ಪ್ರಚಲಿತ

ಚಂದ್ರಯಾನ -3 ಮಿಷನ್ ಯಶಸ್ಸಿಗೆ ಭಾರತವನ್ನು ಶ್ಲಾಘಿಸಿದ ನಾಸಾ ನಿರ್ವಾಹಕ

ಕೆಲ ತಿಂಗಳ ಹಿಂದಷ್ಟೇ ಈ ವರೆಗೆ ಯಾವ ದೇಶವೂ ಸಾಧಿಸದ ಮಹತ್ವದ ಸಾಧನೆಯೊಂದನ್ನು ಭಾರತದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮೆರೆದಿತ್ತು. ಚಂದ್ರಯಾನ -3 ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ಸಂಶೋಧನಾ ನೌಕೆಯನ್ನು ಇಳಿಸುವ ಮೂಲಕ ‘ಚಂದ್ರನ ದಕ್ಷಿಣ ಮೇಲ್ಮೈ ತಲುಪಿದ ಮೊದಲ ದೇಶ ಭಾರತ’ ಎನ್ನುವ ಹೆಸರನ್ನು ವಿಶ್ವದೆಲ್ಲೆಡೆ ಹರಡಿ ಇಸ್ರೋ ಸಾಧನೆ ಮೆರೆದಿದೆ.

ಚಂದ್ರಯಾನ -3 ಮಿಷನ್‌ನಲ್ಲಿ ಭಾರತದ ಇಸ್ರೋ ಸಂಸ್ಥೆ ಮಾಡಿರುವ ಸಾಧನೆಗೆ ಅಮೆರಿಕಾದ ಬಾಹ್ಯಾಕಾಶ‌ ಸಂಶೋಧನಾ ಸಂಸ್ಥೆ ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ಅವರು ಶ್ಲಾಘಿಸಿದ್ದಾರೆ. ಇತರ ಯಾವುದೇ ದೇಶದಿಂದ ಈ ವರೆಗೆ ಸಾಧ್ಯವಾಗದ ಕೆಲಸವನ್ನು ಭಾರತ ಯಶಸ್ವಿಯಾಗಿ ಮಾಡಿದೆ. ಈ ಸಾಧನೆಗೆ ಭಾರತ ಪ್ರಶಂಸೆಗೆ ಅರ್ಹವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ‌ ಜೊತೆಗೆ ಮಾತನಾಡಿದ ಅವರು, ಚಂದ್ರಯಾನ -3 ಯಶಸ್ಸಿಗಾಗಿ ಭಾರತಕ್ಕೆ ನನ್ನ ಅಭಿನಂದನೆಗಳು. ನೀವು ಪ್ರಪ್ರಥಮವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದೀರಿ. ನಾವು ಮುಂದಿನ ವರ್ಷ ಆ ಜಾಗದಲ್ಲಿ ವಾಣಿಜ್ಯ ಲ್ಯಾಂಡರ್ ಅನ್ನು ಇಳಿಸಲಿದ್ದೇವೆ. ಆದರೆ ಭಾರತ ಈ ಭಾಗದಲ್ಲಿ ಇಳಿದ ಮೊದಲ ದೇಶ. ಇತರ ದೇಶಗಳು ಈ ಪ್ರಯತ್ನ ನಡೆಸಿ ವಿಫಲವಾಗಿವೆ. ಭಾರತ ಈ ಸಾಧನೆಯಲ್ಲಿ ಯಶಸ್ಸು ಕಂಡಿದೆ. ಈ ಸಾಧನೆಗಾಗಿ ಭಾರತ ಶ್ಲಾಘನೆಗೆ ಅರ್ಹವಾಗಿದೆ. ಇದು ಬಹಳ ಮಹತ್ವದ್ದಾಗಿದೆ ಎಂದು ನೆಲ್ಸನ್ ಹೇಳಿದ್ದಾರೆ.

ಈ ವೇಳೆ ಅವರು NISAR ಮಿಷನ್ ಬಗೆಗೂ ಪ್ರಸ್ತಾಪಿಸಿದ್ದು, ಭೂಮಿಗೆ ಏನಾಗುತ್ತಿದೆ ಎನ್ನುವುದನ್ನು ನಾಲ್ಕು ವೀಕ್ಷಣಾಲಯಗಳ ಜೊತೆಗೆ ಕಂಡುಹಿಡಿಯಲು ಸಂಪೂರ್ಣ ತ್ರಿಡಿ ಸಂಯೋಜಿತ ಮಾದರಿಯನ್ನು ಸ್ಥಾಪನೆ ಮಾಡಲಾಗುವುದು. ಈ ಯೋಜನೆಯನ್ನು ಅಮೆರಿಕ ಮತ್ತು ಭಾರತ‌ ಜಂಟಿಯಾಗಿ ಹಮ್ಮಿಕೊಂಡಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಈ ವೀಕ್ಷಣಾಲಯವು‌ ನಾವು ಭಾರತ ಸರ್ಕಾರದ ಜೊತೆಗೆ ಇರಿಸುತ್ತಿರುವ ಪ್ರಮುಖ ವೀಕ್ಷಣಾಲಯವಾಗಿದೆ. ಈ ಯೋಜನೆಯಲ್ಲಿ ನಾಲ್ಕು ಪ್ರಮುಖ ವೀಕ್ಷಣಾಲಯಗಳಿವೆ. ನಾವು ನಾಲ್ಕು ವೀಕ್ಷಣಾಲಯಗಳನ್ನೂ ಮೇಲಕ್ಕೆತ್ತಿದ ನಂತರ ಈಗಾಗಲೇ ಕಕ್ಷೆಯಲ್ಲಿರುವ ಇಪ್ಪತೈದು ಬಾಹ್ಯಾಕಾಶ ನೌಕೆಗಳ ಜೊತೆಗೆ ನಿಖರವಾದ ಸಂಪೂರ್ಣ ತ್ರಿಡಿ ಸಂಯೋಜಿತ ಮಾದರಿಯನ್ನು ಹೊಂದಲಿದ್ದೇವೆ ಎಂದು ಹೇಳಿದ್ದಾರೆ.

Tags

Related Articles

Close