ ತೋರ್ಣಾ ಕೋಟೆಯನ್ನು ವಶಪಡಿಸಿಕೊಂಡ. ಅದರೊಂದಿಗೆ ಪ್ರಾರಂಭವಾದವು ಶಿವಾಜಿಯ ದಾಳಿಗಳು, ಯುದ್ಧಗಳು ಮತ್ತು ರಕ್ಷಣಾ ಹೋರಾಟಗಳು. ಸಮರ್ಥ ರಾಮದಾಸರು ಅವನಿಗೆ ಬೋಧಿಸಿದ `ಗುರುಮಂತ್ರ’ ವೇ `ಹಿಂದು ಸಾಮ್ರಾಜ್ಯ ಸ್ಥಾಪನೆ’. ಅದಕ್ಕಾಗಿ ಮಾವಳಿಗಳಿಗೆ ಸೈನಿಕ ತರಬೇತಿ ನೀಡಿ ಪ್ರಬಲವಾದ ಸೈನ್ಯ ಕಟ್ಟುವ, ಕೋಟೆಗಳನ್ನು ನಿರ್ಮಿಸುವ ಧ್ಯೇಯ ಶಿವಾಜಿಯದಾಗಿತ್ತು.
* ಅವನ ವಿಸ್ತರಣಾ ನೀತಿಯನ್ನು ಅನುಸರಿಸಲು ಸಂಪನ್ಮೂಲಗಳ ಅವಶ್ಯಕತೆಯಿತ್ತು.
* ಶಿವಾಜಿಯ ಹೋರಾಟಕ್ಕೆ, ದಾಳಿಗಳಿಗೆ ಮತ್ತು ಸಾಮ್ರಾಜ್ಯ ಹೋರಾಟ ನೀಡಲು ಹಠಾತ್ ಧಾಳಿಮಾಡಲು, ಅಸಾಂಪ್ರದಾಯಕ ಹೋರಾಟ ನೀಡಲು ಹೊಸ ರಣತಂತ್ರವನ್ನು ರೂಪಿಸಬೇಕಿತ್ತು.
* ಹೋರಾಟಕ್ಕೆ ಯುದ್ಧ ಸಾಮಗ್ರಿಗಳ, ಶಸ್ತ್ರಾಸ್ತ್ರಗಳ, ಕುದುರೆಗಳ, ಸರಕು ಸಾಗಾಟದ ಗಾಡಿಗಳ ಇತ್ಯಾದಿಗಳ ಅಗತ್ಯವಿತ್ತು.
*ಸ್ವಹಿತ ರಕ್ಷಣೆಗಾಗಿ ಮತ್ತು ಭದ್ರತೆಗಾಗಿ ಕೋಟೆ-ಕೊತ್ತಲಗಳೂ ಅನಿವಾರ್ಯವಾಗಿದ್ದವು.

ಆ ಒಂದು ಸಂದರ್ಭದಲ್ಲಿ, ಕೋಟೆಯೊಂದರ ನಿರ್ಮಾಣ ಕಾರ್ಯದಲ್ಲಿ ಶಿವಾಜಿ ಎಡೆಬಿಡದ ದುಡಿತದಲ್ಲಿ ನಿರತನಾಗಿದ್ದ. ಅದನ್ನು ಮರಾಠಿಗರು ಕಥಾರೂಪದಲ್ಲಿ ಮೌಖಿಕ ಸಾಹಿತ್ಯವಾಗಿ ಬಳಸಿಕೊಂಡರು. ಕೋಟೆಯ ನಿರ್ಮಾಣದಲ್ಲಿ ಕಾರ್ಯಕ್ಕಾಗಿ ಕಲ್ಲುಗುಟ್ಟಿಗರು ಕಲ್ಲುಗಳನ್ನು ಬೇಕಾದ ಗಾತ್ರದಲ್ಲಿ ತುಂಡುಮಾಡುತ್ತಿದ್ದರೆ, ಕೆಲವರು ಅವುಗಳನ್ನು ಬೇಕಾದಲ್ಲಿಗೆ ಸಾಗಿಸುತ್ತಿದ್ದರು. ಆ ಕಲ್ಲುಗಳನ್ನು ಕೋಟೆಯ ಅಡಿಪಾಯದಿಂದಲೇ ಒಂದಕ್ಕೊಂದು ಹೊಂದುವಂತೆ ಕಟ್ಟಬೇಕಿತ್ತು. ಅದಕ್ಕೆ ಬೇಕಾದ ಚಮ್ಮಟ, ಸುತ್ತಿಗೆ, ಹಾರೆ, ಗುದ್ದಲಿ ಇತ್ಯಾದಿ ಕಬ್ಬಿಣದ ಸಲಕರಣೆಗಳನ್ನು ಕಮ್ಮಾರರು ಅಲ್ಲೇ ಮಾಡುತ್ತಿದ್ದರು.

