ಪ್ರಚಲಿತ

ಪ್ರಧಾನಿ ಮೋದಿ ಅವರ ಜನಪ್ರಿಯತೆ ಮತವಾಗಿ ಪರಿಣಮಿಸುವ ಭರವಸೆ ಇದೆ: ಅಮಿತ್ ಶಾ

ದೇಶದಲ್ಲಿ ಲೋಕಸಭಾ ಚುನಾವಣೆಯ ಹಬ್ಬ ಆರಂಭವಾಗಿದೆ. ನಿನ್ನೆಯಿಂದಲೇ ಆರಂಭವಾಗಿರುವ ಈ ಹಬ್ಬಕ್ಕೆ ಇಡೀ ದೇಶವೇ ಅಣಿಯಾಗಿದೆ. ಅದೆಷ್ಟೋ ಯುವ ಮತದಾರರು ದೇಶದ ಭವಿಷ್ಯ ನಿರ್ಧಾರಕ್ಕೆ ತಮ್ಮ ಹಕ್ಕಾದ ಮತವನ್ನು ಚಲಾಯಿಸುವ ಮೂಲಕ ಕೊಡುಗೆ ನೀಡುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತವಾಗಿ ನಿನ್ನೆ ಇಪ್ಪತ್ತೊಂದು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಆ ಮೂಲಕ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ವಿಜಯ ಎನ್‌ಡಿ‌ಎ ಯದ್ದೇ ಎಂದೇ ಭರವಸೆ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷಗಳು, ಬಿಜೆಪಿ ವಿರೋಧಿಗಳು ಮೀಸಲಾತಿಯನ್ನು ಹಿಂಪಡೆಯಲಿದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿದ್ದು, ಇದಕ್ಕೆ ಅವರು ತಿರುಗೇಟು ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಜಾತಿಯ ಆಧಾರದಲ್ಲಿ ಎಂದಿಗೂ ಮೀಸಲಾತಿ ನೀತಿಯನ್ನು ಬದಲಾವಣೆ ಮಾಡುವುದಿಲ್ಲ. ಜೊತೆಗೆ ಈ ವ್ಯವಸ್ಥೆಯನ್ನು ಬೇರೆಯವರು ಬದಲಾವಣೆ ಮಾಡುವುದಕ್ಕೂ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಹಾಗೆಯೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದಕ್ಷಿಣ ಭಾರತದಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನೇ ನೀಡುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ. ನಾವು ತಮಿಳುನಾಡು, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮೊದಲಾದ ಎಲ್ಲಾ ರಾಜ್ಯಗಳಲ್ಲಿಯೂ ನಾವು ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬುದಾಗಿ ಅವರು ನುಡಿದಿದ್ದಾರೆ.

ದೇಶದ ದಕ್ಷಿಣ ಭಾಗದಲ್ಲಿ ಮೋದಿಯವರ ಜನಪ್ರಿಯತೆಯು ಮತವಾಗಿ ಪರಿವರ್ತನೆಯಾಗುವ ಹಂತವನ್ನು ತಲುಪಿದೆ. ಇಂತಹ ಬೆಳವಣಿಗೆ ನಡೆದಿರುವುದು ಇದೇ ಮೊದಲು. ಆದ್ದರಿಂದ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Tags

Related Articles

Close