ಪ್ರಚಲಿತ

ಗಂಧರ್ವರ ಗಾಯನ, ನೃತ್ಯಗಳನ್ನು ನೋಡುತ್ತಾ 27 ಚತುರ್ಯುಗಗಳನ್ನು ಕಳೆದುಕೊಂಡಿರುವ ರೇವತಿ, ಬಲರಾಮನನ್ನು ಮದುವೆಯಾಗಿದ್ದಾದರೂ ಹೇಗೆ ಗೊತ್ತೇ?

“ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಇಂದಿಗೂ ಕಾಣಸಿಗುತ್ತದೆ!! ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ ಇದೆ” ಎನ್ನುವ ವಿಚಾರಗಳು ಆಗಾಗ್ಗೆ ಕೇಳಿ ಬರುತ್ತಿದ್ದರೂ ಕೂಡ ಶ್ರೀಕೃಷ್ಣನ ಅಣ್ಣನಾದ ಬಲರಾಮನ ಬಗ್ಗೆ ನಾವು ತಿಳಿದಿರುವುದೇ ಅತೀ ಕಡಿಮೆ ಎಂದೆನಿಸುತ್ತದೆ!! ಆದರೆ ಬಲರಾಮನ ಬಾಲ್ಯದ ಬಗೆಗಿನ ಒಂದಿಷ್ಟು ವಿಚಾರಗಳನ್ನು ನಾವು ತಿಳಿದುಕೊಂಡಿದ್ದರೂ ಕೂಡ ಆತನ ಮಡದಿ ಅಪ್ರತಿಮ ಸೌಂದರ್ಯವತಿಯಾದ ರೇವತಿಯ ಬಗೆಗಿನ ವಿಚಾರಗಳನ್ನು ತಿಳಿದುಕೊಂಡಿರುವುದೇ ಅತೀ ಕಡಿಮೆ ಎಂದೆನಿಸುತ್ತದೆ!!!

ಹೌದು… ಪುರಾಣಗಳನ್ನು ಕೆದಕುತ್ತಾ ಹೋದಾಗ ಅದೆಷ್ಟು ವಿಚಾರಗಳು ತಿಳಿದು ಬಿಡತ್ತೆ ಅಂದರೆ ಆದಿಶೇಷನ ಅವತಾರವೆಂದು ಕರೆಯಲ್ಪಡುವ ಬಲರಾಮನು ವಸುದೇವನಿಂದ ದೇವಕಿಯ ಗರ್ಭವನ್ನು ಪ್ರವೇಶಿಸಿ, ಅನಂತರ ಮಾಯೆಯಿಂದ ರೋಹಿಣಿಯ ಗರ್ಭಕ್ಕೆ ಸಂಕ್ರಮಿಸಿ ಜನಿಸಿದವ!! ಹೀಗೆ ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದವನಾದ ಕಾರಣ ಸಂಕರ್ಷಣನೆಂತಲೂ, ಹೆಚ್ಚು ಬಲವುಳ್ಳವನಾದ ಕಾರಣ ಬಲರಾಮನೆಂತಲೂ, ಇವನ ಆಯುಧಗಳಾದ ಒನಕೆ ಮತ್ತು ನೇಗಿಲಿನಿಂದಾಗಿ ಮುಸಲುಹಲಿ ಎಂತಲೂ, ನೀಲಿ ಪಟ್ಟೆ ಈತನಿಗೆ ಪ್ರಿಯವಾದ ಕಾರಣ ನೀಲಾಂಬರನೆಂತಲೂ, ರೋಹಿಣಿಯ ಮಗನಾದ ಕಾರಣ ರೌಹಿಣೀಯನೆಂತಲೂ ಈತನನ್ನು ಕರೆಯುವುದಿದೆ.

ಅಷ್ಟೇ ಅಲ್ಲದೇ, ಬಲರಾಮನು ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ ಹುಟ್ಟಿ ಶ್ರೀರಾಮನ ಅನುಜನಾಗಿರುತ್ತಾನೆ. ದ್ವಾಪರದಲ್ಲಿ ಬಲರಾಮನಾಗಿ ಶ್ರೀಕೃಷ್ಣನ ಆಗ್ರಜನಾಗುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ!! ಆದರೆ ಸ್ತ್ರೀಲೋಲನಾಗಿದ್ದ ಶ್ರೀಕೃಷ್ಣನ ಅದೆಷ್ಟೋ ಕಥೆಗಳು, ಆತನ ತುಂಟಾಟಗಳು, ಚೇಷ್ಟೆಗಳು ಎಲ್ಲೆಡೆ ಪ್ರಚಲಿತದಲ್ಲಿದ್ದರು ಕೂಡ ಕೃಷ್ಣನ ಅಣ್ಣನಾದ ಬಲರಾಮನ ಬಗ್ಗೆ ತಿಳಿದಿರುವುದೇ ಕಡಿಮೆ!! ಇನ್ನು ಈತನ ಮಡದಿ ರೇವತಿಯ ಬಗೆಗೂ ಅದೆಷ್ಟು ವಿಚಾರಗಳು ನಮಗೆ ತಿಳಿದಿರಲು ಸಾಧ್ಯ??

