ಪ್ರಚಲಿತ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದ ಅನುವಂಶಿಕ ಅರ್ಚಕ ಹೇಳಿದ್ದೇನು ಗೊತ್ತೆ?

ಈ ದೇಶದಲ್ಲಿ ಹಿಂದೂಗಳಿಗೊಂದು ನ್ಯಾಯ ಅಲ್ಪಸಂಖ್ಯಾತರಿಗೊಂದು ನ್ಯಾಯ. ಜಾತ್ಯಾತೀತತೆಯ ಸೋಗಿನಲ್ಲಿ ಹಿಂದೂ ಮಠ-ಮಂದಿರಗಳ ಖಜಾನೆಗೆ ಕನ್ನ ಹಾಕುವ ಸರಕಾರಗಳು ಚರ್ಚ್ ಮತ್ತು ಮದರಸಾಗಳ ಬಾಗಿಲು ಕೂಡಾ ದಾಟುವುದಿಲ್ಲ. ಶತಮಾನಗಳ ಇತಿಹಾಸವಿರುವ ಭಾರತದ ಅತ್ಯಂತ ಪುರಾತನ ಮತ್ತು ಜಗತ್ತಿನ ಶ್ರೀಮಂತ ದೇವಸ್ಥಾನ ತಿರುಪತಿ ತಿರುಮಲ ದೇವಸ್ಥಾನ. ಸರಕಾರಗಳ ಮಟ್ಟಿಗೆ ಇದು ಚಿನ್ನದ ಮೊಟ್ಟೆ ಇಡುವ ಬಾತುಕೋಳಿ. ಈ ದೇವಸ್ಥಾನದ ಖಜಾನೆಗೆ ಸರಕಾರದ ಕೆಟ್ಟ ಕಣ್ಣು ಬಿದ್ದು ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸಲಾಯಿತು. ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯ (TTD) “ಕೈ”ಗಳಿಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ಶುರುವಾಯ್ತು ತಿರುಮಲರಾಯನ ಅಧೋಗತಿಯ ಕಣ್ಣೀರ ಕಥನ. ತನ್ನ ಮೂಗಿನ ಕೆಳಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ, ಸ್ವತ ತಿರುಪತಿಯವರೆ ಆಗಿದ್ದರೂ ಚಂದ್ರಬಾಬು ನಾಯ್ಡು ಅವರದ್ದು ಮಾತ್ರ ಜಾಣ ಕುರುಡು-ಕಿವುಡು -ಮೌನ!!

ಮಂಗಳವಾರ ಮುಖ್ಯ ಅರ್ಚಕ ಎ.ವಿ ರಾಮ ದೀಕ್ಷಿತುಲು ಇತರ ಮೂರು ಅನುವಂಶಿಕ ಆರ್ಚಕರುಗಳ ಜೊತೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನಡೆಸುವ ಎಲ್ಲಾ ಅಕ್ರಮಗಳನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಕಳೆದ ಎರಡು ಸಾವಿರ ವರ್ಷಗಳಿಂದಲೂ ತಿರುಮಲದಲ್ಲಿ “ವೈಕನಸ ಅಗಮದ” ಪ್ರಕಾರ ದೈನಂದಿನ ಆಚರಣೆಗಳನ್ನು ನಡೆಸಲಾಗುತ್ತದೆ. ಇದು ಸ್ವಯಂ ತಿರುಮಲ (ತಿರುವೆಂಕಟಮುದಯನ್) ದೇವರಿಂದಲೇ ಹಸ್ತಾಂತರಿಸಲ್ಪಟ್ಟ ಅತ್ಯಂತ ಸಂಕೀರ್ಣವಾದ ಶಾಸ್ತ್ರವೆಂದೆ ನಂಬಲಾಗಿದೆ. ಈ ಶಾಸ್ತ್ರದ ಪ್ರಕಾರ ದೇವರಿಂದ ನೇಮಿಸಲ್ಪಟ್ಟ ವೈಷ್ಣವ ಮತ್ತು ಯಾದವ ಕುಲದವರೆ ಬಾಲಾಜಿಗೆ ಪೂಜೆ ಸಲ್ಲಿಸತಕ್ಕದ್ದು.

