ಪ್ರಚಲಿತ

ರಾಜ್ಯ ರಾಜಧಾನಿಯಲ್ಲಿ ಮೊಳಗಿತು ರಣಕಹಳೆ.! ಮತ್ತೆ ಸಮರಕ್ಕೆ ನಿಂತ ಚಾಣಕ್ಯ.!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಗದ್ದಲ ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರ ಆರ್ಭಟವೂ ಬಹಳ ಜೋರಾಗಿಯೇ ನಡೆಯುತ್ತಿದೆ. ಕರ್ನಾಟಕದಲ್ಲಿ ವಿಜಯೋತ್ಸವ ಆಚರಿಸಲು ಸಜ್ಜಾಗಿರುವ ಬಿಜೆಪಿಯ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕದತ್ತ ನುಗ್ಗಿ ಬರುತ್ತಿದೆ. ದೇಶಾದ್ಯಂತ ವಿಜಯ ಪತಾಕೆ ಹಾರಿಸಿ , ಕರ್ನಾಟಕವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪಣತೊಟ್ಟಿರುವ ಮೋದಿ- ಷಾ ಜೋಡಿ, ಸದ್ಯ ಕರ್ನಾಟಕದ ಮೇಲೆ ತಮ್ಮ ತಂತ್ರ ರೂಪಿಸಿದ್ದಾರೆ. ಕರ್ನಾಟಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿದ್ದು, ಈ ಬಾರಿಯ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ ಎಂದರೆ ತಪ್ಪಾಗದು.

ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ , ಅಂದಿನಿಂದಲೇ ಕರ್ನಾಟಕವನ್ನು ಟಾರ್ಗೆಟ್ ಮಾಡಿಕೊಂಡಿತ್ತು. ಆದ್ದರಿಂದಲೇ ಅಮಿತ್ ಷಾ ಮತ್ತು ಟೀಂ ಕರ್ನಾಟಕಕ್ಕೆ ಪದೇ ಪದೇ ಬಂದು ಇಲ್ಲಿನ ಎಲ್ಲಾ ಜಿಲ್ಲೆಗಳಲ್ಲೂ ಬೂತ್ ಮಟ್ಟದಲ್ಲೇ ಪಕ್ಷ ಸಂಘಟನೆಗೆ ತಂತ್ರ ರೂಪಿಸಿದ್ದಾರೆ.!

ರಾಜ್ಯ ರಾಜಧಾನಿಯಲ್ಲಿ ಚಾಣಕ್ಯನ ದರ್ಬಾರ್..!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜಕೀಯ ಚಾಣಕ್ಯ ಅಮಿತ್ ಷಾ ಈಗಾಗಲೇ ಕರ್ನಾಟಕದಲ್ಲಿ ಹಲವಾರು ಸಮಾವೇಶ , ರೋಡ್ ಶೋ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅಮಿತ್ ಷಾ ಕರ್ನಾಟಕಕ್ಕೆ ಬಂದಾಗಿನಿಂದ ರಾಜ್ಯ ಬಿಜೆಪಿಯಲ್ಲಿ ಹೊಸ ಚೈತನ್ಯ ಕಂಡುಬರುತ್ತಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಾಗಿದ್ದು, ಬಿಜೆಪಿಯ ಗೆಲುವು ಒಂದೇ ಗುರಿ ಎಂಬ ಧ್ಯೇಯ ವಾಕ್ಯದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ.

ಈಗಾಗಲೇ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಆದ್ದರಿಂದ ಇನ್ನು ಅಮಿತ್ ಷಾ ಬೆಂಗಳೂರಿನಲ್ಲೇ ವಾಸ್ತವ ಹೂಡಲಿದ್ದು, ರಾಜ್ಯ ಬಿಜೆಪಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಇಂದಿನಿಂದ ಬಿಜೆಪಿಯ ವತಿಯಿಂದ ನಡೆಯುವ ಕರುನಾಡ ಜಾಗೃತಿ ಯಾತ್ರೆ ನಡೆಸಲಿದ್ದು, ಇಂದು ಮತ್ತು ನಾಳೆ ರಾಜ್ಯ ರಾಜಧಾನಿಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬಸವಣ್ಣನಿಗೂ ವಿಶೇಷ ಗೌರವ..!

ಇದೇ ವೇಳೆ ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಹಾಗೂ ಕವಿ ಸಿದ್ದಲಿಂಗಯ್ಯ ಅವರ ಮನೆಗೆ ಭೇಟಿ ನೀಡಿ ಪ್ರಣಾಳಿಕೆಯ ಬಗ್ಗೆ ವಿಶೇಷ ಸಲಹೆ ಪಡೆದು , ಚುನಾವಣೆಗೆ ಬೇಕಾದ ತಯಾರಿ ನಡೆಸಲಿದ್ದಾರೆ. ಅಮಿತ್ ಷಾ ರಾಜ್ಯ ಪ್ರವಾಸದಿಂದಾಗಿ ರಾಜ್ಯ ಬಿಜೆಪಿಗೆ ಹೊಸ ಶಕ್ತಿ ಹಾಗೂ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲಿದೆ.‌ ನಗರದ ೨೮ ಕ್ಷೇತ್ರಗಳಲ್ಲಿ ಪಕ್ಷ ಬಲಪಡಿಸಲು ಒತ್ತು ನೀಡಲಿದ್ದಾರೆ.

ತಯಾರಾಯ್ತು ವಾರ್ ರೂಂ..!

ವಿಧಾನಸಭಾ ಚುನಾವಣೆಗೆ ಭಾರೀ ಪೈಪೋಟಿ ಇರುವುದರಿಂದ ಚುನಾವಣೆ ಮುಗಿಯುವ ತನಕ ಹೆಚ್ಚಿನ ಅವಧಿಯನ್ನು ಅಮಿತ್ ಷಾ ಕರ್ನಾಟಕದಲ್ಲೇ ಕಳೆಯಲಿದ್ದಾರೆ. ಆದ್ದರಿಂದಲೇ ಬೆಂಗಳೂರಿನ ಬಸವೇಶ್ವರ ವೃತ್ತದ ಬಳಿ ಇರುವ ಆರು ಕೊಠಡಿಗಳ ಮನೆ ಸಿದ್ಧವಾಗಿದೆ. ಮನೆಯನ್ನು ಭದ್ರತಾ ಸಿಬ್ಬಂದಿಗಳು ಈಗಾಗಲೇ ಪರಿಶೀಲಿಸಿದ್ದು, ಇದೇ ಮನೆಯಲ್ಲಿ ಇದ್ದು ಅಮಿತ್ ಷಾ ಚುನಾವಣಾ ಕಾರ್ಯತಂತ್ರ ರೂಪಿಸಿದ್ದಾರೆ.!

ಎಲ್ಲಾ ರೀತಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣಾ ಕ್ರೇಜ್ ಹೆಚ್ಚಾಗುತ್ತಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರ ತಂತ್ರಕ್ಕೆ ರಾಜ್ಯ ಬಿಜೆಪಿಯಲ್ಲಿ ಗೆಲುವಿನ ಹುಮ್ಮಸ್ಸು ಮತ್ತಷ್ಟು ಹೆಚ್ಚಿದೆ. ಯಾಕೆಂದರೆ ಅಮಿತ್ ಷಾ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಧೂಳಿಪಟವಾಗಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲಿನ ಭೀತಿ ಹೆಚ್ಚಿದೆ.!

–ಅರ್ಜುನ್

Tags

Related Articles

Close