ಪ್ರಚಲಿತ

ಇಸ್ರೋ ಚಿತ್ತ ಶುಕ್ರ ಯಾನದತ್ತ

ನಮ್ಮ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಒಂದಿಲ್ಲೊಂದು ಸಾಧನೆಗಳ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಲೇ ಇರುತ್ತದೆ. ಕೆಲ ಸಮಯದ ಹಿಂದೆ ಬಹು ನಿರೀಕ್ಷಿತ ಚಂದ್ರಯಾನ -3 ನ್ನು ಯಶಸ್ವಿಯಾಗಿ ಮುಗಿಸಿ, ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಮತ್ತು ಚಂದ್ರನ ಅತ್ಯಂತ ಕಠಿಣ ಎನಿಸಿಕೊಂಡ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ‌ ಎಂಬ ಕೀರ್ತಿಯನ್ನು ಪ್ರಪಂಚಕ್ಕೆ ತಿಳಿಸಿ ಕೊಟ್ಟ ಕೀರ್ತಿ ಏನಿದ್ದರೂ ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು ಎನ್ನುವುದು ನಿಸ್ಸಂದೇಹ.

ದೇಶದ ಭರವಸೆಯ ಇಸ್ರೋ ಚಂದ್ರಯಾನದ ಬಳಿಕ ಸೂರ್ಯನತ್ತಲೂ ಬಾಹ್ಯಾಕಾಶ ನೌಕೆ ಕಳುಹಿಸಿದ್ದು, ಇದರ ಯಶಸ್ಸನ್ನು ಸಹ ಕಾತರದಿಂದ ಕಾಯುತ್ತಿದೆ ಎಂದರೆ ಸುಳ್ಳಲ್ಲ.‌ ಈ ಎಲ್ಲಾ ಸಾಹಸಗಳ ಬಳಿಕ ಇಸ್ರೋ ಮತ್ತೊಂದು ಮಹತ್ವದ ಸಂಶೋಧನೆ ನಡೆಸಲು ಮುಂದಾಗಿದೆ.

ಈ ಬಗ್ಗೆ ಇಸ್ರೋ ಅಧ್ಯಕ್ಷ ಸೋಮನಾಥ್ ಅವರೇ ಮಾಹಿತಿ ನೀಡಿದ್ದು, ಚಂದ್ರಯಾನ, ಸೂರ್ಯನಲ್ಲಿಗೆ ಬಾಹ್ಯಾಕಾಶ ನೌಕೆ ಕಳುಹಿಸಿದ ಬಳಿಕ ಈಗ ಶುಕ್ರ ಗ್ರಹದ ಮೇಲೆ ಸಂಶೋಧನೆ, ಅನ್ವೇಷಣೆಗಳನ್ನು ‌ನಡೆಸಲು ಸಂಸ್ಥೆ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾದ ಗ್ರಹವಾಗಿದ್ದು, ಈ ಗ್ರಹದ ಅಧ್ಯಯನಕ್ಕೆ ಹೊಸ ಮಿಷನ್ ಒಂದನ್ನು ಭಾರತದ ಪರ ಇಸ್ರೋ ನಡೆಸಲಿರುವುದಾಗಿ ಹೇಳಿದ್ದಾರೆ.

ಚಂದ್ರಯಾನ -3 ರ ಯಶಸ್ಸು ಭಾರತದ ಬಾಹ್ಯಾಕಾಶ‌ ಸಂಶೋಧನೆಗಳಲ್ಲಿ ಬಹಳ ಮುಖ್ಯವಾದದ್ದಾಗಿದೆ. ದೇಶದ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಮುಂದೆ ಶುಕ್ರಯಾನವನ್ನು ಸಹ ನಡೆಸಲಾಗುತ್ತಿದ್ದು, ಇದರಿಂದ ಶುಕ್ರನ ಕುರಿತ ಹಲವು ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಶುಕ್ರ ಗ್ರಹವು ಬಹಳಷ್ಟು ಆಸಕ್ತಿಕರವಾಗಿದೆ. ಇದರ ತಾಪಮಾನ ಭೂಮಿ ಗಿಂತ ನೂರು ಪಟ್ಟು ಹೆಚ್ಚು. ನಾಸಾ ಸಂಸ್ಥೆಯು 2029, 2030, 2031 ರಲ್ಲಿ ಭವಿಷ್ಯದ ಶುಕ್ರ ಗ್ರಹದ ಮೇಲಿನ ಕಾರ್ಯಾಚರಣೆ ಆರಂಭ ಮಾಡುವ ಸಾಧ್ಯತೆ ಇರುವುದಾಗಿಯೂ ಅವರು ತಿಳಿಸಿದ್ದಾರೆ.

Tags

Related Articles

Close