ಪ್ರಚಲಿತ

ಜ್ಞಾನವಾಪಿಯ ಆವರಣ ಸಮೀಕ್ಷೆ ನಡೆಸಲು ಅಲಹಾಬಾದ್ ಹೈ ಕೋರ್ಟ್ ಸಮ್ಮತಿ

ಅಲಹಾಬಾದ್ ಹೈ ಕೋರ್ಟ್ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ, ಅದರನ್ವಯ ಜ್ಞಾನವಾಪಿ ಆವರಣದ ಸಮೀಕ್ಷೆಯನ್ನು ನಡೆಸುವ ಹಾಗೆ ಅನುಮತಿ ಕಲ್ಪಿಸಿದೆ. ಆ ಮೂಲಕ ಹಿಂದೂಗಳ ಭಾವನೆಗಳಿಗೆ ಮನ್ನಣೆ ನೀಡಿದೆ. ಈ ಸಮೀಕ್ಷೆ ನಡೆಸದಂತೆ ಕೋರಿ, ತಡೆ ನೀಡುವಂತೆ ಮುಸಲ್ಮಾನರು ಸಲ್ಲಿಸಿದ್ದ ಮನವಿಯನ್ನು ಸಹ ಹೈಕೋರ್ಟ್ ತಿರಸ್ಕರಿಸಿ, ವಜಾಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನ್ಯಾಯ ತೀರ್ಮಾನವಾಗಲು ಮಸೀದಿಯ ಸರ್ವೆ ಅಗತ್ಯ ಎಂಬುದಾಗಿಯೂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೈಕೋರ್ಟ್‌ನ ತೀರ್ಪು ಹಿಂದೂ ಸಮುದಾಯಕ್ಕೆ ಸಂತಸ ನೀಡಿದ್ದು, ಕೂಡಲೇ ಮಸೀದಿ ಆವರಣವನ್ನು ಸರ್ವೇ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಈ ಮಸೀದಿಗೆ ಸಂಬಂಧಿಸಿದ ಹಾಗೆ ಹುದುಗಿ ಹೋಗಿರುವ ಸತ್ಯವನ್ನು ಬಹಿರಂಗ ಮಾಡುವ ನಿಟ್ಟಿನಲ್ಲಿ ಕೋರ್ಟ್ ನೀಡಿರುವ ಈ ತೀರ್ಪು ಮುಖ್ಯವಾಗಲಿದೆ.

ಅಲಹಾಬಾದ್ ಕೋರ್ಟ್ ನೀಡಿರುವ ಈ ತೀರ್ಪಿಗೆ ಸಂಬಂಧಿಸಿದ ಹಾಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಈ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಎಎಸ್‌ಐ ಸಮೀಕ್ಷೆ ಬಳಿಕ ಜ್ಞಾನವಾಪಿಯ ನೈಜ ಸತ್ಯ ಅನಾವರಣವಾಗುವ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಪರ ವಾದವನ್ನು ಮಂಡಿಸಿದ ವಕೀಲ ವಿಷ್ಣು ಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಆ ಪ್ರದೇಶದ ಸರ್ವೇಗೆ ಅಲಹಾಬಾದ್ ಹೈ ಕೋರ್ಟ್ ಅನುಮತಿ ನೀಡಿದೆ. ಆ ಮೂಲಕ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ಜುಲೈ 27 ರಂದು ಎರಡೂ ಕಡೆಯವರ ವಾದವನ್ನು ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಆ‌ಮೂಲಕ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ಕೋಟ್ಯಂತರ ಹಿಂದೂಗಳ ಮನದಲ್ಲಿ ಆಶಾವಾದ ಹುಟ್ಟಿಸಿದೆ ಎನ್ನುವುದರಲ್ಲಿ ಎರಡು‌ ಮಾತಿಲ್ಲ. ಈ ಸಂಬಂಧ ಮುಸ್ಲಿಂ ಸಮುದಾಯದವರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳನ್ನೂ ನಾವು ಅಲ್ಲಗಳೆಯುವಂತಿಲ್ಲ.

Tags

Related Articles

Close