ಪ್ರಚಲಿತ

ಅಜಾತ ಶತ್ರು ಅಟಲ್ ಜಿ ಪುಣ್ಯತಿಥಿ : ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಅಜಾತ ಶತ್ರು, ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕ ತ್ಯಜಿಸಿ ಇಂದಿಗೆ ಐದು ವರ್ಷ. 

ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿ ಮಾಜಿ ಪ್ರಧಾನಿ ದಿವಂಗತ ಅಟಲ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಶ್ ಧನ್‌ಕರ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ‌ಸಿಂಗ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅನುರಾಗ್ ಸಿಂಗ್ ಠಾಕೂರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಇನ್ನೂ ಅನೇಕ ಗಣ್ಯರು ಅಜಾತ ಶತ್ರು ಅಟಲ್‌ಜೀ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದರು.

ಪ್ರಧಾನಿ ಮೋದಿ ಅವರು ಅಟಲ್ ಜಿ ಅವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ದಿವಂಗತ ಅಟಲ್ ಜೀ ಅವರು ದೇಶದ ಪ್ರಗತಿಗಾಗಿ ಶ್ರಮಿಸಿದರು. ಇಪ್ಪತ್ತೊಂದನೆಯ ಶತಮಾನಕ್ಕೆ ದೇಶದ ಪ್ರಗತಿಯನ್ನು ದಾಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಎಂಬುದಾಗಿ ಹೇಳಿದರು. ವಾಜಪೇಯಿ ಅವರ ನಾಯಕತ್ವ ರಾಷ್ಟ್ರಕ್ಕೆ ಮಾದರಿ. ಅವರ ಆಡಳಿತದಿಂದ ದೇಶಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ ನೂರ ನಲವತ್ತು ಕೋಟಿ ಭಾರತೀಯರ ಪರವಾಗಿ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂಬುದಾಗಿಯೂ ತಿಳಿಸಿದರು.

ದಿ. ಅಟಲ್ ಜೀ ಅವರ ನಾಯಕತ್ವದಲ್ಲಿ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಭಾರತದ ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಅಟಲ್ ಜಿ ಅವರ ಕೊಡುಗೆ ಅಪಾರ. ದೇಶದ ಪ್ರಗತಿಯನ್ನು ಹೆಚ್ಚಿಸುವಲ್ಲಿ ಮತ್ತು ದೇಶದ ಹಲವಾರು ಕ್ಷೇತ್ರಗಳ ಪ್ರಗತಿಯನ್ನು ಇಪ್ಪತ್ತೊಂದನೇ ಶತಮಾನಕ್ಕೆ ಕೊಂಡೊಯ್ಯುವಲ್ಲಿ ಅಟಲ್ ಜಿ ಅವರು ಪ್ರಮುಖ ಪಾತ್ರ ವಹಿಸಿರುವುದಾಗಿಯೂ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. 

ದೇಶದಲ್ಲಿ 2014 ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತ ನಡೆಸುತ್ತಿದ್ದು, ಆ ನಂತರದಲ್ಲಿ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಪುರಸ್ಕೃತರನ್ನು ಗೌರವಿಸುವ ಸಲುವಾಗಿ ಅಟಲ್ ಜಿ ಅವರ ಜನ್ಮ ದಿನವಾದ ಡಿಸೆಂಬರ್ 25 ನ್ನು ಉತ್ತಮ ಆಡಳಿತ ದಿನವಾಗಿ ಆಚರಣೆ ಮಾಡುವ ಘೋಷಣೆಯನ್ನು ಸಹ ಮಾಡಲಾಗಿದೆ. 

ಎಲ್ಲಾ ಪಕ್ಷದವರಿಂದಲೂ ಮಾನ್ಯತೆ ಪಡೆದಿದ್ದ, ಅವರನ್ನು ದ್ವೇಷಿಸುವವರೇ ಇಲ್ಲ ಎಂಬಂತೆ ಸ್ನೇಹಜೀವಿಯಾಗಿ, ಅಜಾತ ಶತ್ರುವಾಗಿ ಬದುಕಿ, ಆ ಮೂಲಕ ಇತರರಿಗೂ ಪ್ರೇರಣೆ, ಮಾದರಿಯಾದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರು. 1924 ರಲ್ಲಿ ಗ್ವಾಲಿಯರ್‌ನಲ್ಲಿ ಅಟಲ್ ಜಿ ಅವರು ಜನಿಸಿದರು. ಹಲವು ಕಾಲ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸಿದ ಧೀಮಂತ ನಾಯಕನೂ ಹೌದು. ಪ್ರಧಾನಿಯಾಗಿಯೂ ದೇಶವನ್ನು ಸಮರ್ಥವಾಗಿ ಮತ್ತು ಸ್ವ ಪಕ್ಷದ ಜೊತೆಗೆ ವಿರೋಧ ಪಕ್ಷದವರಿಗೂ ಮಾದರಿಯಾಗುವಂತೆ ಮತ್ತು ಒಪ್ಪಿತವಾಗುವಂತೆ ಆಡಳಿತ ನಡೆಸಿ, ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ ಮಹಾನ್ ವ್ಯಕ್ತಿತ್ವ ಅಟಲ್ ಜಿ ಅವರದ್ದು. ಅವರು 16 ಆಗಸ್ಟ್ 2018 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.

ಶತ್ರುತ್ವಕ್ಕೂ ಮಿತ್ರರಾದವರು, ಅಂತ್ಯವಿಲ್ಲದ ಅವಿನಾಶಿ ಭಾವಗಳ ಅಂತರಗಂಗೆ ಅಟಲ್ ಜಿ ಅವರು ದೇಶದ ಹತ್ತನೇ ಪ್ರಧಾನಿಯಾಗಿ ಭಾರತವನ್ನು ಮುನ್ನಡೆಸಿದ ವ್ಯಕ್ತಿ ಶಕ್ತಿ. 1998 -2004 ರ ನಡುವೆ ಎನ್‌ಡಿ‌ಎ ಸರ್ಕಾರವನ್ನು ಮುನ್ನಡೆಸಿದ ನಾಯಕ. ಜೊತೆಗೆ ಬಿಜೆಪಿಯಿಂದ ಭಾರತದ ಪ್ರಧಾನಿಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡವರು.

Tags

Related Articles

Close