ಪ್ರಚಲಿತ

ಪಾಕಿಸ್ತಾನ ಮೂಲದ ಮಕ್ಕಳಿಗೆ ಭಾರತದ ಪೌರತ್ವ ಇಲ್ಲ: ಹೈಕೋರ್ಟ್

ಪಾಕಿಸ್ತಾನದಲ್ಲಿ ಜನಿಸಿದ ಮಕ್ಕಳಿಗೆ ಭಾರತೀಯ ಪೌರತ್ವ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಆ ಮೂಲಕ ಪಾಕ್ ಮೂಲದ ತಂದೆ ಮತ್ತು ಭಾರತ ಮೂಲದ ತಾಯಿಗೆ ದುಬೈ‌ನಲ್ಲಿ ಜನಿಸಿದ ಅಪ್ರಾಪ್ತ ಮಕ್ಕಳಿಬ್ಬರಿಗೆ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ೧೭ ವರ್ಷದ ಮತ್ತು ೧೪ ವರ್ಷದ ಮಕ್ಕಳ ಇಬ್ಬರು ಭಾರತದ ಪೌರತ್ವ ಬಯಸಿ ಜಂಟಿಯಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನಾಲಿಸಿದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರ ಏಕ ಸದಸ್ಯ ಪೀಠ ಈ ಬಗ್ಗೆ ತನ್ನ ನಿಲುವನ್ನು ಸಹ ಪ್ರಕಟಿಸಿದೆ. ಕಾನೂನಿನನ್ವಯ ಪಾಕಿಸ್ತಾನದ ಪ್ರಜೆಗಳು ಪಾಕ್ ತೊರೆಯಬೇಕಾದಲ್ಲಿ ಅವರಿಗೆ ೨೧ ವರ್ಷ ವಯಸ್ಸಾಗಬೇಕು. ಹಾಗಾಗಿ ಭಾರತದ ರೀತಿ ನೀತಿ‍ಗಳಿಗೆ ಅವರ ಅರ್ಜಿ ಹೊಂದಿಕೆಯಾಗುತ್ತಿಲ್ಲ. ಪಾಕ್ ಪೌರತ್ವ ಕಳೆದುಕೊಂಡ ಬಳಿಕವಷ್ಟೇ ಅವರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬುದಾಗಿಯೂ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಈ ಮಕ್ಕಳ ತಂದೆ ಪಾಕ್ ಮೂಲದವರಾಗಿದ್ದು, ತಾಯಿ ಭಾರತೀಯರಾಗಿದ್ದಾರೆ. ೨೦೦೨ ರಲ್ಲಿ ನರಿ ರಾ ಕಾನೂನಿನ ಪ್ರಕಾರ ಮದುವೆಯಾಗಿ ಇಬ್ಬರು ಮಕ್ಕಳನ್ನೂ ಪಡೆದಿದ್ದರು. ಆದರೆ ಆ ಬಳಿಕ ವಿಚ್ಛೇದನದ ಮೂಲಕ ಅವರಿಬ್ಬರು ಬೇರೆ ಯಾಗಿದ್ದು, ಮಕ್ಕಳು ತಾಯಿಯ ಜತೆ ವಾಸವಿದ್ದರು. ಆ ಬಳಿಕ ಭಾರತಕ್ಕೆ ಆಗಮಿಸಿದ್ದ ತಾಯಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದರು. ಇದೀಗ ಭಾರತದ ಪೌರತ್ವ ಪಡೆಯಲು ಬಯಸಿ, ಹೈಕೋರ್ಟ್‌ಗೆ ಅರ್ಜಿ‌ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

Tags

Related Articles

Close