ಪ್ರಚಲಿತ

ಜಗತ್ತಿನ ಮೊತ್ತ ಮೊದಲ ಪ್ರಾಣಘಾತಕ ಅಭೇಧ್ಯ ಯುದ್ದ ರಣತಂತ್ರ ಚಕ್ರವ್ಯೂಹದ ಹೆಸರು ಕೇಳಿದರೇನೇ ವೈರಿಗಳು ತಲೆ ತಿರುಗಿ ಬೀಳುತ್ತಿದ್ದರು!!

ವಿಶ್ವ ಕಂಡು ಕೇಳರಿಯದ ರೌದ್ರ ಭಯಂಕರ ಯುದ್ದ ಮಹಾಭಾರತದ ಕುರುಕ್ಷೇತ್ರ ಕದನ. ಅತ್ಯಾಧುನಿಕ ಯಂತ್ರ-ತಂತ್ರ-ಅಸ್ತ್ರ-ಶಸ್ತ್ರ-ಪರಮಾಣು ಬಾಂಬ್ ಇವೆಲ್ಲದರ ಉಪಯೋಗ ಕುರುಕ್ಷೇತ್ರ ಯುದ್ದದಲ್ಲಾಗಿದೆಯೆಂದರೆ ಆ ಕಾಲದ ಜನರು ವೈಜ್ಞಾನಿಕವಾಗಿ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮಗಿಂತ ಎಷ್ಟು ಮುಂದಿದ್ದರು ಎನ್ನುವುದನ್ನು ಯೋಚಿಸಿ. ಕುರುಕ್ಷೇತ್ರ ಯುದ್ದದ ರಣ ಭಯಂಕರ ಯುದ್ದ ತಂತ್ರವೆಂದರೆ “ಚಕ್ರವ್ಯೂಹ”. ಎದುರಾಳಿಯನ್ನು ಹಣಿಯಲು ಸಾಧ್ಯವೇ ಇಲ್ಲವೆಂದಾದಾಗ ಕೊನೆಯ ತಂತ್ರವಾಗಿ ಚಕ್ರವ್ಯೂಹವನ್ನು ಹೆಣೆಯಲಾಗುತ್ತಿತ್ತು. ಚಕ್ರವ್ಯೂಹದ ಹೆಸರು ಕೇಳಿದರೇನೇ ಸಾಕು ವೈರಿ ಸೈನಿಕರು ಮೂರ್ಛೆ ಹೋಗುತ್ತಿದ್ದರಂತೆ.

ಏಕೆಂದರೆ ಇಡಿಯ ವಿಶ್ವದಲ್ಲೇ ಚಕ್ರವ್ಯೂಹವನ್ನು ಭೇಧಿಸುವ ವಿದ್ಯೆ ಗೊತ್ತಿದ್ದದು ಕೇವಲ ಏಳು ಜನರಿಗೆ ಮಾತ್ರ! ಕೃಷ್ಣ, ದ್ರೋಣಾಚಾರ್ಯ, ಅರ್ಜುನ, ಭೀಷ್ಮ ಪಿತಾಮಹ, ಕರ್ಣ, ಅಶ್ವತ್ಥಾಮ ಮತ್ತು ಪ್ರದ್ಯುಮ್ನನನ್ನು ಹೊರತು ಪಡಿಸಿ ಬೇರಿನ್ನಾರಿಗೂ ಚಕ್ರವ್ಯೂಹವನ್ನು ಭೇಧಿಸುವ ರಹಸ್ಯ ಗೊತ್ತಿರಲಿಲ್ಲ. ಅಭಿಮನ್ಯುವಿಗೆ ಚಕ್ರವ್ಯೂಹದ ಒಳಗೆ ಪ್ರವೇಶವಾಗುವುದು ಗೊತ್ತಿತ್ತೇ ವಿನಹ ಹೊರ ಬರುವುದು ತಿಳಿದಿರಲಿಲ್ಲ. ಆದ್ದರಿಂದಲೇ ಮೋಸದಿಂದ ಕೌರವರು ಆತನನ್ನು ಕೊಂದದ್ದು. ಚಕ್ರವ್ಯೂಹದೊಳಗೆ ಒಮ್ಮೆ ಪ್ರವೇಶವಾಯಿತೆಂದರೆ ಮುಗಿಯಿತು ಮತ್ತೆ ಆತ ಜೀವಂತ ಹೊರಬರಲು ಸಾಧ್ಯವೇ ಇರಲಿಲ್ಲ.

