ಪ್ರಚಲಿತ

ಶ್ರೀರಾಮ ತನ್ನ ದೇಗುಲದ ಮರುನಿರ್ಮಾಣಕ್ಕೆ ಅದಾಗಲೇ ಭಕ್ತನನ್ನು ಆರಿಸಿಕೊಂಡಿದ್ದ: ಎಲ್.ಕೆ. ಅಡ್ವಾಣಿ

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ತನ್ನ ದೇಗುಲದ ಮರು ನಿರ್ಮಾಣಕ್ಕೆ ಭಕ್ತನನ್ನು 1990 ರ ಸಂದರ್ಭದಲ್ಲಿ ಅಂದರೆ ಸುಮಾರು 33 ವರ್ಷಗಳ ಹಿಂದೆಯೇ ಆಯ್ಕೆ ಮಾಡಿದ್ದ ಎಂದು ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತಿಳಿಸಿದ್ದಾರೆ.

ಜನವರಿ 22 ರಂದು ಅಯೋಧ್ಯೆಯ ನೂತನ ಶ್ರೀರಾಮ ಮಂದಿರದಲ್ಲಿ ರಘುಕುಲ ತಿಲಕ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಹಾಗೆ ಅವರು ಮಾತನಾಡಿದ್ದು, ಈ ಸಂದರ್ಭದಲ್ಲಿ ಮೂವತ್ತು ಮೂರು ವರ್ಷಗಳ ಹಿಂದೆ ನಡೆದ ರಾಮ ರಥಯಾತ್ರೆಗೆ ಸಂಬಂಧಿಸಿದ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಜೀವಮಾನದ ಬಹುಮುಖ್ಯ ಕನಸೊಂದು ಈಗ ಈಡೇರುತ್ತಿದೆ. ಶ್ರೀ ರಮಲಲ್ಲಾನ‌ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೋಡಲು ಕಾತರನಾಗಿದ್ದೇನೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿಯೇ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಮಾಡುವ ಭಾರತೀಯ ಜನತಾ ಪಕ್ಷದ ಸಂಕಲ್ಪವನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಅಡ್ವಾಣಿ ಅವರು ಇದೇ ಸಂದರ್ಭದಲ್ಲಿ ಪ್ರಶಂಸಿಸಿದ್ದಾರೆ.

ವಿಧಿಯೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂದು ನಿರ್ಧರಿಸಿತ್ತು. ಅಂದು ರಥಯಾತ್ರೆ ಆರಂಭವಾದ ಸಮಯದಲ್ಲಿ ನಾನು ಇದಕ್ಕೆ ಕೇವಲ ಸಾರಥಿ ಎಂದು ಭಾವಿಸಿದ್ದೆ. ಈ ರಥ ಯಾತ್ರೆ ದೇಶಕ್ಕೆ ಮುಖ್ಯ ಸಂದೇಶವಾಹಕವಾಗಿತ್ತು. ದೇವಾಲಯ ನಿರ್ಮಾಣದ ಪವಿತ್ರ ಕಾರ್ಯದ ಉದ್ದೇಶವನ್ನು ಇದು ಈಡೇರಿಸಿದ್ದು, ಆ ರಥ ಪೂಜನೀಯವೂ ಆಗಿದೆ. ಏಕೆಂದರೆ ಆ ರಥ ಅಂದು ಹೊರಟು ನಿಂತದ್ದು ರಾಮ ಜನ್ಮಭೂಮಿಗೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರನ್ನೂ ಸ್ಮರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರು ಸಹ ನಮ್ಮ ಜೊತೆಗೆ ಇರಬೇಕಿತ್ತು ಎಂದಿದ್ದಾರೆ. ಅವರ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

1990 ರಲ್ಲಿ ಅಂದರೆ ಸುಮಾರು ಮೂವತ್ತ ಮೂರು ವರ್ಷಗಳ ಹಿಂದೆ ಈ ರಥ ಯಾತ್ರೆ ಆರಂಭಿಸಿದಾಗ ಇದೊಂದು ಚಳುವಳಿಯ ರೂಪ ಪಡೆಯುತ್ತದೆ ಎಂಬ ಕಲ್ಪನೆ ನಮಗಿರಲಿಲ್ಲ. ಆದರೆ ರಾಮನ ಮೇಲಿನ ಜನರ ನಂಬಿಕೆ ಇದಕ್ಕೆ ಚಳುವಳಿಯ ರೂಪ ನೀಡಿತ್ತು. ಆ ಸಂದರ್ಭದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಹಾಯಕರಾಗಿದ್ದರು. ಆ ಇಡೀ ಯಾತ್ರೆಯ ಪ್ರಯಾಣದಲ್ಲಿ ಅವರು ನನ್ನ ಜೊತೆಗೆ ಇದ್ದರು. ಆಗ ಅವರಿಗೆ ಇಷ್ಟು ಪ್ರಸಿದ್ಧಿ ಇರಲಿಲ್ಲ. ಆದರೆ ಪ್ರಭು ಶ್ರೀರಾಮ ಮಾತ್ರ ತನ್ನ ದೇಗುಲ ಮರು ನಿರ್ಮಾಣ ಮಾಡಲು ಭಕ್ತನನ್ನು ಆಯ್ಕೆ ಮಾಡಿ ಆಗಿತ್ತು ಎಂದು ಹೇಳಿದ್ದಾರೆ.

ರಥಯಾತ್ರೆಯ ಇನ್ನೂ ಹಲವಾರು ರೋಚಕ ಸಂಗತಿಗಳನ್ನು ಬಿಜೆಪಿ ಬೀಷ್ಮ ಹಂಚಿಕೊಂಡಿದ್ದಾರೆ. ಜೊತೆಗೆ ರಾಮ ಮಂದಿರವನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡುತ್ತಾರೆ. ಅವರು ಈ ದೇಶದ ಪ್ರತಿಯೋರ್ವರದ್ದೂ ಪ್ರತಿನಿಧಿಯಾಗಿದ್ದಾರೆ. ದೇವಾಲಯವು ಪ್ತತಿಯೋರ್ವರಲ್ಲೂ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಿ ಎಂದು ಅಡ್ವಾಣಿ ತಿಳಿಸಿದ್ದಾರೆ.

Tags

Related Articles

Close