ಪ್ರಚಲಿತ

ಉದ್ಯೋಗ ಸರ್ಕಾರದ್ದು, ಸೇವೆ ಸಲ್ಲಿಸಿದ್ದು ಉಗ್ರರಿಗೆ

ಈ ದೇಶದ ಅನ್ನ, ನೀರು, ಗಾಳಿ ಸೇವಿಸಿ, ಈ ದೇಶದಲ್ಲಿಯೇ ಸರ್ಕಾರಿ ಉದ್ಯೋಗದ ಮೂಲಕ ಬದುಕು ಸಾಗಿಸುವ ಪೊಲೀಸ್ ಉಪ ಅಧೀಕ್ಷಕನೊಬ್ಬ, ಈ ಮಣ್ಣಿನ ಋಣವನ್ನು ಮರೆತು, ತನ್ನನ್ನು ತಾನು ಉಗ್ರರಿಗೆ ಮಾರಿಕೊಂಡು ಬಂಡವಾಳ ಬಾಳು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಶೇಕ್ ಆದಿಲ್ ಮುಷ್ತಾಕ್ ಎಂದು ಗುರುತಿಸಲಾಗಿದೆ. ಈತ ಉಗ್ರರಿಗೆ ಮಾಹಿತಿ ರವಾನಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ. ಹಾಗೆಯೇ ಭಯೋತ್ಪಾದಕನಿಗೆ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯ, ಮಾರ್ಗದರ್ಶನ ನೀಡಿದ್ದು, ಈ‌ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಭಯೋತ್ಪಾದಕನನ್ನು ತನಿಖೆ ಮಾಡುತ್ತಿದ್ದ ಅಧಿಕಾರಿಯನ್ನು ತಪ್ಪಿತಸ್ಥ ಎಂಬಂತೆ ಬಿಂಬಿಸಲು ಈತ ಪ್ರಯತ್ನ ನಡೆಸಿದ್ದು, ಸದ್ಯ ಈ ಭಯೋತ್ಪಾದಕ‌, ದೇಶದ್ರೋಹಿ ಪೊಲೀಸ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತ ವ್ಯಕ್ತಿಯ ವಿರುದ್ಧ ಇನ್ನಷ್ಟು ಗುರುತರ ಆರೋಪಗಳಿದ್ದು, ಭ್ರಷ್ಟಾಚಾರದ ಆರೋಪವನ್ನು ಸಹ ಎದುರಿಸುತ್ತಿದ್ದಾನೆ. ಶ್ರೀನಗರ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ಕೋರ್ಟ್ ಈತನನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈತ ಪೊಲೀಸ್ ಅಧಿಕಾರಿಯಾಗಿದ್ದರೂ, ಭಯೋತ್ಪಾದಕರ ಪರ ಕೆಲಸ ಮಾಡಿ‌ ದೇಶಕ್ಕೆ ವಂಚನೆ ಮಾಡುತ್ತಿದ್ದ. ಕಳೆದ ಜುಲೈ ತಿಂಗಳಿನಲ್ಲಿ ಬಂಧನಕ್ಕೆ ಒಳಗಾದ ಉಗ್ರರ ಫೋನ್ ಡಿಟೇಲ್ಸ್‌ನಲ್ಲಿ ಮುಷ್ತಾಕ್ ಉಗ್ರರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ಬಹಿರಂಗವಾಗಿದೆ. ಆತ ಉಗ್ರಗಾಮಿಗಳಿಗೆ ಈ ದೇಶದ ಕಾನೂನಿನ ಕಣ್ಣಿಂದ ಹೇಗೆ ಪಾರಾಗುವುದು ಎನ್ನುವ ಮಾಹಿತಿ, ಮಾರ್ಗದರ್ಶನಗಳನ್ನು ನೀಡುತ್ತಿದ್ದ ಎಂಬುದು ಸಹ ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ಹೇಳಿವೆ.

ಟೆಲಿಗ್ರಾಂ ಆ್ಯಪ್ ಬಳಸಿ ಈತ ಉಗ್ರರನ್ನು ಸಂಪರ್ಕಿಸುತ್ತಿದ್ದ. ಸುಮಾರು ನಲವತ್ತು ಬಾರಿ ಉಗ್ರ ಜೊತೆಗೆ ಈ ರೀತಿಯಾಗಿ ಸಂಭಾಷಣೆ ನಡೆಸಿದ್ದ ಎಂದು ತವಿಖೆಯಲ್ಲಿ ದೃಢಪಟ್ಟಿದೆ. ಹಾಗೆ ರೇ ಯಾವ ರೀತಿಯಲ್ಲಿ ಆತ ಭಯೋತ್ಪಾದಕರಿಗೆ ನೆರವಾಗುತ್ತಿದ್ದ ಎನ್ನುವುದಕ್ಕೂ ಸಾಕ್ಷಿಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಉಗ್ರರೊಂದಿಗೆ ಸಂಬಂಧ ಹೊಂದಿ ಬಂಧನಕ್ಕೆ ಒಳಪಟ್ಟ ಅಧಿಕಾರಿಗಳ ಪೈಕಿ ಈತ ಎರಡನೆಯವನಾಗಿದ್ದಾನೆ.

ಒಟ್ಟಿನಲ್ಲಿ ಭಾರತದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದುಕೊಂಡು, ಪೊಲೀಸ್ ಇಲಾಖೆಯಲ್ಲಿ ಉದ್ಯೇಗದಲ್ಲಿದ್ದು ಸೇವೆ ಸಲ್ಲಿಸಬೇಕಿದ್ದ ವ್ಯಕ್ತಿ, ತನ್ನ ಅಧಿಕಾರ ದುರುಪಯೋಗ ಪಡಿಸಿ, ಭಯೋತ್ಪಾದಕರಿಗೆ ನೆರವಾಗುವ ಮೂಲಕ ಅಪರಾಧ ಎಸಗಿದ್ದಾನೆ. ಇಂತಹ ವ್ಯಕ್ತಿಗಳಿಂದ ದೇಶದ ರಕ್ಷಣೆಯಾಗುವ ಬದಲು ಈ ದೇಶವನ್ನು ಅಪಾಯಕ್ಕೆ ಸಿಲುಕಿಸುತ್ತಿರುವ ಕೆಲಸವಾಗುತ್ತಿರುವುದು ದುರಂತ. ಇಂತಹ ದುರಾತ್ಮರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Tags

Related Articles

Close