ಈ ಚಕ್ರವ್ಯೂಹವೆಂಬ ತಂತ್ರವನ್ನು ಹೆಣೆಯುತ್ತಿದ್ದ ರೀತಿ ಅತ್ಯದ್ಭುತ! 48*128 ಮೈಲಿ ಹರವಿಕೊಳ್ಳುವ ಸುರುಳಿಯಾಕಾರದ ಈ ವ್ಯೂಹ ಗರಗರನೆ ತಿರು ತಿರುಗಿ ಮುಂದಡಿಯಿಟ್ಟರೆ ಶತ್ರು ಸೈನ್ಯ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಚೆಲ್ಲಾಪಿಲ್ಲಿಯಾಗುತ್ತಿತ್ತು! ಯುದ್ದ ಆರಂಭಕ್ಕೂ ಮುನ್ನ ಸೈನಿಕರು ಮಾನಸಿಕವಾಗಿ ಜರ್ಜರಿತರಾಗಿ ಯುದ್ದಾಸಕ್ತಿಯನ್ನೇ ಕಳೆದುಕೊಳ್ಳಬೇಕಾದರೆ ವ್ಯೂಹದ ಭೀಕರತೆ ಹೇಗಿರಬೇಕು ಯೋಚಿಸಿ. 1.8 ಮಿಲಿಯನ್ ಸೈನಿಕರನ್ನೊಳಗೊಂಡ ಈ ವ್ಯೂಹ ಎಷ್ಟು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿತ್ತೆಂದರೆ ಒಬ್ಬೇ ಒಬ್ಬ ಸೈನಿಕನೂ ಅತ್ತಿಂದಿತ್ತ ವಾಲುತ್ತಿರಲಿಲ್ಲ. ಪ್ರತಿ ಸೈನಿಕನ ಸ್ಥಳ ಬದಲಾವಣೆಗೂ ನಿಶ್ಚಿತವಾದ ಒಂದು ಡೋಲು, ನಗಾರಿ ಇಲ್ಲವೇ ಶಂಖನಾದವಿರುತ್ತಿತ್ತು. ಈ ನಾದಗಳಿಗುಣವಾಗಿಯೇ ಚಕ್ರವ್ಯೂಹದೊಳಗಿನ ಸೈನಿಕರು ಸ್ಥಾನ ಬದಲಾವಣೆ ಮಾಡುತ್ತಿದ್ದರು ಹೊರತು ತಮ್ಮಷ್ಟಕ್ಕೇ ತಾವು ಸ್ಥಾನ ಪಲ್ಲಟವಾಗುವಂತಿರಲಿಲ್ಲ.