ಮರಗೆಲಸದವರು ಗರಗಸದಿಂದ ಮರಗಳನ್ನು ತುಂಡರಿಸಿ, ಬೇಕಾದ ಮರದ ಸಾಮಗ್ರಿಗಳನ್ನು ತಯಾರಿಸುತ್ತಿದ್ದರು. ಹಾಗೆಯೇ, ವಿವಿಧ ವರ್ಗದ ಕೆಲಸಗಾರರು ಅವರವರ ಕೌಶಲ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದರು. ಕೋಟೆಯ ಸುತ್ತಲೂ ಕಂದಕ ನಿರ್ಮಿಸಿ, `ಎಳೆಸೇತು’ವನ್ನು ವ್ಯವಸ್ಥಿತಗೊಳಿಸಲಾಗಿತ್ತು. ವೈರಿಗಳ ಮೇಲೆ ಕೋಟೆಯ ಮೇಲಿಂದ ದಾಳಿ ಮಾಡುವ ವ್ಯವಸ್ಥೆಯನ್ನೂ ಮಾಡುತ್ತಿದ್ದರು. ಕೋಟೆಯ ಒಳಗೆ ನೀರಿನ ವ್ಯವಸ್ಥೆ, ಆಹಾರ ದಾಸ್ತಾನು ಕೊಠಡಿ, ಸೈನಿಕರ ತಂಗುದಾಣ, ಶಸ್ತ್ರಾಗಾರ, ಇತ್ಯಾದಿಗಳನ್ನು ನಿರ್ಮಿಸುತ್ತಿದ್ದರು. ಕೋಟೆಯ ಒಳಗಿಂದ ಗುಪ್ತ ಸುರಂಗವನ್ನು ನಿರ್ಮಿಸಬೇಕಾಗಿತ್ತು. ಇಂತಹ ಕಾರ್ಯಗಳ ಮೇಲ್ವಿಚಾರಣೆಯನ್ನು ನೋಡುತ್ತಾ, ಕೆಲಸ ಮಾಡುತ್ತಾ ಇತರ ಎಲ್ಲಾ ಕಾರ್ಯಗಳಿಗಿಂತ ಅವುಗಳಿಗೇ ಹೆಚ್ಚಿನ ಲಕ್ಷ್ಯ ಮತ್ತು ಪ್ರಾಮುಖ್ಯ ನೀಡಿದ ಶಿವಾಜಿ. ಆ ಕಾರ್ಯಗಳಲ್ಲದೆ ಬೇರೆಡೆಗೆ ಗಮನಹರಿಸಲು ಶಿವಾಜಿಗೆ ಸಾಧ್ಯವಾಗಲಿಲ್ಲ.