ಕುಲ ಪುರೋಹಿತರ ಸಂತಾನ ಇನ್ನೂ ತಾಯಿಯ ಗರ್ಭದಲ್ಲಿ ಇರುವಾಗಲೆ ಭ್ರೂಣಕ್ಕೆ ‘ವಿಷ್ಣು ಬಲಿ’ ಶಾಸ್ತ್ರದ ಪ್ರಕಾರ ‘ನಾರಾಯಣ ಮಂತ್ರ’ ಕಲಿಸಲಾಗುತ್ತದೆ. ಶುಕ್ಲ ಯಜುರ್ವೇದದ ಶಾಖೆಯ ವೈಕನಸ ವಂಶದ ನಿರ್ದಿಷ್ಟ ಋಷಿ ಪರಂಪರೆಗೆ ಸೇರಿದ ಮಗು ಮತ್ತು ಆತನ ವಂಶಸ್ಥರು ಮಾತ್ರ ಭಗವದ್ ಆಚರಣೆಗಳನ್ನು ನಿರ್ವಹಿಸಬೇಕೆಂದು ದೇವರೆ ಆಜ್ಞೆ ಮಾಡಿರುತ್ತಾರೆ. ದೈವಿಕ ಆಜ್ಞೆಯ ಪ್ರಕಾರ, ವೈಕನಸ ವಂಶದ ಭರದ್ವಾಜ ಗೋತ್ರದ ಗೋಪಿನಾಥರು ಯಾದವನೊಂದಿಗೆ ಹೋಗಿ ಹುತ್ತದಲ್ಲಿರುವ ಮೂಲ ಮೂರ್ತಿಯನ್ನು ತಂದು ಪ್ರತಿಷ್ಟಾಪಿಸಿದ್ದರಿಂದ ಅವರ ವಂಶಸ್ಥರೆ 2000 ವರ್ಷಗಳಿಂದಲೂ ಪೂಜೆ ಸಲ್ಲಿಸುತ್ತಿದ್ದರು. ಆದರೆ ದೇವರ ಮೇಲೆ ಭಯ ಭಕ್ತಿ ಇಲ್ಲದ TTD ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅನುವಂಶಿಕ ಅರ್ಚಕರಿಗೆ ಅಪಮಾನ ಮಾಡುತ್ತಲಿದೆ.

ಆಂಧ್ರ ಪ್ರದೇಶದ ಸರ್ಕಾರವು ಒಂದು ದಿನ ಇದ್ದಕ್ಕಿದ್ದಂತೆ ಕಾನೂನನ್ನು ತಂದು ಯಾವುದೇ ಪರ್ಯಾಯ ನಿಬಂಧನೆಗಳನ್ನು ರಚಿಸದೆ ಅರ್ಚಕರುಗಳ ಆನುವಂಶಿಕ ಹಕ್ಕುಗಳನ್ನು ರದ್ದುಗೊಳಿಸಿತು. ತಮ್ಮ ಜೀವನವನ್ನು ಗರ್ಭದಲ್ಲಿರುವಾಗಿಂದಲೇ ದೇವರಿಗಾಗಿ ಮುಡುಪಾಗಿಟ್ಟ ಅರ್ಚಕರಿಗೆ ಇದು ಅರಗಿಸಲಾಗದ ಆಘಾತವಾಗಿತ್ತು. ಅರ್ಚಕರಿಗೆ ನಿಗದಿ ಪಡಿಸಲಾಗಿದ್ದ ವೇತನವನ್ನೂ ಕಡಿತಗೊಳಿಸಲಾಯಿತು. ದೇವರ ಅಲಂಕಾರಕ್ಕೆ ಬಳಸುವ ಪುರಾತನ ಮತ್ತು ಬೆಲೆ ಬಾಳುವ ವಜ್ರ ಖಚಿತ ಆಭರಣಗಳನ್ನು ಅರ್ಚಕರ ಕೈಯಿಂದ ಕಿತ್ತುಕೊಳ್ಳಲಾಯಿತು. ತಲೆತಲಾಂತರದಿಂದ ಈ ಆಭರಣಗಳನ್ನೂ ತಮ್ಮ ಪ್ರಾಣಕ್ಕಿಂತಲೂ ಹೆಚ್ಚು ಜಾಗರೂಕತೆಯಿಂದ ರಕ್ಷಿಸಿಕೊಂಡು ಬಂದಿದ್ದರು ಅನುವಂಶಿಕ ಅರ್ಚಕರು. ಆದರೆ ಸರಕಾರದ ಆಡಳಿತ ಮಂಡಳಿ ಅದನ್ನು ಕಿತ್ತುಕೊಂಡಿತು. ಈಗ ಆಭರಣಗಳು ಇವೆಯೊ ಇಲ್ಲವೋ ಎನ್ನುವುದೂ ತಿಳಿದಿಲ್ಲ ಎನ್ನುತ್ತಾರೆ ಎ.ವಿ ರಾಮ ದೀಕ್ಷಿತುಲು. ಕೃಷ್ಣದೇವರಾಯರು ತಿಮ್ಮಪ್ಪನಿಗೆ ನೀಡಿದ ಅಮೂಲ್ಯ ಆಭರಣಗಳೂ ಕಾಣುತ್ತಿಲ್ಲ ಅಲ್ಲದೆ 1996 ರಿಂದ ಆಭರಣಗಳ ಯಾವುದೆ ಲೆಕ್ಕಪತ್ರಗಳನ್ನೂ ಇಡಲಾಗಿಲ್ಲ ಎನ್ನುತ್ತಾರೆ ಅರ್ಚಕರು.

