ಪ್ರಚಲಿತ

ಮಾನವ ಸಹಿತ ಚಂದಯಾನಕ್ಕೆ ಸಜ್ಜಾಗುತ್ತಿದೆ ಇಸ್ರೋ

ಕೆಲ ತಿಂಗಳ ಹಿಂದಷ್ಟೇ ನಮ್ಮ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರಯಾನ -3 ಮೂಲಕ ಚಂದ್ರನ ಅಂಗಳದಲ್ಲಿ ತನ್ನ ಸಂಶೋಧನಾ ನೌಕೆಯನ್ನು ಯಶಸ್ವಿಯಾಗಿ ಇಳಿಸಿತ್ತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಹಿರಿಮೆಗೂ ಭಾರತ ಪಾತ್ರವಾಗಿದೆ.

ಅದಾದ ಬಳಿಕ ಆದಿತ್ಯ ಎಲ್-1 ಮೂಲಕ ಸೂರ್ಯನ ಅಧ್ಯಯನ ನಡೆಸಲು ‌ಮುಂದಾಗಿತ್ತು. ಕೆಲ ದಿನಗಳ‌ ಹಿಂದಷ್ಟೇ ಇಸ್ರೋದ ಈ ಸಂಶೋಧನಾ ನೌಕೆ ಸೂರ್ಯನ ಮೊದಲ ಚಿತ್ರವನ್ನು ಕ್ಲಿಕ್ಕಿಸಿ ಕಳುಹಿಸುತ್ತು.

ಇಸ್ರೋದ ಈ ಎಲ್ಲಾ ಸಾಧನೆಗಳ ಜೊತೆಗೆ ಇದೀಗ ಮತ್ತೊಂದು ಮಹತ್ವದ ಚಂದ್ರಯಾನಕ್ಕೆ ಸಂಸ್ಥೆ ಸಿದ್ಧತೆ ನಡೆಸುತ್ತಿದೆ. 2040 ನ್ನು ಗುರಿಯಾಗಿಸಿಕೊಂಡು ಈ ಯೋಜನೆಯನ್ನು ರೂಪಿಸಿದ್ದು, ಮೊದಲ ಬಾರಿಗೆ ಗಗನಯಾತ್ರಿಗಳನ್ನು ಚಂದ್ರನಂಗಳಕ್ಕೆ ಕಳುಹಿಸಲು ಯೋಜನೆ ರೂಪಿಸಿದೆ.‌ ಇದಕ್ಕಾಗಿ ಸಂಪೂರ್ಣ ಸಿದ್ಧತೆಯನ್ನು ಸಹ ನಡೆಸಿದೆ.

ಈ ಸಂಬಂಧ ಇಸ್ರೋ‌ ಅಧ್ಯಕ್ಷ ಸೋಮನಾಥ್ ಅವರು ಮನೋರಮಾ ಇಯರ್ ಬುಕ್ 2024 ರ ವಿಶೇಷ ಲೇಖನಕ್ಕಾಗಿ ಮಾಹಿತಿ ನೀಡಿದ್ದು, 2040 ರಲ್ಲಿ ಚಂದ್ರನಂಗಳಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ವಾಯುಪಡೆಯ ನಾಲ್ವರು ಪರೀಕ್ಷಾ ಪೈಲಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಬಾಹ್ಯಾಕಾಶ ಸಾಧನೆಯಲ್ಲಿ ಮುಂದಿನ ಗುರಿ ತಲುಪಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಕಡಿಮೆ ಭೂ ಕಕ್ಷೆಗೆ ಇಬ್ಬರಿಂದ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ವರೆಗೆ ಸುರಕ್ಷಿತವಾಗಿ ಕಳುಹಿಸಲಾಗುತ್ತದೆ‌. ಆ ಬಳಿಕ ಭಾರತೀಯ ನೀರಿಗೆ ಪೂರ್ವ ನಿರ್ಧರಿತ ಸೈಟ್‌ಗೆ ಮರಳುವಂತೆ ಮಾಡುವ ಯೋಜನೆಯ ಹಿನ್ನೆಲೆಯಲ್ಲಿ ನಮ್ಮ ಕೆಲಸ ಸಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಆಯ್ಕೆ ಮಾಡಲಾದ ಗಗನಯಾತ್ರಿಗಳು ಬೆಂಗಳೂರಿನ ಎಟಿಎಫ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಾನವ ಸಹಿತ ಬಾಹ್ಯಾಕಾಶ ಯಾನವು ಮನುಷ್ಯರನ್ನು ಸುರಕ್ಷಿತವಾಗಿ ಸಾಗಿಸುವ ಸಾಮರ್ಥ್ಯ ಹೊಂದಿರುವ ಉಡಾವಣಾ ವಾಹನ, ಕ್ರ್ಯೂ ಮಾಡಲ್, ಸೇವಾ ಮಾಡ್ಯೂಲ್, ಲೈಫ್ ಸಪೋರ್ಟ್ ಸಿಸ್ಟಮ್ ಗಳನ್ನು ಒಳಗೊಂಡಂತೆ ಇನ್ನೂ ಹಲವಾರು ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ಈ ಯೋಜನೆಯ ಹಿನ್ನಲೆಯಲ್ಲಿ ಇಸ್ರೋ ಮಾಡುತ್ತಿದೆ. ಹಾಗೆಯೇ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್, ಪ್ಯಾಡ್ ಅಬಾರ್ಟ್ ಟೆಸ್ಟ್, ಟೆಸ್ಟ್ ವೆಹಿಕಲ್ ಫ್ಲೈಟ್‌ಗಳ ಜೊತೆಗೆ ಒಂದೇ ರೀತಿಯ ಎರಡು ಅನ್‌ಕ್ರೂಡ್ ಮಿಷನ್ ಗಳು ಮಾನವ ಸಹಿತ ವಿಮಾನಯಾನದಲ್ಲಿ ಮುಂಚಿತವಾಗಿರಲಿವೆ.

Tags

Related Articles

Close