Related image

ಬಲರಾಮನ ಬಾಲ್ಯದ ಬಗ್ಗೆ ಒಂದಿಷ್ಟು ತಿಳಿದರೂ ಕೂಡ ರೇವತಿಯ ಬಗೆಗಿನ ವಿಚಾರಗಳು ತಿಳಿದಿರುವುದೇ ಅತೀ ಕಡಿಮೆ!! ಹೌದು… ಯುಗಯುಗಗಳ ಹಿಂದೆ, ದ್ವಾರಕೆಯಲ್ಲಿ ( ಹಿಂದೆ ಕುಶಸ್ಥಲಿ.) ಕಕುದ್ಮಿ (ರೈವತ) ಎಂಬ ರಾಜನಿದ್ದ. ಅವನಿಗೆ ಸುಂದರಿ ಮತ್ತು ಬುದ್ಧಿವಂತೆಯಾದ ರೇವತಿ ಎಂಬ ಮಗಳು!!! ಆದರೆ ರೈವತನಿಗೂ ಮಗಳನ್ನು ಸಾಮಾನ್ಯರಿಗೆ ಕೊಡಲು ಮನಸ್ಸಿರಲಿಲ್ಲ. ಹಾಗಾಗಿ, ಯಾವ ರಾಜಕುಮಾರರೂ ಅವನಿಗೆ ಇಷ್ಟ ಆಗಲಿಲ್ಲ. ಈ ಕಾರಣದಿಂದಾಗಿ ಮಗಳ ಮದುವೆ ವಯಸ್ಸು ಮೀರುತ್ತಾ ವರ್ಷಗಳೇ ಉರುಳಿದರೂ ಸರಿಯಾದ ಗಂಡು ಸಿಗಲಿಲ್ಲ!! ಆಗ ಆತ ಬ್ರಹ್ಮನನ್ನೇ ಕೇಳಿ ಬಿಡೋಣ ಎಂದು ನಿರ್ಧಾರ ಮಾಡುತ್ತಾನಲ್ಲದೇ, 4-5 ರಾಜಕುಮಾರರ ಪಟ್ಟಿ ಹಿಡಿದು ಕೊಂಡು ರೇವತಿಯ ಜೊತೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.

ಆಗ ಬ್ರಹ್ಮಲೋಕದಲ್ಲಿ ಗಂಧರ್ವರ ಗಾಯನ, ನೃತ್ಯಗಳು ಅವರನ್ನು ಆಕರ್ಷಿಸಿತು!! ಹಾಗಾಗಿ ಗಂಧರ್ವರರ ಗಾಯನ, ನೃತ್ಯಗಳನ್ನು ನೋಡುತ್ತಾ, ಕೇಳುತ್ತಾ ಅಪ್ಪ, ಮಗಳಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಸುಮಾರು 10-15 ನಿಮಿಷಗಳ ನಂತರ ರೈವತ ಮತ್ತು ರೇವತಿ ಬ್ರಹ್ಮನನ್ನು ಭೇಟಿ ಮಾಡಿ, ಪಟ್ಟಿ ಕೊಟ್ಟು, ಯಾರು ರೇವತಿಗೆ ಸರಿಹೊಂದಬಹುದು ಅಂತ ಕೇಳುತ್ತಾನೆ!! ಇದನ್ನು ನೋಡಿದ ಬಹ್ಮ ನಕ್ಕು ಹೇಳಿದ, “ನೀವು ಸಂಗೀತ, ನೃತ್ಯ ನೋಡಿದ ಸಮಯದಲ್ಲಿ ಭೂಮಿಯಲ್ಲಿ 27 ಚತುರ್ಯುಗಗಳು ಕಳೆದು ಹೋಗಿದೆ. ಇವರ್ಯಾರೂ ಮತ್ತು ನಿನ್ನ ರಾಜ್ಯವೂ ಈಗ ಉಳಿದಿಲ್ಲ. ಆದರೆ ಚಿಂತೆ ಮಾಡಬೇಡ, ಈಗ ನಿನ್ನ ರಾಜ್ಯ ದ್ವಾರಕೆ ಎಂದು ಬದಲಾಗಿದೆ. ಅಲ್ಲಿ ಆದಿಶೇಷನ ಅವತಾರ ಕೃಷ್ಣನ ಅಣ್ಣ ಬಲರಾಮನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು ಎಂದು ಬ್ರಹ್ಮ ಹೇಳುತ್ತಾನೆ!!

