ಪ್ರಚಲಿತ

ಮಕ್ಕಳನ್ನು ಹಾದಿ ತಪ್ಪಿಸುತ್ತಿದೆಯೇ ಪೋಷಕರ ಪ್ರೆಸ್ಟೀಜ್

ನಮ್ಮ ಮಕ್ಕಳನ್ನು ಅಷ್ಟು ಫೀಸ್ ಕೊಟ್ಟು ಅಂತಹ ಶಾಲೆಗೆ ಹಾಕಿದ್ದೀವಿ.. ಇಂತಹ ಶಾಲೆಗೆ ಹಾಕಿದ್ದೀವಿ.. ನನ್ನ ಮಕ್ಕಳು ಪ್ರಸಿದ್ಧ ಶಾಲೆಗೆ ಹೋಗ್ತಿದಾರೆ ಎಂದೆಲ್ಲಾ ಕೊಚ್ಚಿಕೊಳ್ಳುವ ಪೋಷಕರೇ… ನಿಮ್ಮ ಮಕ್ಕಳು ಶಾಲೆಗೆ ಹೋಗಿ ಅಧ್ಯಯನ ಮಾತ್ರ ಮಾಡುತ್ತಿದ್ದಾರಾ ಅಥವಾ ಅನಗತ್ಯ ವಿಷಯಗಳನ್ನು, ಕೆಟ್ಟ ಸಂಗತಿಗಳನ್ನು ಕಲಿತು, ಅದಕ್ಕೆ ದಾಸರಾಗುತ್ತಿದ್ದಾರಾ ಎಂಬುದರತ್ತಲೂ ಒಮ್ಮೆ ಗಮನ ನೀಡಿ. ಯಾಕೆ ಗೊತ್ತಾ..

ಇತ್ತೀಚೆಗೆ ಮಾಧ್ಯಮ‌ಗಳಲ್ಲಿ ‘ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ’ ಇತ್ಯಾದಿಗಳು ಕಂಡು ಬಂದಿದ್ದು, ವಿದ್ಯಾರ್ಥಿ‌ಗಳ ಬ್ಯಾಗ್ ಚೆಕ್ ಮಾಡುವ ಸಮಯದಲ್ಲಿ ಶಿಕ್ಷಕರೇ ಶಾಕ್ ಆಗಿದ್ದಾಗಿ ಓದಿದ್ದೇವೆ. ಮಕ್ಕಳು ಹೀಗ್ಯಾಕೆ ದಾರಿ ತಪ್ಪುತ್ತಿದ್ದಾರೆ. ಅವರ ಹೆಜ್ಜೆ ಯಾಕೆ ತಪ್ಪು ದಾರಿಯತ್ತ ಹೆಚ್ಚು ಆಕರ್ಷಣೆ ಹೊಂದುತ್ತಿದೆ ಎನ್ನುವುದನ್ನು ನಾವು ಪೋಷಕರು, ಹಿರಿಯರು ಆಲೋಚಿಸಬೇಕಾದ ಅನಿವಾರ್ಯ‌ ಪರಿಸ್ಥಿತಿ‌ಯಲ್ಲಿ ನಾವಿದ್ದೇವೆ.

ಅಂದ ಹಾಗೆ, ಇಂತಹ ಹಾದಿ ತಪ್ಪಿದ ನಡೆಗೆ ಜವಾಬ್ದಾರಿ ಯಾರು ಎಂದು ಯೋಚಿಸುತ್ತಿದ್ದೀರಾ..? ನಾವೇ.. ನಮ್ಮ ಪ್ರತಿಷ್ಠೆಯನ್ನು ಸಮಾಜದ ಎದುರು ಬಿತ್ತರಿಸುವ ನಿಟ್ಟಿನಲ್ಲಿ, ಮಕ್ಕಳನ್ನು ಲೆಕ್ಕವೇ ಇರದಷ್ಟು ಹಣ ಕಟ್ಟಿ ಪ್ರತಿಷ್ಠಿತ ಶಾಲಾ – ಕಾಲೇಜುಗಳಿಗೆ ಸೇರಿಸುತ್ತೇವೆ. ಅಲ್ಲಿ ಅವರು ಓದುತ್ತಾರೋ ಅಲ್ಲ ಇನ್ಯಾವುದೋ ತಪ್ಪು ಚಟುವಟಿಕೆ‌ಯಲ್ಲಿ ತೊಡಗಿದ್ದಾರೆ‌ಯೋ ಎನ್ನುವುದನ್ನು ಗಮನಿಸುವ ಗೋಜಿಗೆ ನಾವು ಹೋಗುವುದಿಲ್ಲ. ನನ್ನ ಮಗ/ಳು ಇಂತಹ ಸಂಸ್ಥೆ‌ಯಲ್ಲಿ ಕಲಿಯುತ್ತಿದ್ದಾರೆ ಎಂದು ಕೊಚ್ಚಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇರುವ ನಮಗೆ, ನಮ್ಮ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ತಪ್ಪು ದಾರಿ ಹಿಡಿದಿದ್ದಲ್ಲಿ ತಿದ್ದಿ ಸರಿಮಾಡುವ ಪ್ರಯತ್ನ ಮಾಡಬೇಕು ಎನ್ನುವುದು ಹೊಳೆಯುವುದೂ ಇಲ್ಲ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗುವುದಿಲ್ಲ ಎನ್ನುವುದು ದುರಂತ.

