ಪ್ರಚಲಿತ

ಮಾಜಿ ಸಿಎಂ ಸಿದ್ದರಾಮಯ್ಯನವರೇ ಸರ್ಕಾರವನ್ನು ಉರುಳಿಸುತ್ತಿದ್ದಾರಾ..? ಕಾಂಗ್ರೆಸ್ ಪರದೆಯ ಹಿಂದಿನ ರೋಚಕ ಸತ್ಯ..!

ಚುನಾವಣಾ ಪೂರ್ವದಲ್ಲೇ ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಈ ಬಾರಿ ಸಮ್ಮಿಶ್ರ ಸರಕಾರ, ಇಲ್ಲವಾದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿತ್ತು. ಅಂತೆಯೇ ಭಾರತೀಯ ಜನತಾ ಪಕ್ಷ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತದ ಕೊರತೆಯಿಂದಾಗಿ ಅಧಿಕಾರದಿಂದ ವಂಚಿತವಾಯಿತು. ಹೀಗಾಗಿ ಜನಾದೇಶ ನೀಡದಿದ್ದರೂ ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿತು.

ಯಾವಾಗ ಸರ್ಕಾರ ಸರ್ಕಸ್‍ನ್ನು ಕಾಂಗ್ರೆಸ್ ಹಾಗೂ ಜನತಾ ದಳ ಆರಂಭಿಸಿತೋ ಅಂದಿನಿಂದ ಒಂದರ  ಮೇಲೊಂದರಂತೆ ಸಮಸ್ಯೆಗಳನ್ನು ಈ ಮೈತ್ರಿ ಸರ್ಕಾರ ಎದುರಿಸುತ್ತಲೇ ಬಂದಿರುತ್ತದೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದರಿಂದ ಹಿಡಿದು ಸಚಿವ ಸಂಪುಟ ವಿಸ್ತರಣೆಯಾಗುವವರೆಗೂ ಗಲಾಟೆ ತಪ್ಪಿದ್ದಿಲ್ಲ.

Related image

ಸಚಿವ ಸಂಪುಟ ವಿಸ್ತರಣೆಯಾದ ನಂತರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ ಸಹಿತ 20ಕ್ಕಿಂತಲೂ ಅಧಿಕ ಕಾಂಗ್ರೆಸ್ ಶಾಸಕರು ಬಂಡಾಯದ ಹೊಗೆಯನ್ನು ಹಾರುವಂತೆ ಮಾಡುತ್ತಿದ್ದಾರೆ. ಅದೆಷ್ಟೇ ಪ್ರಯತ್ನ ಪಟ್ಟರೂ ಈ ಬಂಡಾಯ ಶಾಸಕರನ್ನು ಭಿನ್ನಮತ ಶಮನ ಮಾಡಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಾಗುತ್ತಿಲ್ಲ. ಎಂ.ಬಿ.ಪಾಟೀಲ್, ಐವನ್ ಡಿಸೋಜಾ, ಈಶ್ವರ್ ಖಂಡ್ರೆ, ಪರಮೇಶ್ವರ್ ನಾಯ್ಕ್, ಬಿ.ನಾರಾಯಣ, ರಹೀಂ ಖಾನ್, ಬಿ.ಸಿ.ಪಾಟೀಲ್ ಸಹಿತ ಅನೇಕ ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಟೀಂ ಎನ್ನುವುದು ಗುಟ್ಟಾಗಿ ಉಳಿದುಕೊಂಡಿರುವ ವಿಚಾರವಲ್ಲ. ಇದೀಗ ಈ ಶಾಸಕರೇ ಬಂಡಾಯದ ಹೊಗೆಯಾಡಿಸಿ ಮೈತ್ರಿ ಸರ್ಕಾರವನ್ನೇ ಕಂಗೆಟ್ಟು ಹೋಗುವಂತೆ ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗಿನ ಮೈತ್ರಿ ಸರ್ಕಾರದಲ್ಲಿ ಯಾವುದೇ ಪ್ರಮುಖ ಸ್ಥಾನ ಸಿಗಲಿಲ್ಲ. ಈ ಬಾರಿ ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದ್ದೇ ಪುಣ್ಯ. ಮೊದಲು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ಸೋಲು ಖಚಿತವೆಂಬ ಮಾಹಿತಿ ಬಂದ ಕೂಡಲೇ ಬಾದಾಮಿ ವಿಧಾನ ಸಭಾ ಕ್ಷೇತ್ರಕ್ಕೆ ಜಂಪ್ ಆಗಿದ್ದರು. ಆದರೆ ಅಲ್ಲಿಗೆ ಎಂಟ್ರಿ ನೀಡಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ರಾಮುಲು ಅವರು ಸಿದ್ದರಾಮಯ್ಯರಿಗೆ ಭಾರೀ ಪೈಪೋಟಿ ನೀಡಿದ್ದರು.