ಪದೆ ಪದೇ ತಮ್ಮನ್ನು ಅಪಮಾನ ಮಾಡುವ ಕೆಲಸ ನಡೆಯುತ್ತಿದ್ದರೂ ಭಗವಂತನ ಪೂಜೆಗೆ ಒಂದು ಚೂರೂ ಚ್ಯುತಿಯಾಗದಂತೆ ಅನೂಚಾನವಾಗಿ ಭಗವದ್ ಕಾರ್ಯ ನಡೆಸುತ್ತಲೆ ಬಂದಿದ್ದಾರೆ ಅನುವಂಶಿಕ ಅರ್ಚಕರು. ದೇವರ ಮೇಲೆ ಯಾವುದೇ ಭಯ ಭಕ್ತಿ ಇಲ್ಲದ, ಪರಿಣಾಮಗಳ ಭಯವಿಲ್ಲದ ದಾರ್ಷ್ಟ್ಯದ ಅಧಿಕಾರಿಗಳನ್ನು ಸರ್ಕಾರದಿಂದ ನೇಮಿಸಿ ಅರ್ಚಕರ ಮೇಲೆ ದಬ್ಬಾಳಿಕೆ ನಡಸಿ ದೇವಸ್ಥಾನದ ಬೊಕ್ಕಸದಿಂದ ಹಣ ಕೊಳ್ಳೆ ಹೊಡೆಯಲಾಗುತ್ತಿದೆ. ಹಿಂದೂ ದ್ವೇಷಿ ಸರಕಾರಗಳನ್ನು ಚುನಾಯಿಸಿ ಆಡಳಿತ ನಡೆಸಲು ಅವಕಾಶ ಕೊಡುವ ತಲೆ ಕೆಟ್ಟ ಹಿಂದೂಗಳಿಗೆ ಇದು ಬಹು ದೊಡ್ಡ ಪಾಠವಾಗಬೇಕು. ತಿರುಪತಿಯಲ್ಲಿ ಸಂಪೂರ್ಣ ಕ್ರೈಸ್ತೀಕರಣ ನಡೆಸಲಾಗಿದೆ ಎನ್ನುವ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. TTD ಆಡಳಿತ ಮಂಡಳಿ ಲಡ್ಡು ತಯಾರಿಸಲು ಕ್ರೈಸ್ತರಿಗೆ ಗುತ್ತಿಗೆ ನೀಡುವುದು, ಮಂಡಳಿಯಲ್ಲಿ ಕ್ರೈಸ್ತ ಮಹಿಳೆಯನ್ನು ಅಧಿಕಾರಿಯಾಗಿ ನೇಮಿಸಿದ್ದು ಇದೆಲ್ಲವೂ ಮಂದಿರವನ್ನು ಕ್ರೈಸ್ತೀಕರಣ ಮಾಡುವ ಹುನ್ನಾರಗಳು. ನಿಗದಿತ ಸಮಯದಲ್ಲಿ ಮಾಡಬೇಕಾದ ಪೂಜೆಯ ಸಮಯದಲ್ಲೂ TTD ವ್ಯತ್ಯಾಸ ಮಾಡಿಸುತ್ತದಲ್ಲದೆ ಮಂತ್ರೋಚ್ಛಾರಗಳನ್ನು ಐದೆ ನಿಮಿಷದಲ್ಲಿ ಮುಗಿಸಿ, ಸಹಸ್ರನಾಮಗಳನ್ನು ಐನೂರು ಇಲ್ಲವೆ ಇನ್ನೂರಕ್ಕೆ ಇಳಿಸಿ ಎಂದೂ ತಾಕೀತು ಮಾಡುತ್ತದೆ ಎಂದು ನೊಂದುಕೊಳ್ಳುತ್ತಾರೆ ಅರ್ಚಕರು.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಯಾರ “ಕೈ” ಸನ್ನೆಗಳಿಗೆ ಅನುಗುಣವಾಗಿ ಧರ್ಮದ್ರೋಹದ ಕೆಲಸ ಮಾಡುತ್ತಾರೆ ಎನ್ನುವುದು ಈಗಾಗಲೆ ಜನರಿಗೆ ತಿಳಿದಿದೆ. ಸತ್ಯ ಗೊತ್ತಿದ್ದೂ ಕಣ್ಣು ಮುಚ್ಚಿ ಕುಳಿತರೆ ಪರಿಣಾಮ ಗಂಭೀರವಾಗುವುದು ನಿಶ್ಚಿತ. TTD ಯ ಸರ್ವಾಧಿಕಾರಿ ಧೋರಣೆಯು ತಲೆತಲಾಂತರದಿಂದ ನಡೆಸಿಕೊಂಡು ಬರಲಾಗುತ್ತಿರುವ ಆಚರಣೆಗಳಲ್ಲಿ ವ್ಯತ್ಯಾಸ ಉಂಟುಮಾಡುತ್ತಿದೆ. ಪೂಜಾ ಕಾರ್ಯಗಳಲ್ಲಿ ಲೋಪ ದೋಷಗಳಾದರೆ ದೇಶದಲ್ಲೆ ನೈಸರ್ಗಿಕ ವಿಕೋಪಗಳು ಸಂಭವಿಸಬಹುದು ಎಂದು ಅರ್ಚಕರು ಮುನ್ನೆಚ್ಚರಿಕೆ ಹೇಳುತ್ತಾರೆ. ದೇವಾಲಯದ ಪವಿತ್ರತೆಯನ್ನು ಹಾಳುಮಾಡಲು ಆಳವಾದ ಪಿತೂರಿ ನಡೆಯುತ್ತಿದೆ, ಭಕ್ತರಿಗೆ ತೊಂದರೆಯಾಗುತ್ತಿದೆ ಅಲ್ಲದೆ ದೇವಸ್ಥಾನವನ್ನು ನಾಶಮಾಡುವ ದೀರ್ಘಾವಧಿಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕರು ಹೇಳಿದ್ದಾರೆ. ಭಕ್ತಾದಿಗಳು ಮುಂದೆ ಬಂದು ಇಂತಹ ಅನಾಚಾರಗಳನ್ನು ತಡೆಗಟ್ಟಬೇಕು ಮತ್ತು ದೇವಸ್ಥಾನದ ಪವಿತ್ರತೆಯನ್ನು ಕಾಪಾಡಬೇಕೆಂದು ದೀಕ್ಷಿತುಲು ಕಳಕಳಿಯ ವಿನಂತಿ ಮಾಡಿದ್ದಾರೆ. ಈ ವಿಷಯವನ್ನು ಸುಬ್ರಮಣ್ಯನ್ ಸ್ವಾಮಿ ಕೈಗೆತ್ತಿಕೊಂಡು ಸರ್ವೋಚ್ಚ ನ್ಯಾಯಾಯಲಕ್ಕೆ ಹೋಗಲಿರುವುದು ತುಸು ಸಂತೋಷದ ವಿಚಾರ.

ಜಾತ್ಯಾತೀತತೆಯ ಚಾದರ ಹೊದ್ದುಗಾಢ ನಿದ್ದೆಯಲ್ಲಿ ಮಲಗಿರುವ ಹಿಂದೂಗಳು ಎಚ್ಚರವಾಗಿ ತಿರುಮಲ ತಿರುಪತಿ ದೇವಸ್ಥಾನವನ್ನು ರಕ್ಷಿಸಲು ಟೊಂಕ ಕಟ್ಟಿ ನಿಲ್ಲಬೇಕಾದ ಅವಶ್ಯಕತೆ ಇದೆ. ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡು, ಹೋಗ್ಲಿ ಬಿಡ್ರಿ ಎನ್ನುತ್ತಿದ್ದರೆ ಒಂದು ದಿನ ನಮ್ಮ ಮನೆಯ ದೇವರ ಪೆಟ್ಟಿಗೆಗೂ ಕೈ ಹಾಕುತ್ತಾರೆ ಹಿಂದೂ ದ್ವೇಷಿಗಳು. ಹೊತ್ತು ಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕು ಹಿಂದೂಗಳು.

-ಶಾರ್ವರಿ

Tags

Related Articles

Close