ಮನೆಯಲ್ಲಿ ಮಕ್ಕಳು ಕೇಳಿ ಕೇಳಿದಾಗೆಲ್ಲ ಹಣ ನೀಡುವುದು, ಮೊಬೈಲ್, ಸ್ಮಾರ್ಟ್ ಫೋನ್ ಕೊಡಿಸುವುದು ಮಾಡುವ ನಾವು, ಅವರು ಅದನ್ನು ಯಾವ ರೀತಿಯಲ್ಲಿ ಬಳಕೆ ಮಾಡುತ್ತಾರೆ..? ಮೊಬೈಲ್ನಲ್ಲಿ ಏನನ್ನು ನೋಡುತ್ತಾರೆ ಎನ್ನುವುದನ್ನು ಗಮನಿಸುವುದಿಲ್ಲ. ನಮ್ಮ ಪುಟಾಣಿ ಮಕ್ಕಳು ಮೊಬೈಲ್ ಬಳಕೆ ಮಾಡಿದರೂ ಅದು ನಮಗೆ ಪ್ರೆಸ್ಟೀಜ್ ಆಗಿರುತ್ತದೆ. ಎಲ್ಲರೆದುರು ಹೇಳಿಕೊಂಡು ನಮ್ಮ ಸ್ಟೇಟಸ್ ಪ್ರದರ್ಶನ‌ದ ಮುಂದೆ, ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ‌ದ ಅರಿವು ನಮಗಾಗುವುದೇ ಇಲ್ಲ.

ಮಕ್ಕಳು ಹಾದಿ ತಪ್ಪುವುದರಲ್ಲಿ ಪೋಷಕರ ಅತಿಯಾದ ಮುದ್ದು ಸಹ ಮುಖ್ಯ ಪಾತ್ರ ವಹಿಸುತ್ತದೆ. ಮನೆಯಲ್ಲಿ, ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯದಿರುವುದರ ಕೊರತೆಯೇ ಮಕ್ಕಳು ದಾರಿ ತಪ್ಪುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ನಮ್ಮ ಮನೆಯಲ್ಲಿ ಹೇಗೆ ಬದುಕಬೇಕು..?, ಹೇಗೆ ನಡೆದುಕೊಳ್ಳಬೇಕು, ವ್ಯಕ್ತಿ‌ತ್ವ ಹೇಗಿರಬೇಕು.. ಇತ್ಯಾದಿಗಳನ್ನು ಮಕ್ಕಳಿಗೆ ಎಳವೆಯಿಂದಲೇ ಹೇಳಿಕೊಡುವ ಸಂಸ್ಕಾರ ನಮ್ಮಲ್ಲೂ ಇರಬೇಕು. ಆಗ ಮಾತ್ರ ಮಕ್ಕಳು ಸದ್ಗುಣ‌ವಂತರಾಗಲು ಸಾಧ್ಯ.

ಮಕ್ಕಳನ್ನು ಬೇಕಾಬಿಟ್ಟಿ ಬೆಳೆಯಲು ಬಿಟ್ಟಲ್ಲಿ ಅವರು ಮುಂದೊಮ್ಮೆ ಸಮಾಜಕ್ಕೆ ಕಂಟಕವಾಗುವ ಸಾಧ್ಯತೆ ಸಹ ಇದೆ. ಹಾಗಾಗಿ ಅವರ ಬಗ್ಗೆ ಕಾಳಜಿ, ಅವರನ್ನು ಗಮನಿಸುವಿಕೆ ಎಲ್ಲವನ್ನೂ ನಾವು ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದೊಮ್ಮೆ ಇಂದು ಪ್ರೆಸ್ಟೀಜ್‌ಗಾಗಿ ಅವರಿಗೆ ಹಣ ವ್ಯಯಿಸುವ ನಾವು, ಅವರು ದೊಡ್ಡವರಾದಾಗ ಅನಾಥಾಶ್ರಮ ಸೇರಬೇಕಾಗಬಹುದು. ನಮ್ಮ ಮಕ್ಕಳು ನಮ್ಮೆದುರೇ ಹಾಳಾಗುವುದನ್ನು ಕಂಡು ಬದುಕುವುದಕ್ಕೂ ಆಗದೆ, ಸಾಯುವುದಕ್ಕೂ ಆಗದೆ ಸಂಕಟ ಪಡುವ ಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ.

ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಆದರೆ ಅದೇ ಹೆಚ್ಚಾದರೆ ಮುಂದೊಮ್ಮೆ ಅವರು ನಮ್ಮ ಕೈ ತಪ್ಪಿ ಹೋಗಬಹುದು. ಆಧುನಿಕತೆ ಒಳ್ಳೆಯದೆ. ಅದು ಬದುಕಿಗೆ ಮಾರಕವಾಗದಿರಲಿ. ನಮ್ಮ ಶ್ರೀಮಂತಿಕೆಯ ಪ್ರದರ್ಶನ ಮಕ್ಕಳ ಭವಿಷ್ಯಕ್ಕೆ ಕುತ್ತಾಗದಿರಲಿ. ಮನೆಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಿ. ಬದುಕಿಗೆ ಬೇಕಾದ ಶಿಕ್ಷಣ ನೀಡಿ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿ. ಇದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ಕೈತಪ್ಪಿ ಹೋದ ಮೇಲೆ ಅತ್ತು ಪ್ರಯೋಜನವಿಲ್ಲ. ಈಗಲೇ ಎಚ್ಚೆತ್ತುಕೊಳ್ಳೋಣ..

ನಮ್ಮ ಮಕ್ಕಳ ಭವಿಷ್ಯ ನಮ್ಮದೇ ಕೈಯಲ್ಲಿ. ನೆನಪಿರಲಿ.

Tags

Related Articles

Close