ಕೊನೆಗೆ ಕೇವಲ 1,500 ಮತಗಳ ಅಂತರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಜಯಿಸಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಸೋಲುಂಡಿದ್ದರು. ಅಲ್ಲಿಯವರೆಗೂ ರೆಬೆಲ್ ಆಗಿದ್ದ ಸಿದ್ದರಾಮಯ್ಯ ಅಂದು ಅಕ್ಷರಷಃ ನಿಬ್ಬೆರಗಾಗಿ ಹೋಗಿದ್ದರು. ಅಲ್ಲಿಯವರೆಗೂ ತೊಡೆ ತಟ್ಟುತ್ತಿದ್ದ ಸಿದ್ದರಾಮಯ್ಯ, ಅಂದು ಮಾತ್ರ ಕೈಕಟ್ಟಿಕೊಂಡು ಸಾಫ್ಟ್ ಆಗಿದ್ದರು. ಮಾಜಿ ಮುಖ್ಯಮಂತ್ರಿ ಎಂಬ ಪಟ್ಟ ಸಿದ್ದರಾಮಯ್ಯನವರಿಗೆ ಅದಾಗಲೇ ಆವರಿಸಿಬಿಟ್ಟಿತ್ತು.

Related image

ನಂತರ ಇದರ ಸಂಪೂರ್ಣ ಲಾಭವನ್ನು ಪಡೆದಿದ್ದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್. ಮಾಜಿ ಮುಖ್ಯಮಂತ್ರಿ ಸಿದ್ದರಮಯ್ಯನವರ ಮೌನವನ್ನು ನೋಡಿದ ಪರಂ ನಾನೇ ಹೀರೋ ಎಂದು ಮೆರೆದಾಡಿದರು. ನಂತರದ ಎಲ್ಲಾ ಕೆಲಸಗಳನ್ನು ಪರಮೇಶ್ವರ್ ಅವರೇ ನೋಡಿಕೊಳ್ಳುತ್ತಿದ್ದರು. ಮೈತ್ರಿ ಸರ್ಕಾರ ರಚಿಸುವ ವಿಚಾರವಾಗಿಯೂ ಪರಂ ತನ್ನ ಕೆಲಸವನ್ನು ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರ ತಂಡವನ್ನು ಬದಿಗೆ ಸರಿಸಿ ತಾನೇ ಉಪಮುಖ್ಯಮಂತ್ರಿಯೂ ಆದರು. ಇದು ಸಿದ್ದರಾಮಯ್ಯನವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

ನಂತರ ಶುರುವಾಗಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಆಟ. ಸಚಿವ ಸಂಪುಟ ವಿಸ್ತರಣೆ ಆಗೋವರೆಗೂ ಸುಮ್ಮನಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಸ್ತರಣೆ ಬೆನ್ನಲ್ಲೇ ತಮ್ಮ ತಾಕತ್ತನ್ನು ಪ್ರದರ್ಶನ ಮಾಡಿದ್ದಾರೆ. ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಅನೇಕ ಕಾಂಗ್ರೆಸ್ ಶಾಸಕರಿಗೆ ಮೈತ್ರಿ ಸರ್ಕಾರದಲ್ಲಿ ಯಾವುದೇ ಸ್ಥಾನ ಮಾನ ನೀಡಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ತಮ್ಮ ಆಪ್ತರನ್ನು ಛೂ ಬಿಟ್ಟಿದ್ದಾರೆ.

ತಾವು ತೆಪ್ಪಗೆ ತಮ್ಮ ವಿಧಾನ ಸಭಾ ಕ್ಷೇತ್ರ ಬಾದಾಮಿಗೆ ತೆರಳಿ ಕೇವಲ ಸೂಚನೆಯ ಮೂಲಕವೇ ತಮ್ಮ ಚದುರಂಗದಾಟವನ್ನು ಉರುಳಿಸುತ್ತಿದ್ದಾರೆ. ಸಿದ್ದರಾಮಯ್ಯ ಉರುಳಿಸುತ್ತಿರುವ ದಾಳಕ್ಕೆ ಈಗಾಗಲೇ ಅನೇಕ ಶಾಸಕರು ತಮ್ಮ ಶೌರ್ಯ ಪ್ರದರ್ಶನವನ್ನು ಮಾಡಿದ್ದಾರೆ.  ಎಂ.ಬಿ ಪಾಟೀಲ್ ಸಹಿತ ಅನೇಕ ಸಿದ್ದು ಆಪ್ತ ಶಾಸಕರು ಬಂಡಾಯವನ್ನು ಸಾರುತ್ತಿದ್ದಾರೆ.

