ಪ್ರಚಲಿತ

ಎಲ್ಲಾಗುತ್ತದೆ ವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿಯ ಜನನ? ಕೈಲಾಸದಡಿಯಿರುವ ಶಾಂಭಲಾ ಎನ್ನುವ ರಹಸ್ಯ ಸಾಮ್ರಾಜ್ಯದಲ್ಲಾಗುತ್ತದೆ ಎನ್ನುತ್ತದೆ ಪುರಾಣ!!

ಪುರಾಣಗಳ ಪ್ರಕಾರ ನಾಲ್ಕು ಯುಗಗಳು. ಸತ್ಯಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗ. ನಾವೀಗ ಕಲಿಯುಗದಲ್ಲಿ ಜೀವಿಸುತ್ತಿದ್ದೇವೆ.

ಸತ್ಯಯುಗ:

1,728,000 ಮಾನವ ವರ್ಷಗಳು: ಸತ್ಯ, ಅಹಿಂಸೆ, ಮಾನವತೆಯೇ ಧರ್ಮವಾಗಿ ಸುಖ ಶಾಂತಿ ನೆಲೆಸಿದ್ದ ಕಾಲ. ಜೀವಿಗಳ ವಿಕಾಸವಾದದ ಕಾಲ. ವೇದ ಉದಯಿಸಿದ ಕಾಲ.

ತ್ರೇತಾಯುಗ:

1,296,000 ಮಾನವ ವರ್ಷಗಳು: ರಾಜ್ಯ-ಸಾಮ್ರಾಜ್ಯ, ರಾಜ-ಸಾಮ್ರಾಟರು ಉದಯಿಸಿದ ಕಾಲ. ಕೃಷಿ, ಅಸ್ತ್ರ-ಶಸ್ತ್ರ ತಯಾರಿಕೆ, ಗಣಿಗಾರಿಕೆ ಮುಂತಾದ ಶ್ರಮವಿರುವ ಕಾರ್ಯಗಳು ನಡೆದ ಕಾಲ.

ದ್ವಾಪರ ಯುಗ:

864,000 ಮಾನವ ವರ್ಷಗಳು: ಸಾಮ್ರಾಜ್ಯಶಾಹೀ ಮನಸ್ಥಿತಿ ಉನ್ನತವಾಗಿ ರಾಜ್ಯ-ಸಾಮ್ರಾಜ್ಯಗಳ ನಡುವೆ ಕದನ ನಡೆದ ಕಾಲ. ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತುಂಗದಲ್ಲಿದ್ದ ಕಾಲ:

ಕಲಿಯುಗ:

432,000 ಮಾನವ ವರ್ಷಗಳು: ನಾವಿರುವ ಕಾಲ. ಸ್ವಾರ್ಥ, ಲಾಲಸೆ, ಅತ್ಯಾಚಾರ ಮಿತಿ ಮೀರಿ ಅಧರ್ಮ ತಾಂಡವವಾಡುವ, ಧರ್ಮ ತೆವಳುವ ಕಾಲ.

ಪ್ರತಿ ಯುಗದಲ್ಲಿಯೂ ಅಧರ್ಮ ತನ್ನ ಕಾಲಡಿ ಧರ್ಮವನ್ನು ಹೊಸಕಿ ಹಾಕುವಾಗ ಮತ್ತೆ ಮತ್ತೆ ಹುಟ್ಟುತ್ತಾನೆ ಭಗವಂತ. ಸತ್ಯಯುಗದಿಂದ ಕಲಿಯುಗದವರೆಗೆ ಭಗವಾನ್ ವಿಷ್ಣು “ಸಂಭವಾಮೀ ಯುಗೇ ಯುಗೇ” ಎಂದೆನ್ನುವ ತನ್ನ ವಾಕ್ಯ ಪರಿಪಾಲನೆ ಮಾಡುತ್ತಾ ಧರ್ಮದ ಉತ್ಥಾನಕ್ಕಾಗಿ ಒಂಬತ್ತು ಅವತಾರಗಳನ್ನು ಎತ್ತಿದ್ದಾರೆ. ಅಂತೆಯೇ ಕಲಿಯುಗದ ಅಂತ್ಯ ಕಾಲದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾಗಿ , ಧರ್ಮ ನರಳುವಂತಾದಾಗ ವಿಷ್ಣುವಿನ ಹತ್ತನೇ ಅವತಾರದ ಜನನ “ಶಾಂಭಲಾ” ಎಂಬ ರಹಸ್ಯ ಸಾಮ್ರಾಜ್ಯದಲ್ಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಹಾಗಾದರೆ ಈ ಶಾಂಭಲಾ ಎಲ್ಲಿದೆ?