ಅಂತೂ ಕಕುದ್ಮಿ ಇದನ್ನೆಲ್ಲ ತಿಳಿದು ಬರುವ ಹೊತ್ತಿಗೆ 27 ಮಹಾಯುಗಗಳೇ ಕಳೆದುಹೋಗಿದ್ದು, ಭಾಗವತ ಪುರಾಣದ ಪ್ರಕಾರ, “ಕಕುದ್ಮಿ ಭೂಲೋಕಕ್ಕೆ ಬಂದಾಗ ಇಲ್ಲಿ ಮನುಷ್ಯರು ಮೊದಲಿಗಿಂತಾ ಕುಳ್ಳಗಾಗಿದ್ದಾರೆ ಅಂತ ಗಮನಿಸುತ್ತಾನೆ” ಎಂದು ಹೇಳಲಾಗಿದೆ!! ಅಂದರೆ 27 ಮಹಾಯುಗಗಳಲ್ಲಿ ಮಾನವರ ಬೆಳವಣಿಗೆಯಲ್ಲಿಯೂ ಏರುಪೇರಾಗಿರುವುದನ್ನು ನಾವು ಈ ಮೂಲಕ ಗಮನಿಸಬಹುದಾಗಿದೆ!!

ತಮ್ಮ ಕಾಲದ ಜನರು ಇಲ್ಲದ್ದನ್ನು ಮತ್ತು ನಗರ ಪೂರ್ತಿ ಬದಲಾಗಿದ್ದನ್ನು ಕಂಡು ಕಕುದ್ಮಿಗೆ ಆಶ್ಚರ್ಯವಾಗುತ್ತದೆ. ಹಾಗಾಗಿ ಬ್ರಹ್ಮನ ಮಾತಿನಂತೆ, ಬಲರಾಮ, ಕೃಷ್ಣರನ್ನು ಭೇಟಿಯಾಗಿ, ತಮ್ಮ ಕಥೆ ಹೇಳುತ್ತಾರೆ. ಬ್ರಹ್ಮನ ಮಾತನ್ನು ಪಾಲಿಸಲು ಬಲರಾಮ ಮದುವೆಗೆ ಒಪ್ಪುತ್ತಾನೆ. ಆದರೆ ಒಂದು ಸಮಸ್ಯೆ ಏನೆಂದರೆ, ಕಾಲದ ಬದಲಾವಣೆಯಿಂದಾಗಿ ರೇವತಿ ಬಲರಾಮನಿಗಿಂತ ತುಂಬಾ ಉದ್ದ ಇರುತ್ತಾಳೆ!! ಅದೇ ದೊಡ್ಡ ಸಮಸ್ಯೆ ಎಂಬಂತೆ ಕಾಣತೊಡಗುತ್ತದೆ!!

Image result for balarama

ಆಗ ತೀಕ್ಷ್ಣ ಬುದ್ದಿಯ ಕೃಷ್ಣ, ಬಲರಾಮನಿಗೆ ಒಂದು ಸಲಹೆ ಕೊಡುತ್ತಾನೆ!! ಅದರಂತೆ ಬಲರಾಮ ತನ್ನ ಆಯುಧ ನೇಗಿಲನ್ನು ಪ್ರಯೋಗಿಸಿ, ರೇವತಿಯ ಎತ್ತರವನ್ನು ಕುಗ್ಗಿಸುತ್ತಾನೆ. ತದನಂತರದಲ್ಲಿ ಬಲರಾಮ ಮತ್ತು ರೇವತಿಯ ವೈಭವದ ಮದುವೆ ಮುಗಿದ ಬಳಿಕ, ರಾಜ್ಯವಿಲ್ಲದ ರಾಜ ರೈವತ ತಪಸ್ಸಿಗೆ ಬದ್ರಿಗೆ ಹೋಗುತ್ತಾನೆ ಎನ್ನುವುದನ್ನು ಪುರಾಣದಲ್ಲಿ ಉಲ್ಲೇಖಿಸಲಾಗಿದೆ!!

ಇನ್ನು, ಮಹಾಕವಿ ಕಾಳಿದಾಸನ ಪದ್ಯಗಳಲ್ಲಿ ಬಲರಾಮನ ಮಡದಿ ರೇವತಿಯ ಅಪ್ರತಿಮ ಸೌಂದರ್ಯವನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾನೆ. ಕಾಳಿದಾಸನ ಪ್ರಕಾರ, ರೇವತಿಯ ಹಳದಿ-ಕೇಸರಿ ಮಿಶ್ರಿತ ಬಣ್ಣದ ಸುಂದರವಾದ ಕಣ್ಣುಗಳು ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತಂತೆ!! ಒಟ್ಟಿನಲ್ಲಿ ಬಲರಾಮ-ರೇವತಿಯ ಬಗೆಗಿನ ಅನೇಕ ವಿಚಾರಗಳನ್ನು ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ರೇವತಿಯ ಎತ್ತರವನ್ನು ತಗ್ಗಿಸಲು ಶ್ರೀಕೃಷ್ಣ ಮಾಡಿ ತಂತ್ರ ನಿಜಕ್ಕೂ ಕೂಡ ಅಚ್ಚರಿ ಮೂಡಿಸುವಂತಿದೆ!!

ಮೂಲ:
https://www.udayavani.com/kannada/news/kids/167689/balarama

https://goo.gl/kMVAUG

https://goo.gl/YQm7XT

– ಅಲೋಖಾ

Tags

Related Articles

Close