ಪ್ರಚಲಿತ

ಉತ್ತರ ಪ್ರದೇಶದ ಜೈಲುಗಳಲ್ಲಿ ಅನುರಣಿಸಲಿದೆ ಹನುಮಾನ್ ಚಾಲೀಸಾ

ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಸದಾ ಒಂದಿಲ್ಲೊಂದು ಕಾರಣಗಳಿಂದ, ಮಹತ್ವದ ನಿರ್ಣಯಗಳಿಂದ ಸದಾ ಸುದ್ದಿಯಲ್ಲಿ ಇರುತ್ತದೆ. ಯೋಗಿ ರಾಜ್ಯದಲ್ಲಿ ನಡೆಯುವ ಬದಲಾವಣೆಗಳು ಇಡೀ ದೇಶಕ್ಕೆ ಆದರ್ಶಪ್ರಾಯವಾಗಿರುತ್ತದೆ ಎನ್ನುವುದನ್ನು ಸಹ ನಾವು ಒಪ್ಪಿಕೊಳ್ಳಲೇ ಬೇಕು.

ಅಂದ ಹಾಗೆ ಈಗ ಸಿ ಎಂ ಯೋಗೀಜಿ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಳ್ಳಲು ಮುಂದಾಗಿದೆ. ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಸಿದ ಹಾಗೆ ತೆಗೆದುಕೊಳ್ಳಲಾಗಿರುವ ಮಹತ್ವದ ನಿರ್ಣಯ ಇದಾಗಿದ್ದು, ಈ ನಿರ್ಣಯ ಇಡೀ ದೇಶಕ್ಕೆ‌‌ ಮಾದರಿಯಾಗಲಿದೆ. ಆ ಮೂಲಕ ಉತ್ತರ ಪ್ರದೇಶದ ಸರ್ಕಾರ ಮತ್ತೊಮ್ಮೆ ಸದ್ದು ಮಾಡಲಿದೆ.

ಉತ್ತರ ಪ್ರದೇಶದ ಜೈಲುಗಳಲ್ಲಿರುವ ಜೈಲು ಹಕ್ಕಿಗಳಿಗೆ ಶೀಘ್ರದಲ್ಲೇ ಹನುಮಾನ್ ಚಾಲೀಸಾ‌ ಮತ್ತು ಸುಂದರ ಕಾಂಡವನ್ನು ಪಠಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸರ್ಕಾರ ಅನುಕೂಲ ಕಲ್ಪಿಸಲಿದೆ. ಹಾಗೆಯೇ ಕೈದಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಶಿಕ್ಷಣವನ್ನು ಜೈಲುಗಳಲ್ಲಿಯೇ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅಲ್ಲಿನ ಕಾರಾಗೃಹ ಸಚಿವ ಧರ್ಮವೀರ್ ಪ್ರಜಾಪತಿ ನೇತೃತ್ವದಲ್ಲಿ ಈ ಎಲ್ಲಾ ಕಾರ್ಯಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಕೈದಿಗಳಿಗೆ ಯಾವುದೇ ತರಹದ ಧಾರ್ಮಿಕ ಪಕ್ಷಪಾತ, ಕಾರ್ಯಸೂಚಿ ಅಥವಾ ಒತ್ತಾಯಗಳಿಲ್ಲದೆ ಅವರ ವೈಯಕ್ತಿಕ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಣಯವನ್ನು ಸರ್ಕಾರ ಕೈಗೊಂಡಿರುವುದಾಗಿದೆ.

ಮನುಷ್ಯನಿಗೆ ವ್ಯಕ್ತಿತ್ವ ವಿಕಸನದ ಪಾಠವನ್ನು ಕಲಿಸಲು ಹನುಮಾನ್ ಚಾಲೀಸಾ‌ಗಿಂತ ಉತ್ತಮವಾದ ಮಾರ್ಗ ಬೇರೊಂದಿಲ್ಲ. ಇದು ವ್ಯಕ್ತಿತ್ವ ವಿಕಸನದ ಪಾಠದ ಜೊತೆಗೆ ಮಂತ್ರಗಳ ಕಲಿಕೆಗೂ ಜನರಿಗೆ ಸರಿಯಾದ ಮಾರ್ಗ ಎಂದು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈದಿಗಳು ಸಹ ಸಮಾಜದಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವಂತಾಗಬೇಕು. ಸಮಾಜದಲ್ಲಿ ಉತ್ತಮ ಬದುಕು ನಡೆಸುವಂತಾಗಬೇಕು. ಈ ದೃಷ್ಟಿಯಿಂದ ಕೈದಿಗಳಿಗೆ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡ‌ ಪಠಿಸಲು ತಿಳಿಸಿರುವುದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಆಸಕ್ತಿ ತೋರುವ ಜೈಲುಗಳಿಗೆ ಸರ್ಕಾರವೇ ಧಾರ್ಮಿಕ ಗ್ರಂಥಗಳನ್ನು ಸಹ ವಿತರಣೆ ಮಾಡಲಿದೆ‌ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯನ್ನು ಈಗಾಗಲೇ ಆಗ್ರಾ ಮತ್ತು ಮಥುರಾ‌ದ ಜೈಲುಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಇದು ಕೈದಿಗಳಲ್ಲಿ ಧನಾತ್ಮಕ ಪರಿಣಾಮ ಬೀರಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Tags

Related Articles

Close