ಕಲ್ಕಿ ಪುರಾಣದ ಪ್ರಕಾರ ವೈಷಾಖ ಪೂರ್ಣಿಮೆಯ ಹದಿನೆರಡು ದಿನ ಕಳೆದ ಬಳಿಕ ವಿಷ್ಣುಜಶಾ ಮತ್ತು ಸುಮತಿ ಎಂಬ ಬ್ರಾಹ್ಮಣ ದಂಪತಿಯ ಸುಗರ್ಭದಲ್ಲಿ ಕಲ್ಕಿಯ ಜನನ. ಆತ ಖಡ್ಗಧಾರಿಯಾಗಿ ಶ್ವೇತ ಅಶ್ವಾರೋಹಿಯಾಗಿ ಅವತಾರವೆತ್ತಿ ಧರ್ಮ ಸಂರಕ್ಷಣೆ ಮಾಡುತ್ತಾನೆ ಎಂದು ಹೇಳಲಾಗಿದೆ. ಭಾಗವತ ಪುರಾಣದ ಪ್ರಕಾರ ಕಲ್ಕಿಯ ಜನನ ಶಾಂಭಲಾ ಎನ್ನುವ ಜಾಗದಲ್ಲಾಗಲಿದೆ. ಸಂಸ್ಕೃತದಲ್ಲಿ “ಶಾಂಭಲಾ” ಎಂದರೆ “ಶಾಂತಿ ನೆಲೆಸಿರುವ ಸ್ಥಳ”. ಹಿಂದೂಗಳ ‘ಕಾಲಚಕ್ರ ತಂತ್ರ’, ‘ವಿಷ್ಣು ಪುರಾಣ’ ಮತ್ತು ಬೌದ್ಧರ ‘ಜಾಂಗ್ ಜುಂಗ್’ ಎಂಬ ಗ್ರಂಥಗಳಲ್ಲಿ ಈ ನಗರದ ಉಲ್ಲೇಖವಿದೆ.

ಪುರಾಣಗಳ ಪ್ರಕಾರ ಇಲ್ಲಿ ಪರಿಶುದ್ದ ಹೃದಯದ ವ್ಯಕ್ತಿಯಷ್ಟೇ ಜೀವಿಸಲು ಸಾಧ್ಯ. ಈ ಸ್ಥಳದಲ್ಲಿ ಪ್ರೀತಿ-ಪ್ರೇಮ, ಜ್ಞಾನಗಳೇ ಶಾಸನ ಮಾಡುತ್ತವೆ. ಜನರು ಸರ್ವರೋಗ ಮತ್ತು ವೃದ್ಧಾಪ್ಯದಿಂದ ಮುಕ್ತರು. ಈ ಜಾಗವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ನಿಷಿದ್ಧ ಭೂಮಿ, ಶ್ವೇತ ಸಾಗರ ಭೂಮಿ, ಉಜ್ವಲ ಆತ್ಮಗಳ ಭೂಮಿ, ಜೀವಂತ ಅಗ್ನಿಯಿರುವ ಭೂಮಿ, ದೇವತೆಗಳು ವಾಸಿಸುವ ಭೂಮಿ ಎನ್ನುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ “ಸ್ವರ್ಗ ಸದೃಶ ಭೂಮಿ” ಶಾಂಭಲಾ. ಇಂತಹ ಜಾಗದಲ್ಲೇ ಭಗವಂತನ ಜನನ.