Image result for Chakravyuha.png

ವ್ಯೂಹದಲ್ಲಿ ಒಟ್ಟು ಏಳು ಪದರಗಳಿರುತ್ತಿದ್ದವು. ಹೊರಗಿನ ಪದರದಲ್ಲಿ ಸಾಧಾರಣ ಯುದ್ದ ಕೌಶಲ ಹೊಂದಿದ ಸೈನಿಕರಿರುತ್ತಿದ್ದರು. ಆದರೆ ಒಳ ಹೋದಂತೆಲ್ಲಾ ಪ್ರತಿ ಪದರಗಳ ಸೈನಿಕರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತಿತ್ತು. ಅತೀ ಒಳಗಿನ ಪದರ ಸೈನಿಕರು ಅತ್ಯಂತ ಬಲಾಢ್ಯರು ಮತ್ತು ಯುದ್ದ ಕೌಶಲ ನಿಪುಣರಾಗಿರುತ್ತಿದ್ದರು. ತೀರ ಹೊರಗಿನ ಪದರದಲ್ಲಿ ಕಾಲಾಳು ಸೈನಿಕರಿದ್ದರೆ, ಒಳ ಪದರಗಳಲ್ಲಿ ಆನೆ-ಕುದುರೆಯ ಮೇಲಿರುವ ಸೈನಿಕರಿರುತ್ತಿದ್ದರು. ಚಕ್ರವ್ಯೂಹದ ರಚನೆ ಗುರು ದೋಣಾಚಾರ್ಯರೇ ಮಾಡುತ್ತಿದ್ದುದು. ಇಂತಹ ಒಂದು ಅದ್ಬುತ ರಣತಂತ್ರ ಇಡಿಯ ವಿಶ್ವದಲ್ಲೇ ಆಗಲೂ ಇರಲಿಲ್ಲ, ಈಗಲೂ ಇಲ್ಲ!

ಥೇಟ್ ರಥದ ಚಕ್ರದಂತೇ ಕಾಣುವ ಈ ವ್ಯೂಹದ ರಚನೆ ಗಡಿಯಾರದ ಮುಳ್ಳಿನಂತೆ ಪ್ರತಿ ಘಳಿಗೆಯೂ ಚಲಿಸುತ್ತಿತ್ತು! ಪ್ರತಿ ಸೆಕಂಡಿಗೆ ಪ್ರತಿ ಸೈನಿಕನ ಸ್ಥಾನ ಪಲ್ಲಟವಾಗುತ್ತಿದ್ದುದ್ದರಿಂದ ಒಳ ಬರುವ ಮತ್ತು ಹೊರ ಹೋಗುವ ದಾರಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು! ಅದಕ್ಕೇ ಒಮ್ಮೆ ಚಕ್ರವ್ಯೂಹದ ಒಳ ಹೊಕ್ಕ ವ್ಯಕ್ತಿ ಹಿಂದಿರುಗಿ ಬರಲಾಗದೆ ಅದರೊಳಗೇ ಪ್ರಾಣ ತ್ಯಜಿಸುತ್ತಿದ್ದುದು. ಕುರುಕ್ಷೇತ್ರ ಯುದ್ದದಲ್ಲಿ ಯುಧಿಷ್ಟಿರನನ್ನು ಬಂಧಿಯಾಗಿಸಲು ಚಕ್ರವ್ಯೂಹವನ್ನು ಹೆಣೆಯಲಾಗುತ್ತದೆ. ಯುಧಿಷ್ಟಿರನಿಗೆ ಚಕ್ರವ್ಯೂಹ ಭೇದಿಸುವ ವಿದ್ಯೆ ತಿಳಿದಿರುವುದಿಲ್ಲ ಮತ್ತು ಆ ಸಂಧರ್ಭದಲ್ಲಿ ಕೃಷ್ಣಾರ್ಜುನ ಮತ್ತು ಪ್ರದ್ಯುಮ್ನ ಬೇರೆಡೆ ಯುದ್ದ ನಿರತರಾಗಿರುವುದರಿಂದಾಗಿ ಅರ್ಧಂಬರ್ಧ ವಿದ್ಯೆ ತಿಳಿದಿರುವ ಅಭಿಮನ್ಯು ಚಕ್ರವ್ಯೂಹ ಭೇಧಿಸುವ ನಿರ್ಧಾರ ಮಾಡುತ್ತಾನೆ.

