ಪ್ರಚಲಿತ

ಚಂದ್ರನ ಬಳಿಕ ಸೂರ್ಯನಲ್ಲಿಗೆ ಹೊರಟ ಇಸ್ರೋ

ಕೆಲ ದಿನಗಳ ಹಿಂದಷ್ಟೇ ಚಂದ್ರಯಾನ -3 ಮೂಲಕ ಅಮೂಲ್ಯವಾದ ಸಾಧನೆ ಮಾಡಿದ್ದ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಅತ್ಯಂತ ಕಠಿಣ ಎನಿಸಿರುವ ಮತ್ತು ಈ ವರೆಗೆ ವಿಶ್ವದ ಯಾವುದೇ ರಾಷ್ಟ್ರದಿಂದ ಈ ವರೆಗೆ ಸಾಧ್ಯವಾಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಶೋಧನಾ ನೌಕೆಯನ್ನು ಇಳಿಸುವ ಕನಸನ್ನು, ಭಾರತ ಸಾಧಿಸಿ ತೋರಿಸುವ ಮೂಲಕ ‘ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ” ಎಂಬ ಹಿರಿಮೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಈ ಸಾಧನೆಯ ಬಳಿಕ ನಮ್ಮ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆ ಮತ್ತೊಂದು ಮಹತ್ಕಾರ್ಯ ನಡೆಸಲು ಸರ್ವ ಸಿದ್ಧತೆಗಳನ್ನು ನಡೆಸುತ್ತಿದೆ.

ಚಂದ್ರನ ಬಳಿಕ ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಮಹತ್ವದ ಯೋಜನೆಯನ್ನು ರೂಪಿಸಿದೆ. ಆದಿತ್ಯನ ಮೇಲೆ ಸಂಶೋಧನೆ ನಡೆಸಲು ಭಾರತದ ವೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವನ್ನು ಸೆಪ್ಟೆಂಬರ್ 2, 2023 ಶನಿವಾರದಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಇಸ್ರೋ ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಸಹ ಸಂಸ್ಥೆ ಈಗಾಗಲೇ ಬಹಿರಂಗಗೊಳಿಸಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್‌ನಿಂದ ಇಸ್ರೋ ಸಂಸ್ಥೆಯ PSLV XL ರಾಕೆಟ್ ಮುಖಾಂತರ ಸೂರ್ಯನ ಬಗೆಗಿನ ಅಧ್ಯಯನಕ್ಕೆ ಆದಿತ್ಯ -L ಮಿಷನ್ ಅನ್ನು ಉಡಾವಣೆ ಮಾಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಆರಂಭದಲ್ಲಿ ಭೂಮಿಯ ಕಡಿಮೆ ಕಕ್ಷೆಯಲ್ಲಿ ಸೂರ್ಯನಲ್ಲಿಗೆ ಕಳುಹಿಸಲಾಗುವ ಬಾಹ್ಯಾಕಾಶ ನೌಕೆಯನ್ನು ಇಡಲಾಗುತ್ತದೆ. ಅದರ ನಂತರದಲ್ಲಿ ಕಕ್ಷೆಯನ್ನು ಹೆಚ್ಚು ಧೀರ್ಘ ವೃತ್ತವನ್ನಾಗಿ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ಕೊನೆಗೆೆೆ ಈ ಬಾಹ್ಯಾಕಾಶ ನೌಕೆಯನ್ನು ಆನ್‌ ಬೋರ್ಡ್ ಪ್ರೊಪಲ್ಷನ್ ಬಳಸಿ ಲ್ಯಾಂಗ್ರೇಜ್ ಪಾಯಿಂಟ್ ಕಡೆಗೆ ಉಡಾವಣೆ ಮಾಡುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.

ಎಲ್-1 ಕಡೆಗೆ ಬಾಹ್ಯಾಕಾಶ ನೌಕೆಯು ಚಲಿಸುವಾಗ ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದ ಪರಿಣಾಮವಾಗಿ ನಿರ್ಗಮಿಸುತ್ತದೆ. ಎಸ್‌ಒ‌ಐ ನಿಂದ ನಿರ್ಗಮಿಸಿದ ಬಳಿಕ ಕ್ರೂಸ್ ಹಂತ ಪ್ರಾರಂಭವಾಗುತ್ತದೆ. ಅದಾದ ಬಳಿಕ ಎಲ್-1 ಸುತ್ತ ದೊಡ್ಡ ಪ್ರಭಾವಲಯ ಕಕ್ಷೆಗೆ ಚುಚ್ಚಲಾಗುತ್ತದೆ. ಉಡಾವಣೆಯಾದಲ್ಲಿಂದ ನಿಗದಿತ ಗುರಿ ತಲುಪಲು ಸುಮಾರು ನಾಲ್ಕು ತಿಂಗಳ ಕಾಲ ಬೇಕಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಒಟ್ಟಿನಲ್ಲಿ ಚಂದ್ರಯಾನದ ಭರ್ಜರಿ ಯಶಸ್ಸಿನ ಬಳಿಕ ಸೂರ್ಯ ಯಾನ ನಡೆಸಲು, ಸೂರ್ಯನ ಬಗೆಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಇದು ಭಾರತಕ್ಕೆ ಮತ್ತಷ್ಟು ಕೀರ್ತಿಯನ್ನು ತಂದುಕೊಡಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Tags

Related Articles

Close