ಪ್ರಚಲಿತ

ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಶ್ರೀಲಂಕಾ ಹೇಳಿದ್ದೇನು ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಭಾರತದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಿವೆ. ಅಭಿವೃದ್ಧಿಯ ವಿಚಾರದಲ್ಲಿ ಭಾರತದ ವೇಗಕ್ಕೆ ಇಡೀ ವಿಶ್ವವೇ‌ ಮೂಗಿನ ಮೇಲೆ ಬೆರಳಿಡುವಂತಾಗಿದೆ.‌ ಭಾರತದ ಇಂತಹ ಸಕಾರಾತ್ಮಕ ಬೆಳವಣಿಗೆಯೇ ವಿಶ್ವಕ್ಕೆ ಭಾರತದ ಶಕ್ತಿಯನ್ನು ಪರಿಚಯಿಸಿದೆ ಎಂದರೂ ಸುಳ್ಳಲ್ಲ.

ಸದ್ಯ ಶ್ರೀಲಂಕಾದ ಪ್ರಧಾನಿ ದಿನೇಶ್‌ ಗುಣವರ್ಧನಾ ಅವರು ಭಾರತದ‌ ಈ ನಿರಂತರ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಭಾರತದ ಇಂತಹ ಬೆಳವಣಿಗೆ ಶ್ರೀಲಂಕಾಗೂ ಸ್ಫೂರ್ತಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಭಾರತದ ಎಪ್ಪತ್ತೇಳನೇ ಸ್ವಾತಂತ್ರ್ಯ ದಿನದ ಸ್ಮರಣಾರ್ಥ ಶ್ರೀಲಂಕಾ ಇಂಡಿಯಾ ಸೊಸೈಟಿ ಆಯೋಜನೆ ಮಾಡಿದ್ದ ಭೋಜನ ಕೂಟದಲ್ಲಿ ಭಾಗವಹಿಸಿ, ಭಾರತದ ಪ್ರಗತಿಯ ನಾಗಾಲೋಟದ ಬಗ್ಗೆ ಮಾತನಾಡಿದ್ದಾರೆ. ಈಗ ಭಾರತವು ವಿಶ್ವದ ವೇದಿಕೆಯಲ್ಲಿ ಸರಿಯಾದ ಸ್ಥಾನವನ್ನು ಪಡೆದಿದೆ ಎನ್ನುವುದಾಗಿಯೂ ಅವರು ಹೇಳಿದ್ದಾರೆ. ಭಾರತದ ಇಂತಹ ಧನಾತ್ಮಕ ಬೆಳವಣಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಭಾರತದ ಇಸ್ರೋ ವಿಜ್ಞಾನಿಗಳ ಸಾಧನೆ ಚಂದ್ರಯಾನ 3ನ್ನು ಶ್ಲಾಘಿಸಿದ್ದಾರೆ.‌ ಭಾರತದ ಇಂತಹ ಸ್ಪೂರ್ತಿದಾಯಕ‌ ಸಾಧನೆಗಾಗಿ ಶ್ರೀಲಂಕಾ ಭಾರತವನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರ ಮುಖಾಮುಖಿಯ ಫಲಿತಾಂಶದ ಬಗೆಗೂ ಅವರು ಇದೇ ಸಂದರ್ಭದಲ್ಲಿ ವಿವರಣೆ ನೀಡಿದ್ದಾರೆ.

ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಗೋಪಾಲ್ ಬಾಗ್ಲೆ ಅವರು ಕಳೆದ ವರ್ಷ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಬೆಳವಣಿಗೆಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ ಉಭಯ ದೇಶಗಳ ನಡುವಿನ ಬಂಧಗಳ ವಿಚಾರದಲ್ಲಿ ಸಂಪರ್ಕ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು. ಎರಡು ದೇಶಗಳನ್ನು ಬೇರ್ಪಡಿಸುವ ನೀರು ವಾಸ್ತವದಲ್ಲಿ ಹೇಳುವುದಾದರೆ ಎರಡೂ ರಾಷ್ಟ್ರಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಇಡೀ ವಿಶ್ವಕ್ಕೆ ಭಾರತದ ಧನಾತ್ಮಕ ಬದಲಾವಣೆ, ಪ್ರಗತಿ ಅರಿವಿಗೆ ಬರುತ್ತಿದೆ. ಜಗತ್ತಿನಲ್ಲಿ ಭಾರತ ಒಂದು ಸಮರ್ಥ ರಾಷ್ಟ್ರ ಎಂಬ ಅರಿವು ಬಂದಿದೆ. ನಿರ್ಣಾಯಕ ವಿಚಾರಗಳಲ್ಲಿ ಭಾರತದ ಅಭಿಪ್ರಾಯ ಕೇಳಬೇಕು ಎನ್ನುವುದನ್ನು ಸಹ ವಿಶ್ವ ಅರಿತಿದೆ. ಹಲವಾರು ರಾಷ್ಟ್ರಗಳು ಭಾರತದ ಪ್ರಗತಿಗೆ ಮಾರು ಹೋಗಿ, ಈ ದೇಶದ ಸ್ನೇಹ ಹಸ್ತ ಬಯಸಿ ಬರುವ ಕೆಲಸ ಮಾಡುತ್ತಿವೆ ಎನ್ನುವುದು ಭಾರತ ಹೇಗೆ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Tags

Related Articles

Close