ಪ್ರಚಲಿತ

“ಬ್ರಿಟಿಷರ ಪಿಸ್ತೂಲಿಗೆ ಎದೆಯೊಡ್ಡಿನಿಂತ 8ನೇ ತರಗತಿಯ ಬಾಲಕ ಶಿರೀಶ್‌ಕುಮಾರ್ ಮೆಹ್ತಾ”

ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಉತ್ತುಂಗದಲ್ಲಿದ್ದ ಕಾಲ ಅದು. ಬ್ರಿಟಿಷರ ದುರಾಡಳಿತದಿಂದ ಬೆಸತ್ತಿದ್ದ ಜನ ತಾಯಿ ಭಾರತಿಯನ್ನು ಬ್ರಿಟಿಷರ ಕಬಂಧ ಬಾಹುಗಳಿಂದ ಬಿಡಿಸಿಯೇ ತೀರುತ್ತೇವೆ ಎಂದು ಪಣತೊಟ್ಟು ನಿಂತಿದ್ದರು. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿ, ವಿನಾಯಕ ದಾಮೋದರ್ ಸಾವರ್ಕರ್ ಹೀಗೆ ಅನೇಕ ದೇಶ ಭಕ್ತ ನಾಯಕರು ತಮ್ಮದೇ ಆದ ಹಾದಿಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು.

ಹೀಗೆ ಸ್ವಾತಂತ್ರ್ಯ ಸಂಗ್ರಾಮ ಕಾವೇರಿದ್ದ ಸಮಯದಲ್ಲಿ, ಅಂದರೆ 28 ​​ಡಿಸೆಂಬರ್ 1926 ರಂದು ಮಹಾರಾಷ್ಟ್ರದ ನಂದನಗಿರಿಯ ಶ್ರೀಮತಿ ಸವಿತಾ ಮತ್ತು ಶ್ರೀ ಪುಷ್ಪೇಂದ್ರ ಅವರ ಮಗನಾಗಿ ಜನಿಸಿದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸಂಗ್ರಾಮದ ಬೆಂಕಿಯ ಕಿಡಿಯೇ ಶ್ರೀ ಶಿರೀಶ್ ಕುಮಾರ್ ಮೆಹ್ತಾ. ದೇಶದೆಲ್ಲೆಡೆ ನಡೆಯುತ್ತಿದ್ದಂತೆ, ನಂದನಗಿರಿಯಲ್ಲೂ ಸ್ವಾತಂತ್ರ್ಯ ಹೋರಾಟದ ಚಳವಳಿಗಳು, ಮೆರವಣಿಗೆಗಳು, ದೇಶಭಕ್ತಿಯನ್ನು ಬಡಿದೆಬ್ಬಿಸುವ ಚರ್ಚೆಗಳು ನಡೆಯುತ್ತಿದ್ದವು ಮತ್ತು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ದೇಶಭಕ್ತರನ್ನು ಒಗ್ಗೂಡಿಸುತ್ತಿದ್ದವು. ಇದರಲ್ಲಿ ಮೆಹ್ತಾ ಕುಟುಂಬ ಕೂಡ ಭಾಗಿಯಾಗುತ್ತಿತ್ತು.

1942ರ ಕ್ವಿಟ್ ಇಂಡಿಯಾ ಚಳುವಳಿ

ವಿದ್ಯಾರ್ಥಿ ದೆಸೆಯಿಂದಲೇ ಶಿರೀಶ್ ಕುಮಾರ್ ಮೆಹ್ತಾ ದೇಶಭಕ್ತಿಯನ್ನು, ಸ್ವಾತಂತ್ರ್ಯದ ಕಿಚ್ಚನ್ನು ಮೈಗೂಡಿಸಿಕೊಂಡಿದ್ದ. ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಅವರಿಂದ ಅತಿಯಾಗಿ ಪ್ರಭಾವಿತನಾಗಿದ್ದ ಮೆಹ್ತಾ, ಸದಾ ಸ್ವಾತಂತ್ರ್ಯ ಸಂಗ್ರಾಮದ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಮಹಾತ್ಮ ಗಾಂಧಿ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದರು. ದೇಶದ ಮೂಲೆ ಮೂಲೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಈ ಚಳುವಳಿಯನ್ನು ಬೆಂಬಲಿಸುತ್ತಾ ಬೀದಿಗಿಳಿದರು.

