ಪ್ರಚಲಿತ

ಕಾಂಗ್ರೆಸ್‌ನ ದ್ವೇಷದ ರಾಜಕಾರಣಕ್ಕೆ ಬಲಿಯಾಯ್ತು ಸ್ವಾತಂತ್ರ್ಯ ವೀರರ ನೈಜ ಇತಿಹಾಸ!

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ, ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಹಲವಾರು ವಿಷಯಗಳಿಗೆ ಮಂಗಳ ಹಾಡುವ ಕೆಲಸ ನಡೆದಿದೆ.

ಆ ಮೂಲಕ ದ್ವೇಷ ರಾಜಕಾರಣ ಮಾಡುವ ಕೆಲಸಕ್ಕೆ ಸರ್ಕಾರ ನಾಂದಿ ಹಾಡಿದೆ ಎಂದರೂ ತಪ್ಪಾಗಲಾರದು. ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಪರಿಷ್ಕರಿಸಲಾಗಿದ್ದ ಪಠ್ಯಗಳಿಗೆ ಕಾಂಗ್ರೆಸ್‌ನ ಸಿದ್ದು ಸರ್ಕಾರ ತಿಲಾಂಜಲಿ ಇರಿಸಲು ತೀರ್ಮಾನಿಸಿದೆ.

ಆರನೇ ತರಗತಿಯಿಂದ ಹಿಡಿದು ಹತ್ತನೇ ತರಗತಿಯ ವರೆಗಿನ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬದಲಾವಣೆ ಮಾಡಲು ಹೊರಟಿದೆ. ಚಕ್ರವರ್ತಿ ಸೂಲಿಬೆಲೆಯವರ ಪಠ್ಯ, ಸ್ವಾತಂತ್ರ್ಯ ವೀರ ‘ವೀರ ಸಾವರ್ಕರ್’ ಅವರ ಪಠ್ಯಗಳಿಗೆ ಕೊಕ್ ನೀಡುವ ಮೂಲಕ ಉತ್ತಮ ವಿಚಾರಗಳನ್ನು ಮಕ್ಕಳಿಗೆ ತಲುಪುವಂತೆ ಮಾಡಿದ್ದ ಬಿಜೆಪಿ ಸರ್ಕಾರದ ನಿಲುವನ್ನು ಕಾಂಗ್ರೆಸ್ ಕನಸಾಗಿಸಿದೆ. ಪಠ್ಯದಲ್ಲಿ ಜವಹರಲಾಲ್ ನೆಹರು, ಡಾ. ಬಿ. ಆರ್. ಅಂಬೇಡ್ಕರ್, ಸಾವಿತ್ರಿ ಬಾಯಿ ಪುಲೆ ಅವರ ಪಠ್ಯವನ್ನು ಸೇರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.

ಹೆಚ್ಚುವರಿ ಪಠ್ಯಗಳನ್ನು ಸೇರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು. ಆದರೆ ಸಾವರ್ಕರ್ ಅವರಂತಹ ವ್ಯಕ್ತಿ ಶಕ್ತಿಯ ಬಗ್ಗೆ ಮಕ್ಕಳಿಗೆ ತಿಳಿಯುವ ಅವಕಾಶವನ್ನು ತಪ್ಪಿಸಿದ ಕಾಂಗ್ರೆಸ್ ಸರ್ಕಾರದ ಈ ನೀತಿ ಒಪ್ಪತಕ್ಕದಲ್ಲ. ಬಿಜೆಪಿ ಸರ್ಕಾರ ಮಾಡಿದ ಪರಿಷ್ಕರಣೆ ಎಂದ ಮಾತ್ರಕ್ಕೆ ದ್ವೇಷದಿಂದ ಉತ್ತಮ ವಿಷಯಗಳನ್ನೇ ಪಾಠ ಪುಸ್ತಕಗಳಿಂದ ತೆಗೆದು ಹಾಕಿರುವ ಈ ನಿಲುವು ಯಾವುದೋ ಒಂದು ವರ್ಗವನ್ನು, ಕೆಲವು ಜನರನ್ನು ಓಲೈಸುವುದಕ್ಕಾಗಿ ಮಾಡಿರುವ ಕೆಲಸ ಎಂಬುದು ಸತ್ಯ.

ದೇಶದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿರುವ ಸಾವರ್ಕರ್ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಈ ದೇಶದ ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿಯೂ ಸಾವರ್ಕರ್ ಅವರಂತಹ ಅದೆಷ್ಟೋ ವೀರರ ಬದುಕನ್ನು ಮಕ್ಕಳಿಗೆ ತಿಳಿಸಿಬೇಕಾದ ಅನಿವಾರ್ಯತೆಯೂ ಇದೆ. ಹೀಗಿದ್ದರೂ ಸಾವರ್ಕರ್ ಪಠ್ಯವನ್ನು ತೆಗೆದು ಹಾಕಿ, ದ್ವೇಷ ರಾಜಕಾರಣದಲ್ಲಿ ತೊಡಗಿಸಿಕೊಂಡ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ.

Tags

Related Articles

Close