ಪ್ರಚಲಿತ

ಬಾಹ್ಯಾಕಾಶ ಸಂಶೋಧನೆಯಲ್ಲಿ ದೇಶದ ಸಾಂಪ್ರದಾಯಿಕ ಜ್ಞಾನದ ಪ್ರಯೋಜನವನ್ನು ಅನುಭವಿಸಿದೆ ಭಾರತ

ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಸಾಧನೆಗಳ ಮೂಲಕವೇ ವಿಶ್ವದ ಅಚ್ಚರಿಗೆ ಕಾರಣವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರನ ದಕ್ಷಿಣ ಧ್ರುವವನ್ನು ಗುರಿಯಾಗಿರಿಸಿ, ಚಂದ್ರಯಾನ. -3 ನಡೆಸಿ, ಯಶಸ್ಸು ಸಾಧಿಸುವ ಮೂಲಕ ಭಾರತದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಕೆಲಸವನ್ನು ಇಸ್ರೋ‌ ಮಾಡಿತ್ತು.

ಈ ವರೆಗೆ ಚಂದ್ರನಲ್ಲಿಗೆ ಕೆಲ ದೇಶಗಳು ಸಂಶೋಧನಾ ನೌಕೆಗಳನ್ನು ಕಳುಹಿಸಿ ಯಶಸ್ಸು ಕಂಡಿದ್ದರೂ, ಚಂದ್ರನ ದಕ್ಷಿಣ ಧ್ರುವದಲ್ಲಿ‌ ಇಳಿಯುವ ಸಾಧನೆಯನ್ನು ಮಾಡಿರಲಿಲ್ಲ. ಅತ್ಯಂತ ಕಠಿಣ ಎಂದೇ ನಂಬಲಾದ ಚಂದ್ರನ ದಕ್ಷಿಣ ಮೇಲ್ಮೈ ತಲುಪಿದ ಮೊದಲ ರಾಷ್ಟ್ರ ಭಾರತ ಎನ್ನುವ ಕೀರ್ತಿಯನ್ನು ಸಹ ಭಾರತದ ಪಾಲಿಗೆ ತಂದು ಕೊಡುವ ಕೆಲಸವನ್ನು ಇಸ್ರೋ ಮಾಡಿದ್ದು, ಇದು ಭಾರತವನ್ನು, ಇಸ್ರೋವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ಕೆಲಸ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಡೀ ವಿಶ್ವ ಮಟ್ಟದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆಯ ಹಿರಿಮೆ ಎತ್ತರೆತ್ತರಕ್ಕೆ ಏರುತ್ತಿದೆ. ಪ್ರಸ್ತುತ ಭಾರತದ ಬಾಹ್ಯಾಕಾಶ ಸಂಶೋಧನೆಯು ವಿಶ್ವದ ಇತರ ಬಾಹ್ಯಾಕಾಶ ಸಂಶೋಧನಾ ಪ್ರಮುಖ ರಾಷ್ಟ್ರಗಳ ಜೊತೆಗೆ ಸ್ಪರ್ಧೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಇಸ್ರೋ‌ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ನಾಸಾ ಮತ್ತು ಇನ್ನಿತರ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಲಾಭದ ಹೊರತಾಗಿಯೂ, ಇಸ್ರೋವನ್ನು ಸದ್ಯ ಪ್ರಪಂಚದ ಪ್ರಮುಖ ಬಾಹ್ಯಾಕಾಶ ಸಂಸ್ಥೆ ಎನ್ನುವ ನಿಟ್ಟಿನಲ್ಲಿ ಗುರುತಿಸಲಾಗುತ್ತಿದೆ. ಒಂದು ಸಮಯದಲ್ಲಿ ಅಮೆರಿಕಾ ಮತ್ತು ಇತರ ರಾಷ್ಟ್ರಗಳು ಭಾರತವನ್ನು ಅತ್ಯಂತ ಕೀ ವಾಗಿ ಕಾಣುವ ಪರಿಸ್ಥಿತಿ ಇತ್ತು. ಆದರೆ ಈಗ ಅದೇ ರಾಷ್ಟ್ರಗಳು ಭಾರತದ ಜೊತೆಗೆ ಪಾಲುದಾರಿಕೆ ಪಡೆಯಲು ಬಯಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಪ್ರಸ್ತುತ ಭಾರತವು ದೇಶದ ಅತ್ಯಂತ ಶ್ರೀಮಂತ ಮತ್ತು ಸಾಂಪ್ರದಾಯಿಕ ಜ್ಞಾನದ ಪ್ರಯೋಜನವನ್ನು ಅನುಭವಿಸಿರುವುದಾಗಿ ಅವರು ತಿಳಿಸಿದ್ದಾರೆ. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ವಿಚಾರಗಳನ್ನು ಉತ್ತೇಜಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾರದರ್ಶಕತೆಯನ್ನು ಹೆಚ್ಚಿಸಿದೆ. ಹಾಗೆಯೇ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಜನಪ್ರಿಯತೆಯನ್ನು ಸಾರ್ವಜನಿಕ ವಲಯದಲ್ಲಿ ಹೆಚ್ಚು ಮಾಡುವಲ್ಲಿಯೂ ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಸ್ರೋದ ಚಂದ್ರಯಾನ ಯಶಸ್ಸಿನ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೆ ವಿಶ್ವ ಭಾರತವನ್ನು ಒಪ್ಪಿಕೊಂಡಿದೆ. ಜೊತೆಗೆ ಇಂತಹ ಸಾಧನೆಗಳಲ್ಲಿ ಭಾರತದ ಪಾಲುದಾರವಾಗಲು‌ ಬಯಸುತ್ತಿರುವುದು,‌ಭಾರತ ಹೇಗೆ ಸಕಾರಾತ್ಮಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ ಎಂದರೂ ಅಚ್ಚರಿಯೇನಿಲ್ಲ.

Tags

Related Articles

Close