ಅದು ಆಗಸ್ಟ್ 9, 1942. ನಂದನಗಿರಿಯಲ್ಲಿ ಬ್ರಿಟಿಷರ ವಿರುದ್ಧ ಬೆಳಗಿನ ಮೆರವಣಿಗೆ ಹೊರಟಿತ್ತು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮೆಹ್ತಾ ಮತ್ತು ಆತನ ಕೆಲವು ಸ್ನೇಹಿತರು ‘ವಂದೇ ಮಾತರಂ’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳೊಂದಿಗೆ ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ‘ನಿಮ್ಮ ದಬ್ಬಾಳಿಕೆಗೆ ಬಗ್ಗುವುದಿಲ್ಲ, ನಿಮ್ಮ ದಬ್ಬಾಳಿಕೆಗೆ ಬಗ್ಗುವುದಿಲ್ಲ’ ಎಂದು ಗಟ್ಟಿದನಿಯಲ್ಲಿ ಕೂಗುತ್ತಿದ್ದರು. ಮೆರವಣಿಗೆಯನ್ನು ತಡೆದ ಬ್ರಿಟಿಷ್ ಪೊಲೀಸರು, ಕೂಡಲೇ ಮೆರವಣಿಗೆಯನ್ನು ನಿಲ್ಲಿಸಿ ಎಲ್ಲರೂ ಅಲ್ಲಿಂದ ತೆರಳಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಭಟನಾನಿರತರು ಒಪ್ಪದಿದ್ದಾಗ ಪೋಲಿಸ್ ಅಧಿಕಾರಿಯೊಬ್ಬ ಪ್ರತಿಭಟನೆ ನಡೆಸುತ್ತಿದ್ದ ಹೆಣ್ಣು ಮಕ್ಕಳ ತಂಡವನ್ನು ಗುರಿಯಾಗಿಸಿ ಪಿಸ್ತೂಲು ಹಿಡಿದು ಬೆದರಿಸಲು ನಿಂತ. ಕೂಡಲೇ ಪಕ್ಕದಲ್ಲಿದ್ದ ಶಿರೀಶ್ ಕುಮಾರ್ ಮೆಹ್ತಾ ಪಿಸ್ತೂಲಿಗೆ ಎದೆಯೊಡ್ಡಿ “ನೀವು ಗುಂಡು ಹೊಡೆಯುವುದೇ ಆದರೆ, ನನ್ನ ಮೇಲೆ ಗುಂಡು ಚಲಾಯಿಸಿ” ಎಂದು ಗುಡುಗಿದ. ರೊಚ್ಚಿಗೆದ್ದ ಪೊಲೀಸ ಅಧಿಕಾರಿ ಮೆಹ್ತಾ ಎದೆಯಲ್ಲಿ ಮೂರು ಗುಂಡುಗಳನ್ನು ಹೊಕ್ಕಿಸಿಯೇ ಬಿಟ್ಟ. ಮೆಹ್ತಾ ಸ್ಥಳದಲ್ಲೇ ಕೊನೆಯುಸಿರೆಳೆದ.

ಸಾವು ಕಣ್ಣ ಮುಂದೆಯೇ ಇದ್ದರೂ, ಒಂದು ಹೆಜ್ಜೆಯೂ ಹಿಂದೆ ಸರಿಯದೆ ಗುಂಡೇಟಿಗೆ ಎದೆಯೊಡ್ಡಿ ಹುತಾತ್ಮನಾದ ಶಿರೀಶ್ ಕುಮಾರ್ ಮೆಹ್ತಾನ ಛಲ ಮತ್ತು ದೇಶಭಕ್ತಿ ನಮ್ಮ ಮಕ್ಕಳಿಗೆ ಸ್ಪೂರ್ತಿಯಾಗಬೇಕು. ಆದರೆ ನಮ್ಮ ಪುಸ್ತಕಗಳಲ್ಲಿ ಅವನ ಕಥೆ ಕಾಣಿಸಿಕೊಳ್ಳಲೇ ಇಲ್ಲ. ಪರವಾಗಿಲ್ಲ ಬಿಡಿ, ಶಿರೀಶ್ ಕುಮಾರ್ ಮೆಹ್ತಾನಂತಹ ಸಾವಿರಾರು ದೇಶಭಕ್ತರನ್ನು ಮನೆ ಮನೆಗೆ ಪರಿಚಯಿಸುವ ಕೆಲಸವನ್ನು ನಾವು ಮಾಡೋಣ. ಏಕೆಂದರೆ ಯಾವ ದೇಶ ತನ್ನ ಇತಿಹಾಸದಿಂದ ಪಾಠ ಕಲಿಯುತ್ತದೆಯೋ, ಆ ದೇಶ ಸದಾ ಸುರಕ್ಷಿತವಾಗಿರುತ್ತದೆ.

Tags

Related Articles

Close