ಶಿವಾಜಿ ಆಗಾಗ ಗುರು ರಾಮದಾಸರ ಭೇಟಿಗಾಗಿ ಹೋಗುತ್ತಿದ್ದ. ಈ ಕೆಲಸಾವಳಿಗಳ ಮಧ್ಯೆ, ಅನೇಕ ದಿನಗಳಿಂದ ಶಿವಾಜಿ ಗುರು ರಾಮದಾಸರ ಭೇಟಿಗೆ ಹೋಗಲೇ ಇಲ್ಲ. ಯಾವಾಗಲೂ ಸಮಾಲೋಚನೆ ಮಾಡಲು ಮತ್ತು ಮುಂದಿನ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅವರಿಬ್ಬರೂ ಗಾಢವಾದ ಗುಪ್ತಾಲೋಚನೆ ಮಾಡುತ್ತಿದ್ದರು. ಶಿವಾಜಿ ಇಂದು ಬಂದಾನು, ಇಂದು ಬಂದಾನು, ಎಂದು ಕಾಯುತ್ತಿದ್ದ ಗುರುಗಳಿಗೆ ಅವನು ಆ ದಿನಗಳಲ್ಲಿ ಬಾರದಿದ್ದುದು ಆಶ್ಚರ್ಯವೇ ಅಗಿತ್ತು.!! ಆದರೆ, ಅವರ ಯೋಗ ದೃಷ್ಟಿಗೆ ಶಿವಾಜಿ ಕರ್ತವ್ಯನಿಷ್ಠನಾಗಿರುವುದೇ ಕಂಡುಬಂತು. ಶಿವಾಜಿಯಾದರೋ, ಕೋಟೆಯ ನಿರ್ಮಾಣ ಕಾರ್ಯದಲ್ಲಿ ಮಗ್ನನಾಗಿದ್ದುದರಿಂದಾಗಿ ಗುರುಗಳ ಭೇಟಿಗೆ ಹೋಗಲೇ ಇಲ್ಲ. `ಇನ್ನೇನು, ನಾಳೆ ಹೋದರಾಯಿತು’ ಎಂದೇ ದಿನ ಕಳೆದ! ಮನದಲ್ಲೇ ಗುರುಗಳನ್ನು ಪ್ರತಿಷ್ಟಾಪನೆ ಮಾಡಿದ್ದ ಶಿವಾಜಿಗೆ `ಗುರುದರ್ಶನ’ ಮಾನಸ ಪೂಜೆಯಲ್ಲಾಗುತ್ತಿತ್ತು.

ಆ ಮಧ್ಯೆ, ಗುರು ರಾಮದಾಸರು ಶಿವಾಜಿಯಿದ್ದಲ್ಲಿಗೆ ಬಂದೇಬಿಟ್ಟರು! ದೂರದಿಂದಲೇ ಗುರುಗಳು ಬರುವಿಕೆಯನ್ನು ಕಂಡ ಶಿವಾಜಿ ಕೋಟೆಯ ಮೇಲಿಂದ ಲಗುಬಗೆಯಿಂದ ಓಡಿ ಬಂದು ಎಂದಿನಂತೆ ರಾಮದಾಸರ ಕಾಲಿಗೆರಗಿದ. ಗುರುಗಳು ಅವನ ತಲೆಮುಟ್ಟಿ ಆಶೀರ್ವಾದ ಮಾಡಿದರು. ಶಿವಾಜಿ ಗುರುಗಳನ್ನು ಅವನು ನಿರ್ಮಿಸುತ್ತಿದ್ದ ಕೋಟೆಯ ದರ್ಶನಕ್ಕೆ ಬರಬೇಕೆಂದು ಬೇಡಿಕೊಂಡಾಗ ಅವರು ಅದಕ್ಕೆ ಸಮ್ಮತಿಸಿದರು. ಬೆಟ್ಟವನ್ನೇರುತ್ತಾ ಗುರುಗಳ ದಾರಿಗೆ ಅಡ್ಡವಾದ ಕಲ್ಲು-ಮುಳ್ಳುಗಳನ್ನು ಸರಿಸುತ್ತಾ ಶಿವಾಜಿ ಅವರೊಡನೆ ಕೋಟೆಯ ದ್ವಾರ ತಲುಪಿದ. ಶಿವಾಜಿ ಅಲ್ಲಿಂದಲೇ ಕೋಟೆಯ ಪ್ರತಿಯೊಂದು ಭಾಗವನ್ನೂ ತೋರಿಸುತ್ತಾ ವಿವರಣೆ ನೀಡುತ್ತಿದ್ದ. “ಇಲ್ಲಿ ಎಲ್ಲಾ ಕೆಲಸಗಳನ್ನು ನಾನು ವ್ಯವಸ್ಥಿತವಾಗಿ ಮಾಡುತ್ತೇನೆ. ಎಲ್ಲರೂ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಅವರಿಗೆ ಬೇಕಾದಷ್ಟು ಹಣ ನಾನು ನೀಡುತ್ತೇನೆ. ನಾನೇ ಈ ಕೋಟೆಯ ನಿರ್ಮಾಣದ ಮೇಲ್ವಿಚಾರಣೆಯನ್ನು ಮಾಡುತ್ತೇನೆ. ಎಲ್ಲಾ ಕೆಲಸಗಳೂ ನನ್ನ ಅಪ್ಪಣೆಯಂತೆಯೇ ಅಗುತ್ತಿದೆ. ನಾನು ಈ ಕೆಲಸಗಾರರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ”.