Related image

ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ನಾರಾಯಣ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯನವರನ್ನು ಅಟ್ಟಕ್ಕೇರಿಸಿದ್ದಾರೆ. “ಕುಮಾರ ಸ್ವಾಮಿ 5 ವರ್ಷದ ಕನಸು ಕಾಣುತ್ತಿದ್ದಾರೆ. ಆದರೆ ನಮ್ಮ ಸಿದ್ದರಾಮಯ್ಯ ಮನಸು ಮಾಡಿದ್ರೆ 2 ನಿಮಿಷನೂ ಈ ಮೈತ್ರಿ ಸರ್ಕಾರ ಇರೋದಿಲ್ಲ” ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸುತ್ತಿರೋದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಎಂಬುವುದು ಖಾತ್ರಿಯಾಗಿದೆ.

ಈ ಹಿಂದೆ ಕುಮಾರ ಸ್ವಾಮಿಯ ಬಹುಮತ ಸಾಭೀತಿನಂದು ವಿಧಾನ ಸಭೆಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಸಾಫ್ಟ್ ಆಗಿ ಮಾತನಾಡಿದ್ದರು. “ಸಿದ್ದರಾಮಯ್ಯನವರೇ ನಿಮ್ಮನ್ನು ನಿಮ್ಮ ಪಕ್ಷದವರೇ ಹೇಗೆ ಮೂಲೆ ಗುಂಪು ಮಾಡಿಕೊಳ್ಳುತ್ತಾರೆ ಎಂಬುವುದಮನ್ನು ನೋಡುತ್ತಿರಿ. ಪಕ್ಷದ ಪ್ರಮುಖ ಸಭೆಗಳಿಗೆ ನಿಮ್ಮನ್ನು ಈಗಾಗಲೇ ಕೈ ಬಿಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡಾ ನಿಮ್ಮಲ್ಲಿ ಯಾವುದೇ ಅಭಿಪ್ರಾಯವನ್ನು  ಕೇಳುತ್ತಿಲ್ಲ. ಅಷ್ಟರಮಟ್ಟಿಗೆ ನಿಮ್ಮನ್ನು ಕಡೆಗಣಿಸುತ್ತಿದ್ದರೆ” ಎಂಬ ಕಿವಿ ಮಾತು ಹೇಳಿದ್ದರು. ಅಂತೆಯೇ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿಬಿಟ್ಟಿದೆ.

Image result for siddaramaiah

ಒಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಖತ್ ಗೇಮ್ ಪ್ಲಾನ್ ನಡೆಸುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಡಿಕೆ ಶಿವಕುಮಾರ್ ಕೂಡಾ ಸುಮ್ಮನಿರುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇಂದು ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಅವರ ಸರ್ಕಸ್ ಕಾರಣ. ಆದರೆ ಇದೀಗ ಡಿ.ಕೆ ಶಿವಕುಮಾರ್ ಅವರ ಮಾತನ್ನೇ ಪಕ್ಷ ಕಡೆಗಣಿಸಿಬಿಟ್ಟಿದೆ. ಈಗಲೂ ಭಿನ್ನ ಗುಂಪಿನ ಶಾಸಕರನ್ನು ಒಲಿಸಲು ಡಿ.ಕೆ ಶಿವಕುಮಾರ್ ಶಕ್ತರಾಗಿದ್ದಾರೆ. ಆದರೆ ತಮಗಾದ ಅವಮಾನದ ಬೇಸರವನ್ನು ನೆನಪಿನಲ್ಲಿಟ್ಟುಕೊಂಡು ಡಿ.ಕೆ ಶಿವಕುಮಾರ್ ಕೂಡಾ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಡೆಗಣಿಸಿದ್ದೇ ಇಂದು ಭಿನ್ನಮತೀಯ ಶಾಸಕರು ಬಂಡಾಯ ಸಾರಲು ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತೆ ತನ್ನನ್ನು ಕರೆಯಬೇಕೆಂದು, ತನ್ನನ್ನು ಸರ್ಕಾರದ ಪ್ರಮುಖ ವ್ಯಕ್ತಿಯನ್ನಾಗಿ ಪರಿಗಣಿಸಬೇಕು ಎಂದು ತಮ್ಮ ಬೆಂಬಲಿಗ ಶಾಸಕರನ್ನು ಛೂ ಬಿಟ್ಟು, “ನನಗೇನೂ ಗೊತ್ತಿಲ್ಲ. ನಾನು ನನ್ನ ಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿದ್ದೇನೆ. ಅಲ್ಲಿ ಏನಾಗುತ್ತಿದೆ ಎಂಬುವುದು ನನಗೆ ಗೊತ್ತಿಲ್ಲ” ಎನ್ನುವ ಮಾತುಗಳನ್ನು ಆಡಿ ಸುಮ್ಮನಿರುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.

  • ಸುನಿಲ್ ಪಣಪಿಲ
Tags

Related Articles

Close