ಅಭಿಮನ್ನು ವೀರಾವೇಶದಿಂದ ಹೋರಾಡಿದರೂ ಕೌರವರ ಕುತಂತ್ರದಿಂದಾಗಿ ಅವನು ಸಾವನ್ನಪ್ಪುತ್ತಾನೆ. ಚಕ್ರವ್ಯೂಹವೆಂದರೇನೆ ಸಾಕ್ಷಾತ್ ಮೃತ್ಯು ಕೂಪ. ಭೂಮಿಯಂತೆಯೇ ತನ್ನ ಅಕ್ಷದ ಸುತ್ತ ತಿರುಗುವ ಇದರ ಪ್ರತಿ ಪದರವೂ ತಮ್ಮಲ್ಲೇ ತಿರುಗುತ್ತಿದ್ದವು. ಭೂಮಿ ತನ್ನ ಅಕ್ಷದಲ್ಲಿ ಸುತ್ತುತ್ತಾ ಸೂರ್ಯನ ಸುತ್ತ ಪ್ರದಕ್ಷಿಣೆ ಬರುವಂತೆ ಚಕ್ರವ್ಯೂಹ ತಿರುಗುತ್ತಿರಬೇಕಾದರೆ ಭೇಧಿಸುವುದಾದರೂ ಹೇಗೆ ಸ್ವಲ್ಪ ಯೋಚಿಸಿ. ಇನ್ನು ಈ ಮೃತ್ಯು ಕೂಪವನ್ನು ಭೇಧಿಸಿ ಹೊರ ಬರುವವರು ಎಂಥಹ ಮಹಾನ್ ವೀರರಾಗಿರಬಹುದು? ಆತನ ಯುದ್ದ ನೈಪುಣ್ಯ ಎಂತಹುದಾಗಿರಬಹುದು? ಕಲ್ಪನೆಗೂ ನಿಲುಕದು. ಸಾವಿರಾರು ವರ್ಷಗಳ ಹಿಂದೆ ಇಂತಹ ಅತ್ಯದ್ಭುತ ಯುದ್ದ ತಂತ್ರವನ್ನು ಹೆಣೆದ ಮತ್ತು ಕಾರ್ಯಗತಗೊಳಿಸಿದ ನಮ್ಮ ಪೂರ್ವಜರ ಅಪಾರ ಜ್ಞಾನ ಮತ್ತು ಪಾಂಡಿತ್ಯಕ್ಕೆ ಶರಣು ಶರಣಾರ್ಥಿ.

ಕುರುಕ್ಷೇತ್ರ ಯುದ್ದದಲ್ಲಿ ಒಟ್ಟು ಮೂರು ಬಾರಿ ಚಕ್ರವ್ಯೂಹವನ್ನು ಹೆಣೆಯಲಾಗಿದೆ ಎನ್ನುತ್ತಾರೆ. ಕೃಷ್ಣನ ಕೃಪೆಯಿಂದಾಗಿ ಅರ್ಜುನ ಚಕ್ರವ್ಯೂಹವನ್ನು ಭೇಧಿಸಿ ಜಯದ್ರಥನ ವಧೆ ಮಾಡುತ್ತಾನೆ. ಘನ ವಿಜ್ಞಾನಿಗಳಿಗೆ ಇವತ್ತಿನ ವರೆಗೂ ಇಂತಹ ಒಂದು ಅದ್ಭುತ ಯುದ್ದ ತಂತ್ರದ ರಹಸ್ಯವನ್ನು ಭೇದಿಸುವ ಬಗೆ ತಿಳಿದಿಲ್ಲವೆಂದಾದರೆ ನಮ್ಮ ಪೂರ್ವಜರ ಪಾಂಡಿತ್ಯದ ಬಗ್ಗೆ ಹೆಮ್ಮೆ ಮೂಡಿ ಬರುತ್ತದೆ. ಆರ್ಯಾವರ್ತವೆಂದು ಸುಮ್ಮನೇ ಹೇಳಿಲ್ಲ. ಪ್ರಕಾಂಡ ಜ್ಞಾನಿಗಳಿದ್ದ ನಾಡೇ ಆರ್ಯಾವರ್ತ. ಅದೇ ನಮ್ಮ ಜನ್ಮ ಭೂಮಿ ಭಾರತ…

ಶಾರ್ವರಿ

Tags

Related Articles

Close