ಹೀಗೆ ಹೇಳುತ್ತಾ ಶಿವಾಜಿ ಕೋಟೆಯನ್ನೆಲ್ಲಾ ತೋರಿಸಿ, ಗುರುಗಳ ಅಭಿಪ್ರಾಯ ಕೇಳಿದಾಗ, “ನನಗೆ ಅಚ್ಚರಿಯಾಗುತ್ತಿದೆ” ಎಂದರು. ಅದನ್ನು ಕೇಳಿದ ಶಿವಾಜಿಗೆ ಮತ್ತಷ್ಟು ಹೆಮ್ಮೆಯಾಯಿತು. “ಹೌದು, ನನ್ನ ಈ ಅವಿಶ್ರಾಂತ ಕೆಲಸದಿಂದಾಗಿ ಇಂತಹ ಆಶ್ಚರ್ಯಮಯ ಕೋಟೆ ನಿರ್ಮಾಣ ಯಾವುದೇ ಅಡೆ-ತಡೆಯಿಲ್ಲದೆ ಸಾಗುತ್ತಿದೆ” ಎಂದು ಶಿವಾಜಿ ನುಡಿದಾಗ, ಗುರುಗಳಿಗೆ ನಗೆ ತಡೆಯಲಾಗಲಿಲ್ಲ. ರಾಮದಾಸರು ಶಿವಾಜಿಗೆ ಅಲ್ಲೇ ಸಮೀಪದಲ್ಲಿ ಗೆದ್ದಲುಗಳು ಕಟ್ಟುತ್ತಿದ್ದ ಹುತ್ತವನ್ನೂ, ಹುಲ್ಲು-ಕಡ್ಡಿಗಳಿಂದ ಹಕ್ಕಿಗಳು ಭದ್ರವಾಗಿ ಕಟ್ಟುತ್ತಿದ್ದ ಗೂಡನ್ನೂ, ವ್ಯವಸ್ಥಿತವಾಗಿ ಸಂಚರಿಸುವ ಇರುವೆಗಳ ಸಾಲನ್ನೂ, ಮರ ಗಿಡಗಳ ಹೂವಿಗೆ ಬಂದ ಜೇನುನೊಣಗಳ ಅವಿರತ ಕಾರ್ಯವನ್ನೂ, ಮರ ಮಧ್ಯದ ಎಲೆಗಳೆಡೆಯನ್ನು ಭೇದಿಸಿ ಬೀಳುವ ಸೂರ್ಯರಶ್ಮಿಯನ್ನೂ, ಕೋಟೆಯ ಕೆಳಗೆ ಹರಿಯುವ ನೀರಿನ ಝರಿಯನ್ನೂ ತೋರಿಸಿ, ನೀನು ಇವುಗಳನ್ನೆಲ್ಲಾ ನಾನು, ನನ್ನದು, ನನ್ನಪ್ಪಣೆ..

