ಪ್ರಚಲಿತ

ಬ್ರೇಕಿಂಗ್! ಮೈತ್ರಿ ಸರಕಾರದ ವಿರುದ್ಧ ದಂಗೇಳುತ್ತಾ ಅತೃಪ್ತ ಶಾಸಕರ ಟೀಂ.! ಯಾರ ಮಾತಿಗೂ ಜಗ್ಗದ ಶಾಸಕರ ಮುಂದಿನ ನಡೆ ಏನು..?

ಅಧಿಕಾರದ ಆಸೆಯಿಂದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಕೂಡ ನೆಮ್ಮದಿಯಿಂದ ಆಡಳಿತ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಜೆಡಿಎಸ್ ಜೊತೆ ಕೈಜೋಡಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಶಾಸಕರಿಗೆ ಅಸಮಧಾನವಿದ್ದರೆ, ಇತ್ತ ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡಿರುವುದಕ್ಕೆ ಜೆಡಿಎಸ್ ಶಾಸಕರಲ್ಲೂ ಅಸಮಧಾನ ಎದ್ದು ಕಾಣುತ್ತಿದೆ. ಆದರೂ ಪಕ್ಷದ ಮುಖಂಡರ ಒತ್ತಡಕ್ಕೆ ಬೇಕಾಗಿ ಸುಮ್ಮನಿದ್ದ ಶಾಸಕರೆಲ್ಲಾ ಇದೀಗ ಸರಕಾರದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ದಂಗೆ ಎದ್ದಿದ್ದಾರೆ. ಮಂತ್ರಿ ಸ್ಥಾನ ಇನ್ನೇನು ಸಿಗುತ್ತದೆ ಎನ್ನುವಷ್ಟರಲ್ಲಿ ಮುಖಂಡರ ಕೈವಾಡದಿಂದ ಸಚಿವ ಸ್ಥಾನ ಕೈತಪ್ಪಿದೆ. ಆದ್ದರಿಂದಲೇ ಇದೀಗ ಮೈತ್ರಿ ಸರಕಾರಕ್ಕೆ ಬಂಡಾಯದ ಬಿಸಿ ಮುಟ್ಟಿದ್ದು, ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿದೆ..!

ಹೈಕಮಾಂಡ್ ಮಾತಿಗೂ ಮಣಿಯದ ಶಾಸಕರ ಟೀಂ..!

ರಾಜ್ಯ ನಾಯಕರ ಮೇಲೆ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ ಸಚಿವ ಸ್ಥಾನ ವಂಚಿತ ಶಾಸಕರ ತಂಡ ನೇರವಾಗಿ ಹೈಕಮಾಂಡ್ ಜೊತೆ ಮಾತನಾಡಿ ತಮ್ಮ ಮುಂದಿನ ನಿರ್ಧಾರ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಹೈಕಮಾಂಡ್ ಈಗಾಗಲೇ ಶಾಸಕರನ್ನು ಸಮಧಾನಪಡಿಸಲು ಪ್ರಯತ್ನಿಸಿದ್ದು ಅದೂ ಫಲ ನೀಡದೇ ಇದ್ದಾಗ, ಪಕ್ಷದ ವಿರುದ್ಧ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಆದರೆ ಅತೃಪ್ತ ಶಾಸಕರು ಮಾತ್ರ ಯಾರ ಮಾತಿಗೂ ಕ್ಯಾರೇ ಅನ್ನದೆ, ಮೈತ್ರಿ ಸರಕಾರದ ವಿರುದ್ಧ ತಮ್ಮ ಒಗ್ಗಟ್ಟು ಪ್ರದರ್ಶಿಸಿ ಇಡೀ ರಾಜ್ಯ ಸರಕಾರ ಮತ್ತು ಹೈಕಮಾಂಡನ್ನೇ ಬೆಚ್ಚಿ ಬೀಳಿಸಿದ್ದಾರೆ.!

ಯಾಕೆಂದರೆ ಕಾಂಗ್ರೆಸ್ ಮುಖಂಡ , ಶಾಸಕ ಎಂಬಿ ಪಾಟೀಲ್ ಅವರು ಹೇಳಿಕೊಂಡಂತೆ , ನಮ್ಮ ಬಳಿ ಒಟ್ಟು ೨೦ ಶಾಸಕರಿದ್ದಾರೆ, ಪಕ್ಷದ ನಿರ್ಧಾರದಿಂದ ನಮಗೆ ಅನ್ಯಾಯವಾಗಿದೆ. ಪಕ್ಷಕ್ಕಾಗಿ ನಮ್ಮ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದಕ್ಕೆ , ನಮಗೆ ಪಕ್ಷದ ಕಡೆಯಿಂದ ಸಿಕ್ಕ ಉಡುಗೊರೆ ಇದು ಎಂದು ಅಸಮಧಾನ ಹೊರ ಹಾಕಿದ್ದಾರೆ.!

