ಪ್ರಚಲಿತ

ಕಾಂಗ್ರೆಸ್‌ನ ನಂದಿನಿ ಮೇಲಿನ ಪ್ರೀತಿ ಚುನಾವಣಾ ನಾಟಕವೇ?

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ತಯಾರಿ, ಪ್ರಚಾರ ಕಾರ್ಯ ಬಲು ಜೋರಾಗಿಯೇ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಹಿಡಿದಿರುವ ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ಕಾರಣಕ್ಕೆ ಮತದಾರರ ಒಲವು ಬಿಜೆಪಿ ಪಕ್ಷದ ಕಡೆಗೆ ಹೆಚ್ಚಾಗಿದೆ. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್ ಪಕ್ಷ ಜನರನ್ನು ಹೇಗಪ್ಪಾ ಓಲೈಕೆ ಮಾಡುವುದು ಎನ್ನುವ ಲೆಕ್ಕಾಚಾರದಲ್ಲೇ ಇದ್ದಂತಿದೆ.

ಒಂದು ಕಡೆಯಲ್ಲಿ ಸದಾ ವಿವಾದಗಳ‌ ಸುಳಿಯನ್ನು ಹೊತ್ತುಕೊಂಡೇ ತಿರುಗುತ್ತಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಇನ್ನೊಂದು ಕಡೆಯಲ್ಲಿ ರಾಹುಲ್ ತಪ್ಪಿನ ಮೇಲೆ ತಪ್ಪೆಸಗುತ್ತಿದ್ದರೂ ಅದನ್ನು ವಿರೋಧಿಸುವ ತಾಕತ್ತಿಲ್ಲದ ಕಾಂಗ್ರೆಸಿಗರು. ಇನ್ನು ಹೇಳಿಕೊಳ್ಳುವಂತಹ ಜನಸ್ನೇಹಿ ‌ಕೆಲಸಗಳ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಕಾಂಗ್ರೆಸ್ಸಿನದ್ದು ಶೂನ್ಯ ದಾಖಲೆ. ಹೀಗಿರುವಾಗ ಜನರಿಗೆ ಕಾಂಗ್ರೆಸ್ ಪಕ್ಷ ವಿದೂಷಕರ ಪಕ್ಷದ ಹಾಗೆ ಗೋಚರಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಹೀಗಿದ್ದರೂ ನಕಲಿ ಗಾಂಧಿ ಪರಿವಾರ ಮಾಡಿರುವ ಅನಾಚಾರಗಳನ್ನು ನೋಡಿ, ಅದಕ್ಕೆ ತಾವೂ ಬೆಂಬಲ ನೀಡಬೇಕಾದ ತುರ್ತು ಅನಿವಾರ್ಯತೆ ಅವರದ್ದು. ಹೀಗಾಗಿಯೇ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪ್ರಧಾನಿ ಮೋದಿ ಅವರ ಬಗ್ಗೆ, ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ಬೇಕಾದ ಎಲ್ಲಾ ದಾರಿಗಳನ್ನು ಹುಡುಕಿಕೊಳ್ಳುತ್ತಿದೆ.

ಸದ್ಯ ನಂದಿನಿ ಮತ್ತು ಅಮುಲ್ ನಡುವಿನ ವಿವಾದವನ್ನು ಬಂವಾಳವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ಹೈನುಗಾರಿಕೆ ವಿರೋಧಿ ಎಂದು ಬಿಂಬಿಸಲು ಹರ‌ಸಾಹಸ ಮಾಡುತ್ತಿದೆ. ಹಾಗೆಯೇ ಕಾಂಗ್ರೆಸ್ ಪಕ್ಷ ತಾನು ಆಡಳಿತಕ್ಕೆ ಬಂದರೆ ಹೈನುಗಾರರು ಮತ್ತು ನಂದಿನಿ ಸಂಸ್ಥೆಯ ಪರ ಒಂದಷ್ಟು ಘೋಷಣೆಗಳನ್ನು ಮಾಡುವ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆಯಲು ತಯಾರಿ ಮಾಡಿದೆ. ಕೆ ಎಂ ಎಫ್ ಸಂಸ್ಥೆಯ ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆಯಲ್ಲಿ ತಿಳಿಸಿದೆ.

ಆರಂಭದಿಂದಲೂ ಪ್ರಧಾನಿ ಮೋದಿ ಮತ್ತು ಅವರ ತವರು ರಾಜ್ಯ ಗುಜರಾತ್ ಮೇಲೆ ದ್ವೇಷ ಉಗುಳುತ್ತಿರುವ ಕಾಂಗ್ರೆಸ್, ನಂದಿನಿ ಯನ್ನು ಗುಜರಾತ್‌ನ ಹಿತಾಸಕ್ತಿಗೆ ಬಲಿಕೊಡುವುದನ್ನು ತಡೆಯುತ್ತೇವೆ ಎನ್ನುವ ಮೂಲಕ ಜನರ ದಾರಿ ತಪ್ಪಿಸಲು ಪ್ರಯತ್ನ ನಡೆಸುತ್ತಿದೆ. ವಾಸ್ತವದಲ್ಲಿ ಬಿಜೆಪಿ ನಂದಿನಿ ಮತ್ತು ಅಮುಲ್ ವಿಲೀನದ ಯಾವುದೇ ಪ್ರಸ್ತಾಪವನ್ನು ತನ್ನ ಮುಂದಿರಿಸಿಕೊಂಡಿಲ್ಲ. ಬಿಜೆಪಿ ನಾಯಕರುಗಳೇ ಈ ಸುದ್ದಿ ನಿಜವಲ್ಲ ಎಂದು ಹೇಳಿದರೂ, ಕಾಂಗ್ರೆಸ್ ಮಾತ್ರ ಒಂದು ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಸತ್ಯ ಎಂಬುದಾಗಿ ಬಿಂಬಿಸಲು ಹೊರಟಿರುವುದು ದುರಾದೃಷ್ಟ.

ಹಸುವಿನ ಬಗ್ಗೆಯೇ ಕಾಳಜಿ ಹೊಂದಿರದ ಕಾಂಗ್ರೆಸಿಗರು ನಂದಿನಿ ಬಗ್ಗೆ ಇನ್ನಿಲ್ಲದ ಕಾಳಜಿ ತೋರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಒಂದು ವಿದೂಷಕ ಪಕ್ಷದ ಹಾಗೆ ಗೋಚರವಾಗುವಂತೆ ಮಾಡಿದೆ. ಜೊತೆಗೆ ನಮ್ಮ ರಾಜ್ಯದಲ್ಲಿ ಸಾಲು ಸಾಲು ಗೋಹತ್ಯೆಯಾಗುವಾಗ, ಗೋ ಕಳ್ಳತನವಾಗುವಾಗ ಮಾತನಾಡದ ಕಾಂಗ್ರೆಸ್, ಗೋ ಕಳ್ಳರ ಪರ ಮಾತನಾಡುವ ಕಾಂಗ್ರೆಸ್‌ಗೆ ಚುನಾವಣಾ ಸಮಯದಲ್ಲಿ ಹೈನುಗಾರಿಕೆ ಮೇಲೆ ಪ್ರೀತಿ ಹುಟ್ಟಿರುವುದು ಜನಸಾಮಾನ್ಯರಿಗೆ ಸಂದೇಹ ಹುಟ್ಟಿಸಿದೆ ಎನ್ನುವುದರಲ್ಲಿಯೂ ಎರಡು ಮಾಡಿಲ್ಲ.

Tags

Related Articles

Close