ಪ್ರಚಲಿತ

ಸೂರ್ಯನ ಶಕ್ತಿಯ ಸ್ಪೋಟವನ್ನು ಸೆರೆ ಹಿಡಿದ ಇಸ್ರೋದ ಆದಿತ್ಯ L1

ಭಾರತದ ಕೀರ್ತಿಯನ್ನು ವಿಶ್ವದ ಎತ್ತರಕ್ಕೆ ಏರಿಸುವ ಕೆಲಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಾಡಿದೆ. ಚಂದ್ರಯಾನ -3 ನ್ನು ಯಶಸ್ವಿಯಾಗಿ ನಡೆಸಿ ಭಾರತದ ಸಾಮರ್ಥ್ಯವನ್ನು ಪ್ರಪಂಚಕ್ಕೆ ಸಾರಿದ ಹಿರಿಮೆ ಇಸ್ರೋ ಸಂಸ್ಥೆಯದ್ದು. ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಮೊದಲ ರಾಷ್ಟ್ರ ಎಂಬ ಹಿರಿಮೆಗೂ ಭಾರತ ಪಾತ್ರವಾಗಿದೆ.

ಚಂದ್ರನ ಬಳಿಕ ಸೂರ್ಯನ ಅಧ್ಯಯನಕ್ಕೆ ಮುಂದಾದ ಇಸ್ರೋ ಆದಿತ್ಯ L1 ನೌಕೆಯನ್ನು ಸೂರ್ಯನಂಗಳಕ್ಕೆ ಕಳುಹಿಸುವ ಮೂಲಕ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಇಸ್ರೋ ಒಂದರ ನಂತರ ಮತ್ತೊಂದು ಮಹತ್ವದ ಸಾಧನೆಗಳನ್ನು ನಡೆಸುತ್ತಿದ್ದು, ಇದು ಪ್ರಪಂಚ ತಾಂತ್ರಿಕತೆ, ವೈಜ್ಞಾನಿಕ ವಿಷಯಗಳಲ್ಲಿ ಭಾರತವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದೆ ಎನ್ನುವುದರಲ್ಲಿ ‌ಎರಡು ಮಾತಿಲ್ಲ.

ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾದ ಆದಿತ್ಯ ಎಲ್1 ನೌಕೆಯ ಬಗ್ಗೆ ಇಸ್ರೋ ಹೊಸ ಮಾಹಿತಿಯೊಂದನ್ನು ನೀಡಿದೆ. ಈ ನೌಕೆ ಸೂರ್ಯನ ಶಕ್ತಿ ಸ್ಪೋಟದ ಮೊದಲ ಚಿತ್ರವನ್ನು ಸೆರೆ ಹಿಡಿದಿರುವುದಾಗಿ ಇಸ್ರೋ ತಿಳಿಸಿದೆ. ಈ ನೌಕೆಯಲ್ಲಿ ಒಟ್ಟು 7 ಪ್ಲೇಲೋಡ್‌ಗಳಿದ್ದು, ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಪ್ಲೇಲೋಡ್ ಸೂರ್ಯನ ಮೇಲೆ ನಡೆಯುವ ಸೌರ ಜ್ವಾಲೆಗಳ ಹಠಾತ್ ಸ್ಪೋಟ ವನ್ನು ಸೆರೆ ಹಿಡಿದಿದೆ.

ಸೂರ್ಯನ ಮೇಲ್ಮೈಯಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕಿರಣಗಳು ಹೊರಹೊಮ್ಮುತ್ತದೆ. ಇಂತಹ ಸಂದರ್ಭದಲ್ಲಿ ಈ ಸ್ಪೋಟ ಸಂಭವಿಸಿದೆ. ಇದರ ತೀವ್ರತೆಯನ್ನು ಇಸ್ರೋ‌ ಕಳುಹಿಸಿದ ಆದಿತ್ಯ ಎಲ್1 ದಾಖಲು ಮಾಡಿದೆ. ಸೂರ್ಯನ ಸುತ್ತಲಿನ ವಾತಾವರಣದಲ್ಲಿ ತುಂಬಿಕೊಂಡಿರುವ ಕಾಂತೀಯ ಶಕ್ತಿಯ ಬಿಡುಗಡೆಯ ವೇಳೆ ಇಂತಹ ಸೌರ ಜ್ವಾಲೆಗಳ ಸ್ಪೋಟ ಸಂಭವಿಸುತ್ತವೆ. ಇಂತಹ ಸ್ಫೋಟಗಳು ಕೆಲಸ ಸಂದರ್ಭದಲ್ಲಿ ತೀಕ್ಷ್ಣವಾಗಿದ್ದರೆ, ಇನ್ನೂ ಕೆಲವೊಮ್ಮೆ ಸಾಮಾನ್ಯವಾಗಿರುತ್ತವೆ. ಅಂದ ಹಾಗೆ ಈ ಸ್ರೋಟದ ತೀವ್ರತೆಯನ್ನು ಸಹ ಇಸ್ರೋದ ಉಪಗ್ರಹ ದಾಖಲು ಮಾಡಿದೆ.

ಇಸ್ರೋ ತನ್ನ ಒಂದಿಲ್ಲೊಂದು ಸಾಧನೆಗಳ ಮೂಲಕ ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ‌ಚಂದ್ರನ ದಕ್ಷಿಣ ಧ್ರುವ ಅಧ್ಯಯನದ ಬಳಿಕ ಸೂರ್ಯನ ಅಧ್ಯಯನಕ್ಕೂ ಮುಂದಾಗಿರುವ ಇಸ್ರೋವನ್ನು ವಿದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸಹ ಪ್ರಶಂಸಿಸುತ್ತಿವೆ. ಹಾಗೆಯೇ ಕೆಲ ಸಮಯದ ಹಿಂದಷ್ಟೇ ಅಮೆರಿಕಾದ ನಾಸಾವು ಇಸ್ರೋದ ತಂತ್ರಜ್ಞಾನ ಮತ್ತು ವೈಜ್ಞಾನಿಕತೆಯನ್ನು ತಮಗೂ ನೀಡುವಂತೆ ಮನವಿ ಮಾಡಿದೆ.

ಒಟ್ಟಿನಲ್ಲಿ ಈ ಹಿಂದೆ ಭಾರತವನ್ನು ಹೀನಾಯವಾಗಿ ನೋಡುತ್ತಿದ್ದ ರಾಷ್ಟ್ರಗಳು, ಇಂದು ಭಾರತದ ತಂತ್ರಜ್ಞಾನ, ವೈಜ್ಞಾನಿಕತೆ, ಭಾರತದ ಅಭಿವೃದ್ದಿಯನ್ನು ಕಂಡು ಭಾರತದ ನೆರವನ್ನು ಯಾಚಿಸುವ ಸ್ಥಿತಿ ನಿರ್ಮಾಣವಾಗಿದೆ. ಇಸ್ರೋ ಭಾರತದ ಹಿರಿಮೆಯನ್ನು ತನ್ನ ಸಾಧನೆಗಳ ಮೂಲಕ ಮತ್ತಷ್ಟು ಹೆಚ್ಚಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close