ಪ್ರಚಲಿತ

ರಾಮ ಮಂದಿರ ನಿರ್ಮಾಣ ಅರಗಿಸಿಕೊಳ್ಳದ ಐಸಿಸ್‌ನಿಂದ ಭಾರತಕ್ಕೆ ಬೆದರಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತಾ, ಉಗ್ರರ ಹುಟ್ಟಡಗಿಸುತ್ತಾ ಬಂದಿದೆ. ಕೇಂದ್ರ ಸರ್ಕಾರದ ಉಗ್ರ ದಮನ ನೀತಿಗಳು ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ ಎಂದರೂ ಅತಿಶಯವಾಗಲಾರದು.

ಕೇಂದ್ರ ಸರ್ಕಾರದ ಉಗ್ರ ವಿರೋಧಿ ನಿಲುವುಗಳು, ಉಗ್ರರ ವಿರುದ್ಧ ಕೈಗೊಂಡ ಕ್ರಮಗಳು ಆಂತರಿಕ ಮತ್ತು ಬಾಹ್ಯ ಉಗ್ರರ ಜೊತೆಗೆ ಅವರಿಗೆ ವಿವಿಧ ರೀತಿಯಲ್ಲಿ ನೆರವು, ಬೆಂಬಲ ನೀಡುತ್ತಿರುವ ನಾಲಾಯಕ್ಕುಗಳಿಗೂ ನುಂಗಲಾರದ ತುತ್ತಿನಂತಾಗಿದೆ. ಹೇಗಾದರೂ ಮಾಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಹಗೆ ಸಾಧಿಸಬೇಕು ಎಂದು ಉಗ್ರರು ಮತ್ತು ಅವರ ಬೆಂಬಲಿಗರು ಯತ್ನ ನಡೆಸುತ್ತಿದ್ದಾರೆ ಎನ್ನುವುದು ಹಳೆಯ ಸಂಗತಿ.

ಪ್ರಧಾನಿ ಮೋದಿ ಆಡಳಿತದಲ್ಲಿ ನಮಗೆ ಉಳಿಗಾಲ ಇಲ್ಲ‌. ನಮ್ಮ ದೇಶ ವಿರೋಧಿ, ಭಾರತ ವಿರೋಧಿ ಕೃತ್ಯಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ ಇರುವ ವರೆಗೆ ನಡೆಸುವುದು ಕಷ್ಟ. ಇದನ್ನರಿತ ಉಗ್ರರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಸಿಟ್ಟು, ಹತಾಶೆಯನ್ನು ಭಯೋತ್ಪಾದಕ ಮ್ಯಾಗಜಿನ್‌ನಲ್ಲಿ ಹೊರ ಹಾಕಿದ್ದಾರೆ.

ಐಸಿಸ್ ಉಗ್ರರು ತಮ್ಮ ಮುಖವಾಣಿ ಭಯೋತ್ಪಾದಕ ಮ್ಯಾಗಜಿನ್‌ ವಾಯ್ಸ್ ಆಫ್ ಖುರಾಸನ್‌ನಲ್ಲಿ ಭಾರತದ ವಿರುದ್ಧ ಬೆದರಿಕೆ ಹಾಕಿರುವುದಾಗಿದೆ. ಭಾರತದ ಜೊತೆಗೆ ಹಿಂದೂಗಳಿಗೂ ಬೆದರಿಕೆ ಒಡ್ಡುವ ದುಷ್ಟ ಕಾರ್ಯವನ್ನು ಐಸಿಸ್ ಮೆರೆದಿದೆ. ವಾಯ್ಸ್ ಆಫ್ ಖುರಾಸನ್ ನ ಮೂವತ್ತ ಎರಡನೇ ಆವೃತ್ತಿಯಲ್ಲಿ ಭಾರತಕ್ಕೆ ಮತ್ತು ಹಿಂದೂಗಳಿಗೆ ಬೆದರಿಕೆ ಒಡ್ಡುವ ಮೂಲಕ ಐಸಿಸ್ ಉಗ್ರರು ಕೇಂದ್ರ ಸರ್ಕಾರವನ್ನು ಕೆಣಕಿದ್ದಾರೆ.

ಈ ಮ್ಯಾಗಜಿನ್‌ನಲ್ಲಿ ಭಾರತದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಉಗ್ರರು ಬೆದರಿಕೆ ಒಡ್ಡಿರುವುದಾಗಿದೆ. ಇದು ಡಾರ್ಕ್ ವೆಬ್, ಹಲವಾರು ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ. ಇದರಲ್ಲಿ ಬಾಬ್ರಿ ಮಸೀದಿ ವಿಚಾರ, ರಾಮ ಮಂದಿರ ನಿರ್ಮಾಣ, ಗುಜರಾತ್ ಗಲಭೆ ಮೊದಲಾದ ವಿಚಾರಗಳನ್ನು ಉಲ್ಲೇಖಿಸಲಾಗಿದ್ದು, ಇವೆಲ್ಲಕ್ಕೂ ಪ್ರತೀಕಾರ ತೀರಿಸುವ ಬೆದರಿಕೆ ಒಡ್ಡಿರುವುದಾಗಿದೆ.

ಈ ಹಿಂದೆಯೂ ಹಲವಾರು ಬಾರಿ ಐಸಿಸ್ ಉಗ್ರರಿಂದ ಭಾರತಕ್ಕೆ ಬೆದರಿಕೆ ಬಂದಿದ್ದವು. ಆ ಸಂದರ್ಭದಲ್ಲೆಲ್ಲಾ ಭಾರತೀಯ ಸೇನೆಯ ಸಾಮರ್ಥ್ಯ ಏನು?, ಭಾರತದ ವಿಷಯಕ್ಕೆ ಬಂದರೆ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಉಗ್ರರಿಗೆ ಮನವರಿಕೆ ಮಾಡಲಾಗಿತ್ತು. ಈಗ ಮತ್ತೆ ಉಗ್ರರು ಕಾಲು ಕರೆದುಕೊಂಡು ಜಗಳಕ್ಕೆ ಬಂದಿದ್ದು, ಭಾರತದ ಸೇನೆ ಇದಕ್ಕೆ ಸ್ಪಷ್ಟ ಉತ್ತರ ನೀಡಲಿದೆ ಎನ್ನುವ ಭರವಸೆ ಭಾರತೀಯರದ್ದು.

Tags

Related Articles

Close