Related image

ಇತ್ಯಾದಿಗಳಿಗೆ ಸೇರಿಸದಿರುವುದೇ ನನಗೆ ಆಶ್ಚರ್ಯವುಂಟು ಮಾಡಿದುದು” ಎಂದಾಗ ಶಿವಾಜಿಗೆ ಅವನ ತಪ್ಪಿನ ಅರಿವಾಗಿ, `ಕ್ಷಮಿಸಬೇಕು’ ಎಂದು ಗುರುಗಳ ಕಾಲಿಗೆರಗಿದ!  ಶಿವಾ, ನೀನು, ನಾನು, ನನ್ನಪ್ಪಣೆ, ಹೀಗೆಲ್ಲಾ ಹೇಳಿದೆಯಷ್ಟೆ, ನೋಡಿದೆಯಾ ಈ ಪ್ರಕೃತಿಯ ಜಾಣ್ಮೆ, ಸೌಂದರ್ಯ, ಕೊಡುಗೆ ಇದು ಯಾರದು? ಇದಕ್ಕೆಲ್ಲ ಸೂತ್ರಧಾರ ಯಾರು? ನೀನಾಗಲೀ, ನಾನಾಗಲೀ, ನಾವೆಲ್ಲ ನಿಮಿತ್ತ ಮಾತ್ರರು. ಈ ಬ್ರಹ್ಮಾಂಡದ ಸೂತ್ರಧಾರನಾದ ಭಗವಂತನು ಎಲ್ಲವನ್ನೂ ನಡೆಸುತ್ತಾನೆ. ಇವೆಲ್ಲಾ ಅವನ ಕೃಪೆಯೇ. ಎಲ್ಲಾ ಕಾರ್ಯಗಳೂ ದೈವೇಚ್ಛೆಯಂತೆಯೇ ನಡೆಯುತ್ತವೆ. ಈ ಬೆಟ್ಟವಾಗಲೀ, ಕೋಟೆಯಾಗಲೀ, ನಿನ್ನದಲ್ಲ” ಎಂಬ ಗುರುವಾಣಿ ಶಿವಾಜಿಯ ಮನದಲ್ಲಿ ಆವರಿಸಿದ್ದ ಮೌಢ್ಯವನ್ನು ನಿವಾರಿಸಿತು.

 

ಶಿವಾಜಿ ಮತ್ತೊಮ್ಮೆ ಕ್ಷಮೆ ಕೇಳಿ ಗುರುಗಳ ಆದೇಶಕ್ಕಾಗಿ ಅಂಗಲಾಚಿದ. ಆಗ ಗುರುಗಳು “ಶಿವಾ, ಸದಾ ಕರ್ತವ್ಯಬದ್ಧನಾಗಿ, ಪ್ರಜ್ಞಾವಂತನಾಗಿ, ಪ್ರಜಾ ಕೈಂಕರ್ಯ ನೆರವೇರಿಸು. ಕೋಟೆಗಳನ್ನು ಕಟ್ಟಿ, ಸೈನ್ಯಬಲ ವೃದ್ಧಿಸಿ, ಛತ್ರಪತಿಯಾಗಿ `ಹಿಂದಾವೀ ಸ್ವರಾಜ್ಯ’ ಸ್ಥಾಪಿಸು. ಸದಾ ದೇವತಾನುಗ್ರಹ ನಿನಗಿರಲಿ. ನಿನ್ನ ಭವಾನಿ ಖಡ್ಗ ದುಷ್ಟ ನಿಗ್ರಹ ಶಿಷ್ಟ ಸಂರಕ್ಷಣ ಮಾಡಲಿ” ಎಂದು ಅವರ ಕಾಷಾಯದ ತುಂಡೊಂದನ್ನು ನೀಡಿದರು. ಅದನ್ನು ಭಗವಾಧ್ವಜವಾಗಿ ಸ್ವೀಕರಿಸಿ, ಕೋಟೆಯ ಮೇಲೆ ಹಾರಿಸಿದ ಶಿವಾಜಿ ಮುಂದೆ, 1674 ರಲ್ಲಿ ಶಿವಾಜಿ ಛತ್ರಪತಿಯಾಗಿ ಮೆರೆದಾಡಿದ.

Image result for shivaji with hindavi

-ಪವಿತ್ರ

Tags

Related Articles

Close