ಪ್ರಚಲಿತ

ಅಮೆರಿಕಾದ ನಾಸಾಗೂ ಬೇಕಂತೆ ಭಾರತದ ಇಸ್ರೋ‌ದ ತಂತ್ರಜ್ಞಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹಲವಾರು ಮಹತ್ವದ ಸಾಧನೆಗಳಿಗೆ ಹೆಸರುವಾಸಿಯಾಗಿದೆ. ದೇಶ – ವಿದೇಶಗಳಲ್ಲಿ ಇಸ್ರೋದ ಸಾಧನೆ ಗೌರವಕ್ಕೆ ಭಾಜನವಾಗಿದೆ‌. ಮೊನ್ನೆಯಷ್ಟೇ ಇಸ್ರೋ‌‌ದ ಚಂದ್ರಯಾನ – 3 ಸಹ ಭರ್ಜರಿ ಯಶಸ್ಸಾದ ಬಳಿಕವಂತೂ ಇಸ್ರೋದ ಸಾಧನೆಗಳಿಗೆ ವಿಶ್ವವೇ ಅಚ್ಚರಿ ವ್ಯಕ್ತಪಡಿಸಿದ್ದು ಸುಳ್ಳಲ್ಲ.

ಸದ್ಯ ಬಾಹ್ಯಾಕಾಶ ಸಂಶೋಧನೆಗಳಿಗೆ ಸಂಬಂಧಿಸಿದ ಹಾಗೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಇನ್ನೊಂದು ಸಂಸ್ಥೆ ಅಮೆರಿಕದ ನಾಸಾ, ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಇಸ್ರೋದಿಂದ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಬಯಸುತ್ತಿದೆ. ಈ ವಿಚಾರವನ್ನು ಇಸ್ರೋ‌ದ ಮುಖ್ಯಸ್ಥ ಎಸ್. ಸೋಮನಾಥ್ ಅವರೇ ಖುದ್ದು ಬಹಿರಂಗ ಪಡಿಸಿದ್ದಾರೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕವೇ ಭಾರತದ ತಂತ್ರಜ್ಞಾನಕ್ಕಾಗಿ ಬಯಸುತ್ತಿರುವುದು, ವಿಶ್ವದಲ್ಲಿಯೇ ಭಾರತ ಅದೆಷ್ಟು ಸಮರ್ಥ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ ಎಂದರೂ ಅತಿಶಯವಾಗಲಾರದು.

ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯ ಸ್ಥಾನ ಕಾಯ್ದುಕೊಂಡಿರುವ ಅಮೆರಿಕದ‌ ನಾಸಾದ ವಿಜ್ಞಾನಿಗಳೇ, ಇಸ್ರೋದ ಚಂದ್ರಯಾನ ಮತ್ತು ಇತರ ಸಾಧನೆಗಳ ಫಲವನ್ನು ನೋಡಿದ ಬಳಿಕ, ತಂತ್ರಜ್ಞಾನಕ್ಕಾಗಿ ಭಾರತದ ಹಿಂದೆ ಬಿದ್ದಿದೆ. ಇದು ಇಸ್ರೋ ಮತ್ತು ಭಾರತದ ವಿಜ್ಞಾನಿಗಳ ಸಾಮರ್ಥ್ಯ, ನೈಪುಣ್ಯತೆ, ಶಕ್ತಿಗೆ ಸಾಕ್ಷಿಯಾಗಿದೆ. ಭಾರತ ಬಾಹ್ಯಾಕಾಶ ಸಂಶೋಧನಾ ವಲಯದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ ಎನ್ನುವುದಕ್ಕೂ ಇದು ಸಾಕ್ಷಿಯಂತಿದೆ.

ಪ್ರಸ್ತುತ ಭಾರತ ಉನ್ನತ ಮಟ್ಟದ ಬಾಹ್ಯಾಕಾಶ ಸಂಶೋಧನಾ ಪರಿಕರಗಳು, ರಾಕೆಟ್‌ಗಳನ್ನು ಸಿದ್ಧಪಡಿಸುತ್ತಿದೆ. ಈ ಸಲಕರಣೆಗಳು, ಉಪಕರಣಗಳನ್ನು ಭಾರತ ಉನ್ನತ ತಂತ್ರಜ್ಞಾನ ಬಳಸಿ, ಕಡಿಮೆ ವೆಚ್ಚದಲ್ಲಿ ತಯಾರು ಮಾಡುತ್ತಿದೆ. ಇವುಗಳನ್ನನೇ ಬಳಸಿ ಬಾಹ್ಯಾಕಾಶ‌ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡುವುದರ ಜೊತೆಗೆ, ವಿಶ್ವವೇ‌‌ ಅಚ್ಚರಿ ಪಡುವಂತೆ ಮಾಡುತ್ತಿದೆ. ಭಾರತದ, ಭಾರತೀಯ ವಿಜ್ಞಾನಿಗಳ ಈ ಎಲ್ಲಾ ಸಾಧನೆಗಳನ್ನು ಗಮನಿಸಿ, ಇದೀಗ ಅಮೆರಿಕದ ಸಂಸ್ಥೆ ನಾಸಾದ ವಿಜ್ಞಾನಿಗಳು ಭಾರತದ ತಂತ್ರಜ್ಞಾನವನ್ನು ಬಯಸಿರುವುದು ‌ನಮ್ಮ ದೇಶ ವೈಜ್ಞಾನಿಕವಾಗಿ ಎಷ್ಟು ಮುಂದುವರಿದಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

ಒಟ್ಟಿನಲ್ಲಿ ಕಳೆದ ಒಂಬತ್ತು ವರ್ಷಗಳ ಹಿಂದೆ ಭಾರತದ ಕೈಯಲ್ಲಿ ಯಾವುದೂ ಸಾಧ್ಯವಿಲ್ಲ, ಅಮೆರಿಕದಿಂದ ಯಾವುದೂ ಅಸಾಧ್ಯವಲ್ಲ ಎಂದು ನಂಬಿದ್ದ ಜಗತ್ತು, ಪ್ರಸ್ತುತ ಭಾರತದ ನಿಜವಾದ ಸಾಮರ್ಥ್ಯ ಏನು ಎಂಬುದನ್ನು ನಿಧಾನವಾಗಿ ಮನದಟ್ಟು ಮಾಡಿಕೊಳ್ಳುತ್ತಿದೆ. ಅಮೆರಿಕದಂತಹ ದೈತ್ಯ ರಾಷ್ಟ್ರ ಭಾರತದ ತಂತ್ರಜ್ಞಾನವನ್ನು ಬಯಸಿರುವುದು ಭಾರತದ ಶಕ್ತಿಯನ್ನು ಜಗತ್ತಿನೆದುರು ಅನಾವರಣ ಮಾಡಿದೆ ಎಂಬುದು ಸತ್ಯ.

Tags

Related Articles

Close