ಪ್ರಚಲಿತ

ಪ್ರವಾಸಿಗರ ಅನುಕೂಲಕ್ಕೆ’ದಿವ್ಯ ಅಯೋಧ್ಯಾ’ ಮೊಬೈಲ್ ಆ್ಯಪ್

ಅಯೋಧ್ಯೆಗೆ ಆಗಮಿಸುವ ಯಾತ್ರಿಕರ ಅನುಕೂಲಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ‘ದಿವ್ಯ ಅಯೋಧ್ಯಾ’ ಎನ್ನುವ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ.

ಈ ಮೊಬೈಲ್ ಆ್ಯಪ್ ಅಯೋಧ್ಯೆಗೆ ಬರುವ ಯಾತ್ರಿಕರಿಗೆ ಆಲ್ ಇನ್ ಒನ್ ಅಂದರೆ ಎಲ್ಲಾ ವಿವರಗಳು, ಮಾಹಿತಿಗಳು ಒಂದೇ ಕಡೆಯಲ್ಲಿ ಸಿಗುವ ಸಹಾಯಕಾರಿ ವೇದಿಕೆಯಾಗಿದೆ. ಇದು ಪ್ರವಾಸದ ಯೋಜನೆಗಳಿಗೆ ಪೂರಕವಾದ ಅನ್ವೇಷಣೆಗಳಿಂದ ತೊಡಗಿ, ಅಯೋಧ್ಯಾ ನಗರಿಯ ಸಾಂಸ್ಕ್ರತಿಕ ವೈಭವದ ವರೆಗಿನ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಉಪಯೋಗವಾಗಲಿದೆ.

ಅಯೋಧ್ಯೆಯ ಪ್ರಮುಖ ದೇವಾಲಯಗಳು, ಮಠಗಳು, ತಾಣಗಳು, ಐತಿಹಾಸಿಕ ಪ್ರದೇಶಗಳ ಕುರಿತಂತೆಯೂ ನಾವು ಈ ಆ್ಯಪ್ ಮೂಲಕ ಮಾಹಿತಿ‌ ಪಡೆದುಕೊಳ್ಳುವುದು ಸುಲಭವಾಗಲಿದೆ.

ಅದರೊಂದಿಗೆ ಇ-ಕಾರ್‌ಗಳು, ಇ-ಬಸ್‌ಗಳ ಬುಕ್ಕಿಂಗ್ ಗಳನ್ನು ಸಹ ಈ ಆ್ಯಪ್ ಪ್ರವಾಸಿಗರಿಗೆ ಸುಲಭಗೊಳಿಸಲಿದೆ. ಮಾರ್ಗಗಳ ರಿಯಲ್ ಟೈಮ್ ಟ್ರ್ಯಾಕಿಂಗ್, ಅನುಕೂಲಕರವಾದ ಬೋರ್ಡಿಂಗ್, ಡಿಬೋರ್ಡಿಂಗ್ ಆಯ್ಕೆಗಳನ್ನು ಸಹ ಜನರು ಈ ಆ್ಯಪ್ ಮೂಲಕವೇ ಸುಲಭವಾಗಿ ಪಡೆಯಬಹುದಾಗಿದೆ. ಹಾಗೆಯೇ ಪ್ರವಾಸಿಗರ ಅನುಕೂಲಕ್ಕೆ ತಕ್ಕ ಹೊಟೇಲ್ಗಳು, ಹೋಮ್ ಸ್ಟೇ‌ಗಳು ಅಥವಾ ಟೆಂಟ್ ನಗರಗಳನ್ನು ಇದರ ಮೂಲಕವೇ ಕಾಯ್ದಿರಿಸುವ ವ್ಯವಸ್ಥೆ ಸಹ ಮಾಡಲಾಗಿದೆ.

ಸ್ಥಳೀಯವಾಗಿ ಅಯೋಧ್ಯಾ ನಗರದ ಬಗ್ಗೆ ಮಾಹಿತಿ ಇರುವ, ತರಬೇತಿ ಪಡೆದ ನುರಿತ ಪ್ರವಾಸಿ ಗೈಡ್‌ಗಳನ್ನು ಕೂಡಾ ಈ ಆ್ಯಪ್ ಮೂಲಕವೇ ಆಯ್ಕೆ ಮಾಡಬಹುದಾಗಿದೆ. ವೀಲ್ ಚೇರ್, ಗಾಲ್ಫ್ ಕೋರ್ಟ್‌ಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಸಹ ಈ ಆ್ಯಪ್ ಮೂಲಕ ಪ್ರವಾಸಿಗರಿಗೆ ಒದಗಿಸಲಾಗಿದೆ.

ಈ ಮೊಬೈಲ್ ಆ್ಯಪ್ ಉತ್ತರ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿಯೂ ಪೂರಕವಾಗಿರಲಿದೆ. ಮೊದಲ ಬಾರಿಗೆ ಅಯೋಧ್ಯಾ ನಗರಕ್ಕೆ ಬರುವವರಿಗೂ ಅಂಗೈಯಲ್ಲಿಯೇ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಅವರ ಯಾತ್ರೆಯನ್ನು ಸುಗಮಗೊಳಿಸುವಲ್ಲಿಯೂ ಸಹಾಯ ಮಾಡಲಿದೆ. ಗ್ರಾಮೀಣ ಭಾಗಗಳ ಹೋಮ್ ಸ್ಟೇ‌ಗಳ ಪರಿಚಯ, ಹಳ್ಳಿಗಳಲ್ಲಿನ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿಯೂ ಈ ಆ್ಯಪ್ ಸಹಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close