ಪರಮೇಶ್ವರ್‌ಗೂ ಬಿಸಿ ಮುಟ್ಟಿಸಿದ ಕ್ರೈಸ್ತ ಸಮುದಾಯ..!

ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತದೆ ಈವರೆಗೂ ಹೇಳಲಾಗುತ್ತಿತ್ತು ,ಆದರೆ ಕಾಂಗ್ರೆಸ್ ಈ ಮಾತನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್ ಕ್ರೈಸ್ತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ರೊಚ್ಚಿಗೆದ್ದಿರುವ ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ ಬೆಂಬಲಿಗರು ಇಂದು ಡಿಸಿಎಂ ಜಿ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಅನೇಕ ಶಾಸಕರ ಬೆಂಬಲಿಗರು ಕುಮಾರಸ್ವಾಮಿ ಮತ್ತು ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರಿಂದ ಮೈತ್ರಿ ಸರಕಾರ ಮಾಡಿಕೊಂಡರೂ ಕೂಡ ಸರಿಯಾಗಿ ಆಡಳಿತ ನಡೆಸದಂತಾಗಿದೆ.!

ಶಾಸಕ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೂ ಅಸಮಧಾನಗೊಂಡಿದ್ದು, ನಿನ್ನೆಯಿಂದ ಪಕ್ಷದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ. ಇತ್ತ ಪುಟ್ಟ ರಾಜು ಅವರ ಬೆಂಬಲಿಗರೂ ರೊಚ್ಚಿಗೆದ್ದಿದ್ದು, ಸರಕಾರದ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ..!

ದೆಹಲಿಯತ್ತ ಅತೃಪ್ತ ಶಾಸಕರ ಪಯಣ..!

ರಾಜ್ಯ ಮುಖಂಡರ ಮತ್ತು ಹೈಕಮಾಂಡ್ ಮಾತಿಗೂ ಜಗ್ಗದ ಅತೃಪ್ತ ಶಾಸಕರನ್ನು ಇದೀಗ ಸ್ವತಃ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸದಂತೆ ಮುನ್ಸೂಚನೆ ನೀಡಿದ್ದು, ಪ್ರತಿಭಟನೆ, ಬಂಡಾಯ ಮುಂತಾದ ಯಾವುದೇ ನಿರ್ಧಾರ ಕೈಗೊಳ್ಳದಂತೆ ಎಚ್ಚರಿಕೆ ನೀಡಿದೆ. ಆದರೂ ಕೆಲವು ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ನಾಯಕರ ಮತ್ತು ಹೈಕಮಾಂಡ್ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.!

ಅದೇ ರೀತಿ ಈಗಾಗಲೇ ಕುಮಾರಸ್ವಾಮಿ ಸರಕಾರ ಸಚಿವರಿಗೆ ನೀಡಿದ್ದ ಸರಕಾರಿ ಕಾರುಗಳನ್ನು ಕೂಡ ಕೆಲವು ಶಾಸಕರು ಸರಕಾರಕ್ಕೆ ವಾಪಾಸು ಮಾಡಿದ್ದು, ನೇರವಾಗಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಜೆಡಿಎಸ್‌ನಲ್ಲೂ ಈಗಾಗಲೇ ಭಿನ್ನಾಭಿಪ್ರಾಯ ತಲೆ ದೂಗುತ್ತಿದ್ದು, ದಿನೇ ದಿನೇ ಪಕ್ಷದೊಳಗಿನ ವೈಮನಸ್ಸು ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಅತೃಪ್ತ ಶಾಸಕರು ಮೈತ್ರಿ ಸರಕಾರದ ವಿರುದ್ಧ ತಿರುಗಿಬಿದ್ದಿದ್ದೇ ಆದಲ್ಲಿ ಸಮ್ಮಿಶ್ರ ಸರಕಾರ ಅಂತ್ಯವಾಗುವುದು ಗ್ಯಾರಂಟಿ..!

–ಅರ್ಜುನ್

Tags

Related Articles

Close