ಬಲ್ಲವರ ಪ್ರಕಾರ ಕೈಲಾಸ ಪರ್ವತದ ಒಳಗಿರುವ ರಹಸ್ಯ ನಗರವೇ ಶಾಂಭಲಾ. ನಮ್ಮ ಪುರಾಣಗಳಲ್ಲಿ ಕೈಲಾಸವನ್ನು ಪರಿಶುದ್ದ ಆತ್ಮವಿರುವ ವ್ಯಕ್ತಿಯಷ್ಟೇ ಹತ್ತಲು ಸಾಧ್ಯ ಎಂದು ಹೇಳಲಾಗಿದೆ. ಇನ್ನು ಸ್ವರ್ಗದ ಮತ್ತು ವೈಕುಂಠದ ಬಾಗಿಲು ಹಿಮಾಲಯ ಪರ್ವತಗಳ ಮೂಲಕವೇ ತೆರೆದು ಕೊಳ್ಳಲಾಗುತ್ತದೆ ಎನ್ನಲಾಗುತ್ತದೆ. ಪುರಾಣ ಮತ್ತು ಇಂದಿನ ವಿಜ್ಞಾನದ ಅನ್ವೇಷಣೆಗಳನ್ನು ತಾಳ ಮೇಳ ಮಾಡಿ ನೋಡಿದರೆ ಬಹುಶಃ ಕೈಲಾಸ ಪರ್ವತದ ಒಳಗೇ ಇಂತಹ ಒಂದು ಸ್ವರ್ಗ ಸದೃಶ ನಗವಿರಬಹುದು ಎನಿಸುತ್ತದೆ. ಅಥವಾ ಭೂಮಿಯನ್ನು ಬ್ರಹ್ಮಾಂಡದ ಇನ್ನಿತರ ಗ್ರಹಗಳಿಗೆ ಸಂಪರ್ಕಿಸುವ ಗುಪ್ತ ದ್ವಾರವಿರಬಹುದು!! ಹಿಮಾಲಯದ ಗುಹೆಗಳು ಈಗಲೂ ಹಲವಾರು ರಹಸ್ಯಗಳನ್ನು ತಮ್ಮ ಒಳಗೆ ಬಚ್ಚಿಟ್ಟುಕೊಂಡಿವೆ. ಇಲ್ಲಿನ ಗುಹೆಗಳಲ್ಲಿ ತಪಸ್ಸನ್ನು ಕೈಗೊಂಡರೆ ವೃದ್ಧಾಪ್ಯ ಅಡರುವುದಿಲ್ಲ, ವ್ಯಕ್ತಿ ಅಲೌಕಿಕ ಜ್ಞಾನವನ್ನು ಪಡೆದುಕೊಳ್ಳುತ್ತಾನೆ ಮಾತ್ರವಲ್ಲ ಇಲ್ಲಿ ಪ್ರಾಣ ತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂದು ಸಾಕ್ಷೀಕರಿಸಲಾಗಿದೆ.

ನಮ್ಮ ವೇದ ಪುರಾಣಗಳಲ್ಲಿ ವಿಷ್ಣುವನ್ನು ವೈಕುಂಠ ಪುರವಾಸಿ, ಕ್ಷೀರ ಸಾಗರದಲ್ಲಿ ವಾಸುಕಿಯ ಮೇಲೆ ಪವಡಿಸಿದಾತ ಎನ್ನಲಾಗಿದೆ. ಹಾಗಾದರೆ ಕೈಲಾಸದೊಳಗಿರುವ ಈ ಶಾಂಭಲಾ ನಗರವೇ ವೈಕುಂಠವಾಗಿರಬಹುದೆ? ಇಲ್ಲಿ ನಮಗಿಂತಲೂ ಮುಂದುವರಿದ ಜನಾಂಗ ಒಂದಿರಬಹುದೇ? ಪ್ರಾಯಶಃ ಕಲಿಯುಗದ ಅಂತ್ಯ ಕಾಲದಲ್ಲಿ ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯ ಜನ್ಮ ಇಲ್ಲೇ ಆಗುವುದೇನೋ? ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳು ಅಜರಾಮರರು. ಆದ್ದರಿಂದ ಬ್ರಹ್ಮಾಂಡದ ಯಾವುದೇ ಭಾಗದಲ್ಲಾದರೂ ಅವರು ಇಂದಿಗೂ ಇರಲೇ ಬೇಕು. ಸ್ವರ್ಗದಲ್ಲಿ ಮುಪ್ಪಡುರುವುದಿಲ್ಲ ಮತ್ತು ಸಾವು ಬರುವುದಿಲ್ಲ ಎನ್ನುವುದು ಸತ್ಯವೆಂದಾದರೆ ಅವರು ಈಗಲೂ ಜೀವಂತವಿದ್ದಾರೆ ಎಂದರ್ಥ! ಅಂತೆಯೇ ಭಾರತದಲ್ಲಿ ಅಶ್ವತ್ಥಾಮ, ಬಲಿ, ವ್ಯಾಸ, ಹನುಮ, ವಿಭೀಷಣ, ಕೃಪ ಮತ್ತು ಪರಶುರಾಮರಂತಹ ಸಪ್ತ ಚಿರಂಜೀವಿಗಳಿದ್ದಾರೆ. ಹಾಗಾದರೆ ಅವರೆಲ್ಲರೂ ಭೂಮಿಯ ಯಾವುದಾರೊಂದು ಭಾಗದಲ್ಲಿ ಇರಲೇಬೇಕು.

ವಿಜ್ಞಾನವೂ ವಿವರಿಸಲಾಗದ ರಹಸ್ಯಗಳನ್ನು ಭಾರತದ ವೇದ- ಪುರಾಣಗಳು ಹೇಳಿವೆ. ವೇದ ಪುರಾಣಗಳು ಕಟ್ಟು ಕಥೆಯಲ್ಲ ಬದಲಿಗೆ ಋಷಿ-ಮುನಿಗಳ ಅನುಭವ ಮತ್ತು ಅನ್ವೇಷಣೆಯ ಸಾಕ್ಷ್ಯಗಳು.

source: https://en.wikipedia.org/wiki/Kalki

  • sharvari
Tags

Related Articles

Close