ಪ್ರಚಲಿತ

ಗುಜರಾತ್‌ನ ದೋರ್ಢೋ‌ಗೆ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಗೌರವ: ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

ಭಾರತದಲ್ಲಿ ಹಲವಾರು ಮನಸೂರೆಗೊಳ್ಳುವಂತಹ ಪ್ರವಾಸಿ ತಾಣಗಳಿವೆ. ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಅದೆಷ್ಟೋ ರಮಣೀಯ ಪ್ರದೇಶಗಳು, ಅವಿಸ್ಮರಣೀಯ ಸ್ಥಳಗಳನ್ನು ಹೊಂದಿರುವ ಶ್ರೀಮಂತ ರಾಷ್ಟ್ರ ಭಾರತ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಂಸ್ಕೃತಿಕ, ಪಾರಂಪರಿಕವಾಗಿ ಸುಸಂಸ್ಕೃತ ಮತ್ತು ಉತ್ಕೃಷ್ಟ ದೇಶ ಭಾರತ ಎಂದು ಸಂದೇಹವಿಲ್ಲದೆ ಹೇಳಬಹುದು.

ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ವಿಶೇಷ, ಅದ್ಭುತ ಎನಿಸುವ ವಿಶ್ವ ವಿಖ್ಯಾತ ಹಲವಾರು ನೆಲೆಗಳು ನಮ್ಮಲ್ಲಿವೆ ಎನ್ನುವುದು ಹೆಮ್ಮೆಯ ಸಂಗತಿ. ವಿಶ್ವ ಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು (ಯುಎನ್‌ಡಬ್ಲ್ಯುಟಿಒ) ಗುಜರಾತಿನ ದೋರ್ಢೋವನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ’ ಎಂಬುದಾಗಿ ಗೌರವಿಸಿದೆ.

ಈ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, 2009 ಮತ್ತು 2015 ರಲ್ಲಿ ತಾವು ಈ ಪ್ರದೇಶಕ್ಕೆ ಭೇಟಿ ನೀಡಿದ್ದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ರಾಜ್ಯದ ದೋರ್ಢೋಗೆ ಈ ಗೌರವ ದೊರೆತಿರುವುದರ ಬಗ್ಗೆ ಮಾತನಾಡಿರುವ ಅವರು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಈ ಗ್ರಾಮಕ್ಕೆ ಉಜ್ವಲ ಭವಿಷ್ಯವನ್ನು ಸಹ ಅವರು ಹಾರೈಸಿದ್ದಾರೆ.

ಈ ಗೌರವವು ಭಾರತೀಯ ಪ್ರವಾಸೋದ್ಯಮ ಸಾಮರ್ಥ್ಯದ ಜೊತೆಗೆ ವಿಶೇಷವಾಗಿ ಕಚ್‌ನ ಜನರ ಸಮರ್ಪಣಾ ಭಾವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ಗ್ರಾಮದ ಬಗ್ಗೆ ಜನರು ತಮ್ಮ ನೆನಪುಗಳನ್ನು ಸಹ ಹಂಚಿಕೊಳ್ಳಲು ತಿಳಿಸಿರುವ ಅವರು, ಇಲ್ಲಿಗೆ ಭೇಟಿ ನೀಡಲು ಇದು ಜನರಿಗೆ ಸ್ಫೂರ್ತಿ ನೀಡುತ್ತದೆ ಎನ್ನುವುದಾಗಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಚ್‌ನ ದೋರ್ಢೋ‌ವು ಅತ್ಯಂತ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯನ್ನು, ನೈಸರ್ಗಿಕ ಸೌಂದರ್ಯದ ಸೊಬಗನ್ನು ಕಟ್ಟಿ ಕೊಡುತ್ತಿದ್ದು, ಇದನ್ನು ನೋಡುವುದೇ ರೋಮಾಂಚನವಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

Tags

Related Articles

Close